“ಹೇಳಿಕೊಳ್ಳಲು ಸಿನಿಮಾರಂಗದಲ್ಲಿ 18 ವರ್ಷದ ದೀರ್ಘ ಅನುಭವ. ಹೆಸರಾಂತ ಛಾಯಾಗ್ರಹಕರ ಜತೆಗೆ ಕಾರ್ಯ ನಿರ್ವಹಿಸಿದ್ದರೂ ತನ್ನನ್ನು ಒಬ್ಬ ಪ್ರತಿಭಾವಂತನಾಗಿ ಗುರುತಿಸುವ ಕಣ್ಣುಗಳೆಲ್ಲವೂ ಫುಲ್ ಬ್ಯುಸಿ. ಜತೆಗೆ ಯಾವ ಗೆದ್ದ ಸಿನಿಮಾ ಮಾಡಿದ್ದೀಯಪ್ಪಾ? ಎಂದು ಕೇಳುವ ಮಂದಿಗೆ ಉತ್ತರ ಕೊಡುವುದೇ ದೊಡ್ಡ ಕೆಲಸ.’’ ಇದು ಛಾಯಾಗ್ರಾಹಕ ಅರುಣ್ ಸುರೇಶ್ ಅವರ ಬೇಸರದ ನುಡಿಗಳು.
ಜನರೇಟರ್ ಕ್ಲೀನರ್ ಆಗಿ ಚಿತ್ರರಂಗಕ್ಕೆ ಬಂದು ಫೋಕಸ್ ಪುಲ್ಲರ್ ಆಗಿ ಬಡ್ತಿ ಪಡೆದು, ನಂತರ ಅತ್ಯಾಧುನಿಕ ಕ್ಯಾಮೆರಾಗಳನ್ನು ಬಾಡಿಗೆ ಕೊಡುವ ಸಂಸ್ಥೆ ಆರಂಭಿಸಿ, ಜೊತೆಗೆ ಸಿನಿಮಾ ಛಾಯಾಗ್ರಾಹಕನಾಗಿಯೂ ಹೆಸರು ಮಾಡುತ್ತಿರುವ ಪ್ರತಿಭಾವಂತ ಅರುಣ್ ಸುರೇಶ್. ಹಂತ ಹಂತವಾಗಿ ತಾನೂ ಬೆಳೆದು, ತನ್ನ ಜೊತೆಗಿದ್ದವರಿಗೂ ಬದುಕಿನ ದಾರಿ ಕಲ್ಪಿಸಿರುವ ಅರುಣ್ ಸುರೇಶ್ ಅವರ ಸಾಹಸ ಗಾಥೆ ಹಳಿ ತಪ್ಪಿದವರಿಗೆ ದಾರಿ ದೀಪ.
ಅರುಣ್ ಸುರೇಶ್ ಇಂತಹ ಎಲ್ಲ ಅನುಭವಗಳನ್ನು ನಗುಮುಖದಿಂದಲೇ ಸ್ವಾಗತಿಸಿದವರು. ಸುಂದರ್ ನಾಥ್ ಸುವರ್ಣ, ಆರ್ ಗಿರಿಯಂತಹ ಹೆಸರಾಂತ ಡಿಓಪಿಗಳ ಜತೆಗೆ ಕೆಲಸ ಮಾಡುತ್ತಲೇ ಮುಂದೆ ತಾನು ಒಬ್ಬ ಅತಿದೊಡ್ಡ ಛಾಯಾಗ್ರಹಕನಾಗಬೇಕೆಂಬ ಕನಸೊತ್ತು ಅದಕ್ಕೆ ಬೇಕಾದ ಎಲ್ಲವನ್ನೂ ಕಲಿತು, ಪಡೆದು ಮುನ್ನುಗ್ಗಿದ ಅರುಣ್ ಇಂದು ಒಬ್ಬ ಛಾಯಾಗ್ರಾಹಕನಾಗಿ ಜೊತೆಗೆ ಭಾನವಿ ಕ್ಯಾಪ್ಚರ್ ಎನ್ನುವ ಕಂಪನಿಯನ್ನು ತೆರೆದು, ಕ್ಯಾಮೆರಾ ಸಲಕರಣೆಗಳನ್ನು ಒದಗಿಸುತ್ತಾ ಸಿನಿಮಾ ರಂಗಕ್ಕೆ ತನ್ನಿಂದಾಗಬಹುದಾದ ಸೇವೆಯನ್ನು ನೀಡುತ್ತಾ ಬಂದಿದ್ದಾರೆ.
ಅರುಣ್ ಸುರೇಶ್ ಅವರನ್ನು ಪೂರ್ಣಪ್ರಮಾಣದ ಛಾಯಾಗ್ರಾಹಕನನ್ನಾಗಿ ಮಾಡಿದ್ದು ನಿರ್ದೇಶಕ, ಸಂಕಲನಕಾರ ನಾಗೇಂದ್ರ ಅರಸ್. ತಾವು ನಿರ್ದೇಶಿಸಿದ್ದ `ಜಸ್ಟ್ ಲವ್’ ಎನ್ನುವ ಸಿನಿಮಾದ ಛಾಯಾಗ್ರಹಣ ಕೆಲಸವನ್ನು ಒಪ್ಪಿಸಿದ್ದರು. ನಂತರ ಚಂದ್ರಿಕಾ, ವಜ್ರ, ದೇವ್ರಂಥಾ ಮನುಷ್ಯ, ಗಿರಿಗಿಟ್ಲೆ ಮತ್ತು ಕಾರ್ಮೋಡ ಸರಿದು ಸಿನಿಮಾಗಳಿಗೆ ಛಾಯಾಗ್ರಹಕರಾಗಿ ಕೆಲಸ ಮಾಡಿದ್ದಾರೆ. ಜತೆಗೆ ಮನೋಹರ್ ಜೋಶಿ, ರಂಗಿತರಂಗಿ ಖ್ಯಾತಿಯ ವಿಲಿಯಂ ಡೇವಿಡ್ ಅವರ ಜತೆಗೂ ಅರುಣ್ ಕಾರ್ಯ ನಿರ್ವಹಿಸಿದ್ದಾರೆ.
ನಮ್ಮವರಿಗೆ ಅವಕಾಶ ನೀಡಿ ಅಂದಿದ್ದರು ದರ್ಶನ್
ಕನ್ನಡ ಚಿತ್ರರಂಗದಲ್ಲಿ ನಮ್ಮವರೇ ನಮಗೆ ಅವಕಾಶ ನೀಡುವ ಕುರಿತಾಗಿ ಮಾತನಾಡುತ್ತಾ, “ನಮ್ಮ ಇಂಡಸ್ಟ್ರಿಯಲ್ಲಿರುವ ಪ್ರತಿಭೆಗಳಿಗೆ ನಮ್ಮವರು ಅವಕಾಶ ಕೊಡಬೇಕು. ಹೈದರಾಬಾದ್ ನಿಂದ ಫೈಟ್ ಮಾಸ್ಟರ್ಗಳನ್ನು, ಸಂಗೀತ ನಿರ್ದೇಶಕರನ್ನು, ಛಾಯಾಗ್ರಾಹಕರನ್ನು ಕರೆಸುವ ಅವಶ್ಯಕತೆಯೇ ಇಲ್ಲ. ಎಲ್ಲರೂ ನಮ್ಮಲ್ಲೇ ಇದ್ದಾರೆ. ಜತೆಗೆ ಅವರಿಗೆ ಕೊಡುವ ಮನ್ನಣೆ ನಮ್ಮವರಿಗೆ ನೀಡಿದ್ದೇ ಆದರೆ ನಿರೀಕ್ಷೆಗೂ ಮೀರಿದ ಸಿನಿಮಾಗಳನ್ನು ನಮ್ಮವರೇ ಮಾಡುತ್ತಾರೆ” ಎಂದು ಡಿ ಬಾಸ್ ದರ್ಶನ್ ಟ್ರೇಲರ್ ಬಿಡುಗಡೆ ಸಮಾರಂಭವೊಂದರಲ್ಲಿ ಹೇಳಿಕೊಂಡಿದ್ದರು. ದರ್ಶನ್ ಸರ್ ಹೇಳಿದಂತೆ ನಮ್ಮವರಿಗೆ ಮೊದಲ ಆದ್ಯತೆ ನೀಡಬೇಕು ಅನ್ನೋದು ಅರುಣ್ ಸುರೇಶ್ ಅವರ ಅಭಿಪ್ರಾಯ ಕೂಡ.
ಅಂದಹಾಗೆ ಅರುಣ್ ಸುರೇಶ್ ಅವರ ಮೂಲ ಹೆಸರು ಸುರೇಶ್ ಬಾಬು. ಆದರೆ ಸುರೇಶ್ ಬಾಬು ಅವರನ್ನು ಕನ್ನಡ ರಂಗಕ್ಕೆ ಅವರ ಚಿಕ್ಕಪ್ಪ ಅರುಣ್ ಕರೆತಂದರೆಂಬ ಕಾರಣದಿಂದ ಅವರ ಹೆಸರನ್ನೇ ಸೇರಿಸಿಕೊಂಡು ಸ್ಯಾಂಡಲ್ವುಡ್ ನಲ್ಲಿ ಅರುಣ್ ಸುರೇಶ್ ಎಂತಲೇ ಫೇಮಸ್ಸಾಗಿದ್ದಾರೆ. ಸದ್ಯ ಕಾರ್ಮೋಡ ಸರಿದು ಚಿತ್ರಕ್ಕೆ ಹಿಂದೆ ಮಾಡಿರುವ ಎಲ್ಲ ಸಿನಿಮಾಗಳಿಗಿಂತ ಭಿನ್ನ ಮಾದರಿಯಲ್ಲಿ ಡಿಓಪಿ ಕೆಲಸಗಳನ್ನು ಮಾಡಿರುವ ಅರುಣ್, ಕಡಿಮೆ ಬಜೆಟ್ ನಲ್ಲಿ ಉತ್ತಮ ಸಿನಿಮಾಗಳನ್ನು ಮಾಡಬಹುದೆಂದು ಸಾಧಿಸಿ ತೋರಿಸಿದ್ದಾರೆ. ಸಿನಿಮಾ ನೋಡಿದ ಪ್ರತಿಯೊಬ್ಬರೂ ಛಾಯಾಗ್ರಹಣ ಕುರಿತಾಗಿಯೇ ಮಾತನಾಡುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ಕೇಳಿದ್ದಕ್ಕೆ ತನ್ನ ಜತೆ ಕೆಲಸ ಮಾಡಿದ್ದ ಟೆಕ್ನಿಷಿಯನ್ ಗಳು, ಲೈಟ್ ಬಾಯ್ಸ್, ಕ್ಯಾಮೆರಾ ಅಸಿಸ್ಟೆಂಟ್ ಗಳು, ಕೆಲಸದ ಹುಡುಗರು ಸಾಥ್ ನೀಡಿದ್ದಕ್ಕೆ ಇದು ಸಾಧ್ಯವಾಯಿತು ಎನ್ನುತ್ತಾರೆ ಅರುಣ್. ಒಟ್ಟಾರೆ ಪಕ್ಕಾ ಕಮರ್ಷಿಯಲ್ ಸಿನಿಮಾವನ್ನು ನಿಭಾಯಿಸಬಲ್ಲ ಛಾತಿ ಅರುಣ್ ಸುರೇಶ್ ಅವರಿಗಿದೆ. ತಮ್ಮ ಪಾಲಿಗೆ ಬಂದ ಸಣ್ಣ ಸಿನಿಮಾಗಳು, ಹೊಸಬರ ಚಿತ್ರಗಳಲ್ಲೇ ಸ್ಕೋರು ಮಾಡುತ್ತಿದ್ದಾರೆ. ಸೂರಿ ಕೈಗೆ ಒಂದು ದೊಡ್ಡ ಸಿನಿಮಾ ಸಿಕ್ಕರಂತೂ ಇನ್ನೂ ದೊಡ್ಡ ಎತ್ತರಕ್ಕೇರಿ ಕನ್ನಡಚಿತ್ರರಂಗದ ಅದ್ಭುತ ಛಾಯಾಗ್ರಾಹಕ ಅನ್ನಿಸಿಕೊಳ್ಳೋದರಲ್ಲಿ ಡೌಟಿಲ್ಲ.
2 Comments