ಯೋಗರಾಜ್ ಭಟ್ಟರು ಯಾಕೆ ಹೀಗಾದ್ರು? ಬೆಲ್ ಬಾಟಮ್ ಇದು ಪಕ್ಕಾ ಡೈರೆಕ್ಟರ‍್ಸ್ ಸ್ಪೆಷಲ್ ಚಿತ್ರ

ಬೆಲ್‌ಬಾಟಂ ಚಿತ್ರದ ಅತಿಮುಖ್ಯ ವಿಶೇಷತೆಗಳನ್ನು ನೋಡುವುದಾದರೆ ಇದು ಒಂದರ್ಥದಲ್ಲಿ ಡೈರೆಕ್ಟರ‍್ಸ್ ಸ್ಪೆಷಲ್ ಸಿನಿಮ ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರದಲ್ಲಿ ಒಟ್ಟು ೬ ನಿರ್ದೇಶಕರು ಭಾಗಿಯಾಗಿದ್ದಾರೆ. ಚಿತ್ರದ ನಾಯಕ ರಿಷಭ್ ಶೆಟ್ಟಿ ಈಗಾಗಲೇ ಕಿರಿಕ್ ಪಾರ್ಟಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಎಂಬ ಎರಡು ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ಕೊಟ್ಟ ನಿರ್ದೇಶಕರು. ವರ್ಸಟೈಲ್ ನಿರ್ದೇಶಕ ಯೋಗರಾಜಭಟ್ ಈ ಚಿತ್ರದಲ್ಲಿ ಮರಕುಟುಕ ಎಂಬ ಕ್ರೈಮ್ ಪ್ಲಾನರ್ ಆಗಿ ನಟಿಸುತ್ತಿದ್ದಾರೆ. ಮತ್ತೋರ್ವ ನಿರ್ದೇಶಕ ಶಿವಮಣಿಯವರದ್ದು ಮೋಡಿ ನಂಜಪ್ಪನೆಂಬ ಮಾಟಗಾರನ ಪಾತ್ರ. ಇತ್ತೀಚೆಗಷ್ಟೇ ಸೆಟ್ಟೇರಿ ಶೂಟಿಂಗ್ ಹಂತದಲ್ಲಿರುವ ರಾಜ್ ಬಿ.ಶೆಟ್ಟಿ ನಿರ್ದೇಶನದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ನಿರ್ದೇಶಕ ಸುಜಯ್ ಶಾಸ್ತ್ರಿ ಇಲ್ಲಿ ಸೆಗಣಿ ಪಿಂಟೋ ಎಂಬ ಅಪರೂಪದ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಉಳಿದಂತೆ ಚಿತ್ರಕ್ಕೆ ಕಥೆಯನ್ನು ಒದಗಿಸಿರುವ ದಯಾನಂದ್ ಟಿ.ಕೆ ಸಹ ಬೆಂಕಿಪಟ್ನ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡವರು. ಹೀಗೆ ನಿರ್ದೇಶಕರದ್ದೊಂದು ತಂಡವೇ ಬೆಲ್ ಬಾಟಂ ಚಿತ್ರದಲ್ಲಿ ತೊಡಗಿಸಿಕೊಂಡಿರುವುದು ಇತ್ತೀಚಿನ ದಿನಗಳಲ್ಲಿ ಅಪರೂಪದ ಸಂಗತಿಯೆನ್ನಬಹುದು.

ಇನ್ನು ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿರುವ ಹರಿಪ್ರಿಯಾರಿಗೆ ಈ ಚಿತ್ರದ ನಾಯಕಿ ಕುಸುಮ ಪಾತ್ರ ಅತಿಹೆಚ್ಚು ಖುಷಿಕೊಟ್ಟ ಚಿತ್ರವಂತೆ. ಪಾತ್ರಪರಿಚಯದ ಪೋಸ್ಟರ್‌ನಲ್ಲಿ ಕುಸುಮ, ಗೀತಾ, ಯಶೋಧ, ಮೇರಿ ಥಾಮಸ್ ಎಂಬ ಇನ್ನೂ ೩ ಹೆಸರುಗಳನ್ನು ಹರಿಪ್ರಿಯಾ ಪಾತ್ರದೊಟ್ಟಿಗೆ ಜೋಡಿಸಿರುವ ಚಿತ್ರತಂಡ ಹರಿಪ್ರಿಯಾರ ಪಾತ್ರದೊಳಗೆ ಏನೋ ವಿಶೇಷವಿರಬಹುದೆಂದು ಸಣ್ಣ ಸುಳಿವು ಕೊಟ್ಟಿದ್ದಾರೆ. ಹರಿಪ್ರಿಯಾ ಈ ಚಿತ್ರದಲ್ಲಿ ರಿಷಭ್‌ಶೆಟ್ಟರ ಜೊತೆಗೇ ಗೂಢಚಾರಿಣಿಯ ಪಾತ್ರದಲ್ಲಿ ನಟಿಸುತ್ತಿರಬಹುದೆಂದು ಪ್ರೇಕ್ಷಕರು ಗೆಸ್ ಮಾಡುತ್ತಿದ್ದಾರೆ. ಚಿತ್ರದ ಹೆಸರು ರಿವೀಲ್ ಮಾಡುವ ಹಂತದಲ್ಲಿಯೇ ಬೆಲ್ ಬಾಟಂ ಚಿತ್ರತಂಡ ಗೂಬೆಚಿತ್ರವೊಂದನ್ನು ಕೊಟ್ಟು ಅದರೊಳಗೆ ಅಡಗಿರುವ ಟೈಟಲ್ ಹುಡುಕುವಂತೆ ಪ್ರೇಕ್ಷಕರ ಮೆದುಳಿಗೆ ಕಸರತ್ತು ಕೊಟ್ಟಿತ್ತು. ಈ ಥರಹದ ಕ್ರಿಯೇಟಿವ್ ಪ್ರಯತ್ನಗಳಿಂದಲೇ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ಯಕ್ಕೆ ದೊಡ್ಡಮಟ್ಟದಲ್ಲಿ ಚರ್ಚೆಗೆ ಕಾರಣವಾಗಿರುವ ಬೆಲ್ ಬಾಟಂ ಚಿತ್ರದ ಬಗ್ಗೆ ಪ್ರೇಕ್ಷಕವಲಯದಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿದೆ. ನಮ್ಮ ಕಡೆಯಿಂದ ಬೆಲ್‌ಬಾಟಂ ಚಿತ್ರಕ್ಕೊಂದು ಆಲ್ ದಿ ಬೆಸ್ಟ್.

#


Posted

in

by

Tags:

Comments

Leave a Reply