ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡಾ ವಸಿಷ್ಠರಿಗೆ ಕರೆ ಮಾಡಿ ʻಸಿನಿಮಾ ನೋಡಿದೆ. ಅದ್ಭುತವಾಗಿ ನಟಿಸಿದ್ದೀರಿʼ ಎಂದು ಹೊಗಳಿದ್ದಾರೆ. ಶಿವರಾಜ್ ಕುಮಾರ್ ಮೊದಲಿನಿಂದಲೂ ಹೀಗೆ. ತಮಗೆ ಇಷ್ಟವಾದ್ದನ್ನು ನೇರವಾಗಿ ಹೊಗಳುವ ಗುಣ ಅವರದ್ದು
ವಸಿಷ್ಠ ಎನ್ನುವ ಅಜಾನುಬಾಹುವಿನ ಮೈಕಟ್ಟು, ಬೇಸ್ ವಾಯ್ಸು ಕಂಡಾಗಲೇ ಈ ಯುವಕ ಭಾರತೀಯ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರುತ್ತಾರೆ ಅನ್ನೋದು ಗೊತ್ತಾಗಿತ್ತು. ರಾಜಾ ಹುಲಿ, ದುದ್ರತಾಂಡವ ಮುಂತಾದ ಸಿನಿಮಾಗಳಲ್ಲಿ ವಸಿಷ್ಠ ನಟಿಸಿದ್ದು ಕ್ಯಾರೆಕ್ಟರ್ ರೋಲುಗಳಲ್ಲಿ. ಆ ನಂತರ ಅಲೋನ್ ಸಿನಿಮಾದಲ್ಲಿ ವಸಿಷ್ಠ ಹೀರೋ ಕೂಡಾ ಆದರು. ಆದರೆ, ವಸಿಷ್ಠರನ್ನು ಜನ ಗುರುತಿಸುವಂತಾಗಿದ್ದು ಗೋದಿ ಬಣ್ಣ ಮತ್ತು ಮಫ್ತಿ ಸಿನಿಮಾಗಳಲ್ಲಿ. ಇದರ ನಡುವೆ ಒಂದು ಸಿನಿಮಾ ಬಂತು ನೋಡಿ; ಅದು ಸೂರಿಯ ಟಗರು. ಇದರಲ್ಲಿ ವಸಿಷ್ಠಗೆ ಸಿಕ್ಕಿದ್ದು ಔಟ್ ಅಂಡ್ ಔಟ್ ನೆಗೆಟೀವ್ ಪಾತ್ರವಾದರೂ, ನೋಡುಗರನ್ನು ಹುಚ್ಚೆಬ್ಬಿಸಿತ್ತು. ಚಿಟ್ಟೆ ಅನ್ನೋ ಪಾತ್ರ ವಸಿಷ್ಠರ ನಸೀಬು ಬದಲಿಸಿದ್ದು ಸುಳ್ಳಲ್ಲ.
ಇದಾದ ನಂತರ ಎನ್ ಸಿಂಹ ಕನ್ನಡದಲ್ಲಿ ಹೀರೋ ಆಗಿಯೂ ಖಳನಟನಾಗಿಯೂ ಏಕಕಾಲದಲ್ಲಿ ಮಿಂಚುತ್ತಾದ್ದಾರೆ. ನೆರೆಯ ಭಾಷೆಗಳಿಂದಲೂ ಇವರಿಗೆ ಪಾತ್ರಗಳು ಅರಸಿಬರುತ್ತಿವೆ. ತೆಲುಗಿನ ಓದೆಲ ರೈಲ್ವೇಸ್ಟೇಷನ್ ಮತ್ತು ನಯೀಮ್ ಡೈರೀಸ್ ಎಂಬೆರಡು ತೆಲುಗು ಚಿತ್ರಗಳಲ್ಲಿ ವಸಿಷ್ಠ ಲೀಡ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ತಮಿಳಿನಲ್ಲಿ ಬಿಡುಗಡೆಗೊಂಡು ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲದೆ, ವಿಶ್ವಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದ ಚಿತ್ರ ಅಸುರನ್. ಇದೇ ಸಿನಿಮಾ ಈಗ ತೆಲುಗಿನಲ್ಲಿ ರಿಮೇಕ್ ಆಗಿದೆ. ʻನಾರಪ್ಪʼ ಹೆಸರಿನಲ್ಲಿ ತಯಾರಾಗಿ ಬಿಡುಗಡೆಯಾಗಿರುವ ಈ ಚಿತ್ರದಲ್ಲಿ ಪ್ರಮುಖ ಖಳನಟನಾಗಿ ನಡಿಸಿರುವುದು ನಮ್ಮ ವಸಿಷ್ಠ ಸಿಂಹ. ಈ ಚಿತ್ರ ವಸಿಷ್ಠ ಅವರಿಗೆ ಸೌತ್ ಇಂಡಿಯಾ ಲೆವೆಲ್ಲಿನಲ್ಲಿ ದೊಡ್ಡ ಮಟ್ಟದ ಗೆಲುವು ತಂದುಕೊಟ್ಟಿದೆ. ನಾರಪ್ಪನನ್ನು ನೋಡಿದವರೆಲ್ಲಾ ವಸಿಷ್ಠ ಅಭಿನಯವನ್ನು ಕೊಂಡಾಡುತ್ತಿದ್ದಾರೆ.
ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡಾ ವಸಿಷ್ಠರಿಗೆ ಕರೆ ಮಾಡಿ ʻಸಿನಿಮಾ ನೋಡಿದೆ. ಅದ್ಭುತವಾಗಿ ನಟಿಸಿದ್ದೀರಿʼ ಎಂದು ಹೊಗಳಿದ್ದಾರೆ. ಶಿವರಾಜ್ ಕುಮಾರ್ ಮೊದಲಿನಿಂದಲೂ ಹೀಗೆ. ತಮಗೆ ಇಷ್ಟವಾದ್ದನ್ನು ನೇರವಾಗಿ ಹೊಗಳುವ ಗುಣ ಅವರದ್ದು! ಎಷ್ಟೋ ಸಲ ನಮ್ಮವರ ಪ್ರತಿಭೆಯನ್ನು ನಾವೇ ಪ್ರೋತ್ಸಾಹಿಸದೇ, ಅವರು ಪಕ್ಕದೂರುಗಳಲ್ಲಿ ಬೆಳೆದು ನಿಂತ ಮೇಲೆ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿರುತ್ತದೆ. ಶಿವರಾಜ್ ಕುಮಾರ್ ಆರಂಭದಿಂದಲೂ ತಮ್ಮ ಸಹ ನಟರನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದಾರೆ. ಕನ್ನಡದ ನಟ ಕಿಶೋರ್, ಮುನಿ, ರವಿಶಂಕರ್ ಗೌಡ ಮುಂತಾದ ಹಲವು ಪ್ರತಿಭಾವಂತರು ಆರಂಭದಲ್ಲಿ ಶಿವಣ್ಣ ನೀಡಿದ ಸಾಥ್ ಅನ್ನು ಇವತ್ತಿಗೂ ನೆನೆಯುತ್ತಾರೆ. ʻತಾನು ಬೆಳೆದು ತನ್ನವರನ್ನೂ ಬೆಳೆಸುವ ಈ ಗುಣʼದಿಂದಲೇ ಇರಬಹುದು ದೊಡ್ಮನೆ ಈ ಮಟ್ಟಿಗಿನ ಅಭಿಮಾನಿ ವರ್ಗ ಸಂಪಾದಿಸಿರುವುದು.
ಅದೇನೇ ಇರಲಿ, ವಸಿಷ್ಠ ಕೂಡಾ ಈಗ ಭಾರತೀಯ ಚಿತ್ರರಂಗದಲ್ಲಿ ಗಟ್ಟಿಯಾಗಿ ಬೇರು ಬಿಡುವ ಎಲ್ಲ ಸೂಚನೆಗಳೂ ಸಿಕ್ಕಿವೆ. ಇನ್ನೇನು ತೆರೆಗೆ ಬರಲು ತಯಾರಾಗಿರುವ ಕಾಲಚಕ್ರ ಸಿನಿಮಾ ಕೂಡಾ ಬಿಡುಗಡೆಗೆ ಮುನ್ನವೇ ಸಾಕಷ್ಟು ಟಾಕ್ ಕ್ರಿಯೇಟ್ ಮಾಡಿದೆ. ಹಲವು ಪ್ರಶಸ್ತಿಗಳನ್ನೂ ಪಡೆದಿದೆ. ವಸಿಷ್ಠರ ವೃತ್ತಿ ಬದುಕು ಕೂಡಾ ಸಿಂಹ ಗಾಂಭೀರ್ಯದಿಂದ ಕೂಡಿರಲಿ ಎಂದು ಹಾರೈಸೋಣ.