ಅಮ್ಮಾ ಟಾಕೀಸ್ ಬಾಗಲಕೋಟೆ ಬ್ಯಾನರಿನಡಿಯಲ್ಲಿ ನಿರ್ಮಾಣವಾಗುತ್ತಿರುವ ‘ನೈಂಟಿ ಹೊಡಿ ಮನೀಗ್ ನಡಿ’ ಚಿತ್ರವು ಡಬ್ಬಿಂಗ್ ಮುಗಿಸಿಕೊಂಡಿದೆ. ನಟ ವೈಜನಾಥ ಬಿರದಾರ್ ಅವರ ಐನೂರನೇ ಚಿತ್ರವೆಂದು ವಿಶೇಷವಾಗಿ ಗುರುತಿಸಿಕೊಂಡ ಈ ಚಿತ್ರ, ಇತ್ತೀಚೆಗಷ್ಟೆ ಬೆಂಗಳೂರಿನ ಸುತ್ತಮುತ್ತ ಕೊನೆಯ ಹಂತದ ಚಿತ್ರೀಕರಣ ನಡೆಸಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿತ್ತು.
ಇದೀಗ ಮುಂದುವರೆದ ಭಾಗವಾಗಿ ಮಾತಿನ ಮರುಜೋಡಣೆ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿಕೊಂಡಿದೆ. ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡುತ್ತಿರುವ ‘ನೈಂಟಿ ಹೊಡಿ ಮನೀಗ್ ನಡಿ’ ಚಿತ್ರವು, ಔಟ್ ಆಂಡ್ ಔಟ್ ಕಮರ್ಷೀಯಲ್ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದ್ದು, ರತ್ನಮಾಲಾ ಬಾದರದಿನ್ನಿಯವರು ಚಿತ್ರಕ್ಕೆ ಹಣ ಹೂಡಿದ್ದಾರೆ.
ತಾರಾಗಣದಲ್ಲಿ ವೈಜನಾಥ ಬಿರಾದರ್ ಜೊತೆಯಾಗಿ ನೀತು, ಪ್ರೀತು ಪೂಜಾ, ಹಿರಿಯ ನಟರಾದ ಕರಿಸುಬ್ಬು, ಡೇರಿಂಗ್ ಸ್ಟಾರ್ ಧರ್ಮ, ಪ್ರಶಾಂತ್ ಸಿದ್ಧಿ, ಅಭಯ್ ವೀರ್, ಆರ್.ಡಿ. ಬಾಬು, ವಿವೇಕ್ ಜಂಬಗಿ, ರುದ್ರಗೌಡ ಬಾದರದಿನ್ನಿ, ಹೊಸಕೋಟೆ ಮುರುಳಿ, ಸಂತು ಸೊಕನಾದಗಿ, ರಾಜು ಗೂಗವಾಡ, ಎಲ್ಐಸಿ ಲೋಕೇಶ್ ಮುಂತಾದವರು ತೆರೆ ಹಂಚಿಕೊಂಡಿದ್ದಾರೆ. ತಂತ್ರಜ್ಞರಾಗಿ ಕೃಷ್ಣ ನಾಯ್ಕರ್ ಛಾಯಾಗ್ರಹಣ ನಿರ್ವಹಿಸಿದ್ದು, ರಾಕಿ ರಮೇಶ್ ಸಾಹಸ ಕಟ್ಟಿಕೊಟ್ಟಿದ್ದಾರೆ.
ಯುಡಿವಿ ವೆಂಕಿ ಸಂಕಲನ ಮಾಡುತ್ತಿದ್ದಾರೆ. ವಿಶೇಷವಾಗಿ ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ ಎರಡು ಹಾಡಿಗೆ ಕಿರಣ್ ಶಂಕರ್ ಸಂಗೀತ ಸಂಯೋಜಿಸಿದ್ದು, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಅವರು ಧ್ವನಿಯಾಗಿದ್ದಾರೆ. ಇನ್ನೊಂದು ಉತ್ತರ ಕರ್ನಾಟಕದ ನಾಟಿ ಶೈಲಿಯ ಹಾಡಿಗೆ ಚುಟು ಚುಟು ಖ್ಯಾತಿಯ ಶಿವು ಭೆರ್ಗಿ ಸಾಹಿತ್ಯ ಬರೆದು, ಸಂಗೀತ ನೀಡಿದ್ದು, ರವೀಂದ್ರ ಸೋರಗಾಂವಿ ಮತ್ತು ಶಮಿತಾ ಮಲ್ನಾಡ್ ಹಾಡು ಹಾಡಿದ್ದಾರೆ. ಭೂಷಣ್ ಕೊರಿಯೋಗ್ರಫಿಯಲ್ಲಿ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಇನ್ನು ಬೆಂಗಳೂರಿನ ಬಾಲಾಜಿ ಡಿಜಿ ಸ್ಟುಡಿಯೋದಲ್ಲಿ ಈಗಷ್ಟೆ ಡಬ್ಬಿಂಗ್ ಮುಗಿಸಿಕೊಂಡ ಚಿತ್ರತಂಡ, ಮುಂದಿನ ಹಂತದ ಕಾರ್ಯದತ್ತ ಮುಖ ಮಾಡಿದೆ.
No Comment! Be the first one.