ಕನ್ನಡ ಚಿತ್ರರಂಗವನ್ನು ಕೆಲವು ಅಲಾಲುಟೋಪಿಗಳು ನಿರಂತರವಾಗಿ ಯಾಮಾರಿಸುತ್ತಲೇ ಬಂದಿದ್ದಾರೆ. ಸದ್ಯ ಆ ಲಿಸ್ಟಿಗೆ ಹೊಸೂರು ವೆಂಕಟನೆಂಬ ಗಿರಾಕಿಯೂ ಸೇರಿಕೊಂಡಿದ್ದಾನೆ.
ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಬಹಿರಂಗ ಸಭೆಯಂತಾ ಸಮಾರಂಭ ಮಾಡಿ ‘ಗಡಿ’ ಎನ್ನುವ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಆ ಟ್ರೇಲರಲ್ಲಿ ಹೆಚ್ಚೂ ಕಡಿಮೆ ತಮಿಳು ಕಲಾವಿದರೇ ತುಂಬಿಕೊಂಡಿದ್ದರು. ಅಲ್ಲಿನ ವಾತಾವರಣವನ್ನು ನೋಡಿದವರಿಗೆ, ಇದೇನಿದು ಪ್ಯಾನ್ ಇಂಡಿಯಾ ಸಿನಿಮಾನಾ? ಅಥವಾ ಡಬ್ಬಿಂಗ್ ಚಿತ್ರವಾ ಅನ್ನೋ ಅನುಮಾನ ಹುಟ್ಟಿಕೊಂಡಿತ್ತು. ಇದು ಎಷ್ಟು ಭಾಷೆಯಲ್ಲಿ ರಿಲೀಸಾಗುತ್ತಿದೆ? ಅಂತಾ ಕೇಳಿದ್ದಕ್ಕೆ ಅದರ ನಿರ್ದೇಶಕ ವೆಂಕಟ್ “ಕನ್ನಡದಲ್ಲಿ ಮಾತ್ರ. ಡಿಸೆಂಬರಲ್ಲಿ ರಿಲೀಸ್ ಮಾಡ್ತಿದ್ದೀವಿ” ಅಂತಾ ಪುಂಗಿದ. ಈ ಸಿನಿಮಾದ ಸುತ್ತ ಏನೋ ವಿಚಿತ್ರವಾದ ಸ್ಮೆಲ್ಲು ಬರ್ತಿದೆಯಲ್ಲಾ? ಅಂತಾ ಹುಡುಕಾಡಿದರೆ, ಇದೇ ಸಿನಿಮಾ 2021ರ ನವೆಂಬರಲ್ಲೇ ತಮಿಳಿನಲ್ಲಿ ‘ಬಾರ್ಡರ್’ ಹೆಸರಿನಲ್ಲಿ ರಿಲೀಸ್ ಆಗಿರೋದು ಸ್ಪಷ್ಟವಾಗಿದೆ. ನಿರ್ದೇಶಕ ವೆಂಕಟ್ ಯಾಕೆ ಈ ವಿಚಾರವನ್ನು ಮುಚ್ಚಿಟ್ಟ? ಇದು ಕನ್ನಡದ ಒರಿಜಿನಲ್ ಸಿನಿಮಾ ಅಂತಾ ಹೇಳಿ ಸಬ್ಸಿಡಿ ಗೆಬರುವ ಹುನ್ನಾರವಾ? ಅಥವಾ ಡಬ್ಬಿಂಗ್ ಸಿನಿಮಾ ಅಂದರೆ ಜನ ಮೂಸಿನೋಡೋದಿಲ್ಲ ಎನ್ನುವ ಭಯವಾ ಗೊತ್ತಿಲ್ಲ.
ತಮಿಳುನಾಡು ಮತ್ತು ಕರ್ನಾಟಕದ ಗಡಿಯಲ್ಲಿ ನಡೆದ ಯಾವುದೋ ಮರ್ಡರ್ ಸ್ಟೋರಿಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ‘ಗಡಿ’ ಹೆಸರಿನಲ್ಲಿ ವೆಂಕಟ್ ಮತ್ತು ಈ ಚಿತ್ರದ ನಿರ್ಮಾಪಕರು ಅದೇನು ಗಂಡಾಗುಂಡಿ ನಡೆಸಿದ್ದಾರೋ ಗೊತ್ತಿಲ್ಲ. ಅಂದು ನಡೆದ ಸಮಾರಂಭದಲ್ಲಿ ಸಹಕಾರ ನಗರದ ಥಿಯೇಟರ್ ಮಾಲೀಕ ಹರೀಶ್ ಈ ಚಿತ್ರದ ನಿರ್ಮಾಪಕರು ಅಂತಾ ಪರಿಚಯಿಸಲಾಯ್ತು. ಅಲ್ಲಿ ನಿರ್ಮಾಪಕರ ಜಾಗದಲ್ಲಿ ಅಬ್ದುಲ್ ಜಬ್ಬಾರ್ ಎನ್ನುವ ಹೆಸರೂ ಇದೆ. ಅಸಲಿಗೆ ಈ ಚಿತ್ರದ ನಿರ್ಮಾಣ ಮಾಡಿರೋದು ಯಾರು? ಯಾವತ್ತೋ ರಿಲೀಸಾಗಿರುವ ಸಿನಿಮಾವನ್ನು ಈಗ ಕನ್ನಡದಲ್ಲಿ ಯಾಕೆ ಬಿಡುಗಡೆ ಮಾಡುತ್ತಿದ್ದಾರೆ? ಲೇಡಿ ವಿಲನ್ ಪಾತ್ರದಲ್ಲಿ ನಟಿಸಿರುವ ನಂದಿನಿ ಕಮ್ಮಯ್ಯ ಬಿಟ್ಟು ಬೇರೆ ಯಾವ ಕಲಾವಿದರೂ ಯಾಕೆ ಅಲ್ಲಿರಲಿಲ್ಲ? ಎಂಬಿತ್ಯಾದಿ ವಿಚಾರಗಳು ಗೊಂದಲ ಸೃಷ್ಟಿಸುತ್ತಿರೋದಂತೂ ನಿಜ. ಬಹುಶಃ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದವರನ್ನು, ಮೀಡಿಯಾದವರನ್ನು ಹೊಸೂರು ವೆಂಕಟ್ ಮತ್ತವನ ಸುತ್ತಲಿನವರು ಬಕರಾಗಳು ಅಂದುಕೊಂಡಿದ್ದಾರಾ? ಗೊತ್ತಿಲ್ಲ.
ಈ ಕುರಿತು ವಾಣಿಜ್ಯ ಮಂಡಳಿಯವರು ಯಾರಾದರೂ ವೆಂಕಟ್, ಹರೀಶ್ ಗೌಡ ಮುಂತಾದವರನ್ನು ಕರೆಸಿ ವಿಚಾರಣೆ ಮಾಡಿದರೆ ಅಸಲೀ ವಿಚಾರ ಗೊತ್ತಾಗಬಹುದು. ಒಂದು ವೇಳೆ ಈ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆದರೆ ಅದು ಡಬ್ಬಿಂಗೋ, ಡಬ್ಬಾನೋ ಅಂತಾ ಯಾರೂ ತಲೆ ಕೆಡಿಸಿಕೊಳ್ಳೋದಿಲ್ಲ. ಅಂತಾ ಲಕ್ಷಣವೂ ಕಾಣುತ್ತಿಲ್ಲ. ಯಾರನ್ನೋ ಯಾಮಾರಿಸಲು ‘ಗಡಿ’ಯಲ್ಲಿ ಗುಂಡಿ ತೋಡಿದಂತೆ ಕಾಣುತ್ತಿದೆ.
ಇಷ್ಟು ದಿನ ಹುಚ್ಚ ವೆಂಕಟ್ ಉಪಟಳವನ್ನು ಕನ್ನಡಿಗರು ಸಹಿಸಿದ್ದಾಯ್ತು. ಈಗ ಇವನ್ಯಾರೋ ಹೊಸೂರು ವೆಂಕ್ಟ ಬಂದವ್ನೆ. ಏನೇನು ಕಂಟಕ ತರುತ್ತಾನೋ?!
No Comment! Be the first one.