ಅನಂತು ವರ್ಸಸ್ ನುಸ್ರತ್ ಅನ್ನೋ ಸಿನಿಮಾ ಶುರುವಾಗಿ ಏನಿಲ್ಲವೆಂದರೂ ಒಂದೂವರೆ ವರ್ಷಗಳು ಕಳೆದಿರಬಹುದು. ಈಗ ದಿಢೀರಂತ ಸಿನಿಮಾ ರಿಲೀಸಾಗುತ್ತಿದೆ. ಜನ ಇನ್ನೂ ಕೆ.ಜಿ.ಎಫ್ಪಿನ ಗುಂಗಿನಲ್ಲಿರೋದರಿಂದಲೋ ಅಥವಾ ಪ್ರಚಾರದ ಕೊರತೆಯೋ ಗೊತ್ತಿಲ್ಲ, ಬಹುತೇಕ ಸಿನಿಮಾಸಕ್ತರಿಗೆ `ಅನಂತು’ ಥೇಟರಿಗೆ ಬರುತ್ತಿರೋದೇ ಗೊತ್ತಿಲ್ಲದಂತಾಗಿದೆ.
ಈ ಸಿನಿಮಾದ ಹಾಡುಗಳಾಗಲಿ, ಟೀಸರು, ಟ್ರೇಲರು… ಯಾವೊಂದೂ ಸೌಂಡು ಮಾಡಿದ ಸುದ್ದಿಯಿಲ್ಲ. ಈಗ ಏಕಾಏಕಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ವಿನಯ್ ರಾಜ್ ಕುಮಾರ್ ನಸೀಬು ಯಾಕೆ ಹೀಗಾಗಿದೆಯೋ ಗೊತ್ತಿಲ್ಲ. ಮೊದಲ ಸಿನಿಮಾವನ್ನು ಮಿಲನ ಪ್ರಕಾಶ್ ರಂಥಾ ನಿರ್ದೇಶಕ ಕೈಗೆತ್ತಿಕೊಂಡರೂ ಜನ ಮಾತ್ರ ಆ ಕಡೆ ಕಣ್ಣರಳಿಸಲಿಲ್ಲ. ನಂತರ ರಘು ಶಾಸ್ತ್ರಿಯ `ರನ್ ಆಂಟನಿ’ಯ ಕಡೆಗೆ ಎಲ್ಲರೂ ಅಸಡ್ಡೆ ತೋರಿಬಿಟ್ಟರು. ಈಗ ಸುಧೀರ್ ಶ್ಯಾನುಭೋಗ್ ಎನ್ನುವ ನವ ನಿರ್ದೇಶಕನ `ಅನಂತು ವರ್ಸಸ್ ನುಸ್ರತ್’ ಸುದ್ದಿಯೇ ಇಲ್ಲದೆ ಸೈಲೆಂಟಾಗಿ ರಿಲೀಸಾಗುತ್ತಿದೆ.
ಅದ್ಯಾಕೋ ಏನೋ ಅನಂತು ಹಣೇಬರ ಮೊದಲಿಂದಲೂ ಹೀಗೇ ಆಟಾಡಿಸ್ತಿದೆ. ಈ ಚಿತ್ರದ ನಾಯಕಿ ಲತಾ ಹೆಗ್ಡೆ ಅರ್ಧ ಶೂಟಿಂಗ್ ಆದಮೇಲೆ ಕೈಕೊಟ್ಟು ಹೋಗಿ ಸ್ವಿಡ್ಜರ್ ಲೆಂಡಿನಲ್ಲಿ ಕುಂತಿದ್ದಳು. ಮತ್ತೆ ಆಕೆಯನ್ನು ಕರೆತಂದು ಸಿನಿಮಾ ಮುಗಿಸೋಹೊತ್ತಿಗೆ ಚಿತ್ರತಂಡ ಹೈರಾಣಾಗಿತ್ತು. ಇಷ್ಟೆಲ್ಲಾ ಆಗಿ ಈಗ ಸಿನಿಮಾವನ್ನ ತೆರೆಗೆ ತರಲಾಗುತ್ತಿದೆ. ಮುಂದೇನಾಗುತ್ತೋ ನೋಡಬೇಕು.
#