ಡಾ. ಡಿ.ಎಸ್ ಮಂಜುನಾಥ್ ನಿರ್ಮಾಣದ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಯಶಸ್ವಿಯಾಗಿ ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಈ ಮೂಲಕವೇ ಎಂಥಾ ದೊಡ್ಡ ಚಿತ್ರಗಳು ಬಂದರೂ, ಅದೆಂಥಾ ಅಡೆತಡೆಗಳು ಎದುರಾದರೂ ಪ್ರಯೋಗಾತ್ಮಕ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಕೈ ಬಿಡೋದಿಲ್ಲವೆಂಬ ವಿಚಾರ ಮತ್ತೊಮ್ಮೆ ಸಾಬೀತಾಗಿದೆ. ಮಧ್ಯಮ ವರ್ಗದ ಫ್ಯಾಮಿಲಿ, ತಂದೆ, ಮಗ ಮತ್ತು ಸೊಸೆಯ ಸುತ್ತಾ ನಡೆಯೋ ಫ್ಯಾಮಿಲಿ ಡ್ರಾಮ ಈ ಚಿತ್ರದ್ದು. ಇದು ಮಂಡ್ಯ ಭಾಗದಲ್ಲಿ ವರ್ಷಾಂತರಗಳ ಹಿಂದೆ ನಡೆದಿದ್ದೊಂದು ಘಟನೆಯಿಂದ ಸ್ಫೂರ್ತಿ ಪಡೆದಿರೋ ಚಿತ್ರ. ಒಂದು ಭಿನ್ನ ಬಗೆಯ ಚಿತ್ರ ನಿರ್ದೇಶನದ ತುಡಿತ ಹೊಂದಿದ್ದ ಕುಮಾರ್ ಅದಕ್ಕೆ ಮಾಂತ್ರಿ ಸ್ಪರ್ಶ ನೀಡಿದ್ದಾರೆ. ವಿಭಿನ್ನವಾಗಿಯೇ ದೃಷ್ಯ ಕಟ್ಟಿದ್ದಾರೆ. ಎಲ್ಲಿಯೂ ಕೃತಕ ಅನ್ನಿಸದಂತೆ ಅತ್ಯಂತ ಸಹಜವಾಗಿಯೇ ಈ ಚಿತ್ರವನ್ನವರು ರೂಪಿಸಿದ್ದಾರೆ. ಘನ ಗಂಭೀರವಾದ ವಿಚಾರವೊಂದನ ನು ಹೀಗೆ ಹಾಸ್ಯದ ಮೂಲಕವೇ ಅನಾವರಣಗೊಳಿಸಿದ ಸೊಬಗಿಗೆ ಪ್ರೇಕ್ಷಕರು ಮನಸೋತಿದ್ದಾರೆ.
ಈ ಕಾರಣದಿಂದಲೇ ಕರಿಯಪ್ಪನ ಕೆಮಿಸ್ಟ್ರಿಯ ಬಗ್ಗೆ ಬಾಯಿಂದ ಬಾಯಿಗೆ ಹರಡಿಕೊಂಡ ಒಳ್ಳೆ ಮಾತುಗಳೇ ಈ ಸಿನಿಮಾವನ್ನು ಗೆಲುವಿನ ದಡದತ್ತ ಸಾಗಿಸುತ್ತಿದೆ. ಬಿಡುಗಡೆಗೂ ಮುಂಚೆಯೇ ಕೆರಳಿಕೊಂಡಿದ್ದ ನಿರೀಕ್ಷೆಯನ್ನು ಕರಿಯಪ್ಪ ತೃಪ್ತಗೊಳಿಸಿದ್ದ. ಅಪ್ಪ ಮಗ ಮತ್ತು ಸೊಸೆಯ ಸುತ್ತಾ ನಡೆಯೋ ಸೊಗಸಾದ ಕಥೆ ಹೊಂದಿರೋ ಈ ಸಿನಿಮಾ ಭರ್ಜರಿ ಫ್ಯಾಮಿಲಿ ಎಂಟರ್ ಟೈನರ್ ಆಗಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಮಲ್ಟಿಫ್ಲೆಕ್ಸ್ ಗಳಲ್ಲಿಯಂತೂ ಈ ಚಿತ್ರ ಸಾರ್ವಕಾಲಿಕ ದಾಖಲೆಯೊಂದಿಗೆ ಮುಂದುವರೆಯುತ್ತಿರೋದು ಸುಳ್ಳಲ್ಲ.
ಇಂಥಾದ್ದೊಂದು ಯಶಸ್ಸಿಗೆ ಕಾರಣವಾಗಿರೋದು ನಿರ್ದೇಶಕ ಕುಮಾರ್ ಅವರ ಕನಸುಗಾರಿಕೆ ಮತ್ತು ನಿರ್ಮಾಪಕ ಮಂಜುನಾಥ್ ಅವರ ಸಿನಿಮಾ ಪ್ರೀತಿ. ಒಂದಿಡೀ ಚಿತ್ರವನ್ನು ಅಚ್ಚರಿದಾಯಕವಾಗಿ ನಿರ್ಮಾಣ ಮಾಡಿರೋ ಮಂಜುನಾಥ್ ಅವರ ಪಾಲಿಗೆ ಸಿನಿಮಾ ಪ್ಯಾಷನ್. ಮಾಡಿದರೆ ಎಲ್ಲ ವರ್ಗದ ಪ್ರೇಕ್ಷಕರೂ ಖುಷಿಗೊಳ್ಳುವಂಥಾ ಚಿತ್ರವನ್ನೇ ಮಾಡಬೇಕೆಂಬ ಆಸೆ ಹೊಂದಿರೋ ಅವರು ಈ ಚಿತ್ರದಲ್ಲೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ. ಅದು ಪ್ರೇಕ್ಷಕರಿಗೂ ಇಷ್ಟವಾಗಿದೆ. ಇಂಥಾ ಅಂಶಗಳಿಂದಲೇ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಪ್ರೇಕ್ಷಕರಿಗೆ ಆಪ್ತವಾಗಿದೆ.