ಒಂದು ಕಾಲದಲ್ಲಿ ತಮ್ಮ ಬಳಿ ಅವಕಾಶ ಕೇಳಿಕೊಂಡುಬಂದು, ಕೆಲಸ ಪಡೆದು, ನಂತರ ಮೇಲೇರಿದ ಶಿಷ್ಯನೊಬ್ಬ ಗುರುವನ್ನೇ ನಿರ್ಗತಿಕ ಅಂದುಬಿಟ್ಟರೆ ಆಶ್ರಯ ಕೊಟ್ಟು ಪೊರೆದ ಜೀವ ಅದೆಷ್ಟು ಕೊರಗಬೇಡ? ಹೌದು… ನಿರ್ದೇಶಕ ಎ.ಆರ್. ಬಾಬು ವಿಚಾರದಲ್ಲಿ ಆಗಿದ್ದೂ ಇದೆ. ಇವತ್ತಿಗೆ ಸ್ಟಾರ್ ಡೈರೆಕ್ಟರ್ ಕಂ ಹೀರೋ ಎಂದೆಲ್ಲಾ ಹೆಸರು ಮಾಡಿಕೊಂಡಿರುವ ಜೋಗಿ ಪ್ರೇಮ್ ಒಂದು ಕಾಲದಲ್ಲಿ ನಿರ್ದೇಶಕ ಎ.ಆರ್. ಬಾಬು ಗರಡಿಯಲ್ಲಿ ಬೆಳೆದುಬಂದವರು. ಸಿನಿಮಾರಂಗದಲ್ಲಿ ಯಾವುದೂ ಶಾಶ್ವತವಲ್ಲ. ಇಂದು ಕೈತುಂಬ ಕೆಲಸ, ಸಾಕುಸಾಕೆನ್ನುವಷ್ಟು ಸಂಪಾದನೆಯಿದ್ದವರೂ ತೊಪ್ಪನೆ ಕುಸಿದುಬಿಡುತ್ತಾರೆ. ಒಂದರ ಜೊತೆ ಮತ್ತೊಂದು ಸೋಲಿಗೆ ಸಿಕ್ಕಿಬಿಟ್ಟರಂತೂ ಅಂಥವರನ್ನಿಲ್ಲಿ ಮೂಸಿ ನೋಡೋರೂ ಇರುವುದಿಲ್ಲ. ಹೀಗೆ ಏಟು ತಿಂದವರು ಸಿನಿಮಾ ಇಂಡಸ್ಟ್ರಿಯಲ್ಲಿ ಲೆಕ್ಕವಿಲ್ಲದಷ್ಟಿದ್ದಾರೆ.
ಹಲೋ ಯಮ, ಕಾಸಿದ್ದೋರೇ ಬಾಸು, ಯಾರ್ದೋ ದುಡ್ಡು ಯಲ್ಲಮ್ಮನ್ ಜಾತ್ರೆ, ಕೂಲಿರಾಜ, ಮರುಜನ್ಮ, ಚಮ್ಕಾಯ್ಸಿ ಚಿಂದಿ ಉಡಾಯ್ಸಿ… ಹೀಗೆ ಬರೋಬ್ಬರಿ ಇಪ್ಪತ್ತೈದು ಸಿನಿಮಾಗಳನ್ನು ನಿರ್ದೇಶಿಸಿದವರು ಎ.ಆರ್. ಬಾಬು. ಮಿನಿಮಮ್ ಗ್ಯಾರೆಂಟಿ ನಿರ್ದೇಶಕ ಅನ್ನೋ ಬಿರುದು ಪಡೆದಿದ್ದ ಬಾಬು ಕ್ರಮೇಣ ಮಂಕಾಗಿದ್ದರು. ಆಗೆಲ್ಲಾ ನಿರ್ದೇಶನಕ್ಕೆ ದೊಡ್ಡ ಸಂಭಾವನೆಯೂ ಸಿಗುತ್ತಿರಲಿಲ್ಲ. ಒಂದರ ಹಿಂದೊಂದು ಸಿನಿಮಾಗಳಿದ್ದರೆ ಬದುಕಿಗೆ ಕಷ್ಟವಾಗುತ್ತಿರಲಿಲ್ಲ. ಹೀಗಿರುವಾಗ ಯಾವ ಆಸ್ತಿ ಪಾಸ್ತಿ ತಾನೆ ಮಾಡಲು ಸಾಧ್ಯವಿತ್ತು.. ಸಿನಿಮಾ ನಿರ್ದೇಶನದ ಕೆಲಸ ಸಿಗೋದು ವಿರಳವಾಗುತ್ತಿದ್ದಂತೇ ಬಾಬು ಸಣ್ಣ ಪುಟ್ಟ ಪಾರ್ಟುಗಳಲ್ಲಿ ಅವಕಾಶ ಪಡೆದು ಜೀವನ ಸಾಗಿಸುವಂತಾಯಿತು. ಮಗ ಶಾನ್ ಕೂಡಾ ಸಿನಿಮಾರಂಗಕ್ಕೆ ಬಂದನಾದರೂ ಹೇಳಿಕೊಳ್ಳುವಂತಾ ಗೆಲುವು ಆತನಿಗೆ ದಕ್ಕಲಿಲ್ಲ. ಇಷ್ಟೆಲ್ಲದರ ನಡುವೆ ಪದೇ ಪದೇ ಕಾಡುತ್ತಿದ್ದ ಅನಾರೋಗ್ಯದಿಂದ ಬಾಬು ಕಂಗಾಲಾಗಿದ್ದು ನಿಜ. ಆದರೆ ಕಷ್ಟ ಸುಖ ಏನೇ ಇದ್ದರೂ ಬದುಕಿನ ಬಂಡಿ ಸಾಗಿಸುತ್ತಿದ್ದರು.
ಇಂಥ ಸಂದರ್ಭದಲ್ಲೇ ನಿರ್ದೇಶಕ ಪ್ರೇಮ್ ಛಾನ್ಸು ಕೊಡ್ಡು ಸಲಹಿದ್ದವರು, ಹಿರಿಯ ನಿರ್ದೇಶಕ ಅನ್ನೋದನ್ನೂ ಮರೆತು ‘ಎ.ಆರ್. ಬಾಬು ಈಗ ನಿರ್ಗತಿಕರಾಗಿಬಿಟ್ಟಿದ್ದಾರೆ ಎಂದುಬಿಟ್ಟಿದ್ದರು. ಪೇಮ್ ಬಾಯಿಂದ ಬಂದ ಇಂಥಾ ಮಾತಿಂದ ಬಾಬು ಸಿಕ್ಕಾಪಟ್ಟೆ ಅಪ್ಸೆಟ್ ಆಗಿದ್ದರು. ಮೊದಲೇ ಅನಾರೋಗ್ಯದಿಂದ ಬಳಲಿದ್ದ ಎ.ಆರ್. ಬಾಬು ಶಿಷ್ಯ ಕೊಟ್ಟ ‘ನಿರ್ಗತಿಕ ಅನ್ನೋ ಪಟ್ಟದಿಂದ ಮತ್ತಷ್ಟು ನರಳಿದರು, ಕಣ್ಣೀರಿಟ್ಟಿದ್ದರು. ಈಗ ಬಾಬಣ್ಣ ಜೀವವನ್ನೇ ತೊರೆದು ನಡೆದಿದ್ದಾರೆ. ಆಡಿದ ಮಾತನ್ನು ಪ್ರೇಮ್ ಆಗಲಿ, ಮತ್ತೊಬ್ಬರಾಗಲಿ ವಾಪಾಸು ಪಡೆಯಲು ಸಾಧ್ಯವಿಲ್ಲ. ಕಳೆದು ಹೋದ ಜೀವ ಕೂಡಾ ಮತ್ತೆ ದಕ್ಕುವುದಿಲ್ಲ. ಹೋಗಿ ಬನ್ನಿ ಬಾಬು. ನಿಮ್ಮ ಆತ್ಮಕ್ಕೆ ಶಾಂತಿಸಿಗಲಿ…
#
No Comment! Be the first one.