ಎಲ್ಲಿ ನೋಡಿದರೂ ಮೊನ್ನೆ ದಿನ ತೆರೆಗೆ ಬಂದ ಶ್ರೀಮನ್ನಾರಾಯಣನ ಬಗ್ಗೇನೆ ಮಾತುಗಳು ಕೇಳಿಬರುತ್ತಿವೆ. ಸಿನಿಮಾ ನೋಡಿದ ಒಬ್ಬೊಬ್ಬರದ್ದೂ ಒಂದೊಂದು ಬಗೆಯ ಅಭಿಪ್ರಾಯ. ತೀರಾ ನಿರೀಕ್ಷೆ ಹುಟ್ಟಿಸಿ ತೆರೆಗೆ ಬಂದ ಯಾವುದೇ ಚಿತ್ರದ ಬಗ್ಗೆ ಬಿಡುಗಡೆಯ ನಂತರ ಡಿಬೇಟುಗಳು ಶುರುವಾಗುತ್ತವೆ. ಸಿನಿಮಾಸಕ್ತರು, ಚಿತ್ರೋದ್ಯಮದವರ ನಡುವೆ ಅದರದ್ದೇ ಮಾತುಗಳು ಮಥಿಸುತ್ತಿರುತ್ತವೆ. ಹೀಗಿರುವಾಗ ‘ಅವನೇ ಶ್ರೀಮನ್ನಾರಾಯಣ ಚಿತ್ರದ ಕುರಿತು ಒಂಚೂರು ಹೆಚ್ಚೇ ಪ್ರತಿಕ್ರಿಯೆಗಳು ಬರುತ್ತಿವೆ.
ಶ್ರೀಮನ್ನಾರಾಯಣನ ಬಗ್ಗೆ ಬರುತ್ತಿರುವ ವಿಮರ್ಶೆಗಳಲ್ಲಂತೂ ಬಹುತೇಕರು ಸಿನಿಮಾ ವಿಪರೀತ ದೀರ್ಘವಾಯಿತು ಎಂದಿದ್ದಾರೆ. ಒಂದಿಷ್ಟಾದರೂ ಅವಧಿ ಕಡಿತ ಮಾಡಿದ್ದಿದ್ದರೆ ಚೆಂದ ಇರುತ್ತಿತ್ತು ಅನ್ನೋದು ಸಾರ್ವತ್ರಿಕ ಅಭಿಪ್ರಾಯವಾಗಿದೆ. ಚಿತ್ರತಂಡದವರು ಕೂಡಾ ಇದನ್ನು ಪಾಸಿಟೀವ್ ಆಗಿಯೇ ಸ್ವೀಕರಿಸಿ ತಕ್ಷಣಕ್ಕೆ ಹದಿನೈದು ನಿಮಿಷಗಳ ದೃಶ್ಯಗಳಿಗೆ ಕತ್ತರಿ ಹಾಕಿ ಟ್ರಿಮ್ ಮಾಡಿದ್ದಾರಂತೆ. ಮೂರು ಗಂಟೆ ಐದು ನಿಮಿಷಗಳಷ್ಟಿದ್ದ ಸಿನಿಮಾವೀಗ ಎರಡು ಗಂಟೆ ಐವತ್ತು ನಿಮಿಷಕ್ಕೆ ಬಂದು ನಿಂತಿದೆಯಂತೆ.
ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಅವನೇ ಶ್ರೀಮನ್ನಾರಾಯಣ ಸಿನಿಮಾ ಮೊದಲೇ ಕನ್ನಡದಲ್ಲಿ ಬಿಡುಗಡೆಯಾಗಿದ್ದು ಒಂದು ರೀತಿಯಲ್ಲಿ ಒಳ್ಳೆಯದ್ದೇ ಆಗಿದೆ. ಇಲ್ಲಿನ ರೆಸ್ಪಾನ್ಸ್ ನೋಡಿಕೊಂಡು ಸೂಕ್ತ ಬದಲಾವಣೆಗಳನ್ನು ಮಾಡಿ, ಮಿಕ್ಕ ಭಾಷೆಗಳಲ್ಲಿ ರಿಲೀಸ್ ಮಾಡಬಹುದು.
ನಿರ್ಮಾಪಕ ಪುಷ್ಕರ್ ಶ್ರೀಮನ್ನಾರಾಯಣನನ್ನು ನಂಬಿ ದೊಡ್ಡ ಮಟ್ಟದಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ಅವರಿಗಿರುವ ಮಾರ್ಕೆಟ್ಟು, ಅವನೇ ಶ್ರೀಮನ್ನಾರಾಯಣನ ಬಗ್ಗೆ ಇರುವ ಕ್ರೇಜ಼ು ನೋಡಿದರೆ ಹಾಕಿರುವ ಇನ್ವೆಸ್ಟ್ಮೆಂಟು ವಾಪಾಸು ತೆಗೆಯೋದು ತೀರಾ ಕಷ್ಟವಲ್ಲ. ಈಗಾಗಲೇ ಥಿಯೇಟರ್ ಕಲೆಕ್ಷನ್ ಹೊರತುಪಡಿಸಿ ಡಬ್ಬಿಂಗ್, ಡಿಜಿಟಲ್ ಮತ್ತು ಟೀವಿ ರೈಟ್ಸುಗಳೆಲ್ಲಾ ಒಳ್ಳೇ ರೇಟಿಗೆ ಸೇಲಾಗಿರುವ ಮಾಹಿತಿಯಿದೆ. ನಿರೀಕ್ಷೆಯಂತೆ ಜನ ಕೂಡಾ ಸಿನಿಮಾವನ್ನು ಒಪ್ಪಿಕೊಂಡರೆ ಆದಷ್ಟು ಬೇಗ ಬಂಡವಾಳ ವಸೂಲಾಗುತ್ತದೆ. ಕಡೇಪಕ್ಷ ಮೂರುವಾರ ಹೌಸ್ ಫುಲ್ ಕಲೆಕ್ಷನ್ ಕಂಡರೆ, ಆ ನಂತರದ್ದೆಲ್ಲಾ ನಿರ್ಮಾಪಕರ ಪಾಲಿಗೆ ಭರ್ತಿ ಲಾಭ. ಪುಷ್ಕರ್ ಮತ್ತವರ ತಂಡ ಆ ದಿನಗನ್ನು ಆಷ್ಟು ಬೇಗ ಎದುರುನೋಡುವಂತಾಗಲಿ…!