ಚಿರಂಜೀವಿ ಅಭಿನಯದ ಮಹತ್ವಾಕಾಂಕ್ಷೆಯ ’ಸೈರಾ ನರಸಿಂಹರೆಡ್ಡಿ’ ತೆಲುಗು ಚಿತ್ರದಲ್ಲಿ ನಟ ಜಗಪತಿ ಬಾಬು ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ನಿನ್ನೆ ಬಾಬು ತಮ್ಮ 57ನೇ ಜನ್ಮದಿನ ಆಚರಿಸಿಕೊಂಡಿದ್ದಾರೆ. ’ಸೈರಾ’ ನಿರ್ಮಾಪಕ, ನಟ ರಾಮ್ ಚರಣ್ ಅವರು ಜಗಪತಿ ಬಾಬು ಜನ್ಮದಿನಕ್ಕೆ ಉಡುಗೊರೆಯಾಗಿ ನಟನ ಟೀಸರ್ ಲುಕ್ ರಿಲೀಸ್ ಮಾಡಿದ್ದಾರೆ. ’ಸೈರಾ’ದಲ್ಲಿ ಜಗಪತಿ ಬಾಬು ಅವರು ವೀರಾ ರೆಡ್ಡಿ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಟೀಸರ್ ಲುಕ್ ಗಮನ ಸೆಳೆಯುತ್ತಿದೆ. ಇತ್ತೀಚೆಗಷ್ಟೇ ತೆರೆಕಂಡು ಬ್ಲಾಕ್ಬಸ್ಟರ್ ಎನಿಸಿಕೊಂಡ ಅಜಿತ್ ನಟನೆಯ ’ವಿಶ್ವಾಸಂ’ ತಮಿಳು ಚಿತ್ರದಲ್ಲಿ ಜಗಪತಿ ನಟಿಸಿದ್ದರು. ತೆಲುಗು ಬಯೋಪಿಕ್ ’ಯಾತ್ರಾ’ದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಬಾಬು ಅವರ ’ಸೈರಾ’ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.
ಚಿರಂಜೀವಿ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿರುವ ’ಸೈರಾ ನರಸಿಂಹರೆಡ್ಡಿ’ ಚಿತ್ರ ಮುಗಿಯುವ ಹಂತದಲ್ಲಿದೆ. ಅಮಿತಾಭ್ ಬಚ್ಚನ್, ನಯನತಾರಾ, ಸುದೀಪ್, ವಿಜಯ್ ಸೇತುಪತಿ, ತಮನ್ನಾ ಮತ್ತಿತರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಜಗಪತಿ ಬಾಬು ಅವರ ಸಿನಿಮಾ ಅಭಿಯಾನಕ್ಕೀಗ ನಾಲ್ಕು ದಶಕಗಳು ಸಂದಂತಾಗಿದೆ. ೯೦ರ ದಶಕದಲ್ಲಿ ತೆಲುಗಿನ ಜನಪ್ರಿಯ ನಾಯಕನಟನಾಗಿ ಅವರು ಗುರುತಿಸಿಕೊಂಡಿದ್ದರು. ಕಳೆದೊಂದು ದಶಕದಿಂದೀಚೆಗೆ ಅವರು ಪೋಷಕ, ಖಳ ಪಾತ್ರಗಳಲ್ಲಿ ನಟಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರಗಳಲ್ಲು ಹೆಚ್ಚಾಗಿ ತೊಡಗಿಸಿಕೊಂಡಿರುವ ಬಾಬು ಸದ್ಯ ಧ್ರುವ ಸರ್ಜಾ ನಟನೆಯ ’ಪೊಗರು’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
#
No Comment! Be the first one.