ಡ್ಯಾನ್ಸ್ನಲ್ಲಿ ವಿಪರೀತ ಆಸಕ್ತಿ ಹೊಂದಿರೋ ಹುಡುಗನೊಬ್ಬನ ಕಥೆ ಎಂಬ ಸುಳಿವಿನೊಂದಿಗೆ ಒಂದಷ್ಟು ಸದ್ದು ಮಾಡಿದ್ದ ಚಿತ್ರ ಬಿಂದಾಸ್ ಗೂಗ್ಲಿ. ಸಂತೋಷ್ ನಿರ್ದೇಶನದ ಈ ಚಿತ್ರವೀಗ ತೆರೆ ಕಂಡಿದೆ. ಕಾಲೇಜು, ಖಡಕ್ ಪ್ರಿನ್ಸಿಪಾಲ್, ವಿದ್ಯಾರ್ಥಿಗಳ ತರಲೆ ತಾಪತ್ರಯ ಮತ್ತು ಕುಣಿಯೋ ಉಮೇದಿನ ಹೂರಣದೊಂದಿಗೆ ಈ ಚಿತ್ರ ತೆರೆ ಕಂಡಿದೆ.
ಗುರುಕುಲ ಎಂಬ ಕಾಲೇಜು. ಅದಕ್ಕೊಬ್ಬ ಶಿಸ್ತಿನ ಸಿಪಾಯಿಯಂಥಾ ಪ್ರಾಂಶುಪಾಲ. ಓದು ಬಿಟ್ರೆ ಬೇರೇನಕ್ಕೂ ಅವಕಾಶವಿಲ್ಲ ಎಂಬಂಥಾ ಕಟ್ಟುನಿಟ್ಟಿನ ಆದೇಶ ಪ್ರಾಂಶುಪಾಲರದ್ದು. ಆದರೆ ಅಲ್ಲಿನ ಕೆಲ ವಿದ್ಯಾರ್ಥಿಗಳಿಗೆ ಓದಂದನ್ನು ಬಿಟ್ಟು ಬೇರೆಲ್ಲದರಲ್ಲಿಯೂ ವಿಪರೀತ ಆಸಕ್ತಿ. ಅದರಲ್ಲಿಯೂ ನಾಯಕನಿಗಂತೂ ಡ್ಯಾನ್ಸ್ ಎಂದರೆ ಪ್ರಾಣ. ಆದರೆ ಅದೇನೇ ತಿಪ್ಪರಲಾಗ ಹೊಡೆದರೂ ಅದಕ್ಕೆ ಪ್ರಾಂಶುಪಾಲನ ಸಮ್ಮತಿ ಸಿಗೋದಿಲ್ಲ.
ಇಂಥಾ ಕಾಲದಲ್ಲಿಯೇ ಆ ಕಾಲೇಜಿಗೆ ಡ್ಯಾನ್ಸ್ ಮಾಸ್ಟರ್ ಒಬ್ಬರ ಆಗಮನವಾಗುತ್ತದೆ. ಆತ ಅಲ್ಲಿನ ವಿದ್ಯಾರ್ಥಿಗಳಲ್ಲಿನ ಕುಣಿಯೋ ಇರಾದೆಗೆ ಮತ್ತಷ್ಟು ಜೀವ ತುಂಬುತ್ತಾನೆ. ಇದೆಲ್ಲದರ ನಡುವೆ ಆ ವಿದ್ಯಾರ್ಥಿಗಳು ಪ್ರಾಂಶುಪಾಲರ ಇರಾದೆಯಂತೆ ಓದಿಗೆ ಮಾತ್ರವೇ ಕಟ್ಟು ಬೀಳುತ್ತಾರಾ ಅಥವಾ ಅವರಿಚ್ಚೆಯಂತೆ ಡ್ಯಾನ್ಸ್ ಕಾಂಪಿಟೇಷನ್ನಿನಲ್ಲಿ ಭಾಗವಹಿಸಿ ಮಿಂಚುತ್ತಾರಾ ಎಂಬುದು ಈ ಚಿತ್ರದ ಪ್ರಧಾನ ಕುತೂಹಲ.
ಈ ಚಿತ್ರದ ನಿರ್ಮಾಪಕರಾದ ವಿಜಯ್ ಅನ್ವೇಕರ್ ಅವರೇ ಪ್ರಾಂಶುಪಾಲನ ಪಾತ್ರ ನಿರ್ವಹಿಸಿರೋದು ವಿಶೇಷ. ಮೊದಲಾರ್ಧದ ತುಂಬಾ ಅವರದ್ದೇ ಪಾರುಪಥ್ಯ. ಧರ್ಮ ಕೀರ್ತಿರಾಜ್ ಕೂಡಾ ಫೋಕಸ್ ಇರುವಂಥಾದ್ದೇ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕ ಆಕಾಶ್ ನಟನೆಯಲ್ಲಿ ಇನ್ನೊಂದಷ್ಟು ಪಳಗಬೇಕೆನ್ನಿಸಿದರೂ ಡ್ಯಾನ್ಸಿನಲ್ಲಿ ಗಮನ ಸೆಳೆಯುತ್ತಾನೆ. ಒಟಾರೆಯಾಗಿ ಮಕ್ಕಳನ್ನು ಓದಿಗೆ ಮಾತ್ರವೇ ಕಟ್ಟಿ ನಿಲ್ಲಿಸ ಬಾರದು. ಬದಲಾಗಿ ಒಂದಷ್ಟು ಪ್ರೋತ್ಸಾಹ ಕೊಟ್ಟರೆ ಅವರೊಳಗಿನ ಪ್ರತಿಭೆ ಜಾಹೀರಾಗುತ್ತದೆಂಬುದು ಈ ಚಿತ್ರದ ಒಟ್ಟಾರೆ ತಿರುಳು. ನಿರ್ದೇಶಕ ಸಂತೋಶ್ ಬರೀ ಪ್ರೀತಿಯ ಕಥಾವಸ್ತುವಲ್ಲದೆ ಜೊತೆಗೆ ಡ್ಯಾನ್ಸ್ ಅನ್ನು ಪ್ರಧಾನವಾಗಿಟ್ಟುಕೊಂಡು ಕಥೆ ಹೆಣೆದಿರೋದು ಮತ್ತೊಂದು ವಿಶೇಷ.
#