‘ಬದ್ಲಾ ಲೇನಾ ಹರ್ ಬಾರ್ ಸಹೀ ನಹೀ ಹೋತಾ, ಲೇಕಿನ್ ಮಾಫ್ ಕರ್ನಾ ಭಿ ಹರ್ ಬಾರ್ ಸಹೀ ನಹೀ ಹೋತಾ’ (ಸೇಡು ತೀರಿಸಿಕೊಳ್ಳುವುದು ಪ್ರತೀ ಬಾರಿಯೂ ಸರಿ ಎನಿಸದು, ಆದರೆ ಕ್ಷಮಿಸುವುದು ಕೂಡ ಪ್ರತೀ ಬಾರಿ ಸರಿ ಎನಿಸದು) – ಅಮಿತಾಭ್ ಬಚ್ಚನ್ ಡೈಲಾಗ್ನೊಂದಿಗೆ ‘ಬದ್ಲಾ’ ಹಿಂದಿ ಚಿತ್ರದ ಟ್ರೈಲರ್ ಶುರುವಾಗುತ್ತದೆ. ಬಚ್ಚನ್ ಇಲ್ಲಿ ಲಾಯರ್ ಬಾದಲ್ ಗುಪ್ತಾ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ನೈನಾ ಸೇಥಿಯಾಗಿ ತಾಪ್ಸಿ ಪನ್ನು ಇದ್ದಾರೆ. ಇದೊಂದು ಮರ್ಡರ್ ಮಿಸ್ಟರಿ ಚಿತ್ರ ಎನ್ನುವುದನ್ನು ಟ್ರೈಲರ್ ಸಾಬೀತು ಮಾಡುತ್ತದೆ. ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ನಿರ್ಮಾಣದ ಈ ಚಿತ್ರದ ನಿರ್ದೇಶಕ ಸುಜಯ್ ಘೋಷ್.
ಈ ಹಿಂದೆ ‘ಪಿಂಕ್’ ಹಿಂದಿ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮತ್ತು ತಾಪ್ಸಿ ಜೊತೆಯಾಗಿ ನಟಿಸಿದ್ದರು. ಅಲ್ಲಿ ಲೈಂಗಿಕ ಶೋಷಣೆಗೊಳಪಟ್ಟ ಯುವತಿಯಾಗಿ ತಾಪ್ಸಿ ನಟಿಸಿದ್ದರೆ, ಅವರಿಗೆ ನ್ಯಾಯ ಒದಗಿಸುವ ವಕೀಲರಾಗಿ ಬಚ್ಚನ್ ಇದ್ದರು. ‘ಬದ್ಲಾ’ದಲ್ಲೂ ಅವರು ಕೊಲೆ ಆರೋಪ ಹೊತ್ತ ತಾಪ್ಸಿ ಪರ ನಿಲ್ಲುತ್ತಾರೆ. ಮೇಲ್ನೋಟಕ್ಕೆ ಟ್ರೈಲರ್ನಲ್ಲಿ ಈ ಅಂಶ ಇದೆಯಾದರೂ, ನಿರ್ದೇಶಕರು ಚಿತ್ರದಲ್ಲಿ ಏನೆಲ್ಲಾ ತಿರುವುಗಳನ್ನು ತಂದಿದ್ದಾರೆ ಎನ್ನುವುದು ಸಿನಿಮಾ ಬಿಡುಗಡೆಯಾದಾಗಷ್ಟೇ ತಿಳಿದುಬರಲಿದೆ. ಎಡರು ವರ್ಷಗಳ ಹಿಂದೆ ತೆರೆಕಂಡ ‘ದಿ ಇನ್ವಿಸಿಬಲ್ ಗೆಸ್ಟ್’ ಸ್ಪಾನಿಷ್ ಚಿತ್ರದ ರೀಮೇಕ್ ಇದು. ‘ಅಲಾದ್ದೀನ್’, ‘ತೀನ್’ ಮತ್ತು ‘ಕಹಾನಿ’ ಚಿತ್ರಗಳ ನಂತರ ಬಚ್ಚನ್ ಮತ್ತು ಸುಜಯ್ ಘೋಷ್ ‘ಬದ್ಲಾ’ದೊಂದಿಗೆ ನಾಲ್ಕನೇ ಬಾರಿ ಜೊತೆಯಾದಂತಾಗಿದೆ. ಮಾರ್ಚ್ 8ರಂದು ಸಿನಿಮಾ ತೆರೆಕಾಣಲಿದೆ.
#
No Comment! Be the first one.