ಕರಾವಳಿಯ ದಿಕ್ಕಿನಿಂದ ಕಾಲ ಕಾಲ ಕಾಲಕ್ಕೆ ಹೊಸಾ ಪ್ರತಿಭೆಗಳು ಚಿತ್ರರಂಗದತ್ತ ಹರಿದು ಬರುತ್ತಲೇ ಇರುತ್ತವೆ. ಇದೀಗ ಅಂಥಾದ್ದೇ ಒಂದು ಹೊಸಾ ತಂಡ ಅನುಕ್ತ ಎಂಬ ಚಿತ್ರವನ್ನ ರೂಪಿಸಿದೆ. ಈಗಾಗಲೇ ಬೇರೆಯದ್ದೇ ರೀತಿಯ ಪೋಸ್ಟರ್, ರಂಗು ರಂಗಾದ ಸುದ್ದಿಗಳ ಮೂಲಕ ಅನುಕ್ತ ಪ್ರೇಕ್ಷಕರ ಆಸಕ್ತಿಯ ಪರಿಧಿಯೊಳಗೆ ಲಗ್ಗೆಯಿಟ್ಟಿದೆ.
ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಈ ಸಿನಿಮಾವನ್ನ ಬಹುತೇಕ ಕರಾವಳಿ ಸೀಮೆಯವರೇ ಸೇರಿ ರೂಪಿಸಿದ್ದಾರೆ. ಅಲ್ಲಿನ ಮೂಲದವರೇ ಆಗಿರೋ ದುಬೈ ಉದ್ಯಮಿ ಹರೀಶ್ ಬಂಗೇರ ಅನುಕ್ತವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ಇದಕ್ಕೆ ಕಥೆ ಬರೆದ ಕಾರ್ತಿಕ್ ಅತ್ತಾವರ್ ಮತ್ತು ಸಂತೋಷ್ ಕುಮಾರ್ ಕೂಡಾ ಕರಾವಳಿಯವರೇ.
ಇದು ಪುರಾತನ ನಂಟು ಹೊಂದಿರೋ ಸಸ್ಪೆನ್ಸ್ ಕ್ರೈಂ ಥ್ರಿಲ್ಲರ್ ಕಥಾನಕ. ಇಡೀ ಕಥೆ ಕರಾವಳಿ ಸೀಮೆಯಲ್ಲಿಯೇ ನಡೆಯುತ್ತದೆ. ಆದ್ದರಿಂದ ಬಹುತೇಕ ಅಲ್ಲಿಯೇ ಚಿತ್ರೀಕರಣವನ್ನೂ ಮಾಡಲಾಗಿದೆ. ವಿಚಾರ ಅದಲ್ಲ, ಈ ಕಥೆ ಕ್ರೈಂ ಥ್ರಿಲ್ಲರ್ ಆಗಿದ್ದರೂ ಕೂಡಾ ಭೂತಾರಾಧನೆಯಂಥಾ ಕರಾವಳಿ ಭಾಗದ ಸಾಂಸ್ಕೃತಿಕ, ಧಾರ್ಮಿಕ ಪರಂಪರೆಗಳನ್ನು ತೆರೆದಿಡುವಂತೆಯೂ ಮೂಡಿ ಬಂದಿದೆಯಂತೆ. ತುಳು ನಾಡ ಒಡಲಲ್ಲಿರೋ ಅದೆಷ್ಟೋ ಅಪರೂಪದ ಸಂಗತಿಗಳೂ ಕೂಡಾ ಈ ಸಿನಿಮಾ ಮೂಲಕ ಪ್ರೇಕ್ಷಕರೆದುರು ಅನಾವರಣಗೊಳ್ಳಲಿದೆ.
ಇನ್ನೇನು ಬಿಡುಗಡೆಗೆ ಸಿದ್ಧವಾಗಿರೋ ಈ ಚಿತ್ರದಲ್ಲಿ ಕಾರ್ತಿಕ್ ಅತ್ತಾವರ್ ನಾಯಕನಾಗಿ ನಟಿಸಿದ್ದಾರೆ. ಇವರು ಈ ಹಿಂದೆ ಭಾರೀ ಪ್ರಸಿದ್ಧಿ ಪಡೆದಿದ್ದ ಯಶೋಧೆ ಎಂಬ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ಮಾಡಿದ್ದವರು. ಈ ಚಿತ್ರಕ್ಕೆ ಕಥೆ ಬರೆದದ್ದು ಮಾತ್ರವಲ್ಲದೇ ಕಾರ್ತಿಕ್ ನಾಯಕನ ಪಾತ್ರಕ್ಕೂ ಜೀವ ತುಂಬಿದ್ದಾರೆ. ಸಂಗೀತಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. #
No Comment! Be the first one.