ಕ್ರೇಜಿಬಾಯ್ ಅನ್ನೋ ಸಿನಿಮಾದಲ್ಲಿ ಆರಂಭಿಸಿ ಮಾಸ್ ಲೀಡರ್, ಮುಗುಳು ನಗೆ, ರಾಜು ಕನ್ನಡ ಮೀಡಿಯಂ, ರ್ಯಾಂಬೋ-2, ಗರುಡ, ತಾಯಿಗೆ ತಕ್ಕ ಮಗ, … ಹೀಗೆ ಆರಂಭದಲ್ಲಿ ಸ್ಟಾರ್ ನಟರು ಮತ್ತು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಅವಕಾಶ ಪಡೆದು ನಂತರ ಪೂರ್ಣ ಪ್ರಮಾಣದ ನಾಯಕಿಯಾದ ಹುಡುಗಿ ಆಶಿಕಾ ರಂಗನಾಥ್. ಚೂರು ಚಿಗುರುತ್ತಿದ್ದಂತೇ ಈಕೆ ಸಂಭಾವನೆಯನ್ನು ಕೂಡಾ ಗಣನೀಯವಾಗಿ ಏರಿಸಿಕೊಂಡಳು. ಕಡೆಕಡೆಗೆ “ಹದಿನಾಲ್ಕು ಲಕ್ಷ ಕೊಟ್ಟರೆ ಮಾಡ್ತೀನಿ” ಅನ್ನೋ ಲೆವೆಲ್ಲಿಗೆ ಬಂದು ನಿಂತಿತಂತೆ. ಅಲ್ಲಿಗೆ ಈ ಎಳೇ ಹುಡುಗಿಗೆ ಇಷ್ಟು ಸಂಬಳ ಕೊಡೋದಕ್ಕಿಂತಾ ಇನ್ನೂ ಹೆಚ್ಚು ಹೆಸರು ಮಾಡಿರುವ ಸ್ಟಾರ್ ನಟಿಯರನ್ನೇ ಕರೆದುಕೊಂಡು ಬರಬಹುದು ಅಂತಾ ನಿರ್ಮಾಪಕರು ಲೆಕ್ಕ ಹಾಕಿದರೋ ಏನೋ? ಅದೂ ಅಲ್ಲದೆ ಸಂಭಾವನೆಯ ವಿಚಾರ ಬಿಟ್ಟು ಮತ್ತೊಂದು ಗಾಸಿಪ್ಪಿನ ಘಾಟು ಆಶಿಕಾ ಸುತ್ತ ಸುತ್ತಿಕೊಂಡಿದೆ. ಅದೇನೆಂದರೆ, ಕೊಡೋದೆಲ್ಲಾ ಕೊಟ್ಟು ದಿನವೊಂದಕ್ಕೆ ನಾಲ್ಕೈದು ಸಾವಿರ ರುಪಾಯಿಗಳ ಎಕ್ಸ್ಟ್ರಾ ಟ್ಯಾಕ್ಸು ಗ್ಯಾರೆಂಟಿ ಅನ್ನೋದು. “ಇಂಥಾ ಹೊಟೇಲಿನ ಇಂಥದ್ದೇ ಫಿಶ್ಶು ಬೇಕು, ಫ್ರೂಟ್ಸು ಬೇಕು ಅದು ಬೇಕು ಇದು ಬೇಕು” ಅಂತಾ ಆಶಿಕಾಳ ತಾಯಿ ಸುಧಾ ಬೇಕುಗಳ ಪಟ್ಟಿಯನ್ನೇ ನೀಡುತ್ತಾರಂತೆ. “ಶೂಟಿಂಗು ಮುಗಿಯೋ ಹೊತ್ತಿಗೂ ಆರ್ಡರ್ ಮಾಡ್ತಾರಲ್ಲಾ ಯಾಕೆ? ಅಂತಾ ತನಿಖೆ ನಡೆಸಿದರೆ ಅದು ಮನೆಗೆ ಪಾರ್ಸಲ್ಲಾಗುತ್ತದೆ. ಆಶಿಕಾಳಿಂದ ಯಾವ ಸಮಸ್ಯೆಯೂ ಇಲ್ಲ ಆದರೆ ಅವರಮ್ಮನ್ನ ಮೇಂಟೇನು ಮಾಡೋದೇ ಸ್ವಲ್ಪ ಕಷ್ಟ” ಎನ್ನುತ್ತಾರೆ ಹೆಸರು ಹೇಳಲು ಇಚ್ಚಿಸದ ಪ್ರೊಡಕ್ಷನ್ ಕಂಟ್ರೋಲರ್ ಒಬ್ಬರು!
ಇದೆಲ್ಲದರ ಪ್ರತಿಫಲವೆನ್ನುವಂತೆ, ಒಂದರ ಹಿಂದೊಂದು ಅವಕಾಶ ಪಡೆಯುತ್ತಿದ್ದ ಆಶಿಕಾಗೆ ಏಕಾಏಕಿ ಅವಕಾಶವೇ ಇಲ್ಲದಂತಾಗಿ ಹೋಗಿದೆಯಂತೆ. ಸದ್ಯ ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಸಿನಿಮಾ ಬಿಟ್ಟರೆ ಈಕೆಯ ಕೈಲಿ ಬೇರ್ಯಾವ ಚಿತ್ರವೂ ಇಲ್ಲವಂತೆ. ಹೀಗಾಗಿ ಆಶಿಕಾ ಈಗ ಮದಗಜನ ಬೆನ್ನುಬಿದ್ದಿದ್ದಾಳೆ ಅನ್ನೋ ಮಾತು ಕೇಳಿಬರುತ್ತಿದೆ. “ಸಂಭಾವನೆ ಕೊಡದಿದ್ದರೂ ಪರವಾಗಿಲ್ಲ, ನನ್ನ ಮಗಳಿಗೆ ಛಾನ್ಸು ಕೊಡಿ ಸಾಕು” ಅಂತಾ ಆಶಿಕಾಳ ತಾಯಿ ಮದಗಜನನ್ನು ಪೀಡಿಸುತ್ತಿದ್ದಾರೆ ಎನ್ನುವ ಗಾಳಿಸುದ್ದಿ ಸದ್ಯ ಗಾಂಧಿನಗರದಿಂದ ಹಿಡಿದು ನಾಗರಬಾವಿತನಕ ಹರಡಿಕೊಂಡಿದೆ.
ಈ ಬಗ್ಗೆ ಖುದ್ದು ಮದಗಜ ಚಿತ್ರದ ನಿರ್ದೇಶಕ ಅಯೋಗ್ಯ ಮಹೇಶ್ ಅವರನ್ನು ಕೇಳಲಾಗಿ ”ನಾಲ್ಕು ಜನ ಹೀರೋಯಿನ್ಗಳು ನಮ್ಮ ಪಟ್ಟಿಯಲ್ಲಿದ್ದಾರೆ. ರಚಿತಾರಾಮ್, ಕೆಜಿಎಫ್ ಹೀರೋಯಿನ್ ಸೇರಿದಂತೆ ನಾಲ್ಕು ಜನರಲ್ಲಿ ಯಾರಾದರೂ ಒಬ್ಬರಲ್ಲಿ ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೇವೆ ಅದರಲ್ಲಿ ಆಶಿಕಾ ಕೂಡಾ ಒಬ್ಬರು. ಹಾಗಂತ ಅವರೇ ಅಂತಿಮವಾಗಿಲ್ಲ. ನಾವಾಗೇ ಅವರ ತಾಯಿಯ ಬಳಿ ಮಾತಾಡಿದ್ದು ನಿಜ. ಮತ್ತು ಸ್ವಲ್ಪ ಕಾಲಾವಕಾಶ ಕೊಡಿ ಎಂದು ತಿಳಿಸಿರುವುದೂ ಸತ್ಯ. ಆದರೆ ಗಾಸಿಪ್ಪು ಹರಡಿರುವಂತೆ ಸಂಭಾವನೆ ಕೊಡದಿದ್ದರೂ ಪರವಾಗಿಲ್ಲ ಅವಕಾಶ ಕೊಡಿ ಅಂತಾ ಆಶಿಕಾ ಮನೆಯವರು ಕೇಳಿದ್ದಾರೆ ಅನ್ನೋದೆಲ್ಲಾ ಸತ್ಯಕ್ಕೆ ದೂರವಾದ ಮಾತು” ಎಂದು ಪ್ರತಿಕ್ರಿಯಿಸಿದ್ದಾರೆ.
ಇವೆಲ್ಲಾ ಗಾಳಿಸುದ್ದಿಗಳು, ಆಶಿಕಾ ಮತ್ತವಳ ತಾಯಿಯ ಕುರಿತಾದ ಆರೋಪಗಳೇನೇ ಇದ್ದರೂ ಇನ್ನೂ ಎಳೇ ವಯಸ್ಸಿನ, ಪ್ರತಿಭಾವಂತ ಹೆಣ್ಣುಮಗಳು ಆಶಿಕಾ ರಂಗನಾಥ್. ಚಿಲ್ಲರೆ ವಿಚಾರಗಳಿಂದಾಗಿ ಉಜ್ವಲವಾಗಬೇಕಿರುವ ಆಕೆಯ ವೃತ್ತಿಬದುಕು ಸೊರಗೋದು ಬೇಡ. ಈ ನಿಟ್ಟಿನಲ್ಲಿ ಆಕೆಯ ಮನೆಯವರು ಮತ್ತು ಚಿತ್ರರಂಗದವರು ಒಂದಿಷ್ಟು ಉದಾರತೆ ತೋರುವಂತಾಗಲಿ…
No Comment! Be the first one.