ಶಿಶಿರ ಸಿನಿಮಾದ ಮೂಲಕ ನಿರ್ದೇಶಕರಾದವರು ಮಂಜು ಸ್ವರಾಜ್, ಆ ನಂತರ ಶಿವರಾಜ್ ಕುಮಾರ್ ಅಭಿನಯದ ಶ್ರೀಕಂಠ, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಶ್ರಾವಣಿ ಸುಬ್ರಮಣ್ಯ, ಪಟಾಕಿ ಚಿತ್ರಗಳನ್ನು ಕೂಡಾ ನಿರ್ದೇಶಿಸಿದ್ದರು. ಹನಿಮೂನ್ ಎಕ್ಸ್ ಪ್ರೆಸ್ ಚಿತ್ರದ ಮೂಲಕ ನಿರ್ಮಾಣಕ್ಕಿಳಿದು ಜೋಶ್, ಸವಿಸವಿ ನೆನಪು, ತೆನಾಲಿರಾಮ, ಎಂದೆಂದಿಗೂ, ರಿಕ್ಕಿ, ಪಟಾಕಿ ಸೇರಿದಂತೆ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿ ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕ ಎನಿಸಿಕೊಂಡವರು ಎಸ್.ವಿ. ಬಾಬು. ಎಸ್.ವಿ. ಪ್ರೊಡಕ್ಷನ್ ಅಂದರೆ ಅಲ್ಲಿ ಶ್ರೀಮಂತಿಕೆ, ಅದ್ಭುತ ತಾಂತ್ರಿಕ ವರ್ಗ, ಕಲಾವಿದರ ಬಳಗ ಎಲ್ಲವೂ ಇರುತ್ತದೆ ಅನ್ನೋದು ಇಡೀ ಇಂಡಸ್ಟ್ರಿ ಮೀರಿ ಸಾಮಾನ್ಯ ಜನರಿಗೂ ಗೊತ್ತಾಗುವಂತೆ ಮಾಡಿದ ನಿರ್ಮಾಪಕರಿವರು!
ಈಗ ಪಟಾಕಿ ಚಿತ್ರದ ಗೆಲುವಿನ ನಂತರ ಮತ್ತದೇ ನಿರ್ದೇಶಕ ಮತ್ತು ನಿರ್ಮಾಪಕರು ಒಂದಾಗಿದ್ದಾರೆ. ಮನೆ ಮಾರಾಟಕ್ಕಿದೆ ಎನ್ನುವ ಔಟ್ ಅಂಡ್ ಔಟ್ ಕಾಮಿಡಿ ಜಾನರಿನ ಚಿತ್ರವನ್ನು ತಯಾರು ಮಾಡಿದ್ದಾರೆ. ಇದೇ ವಾರ ಮನೆ ಮಾರಾಟಕ್ಕಿದೆ ಚಿತ್ರ ತೆರೆಗೆ ಬರುತ್ತಿದೆ. ಮನೆ ಮಾರಾಟಕ್ಕಿದೆ ಅನ್ನೋ ಶೀರ್ಷಿಕೆಯ ಜೊತೆಗೆ ದೆವ್ವಗಳೇ ಎಚ್ಚರಿಕೆ ಅಂತಾ ಟ್ಯಾಗ್ ಲೈನು ಕೊಟ್ಟಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ನಾಯಿ ದಿದೆ ಎಚ್ಚರಿಕೆ ಅಂತಾ ಮನೆ ಮುಂದೆ ಬೋರ್ಡು ಹಾಕೋರನ್ನ ನೋಡಿದ್ದೇವೆ. ಇನ್ನು ಯಾರಾದರೂ ಮನೆ ಮುಂದೆ ವಾಹನ ನಿಲ್ಲಿಸಿದರೆ ನಾಯಿಗಳನ್ನು ಮೀರಿಸುವಂತೆ ಬೊಗಳುವ ಜನ ಕೂಡಾ ಇದ್ದಾರೆ. ಆದರೆ ಇಲ್ಲಿ ಮನೆ ಮಾರಾಟಕ್ಕಿಟ್ಟವರು ದೆವ್ವಗಳಿಗೆ ಯಾಕೆ ಎಚ್ಚರಿಸಿದರು ಅನ್ನೋದೇ ಈ ಸಿನಿಮಾದ ಸೀಕ್ರೆಟ್ಟು!
ರವಿಶಂಕರ್ ಗೌಡ, ಚಿಕ್ಕಣ್ಣ, ಸಾಧು ಕೋಕಿಲಾ, ಕುರಿ ಪ್ರತಾಪ ಸೇರಿದಂತೆ ಕನ್ನದ ಸ್ಟಾರ್ ಕಾಮಿಡಿ ಹೀರೋಗಳೆಲ್ಲಾ ಇಲ್ಲಿ ಒಟ್ಟಾಗಿದ್ದಾರೆ. ಕಾಮಿಡಿ ಸಿನಿಮಾವಾದರೂ ತೀರಾ ಶ್ರೀಮಂತಿಕೆಯಿಂದ ಈ ಚಿತ್ರವನ್ನು ರೂಪಿಸಲಾಗಿದೆ. ಒಂದೊಂದು ಕ್ಷಣವೂ ರೋಚಕ ತಿರುವುಗಳ ಜೊತೆ ಅಸಾಧ್ಯ ನಗು ಉಕ್ಕಿಸುವ ದೃಶ್ಯಗಳೊಂದಿಗೆ ಮನೆ ಮಾರಾಟಕ್ಕಿದೆ ಚಿತ್ರ ಸಾಗುತ್ತದೆ ಅನ್ನೋದು ನಿರ್ದೇಶಕ ಮಂಜು ಸ್ವರಾಜ್ ಹೇಳಿಕೆ. ಹೊಸ ಹೊಸ ಪ್ರಯೋಗಗಳ ನಡುವೆ ಅಲ್ಲಲ್ಲಿ ಕಾಮಿಡಿ ಸಬ್ಜೆಕ್ಟಿನ ಸಿನಿಮಾಗಳು ಬಂದರಷ್ಟೇ ನೋಡುಗರಿಗೂ ಒಂಚೂರು ರಿಲೀಫು. ಈ ನಿಟ್ಟಿನಲ್ಲಿ ಇದೇ ವಾರ ತೆರೆಗೆ ಬರುತ್ತಿರುವ ಮನೆ ಮಾರಾಟಕ್ಕಿದೆ ಸಿನಿಮಾ ನೋಡುಗರ ಪಾಲಿಗೆ ಭರಪೂರ ಮನರಂಜನೆ ನೀಡುವ ಸಿನಿಮಾವಾಗಲಿದೆ…
ಎಸ್.ವಿ.ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ವಿ.ಬಾಬು ಅವರು ನಿರ್ಮಾಣ ಮಾಡಿರುವ ‘ಮನೆ ಮಾರಾಟಕ್ಕಿದೆ‘ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ‘ಶಿಶಿರ, ‘ಶ್ರಾವಣಿ ಸುಬ್ರಮಣಿ‘, ‘ಶ್ರೀಕಂಠ‘, ‘ಪಟಾಕಿ‘ ಚಿತ್ರಗಳ ನಿರ್ದೇಶಕರಾದ ಮಂಜು ಸ್ವರಾಜ್ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಯೋಗಾನಂದ್ ಮುದ್ದಾನ್ ಸಂಭಾಷಣೆ ಬರೆದಿದ್ದಾರೆ. ಅಭಿಮಾನ್ ರಾಯ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಸುರೇಶ್ಬಾಬು ಅವರ ಛಾಯಾಗ್ರಹಣವಿದೆ. ವಿಶ್ವ ಸಂಕಲನ, ಕಂಬಿ ರಾಜು, ಕಲೈ ನೃತ್ಯ ನಿರ್ದೇಶನ, ವಿಕ್ರಂ ಮೋರ್ ಸಾಹಸ ನಿರ್ದೇಶನ ಹಾಗೂ ಮೋಹನ್ ಬಿ ಕೆರೆ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸಾಧುಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಗೌಡ, ಶ್ರುತಿ ಹರಿಹರನ್, ರಾಜೇಶ್ ನಟರಂಗ, ಕಾರುಣ್ಯರಾಮ್, ಶಿವರಾಂ, ಗಿರಿ, ನೀನಾಸಂ ಅಶ್ವತ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
No Comment! Be the first one.