ಈವಾಗೆಲ್ಲಾ ಒಂದು ಸಿನಿಮಾ ಮುಗಿಸಿ ಇನ್ನೊಂದು ಸಿನಿಮಾ ಶುರುವಾಗುವ ಹೊತ್ತಿಗೆ ಡೈರೆಕ್ಟರ್ಗಳು ವಿಶ್ವವಿಖ್ಯಾತಿ ಪಡೆಯುವ ಬಯಕೆ ಹೊಂದಿರುತ್ತಾರೆ. ಆದರೆ ಇವರು ಹಾಗಲ್ಲ. ಇವರೇ ಬೇರೆ; ಇವರು ಸಿನಿಮಾ ಮಾಡೋ ಸ್ಟೈಲೇ ಬೇರೆ!!
ಬಿ.ಆರ್. ಕೇಶವ ಹೆಸರಿನ ನಿರ್ದೇಶಕರೊಬ್ಬರು ಕನ್ನಡ ಚಿತ್ರರಂಗದಲ್ಲಿದ್ದಾರೆ. ತರಾತುರಿಯಲ್ಲಿ ಎಣಿಸಿದರೂ ಇವರ ನಿರ್ದೇಶನದ ಹದಿನೆಂಟು ಸಿನಿಮಾಗಳು ಸಿಗುತ್ತವೆ. ಲವ್ ಇನ್ ನೇಪಾಳ್, ನರಹಂತಕ, ಪುಟ್ಟಿ, Crime Story, ನನ್ ಹೆಂಡ್ತಿ ಕೊಲೆ, ಭೂಗತ, ಅಪಹರಣ, ಸಿಂಗಾಪುರದಲ್ಲಿ ಶಂಭುಲಿಂಗ, ಶೋಧ, ನರಕ, ಅನುಬಂಧ… ಹೀಗೆ ತಾವು ಮಾಡಿದ ಸಿನಿಮಾಗಳನ್ನು ಜನ ಸ್ವೀಕರಿಸಲಿ, ಬಿಡಲಿ ನಿಯತ್ತಾಗಿ ಒಂದರ ಹಿಂದೊಂದು ಸಿನಿಮಾಗಳನ್ನು ರಪರಪಾಂತ ರೂಪಿಸುತ್ತಾ ಬಂದಿದ್ದಾರೆ.
ಸಿನಿಮಾ ಯಾವಾಗ ಶುರುವಾಯ್ತು? ಯಾವಾಗ ಮುಗೀತು ಅನ್ನೋದೂ ಗೊತ್ತಾಗದಷ್ಟು ಸ್ಪೀಡಾಗಿ ಮುಗಿಸೋದರಲ್ಲಿ ಇವರು ಎಕ್ಸ್ಪರ್ಟು. ನೆಟ್ಟಗೆ ಅ, ಆ, ಇ, ಈ ಬರೆಯಲೂ ಬಾರದ ಮಂದಿ ಇಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟು ಬಿಲ್ಡಪ್ ಕೊಡುತ್ತಿರುತ್ತಾರೆ. ತೀರಾ ಕಮರ್ಷಿಯಲ್ ಹಿಟ್ ಚಿತ್ರಗಳನ್ನು ಕೊಡದಿದ್ದರೂ ಕಡಿಮೆ ಬಜೆಟ್ಟಿನ ಸಿನಿಮಾಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಡುವ ನಿರ್ದೇಶಕ ಕೇಶು. ವಿದ್ಯಾವಂತ ಕೂಡಾ ಹೌದು..
ಕೇಶವ ಅವರೇ ನಿರ್ದೇಶಿಸಿದ್ದ, ಮರ್ಡರ್ ಮಿಸ್ಟರಿ ಕಥೆ ಹೊಂದಿದ್ದ ಮುನಿ ಮತ್ತು ಸ್ವಚ್ಛ ಭಾರತ ಮುಂತಾದ ಸಿನಿಮಾಗಳು ನಿಜಕ್ಕೂ ಕೂತು ನೋಡುವಂತಿದ್ದವು. ಪ್ರಶಸ್ತಿಗಳಿಗೆ ಆಯ್ಕೆಗೊಳ್ಳುವ ಅರ್ಹತೆಯ ಚಿತ್ರಗಳನ್ನೂ ಕೇಶವ್ ನೀಡಿದ್ದಾರೆ. ಆದರೆ ಇವರಿಗೆ ಹೇಳಿಕೊಳ್ಳುವ ಯಾವ ಅವಾರ್ಡೂ ಸಿಕ್ಕಂತಿಲ್ಲ. ಹೀಗಾಗಿ ಕೇಶವಣ್ಣ ಶ್ಯಾನೆ ನೊಂದುಕೊಂಡಿದ್ದಾರೆ. “ನನಗೆ ಆಸ್ಕರ್ ಪ್ರಶಸ್ತಿಯಂತೂ ಬೇಡ. ಕಡೇಪಕ್ಷ ಆಸ್ಕರ್ ಕೃಷ್ಣನಾದರೂ ಕರೆದು ಅವಾರ್ಡು ಕೊಡಲಿ. ಓಡೋಡಿಬಂದು ಇಸ್ಕಂಡೋಯ್ತೀನಿʼʼ ಅಂತಾ ಕ್ಲಬ್ ಹೌಸ್ ಮೀಟಿಂಗಲ್ಲಿ ವಿನಂತಿಸಿದ್ದಾರೆ!
ಕರ್ನಾಟಕ ಚಿತ್ರೋದ್ಯಮ ಹೆಸರಿನ ರೂಮಿನಲ್ಲಿ ಸಿನಿಮಾರಂಗಕ್ಕೆ ಸಂಬಂಧಿಸಿದ ಒಂದಿಷ್ಟು ಅರ್ಥಪೂರ್ಣ ಚರ್ಚೆ ನಡೆಯುತ್ತಿರುತ್ತವೆ. ನಿರ್ಮಾಪಕ ಎಸ್. ಕುಮಾರ್, ನಾಗೇಶ್ ಕುಮಾರ್ ಯು.ಎಸ್. ಮುಂತಾದವರು ಈ ರೂಮಿನ ಸಾರಥ್ಯ ವಹಿಸಿದ್ದಾರೆ. ʻಕನ್ನಡ ಚಿತ್ರರಂಗದಲ್ಲಿ ಕಾಂಟ್ರವರ್ಸಿಗಳುʼ ಎನ್ನುವ ಟಾಪಿಕ್ಕಿನ ಕುರಿತು ಇಂದು ಮಾತುಕತೆ ನಡೆಯುವ ಸಂದರ್ಭದಲ್ಲಿ ಬಿ.ಆರ್. ಕೇಶವು ತಮ್ಮ ನೋವಿನ ನುಡಿಗಳನ್ನು ತಮಾಷೆಯ ರೂಪದಲ್ಲಿ ಹಂಚಿಕೊಂಡಿದ್ದಾರೆ…!
No Comment! Be the first one.