2015 ರಥಾವರ, 2017 ಮಫ್ತಿ ಈಗ ಭರಾಟೆ. ಶ್ರೀಮುರಳಿ ಅವರ ಒಂದು ಚಿತ್ರಕ್ಕೂ ಮತ್ತೊಂದು ಚಿತ್ರಕ್ಕೂ ಎರಡೆರಡು ವರ್ಷಗಳ ದೀರ್ಘ ಅಂತರವಾಗಿದೆ. ಹೀಗಾಗಿ ಭರಾಟೆಗಾಗಿ ಶ್ರೀಮುರಳಿಯವರ ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡದ ಪ್ರತಿಯೊಬ್ಬ ಸಿನಿಮಾಸಕ್ತರೂ ಕಾತರದಿಂದ ಕಾದಿದ್ದರು. ಎರಡು ವರ್ಷ ಕಾದಿದ್ದಕ್ಕೆ ಸಾರ್ಥಕಗೊಳಿಸಿದೆಯಾ ಭರಾಟೆ? ಬಹದ್ದೂರ್ ಮತ್ತು ಭರ್ಜರಿ ಸಿನಿಮಾಗಳನ್ನು ನೀಡಿ ಹಿಟ್ ನಿರ್ದೇಶಕ ಎನಿಸಿಕೊಂಡಿರುವ ಚೇತನ್ ಕುಮಾರ್’ಗೆ ಇದು ಹ್ಯಾಟ್ರಿಕ್ ಗೆಲುವು ನೀಡುತ್ತಾ? ಶ್ರೀಲೀಲಾ ಎರಡನೇ ಚಿತ್ರದಲ್ಲಿ ಹೇಗೆ ಕಾಣಿಸಿಕೊಂಡಿದ್ದಾಳೆ. ಚಿತ್ರತಂಡ ರಾಜಾಸ್ಥಾನ, ಗೈಡು, ಗಿಡಮೂಲಿಕೆ… ಹೀಗೆ ಟೀಸರು ಟ್ರೇಲರಿನಲ್ಲಿ ಯಾರೂ ಊಹೆ ಮಾಡದಂಥಾ ಕಂಟೆಂಟು ನೀಡಿದ್ದರುಲ್ಲ? ಅಸಲಿಗೆ ಸಿನಿಮಾದ ಕಥಾವಸ್ತುವಾದರೂ ಏನು? ಯಾಕಿಲ್ಲಿ ಇಷ್ಟೊಂದು ಜನ ವಿಲನ್ನುಗಳಿದ್ದಾರೆ? – ಇಂಥ ಹತ್ತು ಹಲವು ಪ್ರಶ್ನೆಗಳಿಗೆಲ್ಲ ಇಂದು ಬಿಡುಗಡೆಯಾಗಿರುವ ಭರ್ಜರಿ ಉತ್ತರ ನೀಡಿದೆ…

ಈ ಚಿತ್ರದ ಹೀರೋ ಜಗನ್. ಈತನಿಗೆ ನರದ ನಾಡಿ ಮಿಡಿತ ನೋಡಿ ನಾಟಿ ಔಷಧ ನೀಡೋದೂ ಗೊತ್ತು. ಕೇಡುಗರ ನಡ ಮುರಿದು ಮಲಗಿಸೋದೂ ಗೊತ್ತು. ವಂಶಗಳ ನಡುವಿನ ಹಳೇ ವೈಶಮ್ಯ, ಒಬ್ಬರನ್ನೊಬ್ಬರು ಕೊಂದುಕೊಳ್ಳುವಷ್ಟರ ಮಟ್ಟಿಗೆ ದ್ವೇಷ. ಈ ಹುಡುಗ ರಾಜಾಸ್ಥಾನದಲ್ಲಿ ತನ್ನ ತಂದೆ ಹೇಳಿಕೊಟ್ಟ ನಾಟಿ ವೈದ್ಯನ ಕೆಲಸ ಮಾಡಿಕೊಂಡು ಜೊತೆಗೆ ಅಲ್ಲಿಗೆ ಬರುವ ಪ್ರವಾಸಿಗರಿಗೆ ಗೈಡ್ ಆಗಿರುತ್ತಾನೆ. ಇಂಥ ಜಗನ್ ಕರ್ನಾಟಕಕ್ಕೆ ಕಾಲಿಡುವ ಸಂದರ್ಭ ಬರುತ್ತದೆ. ಅಲ್ಲಿ ರಾಜಾಸ್ಥಾನದಲ್ಲಿ ಪರಿಚಯವಾಗಿದ್ದ ಹುಡುಗಿ ಇಲ್ಲಿ ಪ್ರೇಯಸಿಯಾಗುತ್ತಾಳೆ. ಆಕೆಗೂ ಬಲ್ಲಾಳ ವಂಶಸ್ಥರಿಗೂ ಏನು ಸಂಬಂಧ? ಆ ವಂಶಕ್ಕೆ ಹೀರೋ ಯಾಕೆ ಹತ್ತಿರವಾಗುತ್ತಾನೆ? ಜಗನ್ ಯಾರನ್ನು ಯಾರಿಂದ ಕಾಪಾಡುತ್ತಾನೆ? ಎಂಬಿತ್ಯಾದಿ ವಿವರಗಳು ಒಂದೊಂದೇ ಎಳೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಈ ಮಧ್ಯದಲ್ಲಿ ಹತ್ತು ಹಲವು ಪಾತ್ರಗಳು, ಮಾರಾಮಾರಿ ಹೊಡೆದಾಟಗಳು, ಚೆಂದದ ಹಾಡುಗಳು, ಕಡ್ಡಿ ಮುರಿದಂಥಾ ಡೈಲಾಗುಗಳು ಬಂದುಹೋಗುತ್ತದೆ.

ಈ ಸಿನಿಮಾದಲ್ಲಿ ಒಂದು ಡಜನ್ ವಿಲನ್ನುಗಳು, ಅರ್ಧ ಡಜನ್ ಕಾಮಿಡಿ ಕಲಾವಿದರು ಮತ್ತು ಎಣಿಸಲಾರದಷ್ಟು ಮಂದಿ ಪೋಷಕ ಪಾತ್ರಗಳೂ, ಲೋಡುಗಟ್ಟಲೆ ಜೂನಿಯರ್ ಆರ್ಟಿಸ್ಟುಗಳಿದ್ದಾರೆ. ಭರ್ಜರಿ ಜನಜಾತ್ರೆಯ ನಡುವೆ ಕಥೆ ದಿಕ್ಕು ತಪ್ಪದಂತೆ ನೋಡಿಕೊಂಡಿರುವುದು ನಿರ್ದೇಶಕರ ಕಸುಬುದಾರಿಕೆ ಎನ್ನಬಹುದು.

ಮಾಸ್, ಆಕ್ಷನ್, ಸೆಂಟಿಮೆಂಟ್, ಲವ್ವು, ಕಾಮಿಡಿ ಸೇರಿದಂತೆ ಸಿನಿಮಾಗೆ ಹೊಸತಾಗಿರುವ ಸಾಕಷ್ಟು ವಿಚಾರವನ್ನು ಇಲ್ಲಿ ಚೇತನ್ ಕುಮಾರ್ ಕಟ್ಟಿಕೊಟ್ಟಿದ್ದಾರೆ.
ಒಬ್ಬ ಹೀರೋ ಗೆದ್ದಮೇಲೆ, ಮತ್ತೆ ಮತ್ತೆ ಅದೇ ಸೂತ್ರಕ್ಕೆ ಕಟ್ಟುಬೀಳಬಾರದು. ಈ ನಿಟ್ಟಿನಲ್ಲಿ ನೋಡಿದರೆ ಶ್ರೀಮುರಳಿ ರಥಾವರ ಮತ್ತು ಮಫ್ತಿಗಿಂತಾ ಭಿನ್ನವಾಗಿ ಭರಾಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಲೀಲಾ ಬಿಳೀ ಪರದೆ ತುಂಬ ಬಣ್ಣ ತುಂಬುವಷ್ಟು ಚೆಂದಗೆ ಕಾಣಿಸಿದ್ದಾಳೆ.

ನಿರ್ದೇಶಕ ಚೇತನ್ ಕುಮಾರ್ ಅವರೇ ಬರೆದಿರುವ ಡೈಲಾಗುಗಳು ಫವರ್ಫುಲ್ಲಾಗಿವೆ. ರಾಜನ್ ಅವರ ಸ್ಪೆಷಲ್ ಎಫೆಕ್ಟ್ ಕುಸುರಿ ಕೆಲಸ, ವಿಎಫೆಕ್ಸ್ ಎಲ್ಲವೂ ಗುಣಮಟ್ಟದಿಂದ ಕೂಡಿದೆ. ಗಿರೀಶ್ ಗೌಡ ಈ ಸಿನಿಮಾದಿಂದ ಕನ್ನಡದ ಪ್ರಮುಖ ಛಾಯಾಗ್ರಾಹಕರಾಗಿದ್ದಾರೆ. ಒಂದೊಂದು ಫ್ರೇಮಿಗೂ ಅವರ ಮಾಡಿರುವ ಲೈಟಿಂಗ್ಸ್ ಮತ್ತು ಇಟ್ಟಿರುವ ಆಗಲ್ಲು, ಬಳಸಿರುವ ಬಣ್ಣ ಎಲ್ಲವೂ ಸೆಳೆಯುವಂತಿವೆ. ಅರ್ಜುನ್ ಜನ್ಯಾ ಸಂಗೀತ ನಿರ್ದೇಶನದ ‘ಭರಭರಭರ ಭರಾಟೆ ಟೈಟಲ್ ಸಾಂಗ್ ಮತ್ತು ‘ದಿನ ನಿನ್ನ ನೋಡದಿದ್ರೆ ನಂಗೆ ಹಾಡುಗಳು ಕೂತಿದ್ದವರನ್ನು ಎದ್ದೆದ್ದು ಕುಣಿಸುಂವತಿವೆ. ಚಿತ್ರದಲ್ಲಿರುವ ಫೈಟುಗಳು ಒಂದಕ್ಕಿಂತಾ ಒಂದು ಭಿನ್ನವಾಗಿವೆ.
ಕಮರ್ಷಿಯಲ್ ಸಿನಿಮಾ ಪ್ರೇಕ್ಷಕರಿಗಂತೂ ಇದು ಭರ್ಜರಿ ಭೋಜನ. ಮನೆಮಂದಿಯೆಲ್ಲಾ ಕೂತು ನೋಡಿ ಎಂಜಾಯ್ ಮಾಡಬಹುದು!

.

CG ARUN

ಅಬ್ಬಬ್ಬಾ ಅಬ್ಬರಿಸಿದ ನೋಡಿ ಅಸುರ!

Previous article

ಬೋಲ್ಡ್ & ಬ್ಯೂಟಿಫುಲ್ ಸಿನಿಮಾ ಗಂಟುಮೂಟೆ!

Next article

You may also like

Comments

Leave a reply

Your email address will not be published. Required fields are marked *