ತೆಲುಗು ಸ್ಟಾರ್ ನಟ ಬಾಲಯ್ಯ ತನ್ನದೇ ಆದ ಚರಿಷ್ಮಾ ಸೃಷ್ಟಿ ಮಾಡಿಕೊಂಡಿರುವ ನಟ. ಆಂಧ್ರ ತೆಲಂಗಾಣ ಮಾತ್ರವಲ್ಲ ಕರ್ನಾಟಕದಲ್ಲೂ ಬಾಲಕೃಷ್ಣರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ತೆರೆ ಮೇಲೆ ಸಿಂಹದಂತೆ ಗರ್ಜಿಸೋ ಬಾಲಯ್ಯ ಚಿತ್ರದ ಖಳರ ವಿರುದ್ಧ ನಡೆಸುವ ಆಟಾಟೋಪಗಳು ಒಂದೆರಡಲ್ಲ. ತುಪಾಕಿಯಿಂದ ಸಿಡಿದ ಗುಂಡಿನಂತೆ ಮಾತಾಡೋ ಬಾಲಯ್ಯನ ಡೈಲಾಗ್ಸ್ಗೆ ಚಪ್ಪಾಳೆ ಶಿಳ್ಳೆ ಖಚಿತ.
ಇಂತಿಪ್ಪ ಬಾಲಯ್ಯ ರಿಯಲ್ ಲೈಫಿನಲ್ಲಿ ಆಡುವ ಮಾತೊಂದು ಆಂಧ್ರದಲ್ಲಿ ಅಪಹಾಸ್ಯಕ್ಕೀಡಾಗಿದೆ. ಗೊತ್ತೋ ಗೊತ್ತಿಲ್ಲದೆಯೋ ಬಾಲಯ್ಯ ಒಂದು ಪದವನ್ನ ಮಾತಾಡುತ್ತಲೇ ಇದ್ದಾರೆ, ಆ ಮಾತು ಅನರ್ಥಗಳನ್ನ ಸೃಷ್ಟಿ ಮಾಡುತ್ತಲೇ ಇದೆ. ‘ಬಾಲಯ್ಯ, ಅರ್ಥ ತಿಳ್ಕೊಂಡು ಮಾತಾಡಯ್ಯ’ ಅಂತ ಟ್ರೋಲಿಗರು ಬಾಲಯ್ಯರನ್ನ ಛೇಡಿಸುತ್ತಿರುವುದು ಸದ್ಯದ ವಿದ್ಯಮಾನ. ಹಾಗಾದರೆ ಬಾಲಯ್ಯ ಆಡಿ ಅಪಹಾಸ್ಯಕ್ಕೀಡಾದ ಆ ಮಾತಾದರೂ ಏನು?
‘ಸಂಭ್ರಮಾಶ್ಚರ್ಯಂ!’ ಅನ್ನೋ ಪದವೇ ಬಾಲಯ್ಯರನ್ನ ಪೇಚಿಗೆ ಸಿಲುಕಿಸಿರೋ ಪದ. ‘ತುಂಬಾ ಖುಷಿಯಾಗುತ್ತಿದೆ, ಅಚ್ಚರಿಯಾಗುತ್ತಿದೆ’ ಎಂಬುದನ್ನ ಹೇಳಲು ತೆಲುಗರು ಈ ಪದ ಬಳಸುವುದುಂಟು. ಅದನ್ನೇ ಬಾಲಯ್ಯ ಕೂಡಾ ಆಡಿದ್ದಾರೆ. ಆದರೆ ಅವರಿದನ್ನ ಹೇಳುವಂಥ ಸಂದರ್ಭವಿದೆಯಲ್ಲ.. ಅಲ್ಲೇ ಯಡವಟ್ಟಾಗಿರೋದು. ಕೆಲ ತಿಂಗಳ ಹಿಂದೆ ಬಾಲಯ್ಯನ ಸಹೋದರ ನಂದಮೂರಿ ಹರಿಕೃಷ್ಣ ನಿಧನರಾದಾಗ ಮಾಧ್ಯಮದವರು ಬಾಲಯ್ಯರನ್ನ ಮಾತಾಡಿಸಿದರು. ಆಗ ಬಾಲಯ್ಯ ಕೊಟ್ಟ ಉತ್ತರ ‘ಸಂಭ್ರಮಾಶ್ಚರ್ಯಂ!’
ಕಳೆದ ವಾರ ನಿರ್ದೇಶಕ ಕೋಡಿ ರಾಮಕೃಷ್ಣ ನಿಧನರಾದರಲ್ಲ, ಆವತ್ತು ಮಾಧ್ಯಮ ಪ್ರತಿನಿಧಿಗಳು ಅಭಿಪ್ರಾಯಕ್ಕೆ ಅಂತ ಬಾಲಯ್ಯನ ಮುಂದೆ ಮೈಕು ಹಿಡಿದರೆ ಬಾಲಯ್ಯ ಹೇಳಿದ್ದು ‘ಸಂಭ್ರಮಾಶ್ಚರ್ಯಂ’!
ಅಸಲಿಗೆ ಬಾಲಕೃಷ್ಣ ಉದ್ದೇಶ ‘ಗಣ್ಯರ ಸಾವಿನಿಂದಾಗಿ ತನಗೆ ಪರಮ ದುಃಖವಾಗಿದೆ, ಶೋಕದಲ್ಲಿದ್ದೇನೆ, ದಿಗ್ಬ್ರಾಂತನಾಗಿದ್ದೇನೆ’ ಎಂದು ಹೇಳುವುದಷ್ಟೇ. ಆದರೆ ಸಂಭ್ರಮಾಶ್ಚರ್ಯಂ ಪದದ ನಿಜಾರ್ಥ ಗೊತ್ತೋ ಗೊತ್ತಿಲ್ಲದೆಯೋ ಬಾಲಕೃಷ್ಣ ‘ಸಂಭ್ರಮಾಶ್ಚರ್ಯಂ, ಸಂಭ್ರಮಾಶ್ಚರ್ಯಂ’ ಎಂದು ಹೇಳಿ ಹೇಳೀ ಯಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಆ ಪದ ತನ್ನ ದುಃಖದ ಆವನ್ನು ಎತ್ತಿ ಎತ್ತಿ ತೋರಿಸುತ್ತಿದೆ ಎಂದೇ ಬಾಲಯ್ಯಗಾರು ಅಂದುಕೊಂಡಿದ್ದಾರೆ. ಆದರೆ ಪದಾರ್ಥ ಗೊತ್ತಿದ್ದವರು ಒಳಗೊಳಗೇ ಮುಸಿ ಮುಸಿ ನಗುತ್ತಿದ್ದಾರೆ..!
‘ಬಾಲಯ್ಯ ವ್ಯಾಕರಣ ಶುದ್ಧ ಮಾಡಿಕೊಳ್ಳಲಿ, ಅರ್ಥ- ಅಪಾರ್ಥಗಳನ್ನ ನಿಜ ಬದುಕಿನಲ್ಲೂ ಅರ್ಥ ಮಾಡಿಕೊಳ್ಳಲಿ’ ಎಂದು ಅವರ ಅಭಿಮಾನಿಗಳು ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಡಬಹುದೇನೋ. ಒಂದು ವೇಳೆ ತಿಮ್ಮಪ್ಪ ಅನುಗ್ರಹಿಸಿದರೂ ಬಾಲಯ್ಯ ಅದನ್ನ ಸ್ವೀಕರಿಸುತ್ತಾರಾ ಅನ್ನೋದು ಸದ್ಯದ ಡೌಟು. ಯಾಕೆಂದರೆ ನಟ ಭಯಂಕರ ಬಾಲಯ್ಯ ಕೌಂಟರ್ ಕೊಡುವುದಕ್ಕೇ ಫೇಮಸ್ಸು!