ಚಂಬಲ್ : ಅಪ್ಪು ಆಡಿದ ಅಭಿಮಾನದ ಮಾತು

ಚಂಬಲ್ ಸಿನಿಮಾದ ಟ್ರೇಲರ್‌ನ್ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅನಾವರಣಗೊಳಿಸಿದ್ದರು. ಅದು ಬಿಡುಗಡೆಯಾಗುತ್ತಿದ್ದಂತೇ ಎಲ್ಲಾ ಕಡೆ ಭರ್ಜರಿ ಪ್ರತಿಕ್ರಿಯೆ ಲಭ್ಯವಾಗಿತ್ತು. ಈಗಲೂ ಯೂಟ್ಯೂಬ್ ಜಾಲತಾಣದ ಟ್ರೆಂಡಿಂಗ್‌ನಲ್ಲಿ ಚಂಬಲ್ ಚಿತ್ರವಿದೆ. 469 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಗೊಳಗಾಗಿದೆ ಚಂಬಲ್. ಈ ಚಿತ್ರದ ಬಗ್ಗೆ ಕನ್ನಡ ಪ್ರೇಕ್ಷಕರು ಅದೆಷ್ಟು ಕುತೂಹಲದಿಮದ ಎದುರು ನೋಡುತ್ತಿದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ.

ಪುನೀತ್ ರಾಜ್‌ಕುಮಾರ್ ಹಾಗೂ ಜೇಕಬ್ ವರ್ಗೀಸ್ ಇದಕ್ಕೂ ಮೊದಲು ಪೃಥ್ವಿ ಸಿನಿಮಾಗಾಗಿ ಒಟ್ಟಿಗೇ ಕೆಲಸ ಮಾಡಿದ್ದರು. ಆ ಚಿತ್ರದ ನಟನೆಗೆ ಪುನೀತ್ ರಾಜ್ಯಪ್ರಶಸ್ತಿಗೂ ಅರ್ಹರಾದರು. ಹೀಗಾಗಿ ಜೇಕಬ್ ವರ್ಗಿಸ್ ಮತ್ತು ಅಪ್ಪು ನಡುವೆ ಒಂದು ಉತ್ತಮ ಸ್ನೇಹ ಸಂಬಂಧವಿದೆ. ಜೇಕಬ್‌ರ ಸಿನಿಮಾಗಳಲ್ಲಿ ಅತ್ಯುತ್ತಮ ಕಾಸ್ಟಿಂಗ್ ಇರುತ್ತದೆ ಎನ್ನೋದು ಅಪ್ಪು ನುಡಿ ಮಾತು.

’ನೀನಾಸಂ ಸತೀಶ್ ನಟನೆಯನ್ನ ನಾನು ಬಹಳ ಹಿಂದಿನಿಂದಲೇ ಗುರುತಿಸಿಕೊಂಡು ಬಂದಿದ್ದೇನೆ. ಮನಸಾರೆ, ಪಂಚರಂಗಿ ಹೊತ್ತಿನಲ್ಲೇ ಅವರೊಳಗೊಬ್ಬ ಉತ್ತಮ ಕಲಾವಿದನಿದ್ದಾನೆ ಎಂಬುದು ಮನವರಿಕೆಯಾಗಿತ್ತು. ಈಗ ಅವರೊಬ್ಬ ಹೀರೋ ಆಗಿ ಬೆಳೆದು ನಿಂತಿದ್ದಾರೆ. ಜೇಕಬ್‌ರಂಥ ಸಂವೇದನಾಶೀಲ ನಿರ್ದೇಶಕರ ಕೈಯಲ್ಲಿ ಸತೀಶ್‌ರಂಥ ರಂಗಭೂಮಿ ಹಿನ್ನೆಲೆಯ ನಟ ಹೇಗೆ ವಿಜೃಂಭಿಸಿದ್ದಾರೆ, ಹೇಗೆ ಇವರಿಬ್ಬರ ಕಾಂಬಿನೇಷನ್ ವರ್ಕ್‌ಔಟ್ ಆಗಿದೆ ಎಂಬ ಕುತೂಹಲ ನನಗೂ ಇದೆ. ಖಂಡಿತಾ ಚಂಬಲ್ ನಮ್ಮ ನಿರೀಕ್ಷೆಯನ್ನ ಹುಸಿಗೊಳಿಸುವುದಿಲ್ಲ ಎಂಬ ನಿರೀಕ್ಷೆ ನನ್ನದು.

ಒಳ್ಳೊಳ್ಳೇ ಕಲಾವಿದರು ಚಂಬಲ್ ಸಿನಿಮಾದಲ್ಲಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಸೋನುಗೌಡ ಅವರಾಗಲಿ, ರೋಜರ್ ನಾರಾಯಣ್, ಅಚ್ಯುತ್ ಕುಮಾರ್, ಲೂಸಿಯಾ ಪವನ್ ಕುಮಾರ್, ಸತ್ಯ ಸೇರಿದಂತೆ ಪಾತ್ರಗಳನ್ನ ಸಮರ್ಥವಾಗಿ ನಿರ್ವಹಿಸಬಲ್ಲಂಥ ಅನೇಕ ಕಲಾವಿದರು ಚಂಬಲ್ ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಈ ಸಿನಿಮಾ ಹೆಸರು ತಂದುಕೊಡಲಿ ಎನ್ನುವುದು ನನ್ನ ಹಾರೈಕೆ.


Posted

in

by

Tags:

Comments

Leave a Reply