ಕೆಲ ಸಿನಿಮಾಗಳ ಪಾತ್ರಗಳೇ ಹಾಗೆ. ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡುತ್ತಾ ಮನಸೊಳಗೇ ಕೂತು ಬಿಡುತ್ತವೆ. ಮಫ್ತಿಯಲ್ಲಿ ಶಿವರಾಜ್ ಕುಮಾರ್ ನಟಿಸಿದ್ದ ಪಾತ್ರವೂ ಅಂಥಾದ್ದೇ. ಒಂದು ಮಾಸಲು ಲುಂಗಿ, ಕಪ್ಪು ಬಣ್ಣದ ಮುದುರು ಮುದುರಾದ ಅಂಗಿ ಮತ್ತು ತಣ್ಣಗೆ ಅಬ್ಬರಿಸೋ ಶೈಲಿ… ಇಷ್ಟೆಲ್ಲ ಗುಣಲಕ್ಷಣಗಳೊಂದಿಗೆ ಭೈರತಿ ರಣಗಲ್ ಪಾತ್ರ ಪ್ರಸಿದ್ಧಿ ಪಡೆದುಕೊಂಡಿತ್ತು.
ಇದರ ಖದರ್ ಎಂಥಾದ್ದಿತ್ತೆಂದರೆ ಮಫ್ತಿ ನೋಡಿದ ಪ್ರೇಕ್ಷಕರೇ ಭೈರತಿ ರಣಗಲ್ ಅಂತಲೇ ಒಂದು ಸಿನಿಮಾ ಮಾಡಿ ಅಂತ ಬೇಡಿಕೆಯಿಟ್ಟಿದ್ದರು. ತಾವೇ ಸೃಷ್ಟಿಸಿದ ಪಾತ್ರವೊಂದು ಈ ಪಾಟಿ ಪ್ರಸಿದ್ಧವಾಗಿರೋದರಿಂದ ಖುಷಿಗೊಂಡ ನಿರ್ದೇಶಕ ನರ್ತನ್ ಪ್ರೇಕ್ಷಕರ ಅಭಿಲಾಶೆಯಂತೆಯೇ ಭೈರತಿ ರಣಗಲ್ ಎಂಬ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಮಫ್ತಿಯಲ್ಲಿದ್ದ ಪಾತ್ರವನ್ನೇ ಮೀರಿಸುವಂತೆ ಶಿವಣ್ಣ ಈ ಚಿತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ಹೀಗಿರುವಾಗಲೇ ಭೈರತಿ ರಣಗಲ್ ಸಿನಿಮಾ ಕಡೆಯಿಂದ ಮತ್ತೊಂದು ಸಂತಸದ ಸುದ್ದಿ ಹೊರ ಬಿದ್ದಿದೆ. ಈ ಚಿತ್ರದಲ್ಲಿ ತೆಲುಗು ಸೂಪರ್ ಸ್ಟಾರ್ ಬಾಲಯ್ಯ ಮುಖ್ಯ ಪಾತ್ರವೊಂದರಲ್ಲಿ ಅಭಿನಯಿಸಲಿದ್ದಾರೆ. ಅವರದ್ದೂ ಕೂಡಾ ಮಫ್ತಿಯ ಭೈರತಿ ಪಾತ್ರದಂಥಾದ್ದೇ ಖದರ್ ಹೊಂದಿರೋ ಪಾತ್ರವಂತೆ. ಅಂದಹಾಗೆ ಬಾಲಯ್ಯ ಬಲು ಪ್ರೀತಿಯಿಂದಲೇ ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿರೋದಕ್ಕೆ ಶಿವಣ್ಣನ ಜೊತೆಗಿನ ಸ್ನೇಹ ಪ್ರಧಾನ ಕಾರಣ.
ಬಾಲಯ್ಯ ಆರಂಭ ಕಾಲದಿಂದಲೂ ಶಿವಣ್ಣನೊಂದಿಗೆ ಸ್ನೇಹ ಹೊಂದಿದ್ದವರು. ಅದಕ್ಕೆ ಕಟ್ಟು ಬಿದ್ದೇ ಶಿವಣ್ಣ ಗೌತಮಿ ಪುತ್ರ ಶಾತಕರ್ಣಿ ಚಿತ್ರದಲ್ಲಿ ನಟಿಸಿದ್ದರು. ಶಿವರಾಜ್ಕುಮಾರ್ ಯಾವತ್ತೂ ಕನ್ನಡ ಬಿಟ್ಟರೆ ಬೇರೆ ಭಾಷೆಗಳಲ್ಲಿ ನಟಿಸಿದವರಲ್ಲ. ಅವರನ್ನು ತೆಲುಗು ಚಿತ್ರದಲ್ಲಿ ನಟಿಸುವಂತೆ ಮಾಡಿದ್ದದ್ದು ಬಾಲಯ್ಯರ ಸ್ನೇಹವೇ. ಈ ಸ್ನೇಹ ಭೈರತಿ ರಣಗಲ್ ಮೂಲಕ ಮತ್ತೆ ಮಿರುಗಿದೆ.
#
No Comment! Be the first one.