ಭಾವಕವಿ ಎಂ.ಎನ್ ವ್ಯಾಸರಾವ್ ಮರೆಯಾಗಿ ತಿಂಗಳಾಗುತ್ತಾ ಬಂದಿದೆ. ಸೂಕ್ಷ್ಮ ಭಾವಗಳ ಭಾವಗೀತೆ, ಚಿತ್ರಗೀತೆಗಳ ಮೂಲಕ ವ್ಯಾಸರಾವ್ ಅವರು ಬರೆದ ಕಡೇಯ ಗೀತೆಯೊಂದು ಇದೀಗ ಮಾಧುರ್ಯ ತುಂಬಿಕೊಂಡು ಪ್ರೇಕ್ಷಕರನ್ನ ತಲುಪಿಕೊಂಡಿದೆ!
ವ್ಯಾಸರಾವ್ ಅವರು ಕಡೇಯದಾಗಿ ಹಾಡೊಂದನ್ನು ಬರೆದದ್ದು ಪವನ್ ಎನ್ ಶ್ರೀವತ್ಸ ನಿರ್ದೇಶನದ ಚೆಕ್ ಎಂಬ ಕಿರುಚಿತ್ರಕ್ಕಾಗಿ. `ಚದುರಂಗ ಚೌಕದ ಚದುರಂಗ’ ಎಂಬ ಈ ಹಾಡನ್ನು ಮನೋಜ್ ವಸಿಷ್ಠ ಸಂಗೀತ ನಿರ್ದೇಶನದಲ್ಲಿ ಚಿತ್ರತಂಡ ತಯಾರು ಮಾಡಿದೆ. ಅರುಂಧತಿ ವಸಿಷ್ಠ ಹಾಡಿರೋ ಈ ಹಾಡನ್ನು ಭಾವಲೋಕದ ಅಮರಜೀವಿ ಎಂ.ಎನ್ ವ್ಯಾಸರಾವ್ ಅವರಿಗೆ ಅರ್ಥಪೂರ್ಣವಾಗಿ ಅರ್ಪಿಸಲಾಗಿದೆ.
ವ್ಯಾಸರಾವ್ ಅವರು ಕಡೇಯದಾಗಿ ಬಿಟ್ಟುಹೋದ ಅರ್ಥವತ್ತಾದ ಕವಿತೆ ಇದು. ಲವಲವಿಕೆಯಿಂದಲೇ ಇದ್ದ ಅವರು ಚೆಕ್ ಕಿರುಚಿತ್ರಕ್ಕಾಗಿ ಅರ್ಥಗರ್ಭಿತವಾದ ಹಾಡೊಂದನ್ನು ಬರೆದು ಕೊಟ್ಟಿದ್ದರು. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಅವರು ವಿಧಿವಶರಾಗಿದ್ದಾರೆ. ‘ಚೆಕ್’ ಕಿರುಚಿತ್ರದ ಈ ಹಾಡಿಗೆ ಚೆಂದದ ಸಂಗೀತ ಸಂಯೋಜನೆ ಮಾಡಿರೋ ಚಿತ್ರತಂಡ ಅದನ್ನು ವ್ಯಾಸರಾವ್ ಅವರಿಗೇ ಅರ್ಪಿಸಿದೆ. ಓರ್ವ ಸಾಹಿತಿಗೆ ಇದಕ್ಕಿಂತಲೂ ಸಾರ್ಥಕವಾದ ಗೌರವ ಮತ್ತೊಂದಿರಲಾರದು.
ವಿಸ್ತಾರ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣ ಗೊಂಡಿರೋ ಚೆಸ್, ಜೀವನ, ಸಮಾಜ ಮತ್ತು ರಾಜಕೀಯದ ಸುತ್ತ ಹೆಣೆದಿರುವ ಚೆಕ್ ಕಿರುಚಿತ್ರವನ್ನು ಪವನ್ ಎನ್ ಶ್ರೀವತ್ಸ ನಿರ್ದೇಶನ ಮಾಡಿದ್ದಾರೆ. ಮನೋಜ್ ವಸಿಷ್ಠ ಹಿನ್ನೆಲೆ ಸಂಗೀತ, ಸಂಜೀವ ರೆಡ್ಡಿ ಸಂಕಲನ, ಬಿ ಆರ್ ವಿಶ್ವನಾಥ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಹಿರಿಯ ಕಲಾವಿದರಾದ ರಾಮಕೃಷ್ಣ, ವರ್ಷಿತಾ, ದೀಪಾ ಕೆಎನ್ ಮುಂತಾದವರು ನಟಿಸಿದ್ದಾರೆ.
#
No Comment! Be the first one.