ಸಿನಿಮಾ ವಿಚಾರವಾಗಿ ಪರಿಚಯಗೊಂಡಳು, ನಂತರ ರಿಯಲ್ ಎಸ್ಟೇಟು ಮಾಡ್ತೀನಿ ಅಂತೆಲ್ಲಾ ಹೇಳಿ ವಂಚಿಸಿದಳು ಅನ್ನೋದು ನಾಗವರ್ಧನ್ ಆರೋಪ. ಅಸಲಿಗೆ ಈ ಇಬ್ಬರ ಹಿನ್ನೆಲೆ ಏನು? ಯಾವ ಕಾರಣಕ್ಕೆ ಒಟ್ಟಿಗೆ ಸೇರಿದ್ದರು? ಈಗ ಉಮಾಪತಿಯನ್ನು ಈ ಹೆಣ್ಣು ಕ್ಯಾಚು ಹಾಕಿದ್ದು ಹೇಗೆ? ಎಂಬಿತ್ಯಾದಿ ವಿವರಗಳು ಎಲ್ಲರನ್ನೂ ಕಾಡುತ್ತಿವ ಪ್ರಶ್ನೆ… ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ.
ಚಾಲೆಂಜಿಂಗ್ ದರ್ಶನ್ರಂಥಾ ಟಾಪ್ ಹೀರೋ, ಹಣವಂತ ನಿರ್ಮಾಪಕ ಉಮಾಪತಿ, ದರ್ಶನ್ ಸುತ್ತಲಿನ ಸ್ನೇಹಿತರು – ಹೀಗೆ ಎಲ್ಲರ ನಡುವೆ ಸೃಷ್ಟಿಯಾದ ಗೊಂದಲ ಈ ಕ್ಷಣಕ್ಕೂ ಬಗೆಹರಿಯುತ್ತಿಲ್ಲ.
ಇಷ್ಟಕ್ಕೆಲ್ಲಾ ಕಾರಣ ಆ ಅಡ್ಡ ಕಸುಬಿ ಹೆಂಗಸು. ಸದ್ಯ ಮೀಡಿಯಾಗಳಲ್ಲಿ ಆಕೆಯ ಹೆಸರು ಅರುಣಾ ಕುಮಾರಿ ಅಂತಾ ಪ್ರಸಾರವಾಗುತ್ತಿದೆ. ಈಕೆಯ ಒರಿಜಿನಲ್ ಹೆಸರು ನಂದಿತಾ. ಈಕೆ ನನಗೆ ಆರೇಳು ವರ್ಷಗಳಿಗೆ ಮುಂಚೆಯೇ ವಂಚಿಸಿದ್ದಳು ಅಂತಾ ಹೇಳುತ್ತಿರುವ ಯುವಕ ನಾಗವರ್ಧನ್.
ʻನನ್ನಂತಾ ಹೆಣ್ಣುಮಗಳನ್ನು ಸಿಕ್ಕಿಸಿ ಹಿಂಸಿಸುತ್ತಿದ್ದಾರೆʼ ಎಂದು ಹೇಳಿಕೆ ಕೊಟ್ಟು ಅಮಾಯಕಳಂತೆ ನಟಿಸುತ್ತಿರುವ ಅರುಣಾಕುಮಾರಿ ಸಾಮಾನ್ಯ ಹೆಂಗಸಲ್ಲ. ಈಕೆ ತನ್ನ ಗಂಡ ಎಂದು ಹೇಳಿಕೊಳ್ಳುತ್ತಿರುವ ಕುಮಾರ್ ಅಲಿಯಾಸ್ ಪ್ರಕಾಶ್ ಎಂಬಾತನ ಜೊತೆಗೆ ಸೇರಿಯೇ ವಂಚನೆಗಿಳಿದಿದ್ದಾಳಾ ಎನ್ನುವ ಅನುಮಾನ ಮೂಡುತ್ತಿದೆ.
ಹಳೇ ಸಂಬಂಧ
ನಂದಿತಾಳ ಪರಿಚಯವಾಗುವಷ್ಟರಲ್ಲಿ ನಾಗವರ್ಧನ್ ಅದಾಗಲೇ ಮದುವೆಯಾಗಿದ್ದ. ಸಿನಿಮಾ ಹೀರೋ ಮಾಡಿಸ್ತೀನಿ ಅಂತಾ ಬಂದವಳು ಕ್ರಮೇಣ ನೀನೇ ಬೇಕುʼ ಅನ್ನಲು ಶುರು ಮಾಡಿದ್ದಳು. ʻಎಲ್ಲಾ ಕಡೆ ಎಲೆಕ್ಟ್ರಾನಿಕ್ಸ್ ವೈರಸ್ ಬಿಟ್ಟಿದ್ದಾರೆ. ಅವು ನಮ್ಮನ್ನೂ ಅಟ್ಯಾಕ್ ಮಾಡಿವೆ. ನಾವಿಬ್ಬರೂ ಸೇರಿದರೆ ಮಾತ್ರ ಅದರಿಂದ ಬಚಾವಾಗಲು ಸಾಧ್ಯʼ ಅಂಥಾ ಥೇಟು ಮೆಂಟಲ್ ಪೇಷೆಂಟ್ ಥರಾ ಮಾತಾಡುತ್ತಿದ್ದಳು. ಒಂದು ಹಂತದಲ್ಲಿ ನಾಗವರ್ಧನ್ ಸಂಸಾರ ಕೆಡಿಸಿ, ಆತನನ್ನು ಮದುವೆಯಾಗುವ ಪ್ಲಾನೂ ಮಾಡಿದ್ದಳು. ಸೈಕೋ ತರಹ ಆಡುತ್ತಿದ್ದ ನಂದಿತಾಳ ವರಸೆ ಕಂಡು ಗಾಬರಿಗೊಂಡಿದ್ದ ನಾಗವರ್ಧನ್ ಈಕೆಯಿಂದ ಬಿಡಿಸಿಕೊಂಡು ಬದುಕುಳಿದಿದ್ದ!
ವಿಜಯನಗರದೊಳಗೊಂದು ಸರಸ್ವತಿನಗರ ಎನ್ನುವ ಏರಿಯಾ ಇದೆ. ಅಲ್ಲಿನ ಅಲಹಾಬಾದ್ ಬ್ಯಾಂಕ್ ಬಳಿ ಇರುವ ದಿ ಆಕ್ಸಿ ಜಿಮ್ʼನ ಮಾಲೀಕ ನಾಗವರ್ಧನ್. ಶೋಕಿ, ಮುಗ್ದತೆಗಳನ್ನೆಲ್ಲಾ ಒಟ್ಟೊಟ್ಟಿಗೇ ಮೈಗೂಡಿಸಿಕೊಂಡ ಹುಡುಗ ಈತ. ಈತನ ಮೂಲ ಹೆಸರು ನಾಗರಾಜ್. ಸಾಹಸಸಿಂಹ ವಿಷ್ಣುವರ್ಧನ್ ಅವರ ಮೇಲಿನ ಪ್ರೀತಿಯಿಂದ ಹೆಸರಿನ ಜೊತೆ ವರ್ಧನ್ ಸೇರಿಸಿಕೊಂಡಿದ್ದ. ಈತನ ಜಿಮ್ ಗೆ ಸಿನಿಮಾ ಮಂದಿ ಕೂಡಾ ಬಂದು ಹೋಗುತ್ತಿದ್ದರು. ಅವರ ಸ್ನೇಹ ಸಂಪಾದಿಸಿದ್ದ ನಾಗು ಹೇಗಾದರೂ ಸಿನಿಮಾ ಹೀರೋ ಆಗಬೇಕು ಅನ್ನೋ ಕನಸಿಟ್ಟುಕೊಂಡಿದ್ದ.
ಕೊಲೆಯಾಗಿದ್ದು ಅದೇ ಜಿಮ್ ನಲ್ಲಿ!
ವರುಣ್ ಕುಮಾರ್ ಎಂಬಾತ ನಾಗರಾಜ್ ನಡೆಸುತ್ತಿದ್ದ ಆಕ್ಸಿ ಜಿಮ್ ನಲ್ಲಿ ತರಬೇತುದಾರನಾಗಿದ್ದ. ಇತ್ತ ಸಿನಿಮಾ ಹೀರೋ ಮಾಡಿಸ್ತೇನೆ ಅಂತಾ ಪುಂಗಿದ್ದ ನಂದಿತಾ ಯಾನೆ ಅರುಣಾ ಕುಮಾರಿಯ ಸೆರಗು ಹಿಡಿದು ಓಡಾಡುತ್ತಿದ್ದ ನಾಗವರ್ಧನ. ಆ ಸಮಯದಲ್ಲೇ ವರುಣ್ ಅನಾಹುತಕಾರಿ ಕೆಲಸವೊಂದಕ್ಕೆ ಕೈಯಿಟ್ಟುಬಿಟ್ಟಿದ್ದ. ದುಡ್ಡು ಕೊಟ್ಟು ಮೊಬೈಲ್ ಖರೀದಿಸಲು ಯೋಗ್ಯತೆ ಇಲ್ಲದ ವರುಣ್ ಆನ್ ಲೈನ್ ನಲ್ಲಿ ಮೊಬೈಲ್ ಬುಕ್ ಮಾಡಿಕೊಂಡಿದ್ದ. ಅದನ್ನು ಕೊಡಲು ಬಂದ ಕಾವೇರಿನಗರ ನಿವಾಸಿ, ಫ್ಲಿಪ್ ಕಾರ್ಟ್ ಡೆಲಿವರಿ ಬಾಯ್ ನಂಜುಂಡಸ್ವಾಮಿ ಎಂಬಾತನನ್ನು ಜಿಮ್ ಕೆಳಗಿನ ಬೇಸ್ ಮೆಂಟಿನಲ್ಲಿ ಕೊಂದುಹಾಕಿದ್ದ.
ಉಮಾಪತಿಯನ್ನು ಹಿಡಿದಳು!
ಫೇಸ್ ಬುಕ್ ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಅರುಣಾಕುಮಾರಿ ʼನೀವು ಬ್ಯಾಂಕ್ ಸ್ವಾಧೀನ ಪಡಿಸಿಕೊಂಡ ಪ್ರಾಪರ್ಟಿ ಪರ್ಚೇಸ್ ಮಾಡುತ್ತೀರಾ ಅಂತಾ ಕೇಳಿದ್ದಳು. ಉಮಾಪತಿ ಕೂಡಾ ಬ್ಯಾಂಕಿನ ಲೋನು ಕಟ್ಟಲಾರದೇ ಆಕ್ಷನ್ನಿಗೆ ಬಂದ ಆಸ್ತಿಗಳನ್ನು ಖರೀದಿ ಮಾಡುತ್ತಿದ್ದರಲ್ಲಾ ಹಾಗಾಗಿ ಹೌದು ಅಂದಿದ್ದರು. ಆ ಮೂಲಕ ಪರಿಚಯವಾದ ಅರುಣಾ ಮೈಸೂರಿನಲ್ಲೊಂದು ಪ್ರಾಪರ್ಟಿ ಇದೆ ಅಂದಿದ್ದಳು.
ಅದೊಂದು ದಿನ ಉಮಾಪತಿ ಮೈಸೂರಿನ ಆ ಪ್ರಾಪರ್ಟಿಯನ್ನು ನೋಡಲೆಂದು ಬರುತ್ತಿರುವುದಾಗಿ ದರ್ಶನ್ ಅವರಿಗೂ ತಿಳಿಸಿದ್ದರು. ʻಏನ್ ನಿರ್ಮಾಪಕರೇ ಮೈಸೂರಲ್ಲಿ ಯಾವ ಜಾಗʼ ಅಂತಾ ಕೇಳಿದಾಗ ಉಮಾಪತಿ ಅದನ್ನು ವಿವರಿಸಿದ್ದರು. ಆಗ ಗೊತ್ತಾಗಿದ್ದೇನೆಂದರೆ, ಮಾರಾಟಕ್ಕಿದ್ದ ಪ್ರಾಪರ್ಟಿ ದರ್ಶನ್ ಅವರ ಸ್ನೇಹವಲಯದಲ್ಲಿರುವ ಹರ್ಷ ಮೆಲಂಡಾಗೆ ಸೇರಿದ್ದಾಗಿತ್ತು.
ಹರ್ಷ ಮೆಲಂಡಾಗೆ ಕಾರ್ ಇಎಂಐ ಕಟ್ಟಲೂ ಕಾಸಿಲ್ಲ. ಅವರು ನಡೆಸುತ್ತಿರುವ ಯೂನಿಯನ್ ಪಬ್ ಕಂಪ್ಲೀಟ್ ಲಾಸ್ ಆಗಿಬಿಟ್ಟಿದೆ. ಇದರಿಂದ ಅವರ ಪತ್ನಿ ಊರ್ಮಿಳಾ ಬೇಸರಗೊಂಡಿದ್ದಾರೆ… ಎಂಬಿತ್ಯಾದಿ ಮಾಹಿತಿಯನ್ನು ಎಲ್ಲ ಕಂಡವಳಂತೆ ಅರುಣಾ ಉಮಾಪತಿಗೆ ತಿಳಿಸಿದ್ದಳು. ಇದಲ್ಲದೆ, ದರ್ಶನ್ ಹೆಸರನ್ನು ಬಳಸಿಕೊಂಡು ಹರ್ಷ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಪ್ಲಾನು ಮಾಡಿದ್ದಾರೆ ಅಂತೆಲ್ಲಾ ಹೇಳಿದ್ದಳು. ಹರ್ಷನ ಹಣಕಾಸಿನ ವ್ಯವಹಾರ, ಪರ್ಸನಲ್ ಲೈಫಿನ ಬಗ್ಗೆ ಪಿನ್ ಟು ಪಿನ್ ಮಾಹಿತಿ ಅರುಣಾಗೆ ಹೇಗೆ ತಿಳಿಯಿತು? ಪಬ್ ಸೆಕ್ಯೂರಿಟಿ ಆಗಿರುವ ತನ್ನ ಕುಮಾರ್ ನಿಂದಲೇ ಎಲ್ಲಾ ಡಿಟೇಲು ಪಡೆದು ಈಕೆ ವಂಚನೆಗಿಳಿಯುತ್ತಿದ್ದಳಾ ಎನ್ನುವ ಅನುಮಾನ ಹುಟ್ಟುವಂತಿದೆ. ಗಂಡ ಹೆಂಡತಿ ದೂರವಾದಂತೆ ಡ್ರಾಮಾ ಮಾಡಿ, ಈ ಜೋಡಿ ಜಂಟಿ ಕಾರ್ಯಾಚರಣೆಗಿಳಿದಿದೆಯಾ?
ಉಮಾಪತಿ ವಿರುದ್ಧ ಕಿತಾಪತಿ!
ನಾವು ಈ ಹಿಂದೆಯೂ ಸಾಕಷ್ಟು ಸಲ ಬರೆದಿದ್ದೇವೆ. ಅದೇನು ಹಣೇಬರವೋ ದರ್ಶನ್ ಸೂಪರ್ ಸ್ಟಾರ್ ಎನ್ನುವ ಕಾರಣಕ್ಕೋ, ಅವರ ಅಮಾಯಕ ಗುಣವೋ ಗೊತ್ತಿಲ್ಲ. ದರ್ಶನ್ ಅವರನ್ನು ಮೇಲಿಂದ ಮೇಲೆ ವಂಚಿಸಿದವರೇ ಹೆಚ್ಚು. ಮ್ಯಾನೇಜರ್ ಮಲ್ಲು ಕೋಟಿಗಟ್ಟಲೆ ನಾಮ ಇಟ್ಟು ಎಸ್ಕೇಪ್ ಆದವನು, ಈ ಹೊತ್ತಿಗೂ ಸಿಕ್ಕಿಲ್ಲ. ಇದಕ್ಕೂ ಮುಂಚೆ ಸಂಭಾವನೆ ವಿಚಾರದಲ್ಲೂ ದರ್ಶನ್ ರನ್ನು ಯಾಮಾರಿಸಿದವರಿದ್ದಾರೆ.
ಇದನ್ನೆಲ್ಲಾ ಕಂಡಿದ್ದ ಉಮಾಪತಿ, ದರ್ಶನ್ ಅವರ ಸುತ್ತ ತಡೆಗೋಡೆಯಂತೆ ಇರೋದು ನಿಜ. ಉಮಾಪತಿಯನ್ನು ದಾಟಿ ದರ್ಶನ್ ಸಂಪರ್ಕ ಸಾಧಿಸೋದು ಕಷ್ಟ. ಈತ ಚಾಲೆಂಜಿಂಗ್ ಸ್ಟಾರ್ ಸುತ್ತ ಬೇಲಿ ನಿರ್ಮಿಸಿಬಿಟ್ಟಿದ್ದಾರೆ ಅಂತೆಲ್ಲಾ ಕೊರಗುವವರು, ಉರ್ಕೊಳ್ಳುವವರೂ ಸಾಕಷ್ಟು ಜನ ಇದ್ದಾರೆ.
ಬಹುಶಃ ಉಮಾಪತಿಯನ್ನು ದರ್ಶನ್ ರಿಂದ ದೂರ ಮಾಡಲು ಕಾಯುತ್ತಿದ್ದವರಿಗೆ ಈ ಅರುಣಾಕುಮಾರಿ ಪ್ರಕರಣ ದಾಳವಾಯ್ತು. ದರ್ಶನ್ ರನ್ನು ಅವರ ಸುತ್ತಲಿನವರು ವಂಚಿಸಲು ಸ್ಕೆಚ್ಚು ಹಾಕುತ್ತಿದ್ದಾರೆ ಎನ್ನುವ ಅನುಮಾನ ಬಂದು, ಅದನ್ನು ಅವರ ಮುಂದೆ ನೇರವಾಗಿ ಹೇಗೆ ಹೇಳೋದು ಅಂತಾ ಉಮಾಪತಿ ಅರುಣಾಕುಮಾರಿಗೆ ಆ ಜವಾಬ್ದಾರಿ ವಹಿಸಿದ್ದರಾ? ಗೊತ್ತಿಲ್ಲ.
ಆದರೆ, ಒಂದಂತೂ ನಿಜ. ಉಮಾಪತಿಗೆ ಯಾರದ್ದೋ ಹೆಸರಿನಲ್ಲಿ ಲೋನು ಪಡೆಯುವ, ಅಡ್ಡದಾರಿಯಲ್ಲಿ ಸಂಪಾದನೆ ಮಾಡುವಂಥಾ ದರಿದ್ರವಂತೂ ಇಲ್ಲ. ನಾಲ್ಕು ತಲೆಮಾರಿಗೆ ಕೂತು ಉಂಡರೂ ಕರಗದಷ್ಟು ಆಸ್ತಿಯಿದೆ. ಹಾಗಂತಾ ಉಮಾಪತಿ ಯಾವತ್ತೂ ಸುಮ್ಮನೇ ಕೂತವರಲ್ಲ. ಈ ಹಿಂದೆ ಸುದೀಪ್ ಅವರ ಹೆಬ್ಬುಲಿ ಚಿತ್ರಕ್ಕೆ ನಿರ್ಮಾಣ ಪಾಲುದಾರರಾಗಿದ್ದರು. ನಂತರ ರಾಬರ್ಟ್ ಮೂಲಕ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ಮುಂದುವರೆದಿದ್ದಾರೆ. ಒಂದು ವೇಳೆ ಉಮಾಪತಿ ಜಾಗದಲ್ಲೇನಾದರೂ ಬಡಪಾಯಿ ನಿರ್ಮಾಪಕ ಸಿಕ್ಕಿಕೊಂಡಿದ್ದರೆ, ಕತೆ ಬೇರೆಯೇ ಆಗಿಬಿಡುತ್ತಿತ್ತೇನೋ?!
No Comment! Be the first one.