ಅಂಧಾಧುನ್, ಬಧಾಯಿ ಹೋ, ಆರ್ಟಿಕಲ್ 15 ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ನ ನಂತರ ಆಯುಷ್ಮಾನ್ ಖುರಾನಾ ಯಶಸ್ವಿ ನಟರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿದ್ದು, ಲಾಭದಾಯಕ ನಟರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ‘ಅಂಧಾಧುನ್’ ಚಿತ್ರವು ಅತ್ಯುತ್ತಮ ಹಿಂದಿ ಚಲನಚಿತ್ರ ಹಾಗೂ ಅತ್ಯುತ್ತಮ ಚಿತ್ರಕತೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನೂ ಪಡೆದಿದ್ದು, ‘ಬಧಾಯಿ ಹೋ’ ನಟನೆಗಾಗಿ ಆಯುಷ್ಮಾನ್ಗೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಈ ಎಲ್ಲಾ ಚಿತ್ರಗಳು ಯಶಸ್ಸು ಗಳಿಸುತ್ತಿದ್ದಂತೆಯೇ ಆಯುಷ್ಮಾನ್ ಖುರಾನಾ ಅವರ ಸ್ಟಾರ್ವ್ಯಾಲ್ಯೂ ಹಾಗೂ ಸಂಭಾವನೆಯಲ್ಲಿ ಭಾರಿ ಏರಿಕೆಯಾಗಿದೆ. ಜಾಹೀರಾತೊಂದರ ನಟನೆಗಾಗಿ ಆಯುಷ್ಮಾನ್ ಸಹಿ ಮಾಡಿದ್ದು, 3.50 ಕೋಟಿ ಸಂಭಾವನೆ ಪಡೆದಿದ್ದಾರೆ. ತಮ್ಮ ಸಂಭಾವನೆಯನ್ನು ಮೂರು ಪಟ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ. ಈ ಹಿಂದೆ ಜಾಹೀರಾತು ನಟನೆಗಾಗಿ 90 ಲಕ್ಷದಿಂದ 1 ಕೋಟಿ ಸಂಭಾವನೆ ಪಡೆಯುತ್ತಿದ್ದರು. ರಾಷ್ಟ್ರೀಯ ಪ್ರಶಸ್ತಿ ಪಡೆದ ನಂತರ ಏಕಾಏಕಿ ಸಂಭಾವನೆ ಏರಿಸಿಕೊಂಡ ಅವರು, 3.50 ಕೋಟಿಗಿಂತ ಕಡಿಮೆ ಮೊತ್ತಕ್ಕೆ ನಟಿಸಲ್ಲ ಎಂದು ಖಡಕ್ಕಾಗಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಏಕ್ತಾ ಕಪೂರ್ ನಿರ್ದೇಶನದ ಡ್ರೀಮ್ ಗರ್ಲ್ ಚಿತ್ರದಲ್ಲಿ ನಟಿಸಿದ್ದು, ಇದೇ ಸೆಪ್ಟೆಂಬರ್ 13ರಂದು ಸಿನಿಮಾ ಬಿಡುಗಡೆಯಾಗಲಿದೆ.
ಅಲ್ಲದೇ 2017ರಲ್ಲಿ ಬಿಡುಗಡೆಯಾದ ತಮ್ಮ ನಟನೆಯ ‘ಶುಭ್ ಮಂಗಲ್ ಸಾವಧಾನ್’ ಚಿತ್ರದ ಮುಂದಿನ ಅವತರಣಿಕೆಯಲ್ಲಿಯೂ ನಟಿಸಲಿದ್ದಾರೆ. ಈ ಚಿತ್ರಕ್ಕೆ ‘ಶುಭ್ ಮಂಗಲ್ ಜಾದಾ ಸಾವಧಾನ್’ ಎಂದು ಹೆಸರಿಡಲಾಗಿದೆ. ಇದು ಸಲಿಂಗಕಾಮಿಗಳ ಕುರಿತ ಹಾಸ್ಯ ಚಿತ್ರ. ಇದನ್ನು ಆನಂದ್ ಎಲ್. ರಾಯ್ ನಿರ್ದೇಶಿಸಲಿದ್ದಾರೆ. ಇದಲ್ಲದೇ ‘ಬಧಾಯಿ ಹೋ’ ಚಿತ್ರದ ಸೀಕ್ವೆಲ್ ಕೂಡ ತಯಾರಾಗಲಿದ್ದು, ಅದರಲ್ಲೂ ನಟಿಸುವ ಸಾಧ್ಯತೆ ಇದೆ.