ರಿಷಬ್ ಶೆಟ್ಟಿ ಅಪ್ಪಟ ವ್ಯಾಪಾರೀ ಗುಣದ ನಿರ್ದೇಶಕ ಕಂ ನಟ. ರಿಷಬ್ ನಿರ್ದೇಶನದ ಮೊದಲ ಸಿನಿಮಾ ರಿಕ್ಕಿಯನ್ನು ಎಸ್.ವಿ.ಬಾಬು ನಿರ್ಮಿಸಿದ್ದರು. ಸಿನಿಮಾ ಬಾಕ್ಸಾಫೀಸಲ್ಲಿ ಮುಗ್ಗರಿಸಿತು. ನಂತರ ಕಿರಿಕ್ ಪಾರ್ಟಿಯನ್ನು ಕಟ್ಟಿದರು. ಇವರಿವರೇ ನಾಲ್ಕೈದು ಜನ ಬಂಡವಾಳ ಹೂಡಿಕೆ ಮಾಡಿ ರೂಪಿಸಿದ ಕಿರಿಕ್ ಪಾರ್ಟಿ ಗಳಿಕೆಯಲ್ಲಿ ದಾಖಲೆ ನಿರ್ಮಿಸಿತು. ಆ ನಂತರ ಶೆಟ್ಟರ ಗುಂಪು ಭಾಳಾ ಹುಷಾರಾಯಿತು. ಕಿರಿಕ್ ಪಾರ್ಟಿ ನಂತರ ರಕ್ಷಿತ್ ಸೋಲು-ಗೆಲುವು ಎರಡನ್ನೂ ಕಂಡರು. ಆದರೆ ರಿಷಬ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ ಸಿನಿಮಾಗಳು ಬರಿಯ ಲಾಭವನ್ನೇ ಮಾಡುತ್ತಾ ಬಂದಿವೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎನ್ನುವ ಬ್ರಿಡ್ಜ್ ಲೆವೆಲ್ಲಿನ ಸಿನಿಮಾವನ್ನು ಕಮರ್ಷಿಯಲ್ ಹಿಟ್ ಮಾಡಿದರು. ಆ ನಂತರ ನಾಲ್ಕು ಜನ ರೂಪಿಸಿದ್ದ ಶಾರ್ಟ್ ಮೂವಿಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿದ್ದರು ಶೆಟ್ರು. ಅದಕ್ಕೆ ಕಥಾ ಸಂಗಮ ಅಂತಾ ಹೆಸರಿಟ್ಟು ಭರ್ಜರಿ ವ್ಯಾಪಾರ ಮಾಡಿ ಕೋಟಿಕಟ್ಟಲೆ ಹಣ ಮಾಡಿದರು. ಸರ್ಕಾರಿ ಪ್ರಾಥಮಿಕ ಶಾಲೆ, ಕಥಾ ಸಂಗಮದ ನಂತರ ರಿಷಬ್ ನಿರ್ಮಿಸಿ ನಟಿಸಿದ್ದ ಹೀರೋ ಎನ್ನುವ ಸಿನಿಮಾ ಹೇಳಿಕೊಳ್ಳುವ ಮಟ್ಟಿಗೆ ಬಂದಿರಲಿಲ್ಲ. ಆದರೆ ಲಾಭದಲ್ಲಿ ನಯಾ ಪೈಸೆಯ ಕೊರತೆಯಾಗಲಿಲ್ಲ. ಕುಂದಾಪುದರ ರಿಷಬ್ ಶೆಟ್ಟಿ ವ್ಯಾಪಾರದ ವಿಚಾರದಲ್ಲಿ ಪಕ್ಕಾ ಕೋಮಟಿ ಶೆಟ್ಟರಂತೆ ಬುದ್ದಿವಂತಿಕೆ ಬಳಸುತ್ತಾರೆ. ಈ ಕಾರಣಕ್ಕೇ ಇವರು ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿರುವುದು.
ಇದೇ ವಾರ ರಿಷಬ್ ಅವರ ಕಾಂತಾರ ತೆರೆಗೆ ಬರುತ್ತಿದೆ. ಸದ್ಯ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕಾಗಿ ಹೊಂಬಾಳೆ ಫಿಲ್ಮ್ಸ್ ಆರು ಕೋಟಿ ರುಪಾಯಿಗಳ ಪ್ಯಾಕೇಜನ್ನು ರಿಷಬ್ ಅವರಿಗೆ ನೀಡಿತ್ತು ಎನ್ನುವ ಮಾತು ಕೇಳಿಬರುತ್ತಿದೆ. ಸಂಭಾವನೆ ಸೇರಿ ಈ ಆರು ಕೋಟಿಯ ಒಳಗೆ ಸಿನಿಮಾವನ್ನು ರೂಪಿಸಿಕೊಡಬೇಕಾಗಿ ಹೊಂಬಾಳೆ ಷರತ್ತು ವಿಧಿಸಿತ್ತಂತೆ. ರಿಷಬ್ ಕೂಡಾ ಅಷ್ಟರಲ್ಲೇ ಚಿತ್ರವನ್ನು ಕಂಪ್ಲೀಟ್ ಮಾಡಿಕೊಟ್ಟಿರುವುದಾಗಿಯೂ ಮಾತುಗಳಿವೆ.
ಈ ವರೆಗೆ ರಿಷಬ್ ಸಣ್ಣ ಮೊತ್ತ ಹಾಕಿ ದೊಡ್ಡ ಲಾಭ ಮಾಡಿದವರು. ಕೆ.ಜಿ.ಎಫ್ ಗಾಗಿ ನೂರಾರು ಕೋಟಿ ಇನ್ವೆಸ್ಟ್ ಮಾಡಿದ್ದ ಹೊಂಬಾಳೆ ಇದೇ ಮೊದಲ ಬಾರಿಗೆ ರಿಷಬ್ಗಾಗಿ ಆರು ಕೋಟಿಯ ಮೊತ್ತವನ್ನು ನೀಡಿದೆ.. ಕಾಂತಾರ ಅದಕ್ಕೆ ಎಷ್ಟು ಪಟ್ಟು ಹೆಚ್ಚಿಗೆ ಲಾಭ ದೋಚುತ್ತದೆ ಅನ್ನೋದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ. ಸದ್ಯ ರಿಷಬ್ ಅವರ ಇತರೆ ಸಿನಿಮಾಗಳಂತೆ ಕಾಂತಾರ ಚಿತ್ರದ ಟ್ರೇಲರ್ ಕೂಡಾ ಎಲ್ಲರ ಗಮನ ಸೆಳೆಯುವಂತೆ ಮೂಡಿಬಂದಿದೆ. ಚಿತ್ರದ ಒಳಗೆ ಹೇಗಿದೆಯೋ ಗೊತ್ತಿಲ್ಲ. ಈಗಾಗಲೇ ನೋಡಿದವರ ಪ್ರಕಾರ ಸಿನಿಮಾ ತುಂಬಾ ಚನ್ನಾಗಿದೆ. ಆದರೆ, ದಕ್ಷಿಣ ಕನ್ನಡದ ಭಾಷೆ ಹೆಚ್ಚು ಬಳಕೆಯಾಗಿದೆ ಎಂಬ ಮಾಹಿತಿ ಇದೆ. ದಕ್ಷಿಣ ಕನ್ನಡದ ನೆಲದ ಕ್ರೀಡೆಯಾದ ಕಂಬಳ ಮತ್ತು ದೈವಾರಧನೆಯೇ ಈ ಚಿತ್ರದ ಕಥಾವಸ್ತುವಾಗಿರುವುದರಿಂದ ಬಹುಶಃ ಅಲ್ಲಿನ ಭಾಷೆಯೇ ಮುಖ್ಯವಾಗಿರಲೂ ಬಹುದು. ಅದೆಲ್ಲ ಏನೇ ಆಗಲಿ ಕಾಂತಾರ ಕೂಡಾ ಒಳ್ಳೇ ಕಾಸು ಮಾಡುವಂತಾಗಲಿ.
No Comment! Be the first one.