ನೀನಾಸಂಸತೀಶ್ ನಟಿಸಿರೋ ಚಂಬಲ್ ಚಿತ್ರದ ಟ್ರೈಲರ್ ಲಾಂಚ್ ಆಗಿದೆ. ಇದರಲ್ಲಿನ ಕಥೆ ಯಾವ ಥರದ್ದೆಂಬ ಸ್ಪಷ್ಟ ಸುಳಿವೂ ಕೂಡಾ ಸಿಕ್ಕಿದೆ. ಜಿಲ್ಲಾಧಿಕಾರಿ, ವಾಣಿಜ್ಯ ತೆರಿಗೆ ಇಲಾಖೆಯ ರೇಡ್ ಮತ್ತು ಅಧಿಕಾಇಯೇ ಜನರ ನಡುವೆ ತಲೆ ಮೇಲೆ ಕರಗ ಹೊತ್ತು ಕುಣಿಯೋ ಸೀನು… ಇದನ್ನು ನೋಡಿದ ಪ್ರತಿಯೊಬ್ಬರಿಗೂ ಥಟ್ಟನೆ ನೆನಪಾಗೋದು ಖಡಕ್ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ ರವಿ!
ಕೋಲಾರ ಜಿಲ್ಲಾಧಿಕಾರಿಯಾಗಿದ್ದುಕೊಂಡು ಜನಾನುರಾಗಿಯಾಗಿದ್ದವರು ಡಿಕೆ ರವಿ. ಸದಾ ಜನಸಾಮಾನ್ಯರ ಪರವಾದ ನಿಲುವು ಹೊಂದಿದ್ದ ರವಿ, ಅಧಿಕಾರಿ ವರ್ಗ, ಅಧಿಕಾರಸ್ಥರು, ಮಾಫಿಯಾಗಳನ್ನ ಸಾರಾಸಗಟಾಗಿ ಎದುರು ಹಾಕಿಕೊಂಡಿದ್ದ ನಿಷ್ಠಾವಂತ ಅಧಿಕಾರಿ. ಇಂಥಾ ರವಿ ರಾಜಕೀಯದಾಟಕ್ಕೆ ಸಿಕ್ಕು ಏಕಾಏಕಿ ವಾಣಿಜ್ಯ ತೆರಿಗೆ ಇಲಾಖೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಯೂ ಈ ಹುಲಿ ಅಬ್ಬರಿಸಿತ್ತು. ಇಂಥಾ ಹುಲಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದಾಗ ಇದೊಂದು ವ್ಯವಸ್ಥಿತ ಕೊಲೆಯೆಂದೇ ಹೇಳಲಾಗಿತ್ತು. ಅದರ ಆಚೀಚೆಗೆ ಏನೇ ನಡೆದರೂ ಡಿ ಕೆ ರವಿ ನಿಜವಾದ ಜನಾನುರಾಗಿ ಅಧಿಕಾರಿ ಎಂದೇ ಈ ಕ್ಷಣಕ್ಕೇ ಜನರ ಮನಸಲ್ಲಿದ್ದಾರೆ. ಒಂದು ಸಿನಿಮಾಗೆ ಹೇಳಿ ಮಾಡಿಸಿದಂತಿರೋ ಈ ಕಥೆಯನ್ನ ಜೇಕಬ್ ವರ್ಗೀಸ್ ಚಂಬಲ್ ಚಿತ್ರವಾಗಿಸಿದ್ದರ ಸ್ಪಷ್ಟ ಸುಳಿವುಗಳೇ ಢಾಳಾಗಿ ಸಿಗುತ್ತಿವೆ.
ಸದ್ಯಕ್ಕೆ ಇದು ಕೆಲ ನಿಷ್ಠಾವಂತ ಅಧಿಕಾರಿಗಳ ಸ್ಫೂರ್ತಿಯಿಂದ ತಯಾರಾದ ಕಥೆ. ಇದನ್ನ ಅಂಥಾ ಅಧಿಕಾರಿಗಳಿಗೇ ಅರ್ಪಿಸಿರೋದಾಗಿ ಚಿತ್ರತಂಡ ಹೇಳಿಕೊಂಡಿದೆ. ಆದರೆ ಕಥೆಯೆಂಬುದು ರವಿ ಅವರನ್ನೇ ಕೇರಂದ್ರವಾಗಿಸಿಕೊಂಡಿರುವಂತಿದೆ. ನೀನಾಸಂ ಸತೀಶ್ ಅವರ ಉಡುಗೆ ತೊಡುಗೆ, ಡೈಲಾಗ್ ಮತ್ತು ಅವರು ಜನಸಾಮಾನ್ಯರ ನಡುವೆ ಕರಗ ಹೊತ್ತು ಕುಣಿಯೋ ಸೀನುಗಳು ಮತ್ತೊಮ್ಮೆ ಜನರ ಕಣ್ಣುಗಳಲ್ಲಿ ಡಿ ಕೆ ರವಿಯ ಚಿತ್ರ ಮೂಡಿಸಿವೆ. ಆದರೆ ಈ ಸಿನಿಮಾದಲ್ಲಿ ಅಸಲೀ ಸತ್ಯಗಳಿಗೆ ಕನ್ನಡಿ ಹಿಡಿಯಲಾಗಿದೆಯಾ? ಡಿ ಕೆ ರವಿಯವರ ಸ್ಫೂರ್ತಿಯಿಂದ ಸಿನಿಮ್ಯಾಟಿಕ್ ಕಥೆ ಹೇಳಲಾಗಿದೆಯಾ ಎಂಬುದಕ್ಕೆ ಥೇಟರುಗಳಲ್ಲಿಯೇ ಉತ್ತರ ಸಿಗಬೇಕಿದೆ. ಇದೆಲ್ಲ ಏನೇ ಇದ್ದರೂ ಡಿ ಕೆ ರವಿಯವರದ್ದು ಸಿನಿಮಾ ಮಾತ್ರವಲ್ಲ ಎಲ್ಲರಿಗೂ ಸ್ಫೂರ್ತಿಯಂಥಾ ವ್ಯಕ್ತಿತ್ವ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ.
ಈ ರವಿ ಹುಟ್ಟು ಧೈರ್ಯದ ಮನುಷ್ಯ. ಈ ನೆಲದ ಬಡಬಗ್ಗರ ಸಂಕಷ್ಟಗಳಿಗೆ ಮಿಡಿಯುವ ಮನಸ್ಸು ಆರಂಭದಿಂದಲೂ ಅವರೊಳಗಿತ್ತು. ತಾನು ಐಎಎಸ್ ಆಫೀಸರ್ ಆಗಬೇಕೆಂದು ಅವುಡುಗಚ್ಚಿ ಓದಲು ಕೂರ ರವಿಯ ಎದೆಯೊಳಗೂ ನಾಲ್ಕು ಜನರಿಗೆ ಒಳ್ಳೆಯದು ಮಾಡುವ ತುಡಿತವಿತ್ತು. ಸಾಮಾನ್ಯವಾಗಿ ಇಂಥಾ ಉನ್ನತ ಹುದ್ದೆಗೇರುವ ಮುನ್ನ ಬಹುತೇಕರ ಮನಸ್ಥಿತಿ ಹೀಗೇ ಇರುತ್ತದೆ. ಆದರೆ ಅಧಿಕಾರ ಸಿಕ್ಕಾದ ನಂತರ ಅಲ್ಲಿನ ಅಪಾರ ಆಮದನಿಯ ದಾಸರಾಗಿ ಭ್ರಷ್ಟರ ನಡುವೆ ಕಳೆದು ಹೋಗುತ್ತಾರೆ. ಪಕ್ಕಾ ಕ್ರಾಂತಿಕಾರಿಗಳಾಗಿ ಅಧಿಕಾರ ವಲಯ ಪ್ರವೇಶಿಸಿದವರೂ ಭ್ರಷ್ಟಾಚಾರದ ಕೊಳಕು ಕೊಂಪೆಯಂತಾದ ಉದಾಹರಣೆಗಳೂ ಸಾಕಷ್ಟಿವೆ. ಆದರೆ ರವಿ ಮಾತ್ರ ಅದಕ್ಕೆ ಅಪವಾದದಂತಿದ್ದವರು. ಅಧಿಕಾರ ಸಿಕ್ಕ ಮೇಲೂ ಅವರೊಳಗೆ ಅಂತಃಕರಣದ ಸೆಲೆ ಬತ್ತಿರಲಿಲ್ಲ. ಆದುದರಿಂದಲೇ ಜನರಿಗೆ ಉಪಯೋಗವಾಗುವಂತೆ ಅಧಿಕಾರ ಚಲಾಯಿಸುತ್ತಾ ಯಾವ ದೊಣ್ಣೆನಾಯಕನಿಗೂ ಕೇರು ಮಾಡದೆ ಡೋಂಟ್ಕೇರ್ ರವಿ ಎಂದೇ ಖ್ಯಾತರಾಗಿದ್ದರು.
ರವಿ ಕುಮಾರ್ ಮೂಲತಃ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕು ಹುಲಿಯೂರು ದುರ್ಗ ಹೋಬಳಿಯ ದೊಡ್ಡಕೊಪ್ಪಲು ಗ್ರಾಮದವರು. ಕರಿಯಪ್ಪ -ಗೌರಮ್ಮ ಎಂಬ ಬಡ ರೈತಾಪಿ ದಂಪತಿಯ ಪುತ್ರ ಡಿ.ಕೆ.ರವಿ. ಜನಿಸಿದ್ದು ೧೯೭೯ರ ಜೂನ್ ೧೦ರಂದು. ಪ್ರಾಥಮಿಕ ಶಿಕ್ಷಣವನ್ನು ಹೊನ್ನಮಾಚನಹಳ್ಳಿಯಲ್ಲಿ ಮುಗಿಸಿ ಬಳಿಕ ಪಿಯುಸಿ ಮತ್ತು ಪದವಿ ಶಿಕ್ಷಣವನ್ನು ಕುಣಿಗಲ್ನಲ್ಲಿ ಪಡೆದಿದ್ದರು. ಬಿಎಸ್ಸಿ ಅಗ್ರಿ, ಎಂಎಸ್ಸಿ ಪದವಿ ಪಡೆದ ರವಿ ೨೦೦೯ರಲ್ಲಿ ಐಎಎಸ್ ಪರೀಕ್ಷೆ ಪಾಸು ಮಾಡಿ ದೆಹಲಿಯಲ್ಲಿ ತರಬೇತಿ ಪಡೆದಿದ್ದರು. ನಂತರ ಬೆಂಗಳೂರಿನ ಪಟ್ಟಣಗೆರೆ ಏರಿಯಾದ ಪ್ರಭಾವಿ ಕಾಂಗ್ರೆಸ್ ಮುಖಂಡ ಹನುಮಂತರಾಯಪ್ಪನವರ ಮಗಳು ಕುಸುಮಾರನ್ನು ಮದುವೆಯಾಗಿದ್ದ ರವಿ ಮೊದಲು ಕೆಲಸ ಮಾಡಿದ್ದು ಗುಲ್ಬರ್ಗಾ ಜಿಲ್ಲಾ ಪಂಚಾಯತ್ನ ಸಿಇಓ ಆಗಿ. ಮೊದಲ ಅವಧಿಯಲ್ಲಿಯೇ ರವಿ ಜನಪರ ಕೆಲಸದ ಮೂಲಕ ಗಮನ ಸೆಳೆದಿದ್ದರು. ಆ ನಂತರ ಕೊಪ್ಪಳ ಜಿಪಂಗೆ ಸಿಇಒ ಆಗಿ ವರ್ಗಾವಣೆಗೊಂಡಾಗಲೂ ರವಿಯಂಥಾ ರೀತಿಯಲ್ಲಿಯೇ ಅಧಿಕಾರ ನಿರ್ವಹಿಸಿದ್ದರು.
ಇಂಥಾ ರವಿಯ ನಿಜವಾದ ಖದರ್ರು ಅನಾವರಣಗೊಂಡಿದ್ದು ಕೋಲಾರ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ನಂತರದಲ್ಲಿ. ಈ ಭಾಗದಲ್ಲಿ ಅಕ್ರಮ ಮರಳು ದಂಧೆ ಎಂಬುದು ಅಧಿಕಾರ ಕೇಂದ್ರವನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಬೆಳೆದು ನಿಂತಿತ್ತು. ಅಧಿಕಾರಿಗಳಲ್ಲಿ ಅನೇಕರು ಈ ದಂಧೆಯ ಪ್ರಸಾದ ತಿಂದು ಬಾಯಿ ಚಪ್ಪರಿಸುತ್ತಿದ್ದರೇ ಹೊರತು, ಈ ಮಾಫಿಯಾವನ್ನು ಮಟ್ಟ ಹಾಕುವ ಗೋಜಿಗೆ ಹೋಗಿರಲಿಲ್ಲ. ಆದರೆ ರವಿ ಡಿಸಿಯಾಗಿ ಅಧಿಕಾರ ವಹಿಸಿಕೊಂಡ ಆರಂಭದಲ್ಲಿಯೇ ಆ ಕೆಲಸ ಮಾಡಿದ್ದರು. ಯಾವನಿಗೂ ಕೇರು ಮಾಡದೇ ಮರಳು ದಂಧೆಕೋರರ ಬುಡಕ್ಕೆ ಚಾಟಿ ಬೀಸಿದ್ದರು. ರಾಜಕಾರಣಿಗಳು, ಪ್ರಭಾವಿಗಳು ಸೇರಿದಂತೆ ಯಾರೇ ಎದುರು ನಿಂತರೂ ಮರಳು ಮಾಫಿಯಾಕ್ಕೆ ಸಿಂಹಸ್ವಪ್ನರಾಗಿದ್ದ ರವಿಗೆ ಡೋಂಟ್ಕೇರ್ ರವಿ ಎಂಬ ಪ್ರೀತಿಯ ಬಿರುದು ಸಿಕ್ಕಿದ್ದು ಆವಾಗಲೇ.
ಹೀಗೆ ಜನಾನುರಾಗಿಯಾಗಿಯೇ ಅಧಿಕಾರ ನಿರ್ವಹಿಸಿದ ರವಿ ಈಗ ನೆನಪು ಮಾತ್ರ. ಆದರೆ ಅಧಿಕಾರವನ್ನ ಕೈ ಬಾಯಿ ಸತ್ತವರ ಪರವಾಗಿ ಚಲಾಯಿಸಬಹುದೆಂಬುದಕ್ಕೆ ಅವರು ಸಾರ್ವಕಾಲಿಕ ಸ್ಫೂರ್ತಿ. ಇಂಥಾ ಆದರ್ಶ ವ್ಯಕ್ತಿತ್ವದ ಜೀವನ ಮತ್ತು ದುರಂತವೇ ಚಂಬಲ್ ಕಥೆಯಾಗಿದೆ ಅಂದರೆ ಈ ಸಿನಿಮಾ ಬಗ್ಗೆ ಕುತೂಹಲ ಹುಟ್ಟದಿರಲು ಹೇಗೆ ಸಾಧ್ಯ?
#
No Comment! Be the first one.