ಡಾ. ರಾಜ್ ಕುಮಾರ್ರಂತೆ ಬಜೆಟ್ಟಿನ ಬಗೆಗೆಲ್ಲಾ ತಲೆ ಕೆಡಿಸಿಕೊಳ್ಳದೇ, ಪಡೆದ ಸಂಭಾವನೆಗೆ ತಕ್ಕಷ್ಟು ಕೆಲಸ ಮಾಡಿಬರೋದನ್ನು ಮಾತ್ರ ರೂಢಿಸಿಕೊಂಡ ನಟರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಒಬ್ಬರು. ದರ್ಶನ್ ಅನ್ನೋ ಪವರ್ರನ್ನು ಉಪಯೋಗಿಸಿ, ಅವರ ಮುಂದೆ ಕಾಗಕ್ಕ ಗೂಬಕ್ಕನ ಲೆಕ್ಕ ತೋರಿಸಿ ಭರ್ಜರಿಯಾಗಿ ತಿಜೋರಿ ತುಂಬಿಸಿಕೊಂಡ ನಿರ್ಮಾಪಕರು ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಜನರಿದ್ದಾರೆ. ಹೆಸರಿಗೆ ಹದಿನೈದು ಕೋಟಿ ಖರ್ಚು ಮಾಡಿ ಮೂವತ್ತು ಕೋಟಿ ಖರ್ಚಾಯಿತು ಅಂತಾ ದರ್ಶನ್ ಅವರ ಮುಂದೆ ಹ್ಯಾಪೆ ಮೋರೆ ಹಾಕಿಕೊಂಡು ಸುಳ್ಳು ಲೆಕ್ಕ ಹೇಳಿ, ಅದಕ್ಕೆ ಎರಡು ಪಟ್ಟು ಲಾಭ ಮಾಡಿಕೊಂಡ ಬುದ್ಧಿಜೀವಿ ನಿರ್ಮಾಪಕರೂ ಇದ್ದಾರೆ. ಇನ್ನು ಖರ್ಚಿಗಿಂತಾ ಎರಡು ಪಟ್ಟು ಲಾಭವಾಯ್ತು ಅಂತಾ ಗೊತ್ತಾದರೆ ಮತ್ತೊಮ್ಮೆ ಕಾಲ್ಶೀಟ್ಗೆಂದು ಹೋದಾಗ ಎಲ್ಲಿ ಹೆಚ್ಚಿಗೆ ಪೇಮೆಂಟು ಕೇಳಿಬಿಡುತ್ತಾರೋ ಅನ್ನೋ ಕೀಳು ಮನಸ್ಥಿತಿ ಕೆಲವು ನಿರ್ಮಾಪಕರದ್ದು. ಡಾ. ರಾಜ್ ಕುಮಾರ್ ಅವರಿಗೂ ಸಾಕಷ್ಟು ಜನ ನಿರ್ಮಾಪಕರು ಸಖತ್ತಾಗಿ ಲಾಭವಾದರೂ “ಅಣ್ಣಾ ಸಿನಿಮಾದಿಂದ ಏನೂ ಗಿಟ್ಟಲಿಲ್ಲ” ಅಂತಾ ಗ್ಲಿಸರಿನ್ ಕಣ್ಣೀರಿಟ್ಟು ಯಾಮಾರಿಸಿ ಬಿಟ್ಟಿ ಕಾಲ್ ಶೀಟ್ ಬರೆಸಿಕೊಳ್ಳುತ್ತಿದ್ದರಂತೆ. ಇದರ ಒಳಮರ್ಮ ತಿಳಿದ ಪಾರ್ವತಮ್ಮನವರು “ನಮ್ಮನ್ನ ಎಷ್ಟೂಂತ ವಂಚಿಸ್ತೀರಾ? ಮಾಡ್ತೀನಿರಿ” ಅಂತ ಎದ್ದು ನಿಂತವರೇ `ವಜ್ರೇಶ್ವರಿ’ ಸಂಸ್ಥೆಯನ್ನು ಕಟ್ಟಿ ಮೋಸಗಾರರನ್ನು ಮಟ್ಟಹಾಕಿದ್ದರು.
ಸದ್ಯ ಮುನಿರತ್ನ ಮುಖ್ಯಸ್ಥಿಕೆಯಲ್ಲಿ ಬರುತ್ತಿರುವ `ಕುರುಕ್ಷೇತ್ರ’ ಕನ್ನಡದ ಅತಿಹೆಚ್ಚು ಬಜೆಟ್ಟಿನ ಮೊದಲ ಸಿನಿಮಾವಾದರೂ ಅದು ದರ್ಶನ್ ಒಬ್ಬರ ಸಿನಿಮಾವಲ್ಲ. ಮೇಲಾಗಿ ಈ ಚಿತ್ರದ ಬಜೆಟ್ಟು ಹೆಚ್ಚಲು ನೂರೆಂಟು ಕಾರಣಗಳಿವೆ. ಆದರೂ ಮುನಿಯಣ್ಣ ಹೇಳೋ ಮಟ್ಟಿಗೆ ಖರ್ಚಾಗಿಲ್ಲ, ವಸಿ ಸೇರಿಸಿಕೊಂಡು ಯೋಳ್ತಾಯ್ತೆ… ಅಂತಾ ಮಂದಿ ಮಾತಾಡಿಕೊಳ್ಳುತ್ತಿದ್ದಾರೆ. ಅದೇನೇ ಇರಲಿ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ಅತಿಹೆಚ್ಚು ಬಜೆಟ್ಟಿನಲ್ಲಿ ನಿರ್ಮಾಣವಾಗಲಿರುವ ಸಿಂಗಲ್ ಹೀರೋ ಸಿನಿಮಾ ರಾಬರ್ಟ್!
ತರುಣ್ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ಸದ್ಯ ಅಂದಾಜಿಸಿರುವ ಬಜೆಟ್ಟೇ ಐವತ್ತೈದು ಕೋಟಿ ರುಪಾಯಿಗಳು. ಇನ್ನೂ ಅದು ಚಿತ್ರೀಕರಣ ಮುಗಿಸಿಕೊಂಡು ಪ್ರೇಕ್ಷಕರ ಮುಂದೆ ಬರೋ ಹೊತ್ತಿಗೆ ಅಂದುಕೊಂಡ ವೆಚ್ಚ ಹೆಚ್ಚಲೂಬಹುದು. ಸ್ವಮೇಕ್ ಸಿನಿಮಾವೊಂದಕ್ಕೆ, ಹೀರೋ ತಾಕತ್ತು ಮತ್ತು ಕಥೆಯಲ್ಲಿನ ಧಮ್ಮನ್ನು ನಂಬಿ ಈ ಮಟ್ಟಕ್ಕೆ ಇನ್ವೆಸ್ಟ್ ಮಾಡಲು ಮುಂದಾಗಿರೋ ನಿರ್ಮಾಪಕರನ್ನು ಅಭಿನಂದಿಸಬೇಕು. ಆರಂಭಕ್ಕೆ ಮುನ್ನವೇ ಬಜೆಟ್ ವಿಚಾರದಲ್ಲೇ ದಾಖಲೆ ನಿರ್ಮಿಸಿರುವ ರಾಬರ್ಟ್ ಎಲ್ಲ ವಿಚಾರದಲ್ಲೂ ರೆಕಾರ್ಡು ಕ್ರಿಯೇಟ್ ಮಾಡಲಿ. ಕನ್ನಡ ಸಿನಿಮಾಗಳ ಬೆಲೆ ಹೆಚ್ಚಿಸಿದ ದರ್ಶನ್ ಅವರಿಗೂ ಶುಭವಾಗಲಿ..
No Comment! Be the first one.