ರಾಜಕುಮಾರ್, ಕಲ್ಯಾಣ್ಕುಮಾರ್ ಮತ್ತು ಉದಯಕುಮಾರ್ ಕನ್ನಡ ಚಿತ್ರರಂಗದ ಕುಮಾರತ್ರಯರು. ನಟ ಉದಯ ಕುಮಾರ್ ಈಗ ನಮ್ಮೊಂದಿಗಿದ್ದಿದ್ದರೆ ಅವರು ತಮ್ಮ 86ನೇ ಜನ್ಮದಿನ (ಮಾರ್ಚ್ 5) ಆಚರಿಸಿಕೊಳ್ಳುತ್ತಿದ್ದರು. ಕನ್ನಡದ ಮೇರು ನಟನ ಸಿನಿಮಾ – ಸಾಧನೆ ಸ್ಮರಿಸುವ ಸಂದಭವಿದು
“ಅರವತ್ತರ ದಶಕದಲ್ಲಿ ಧೀರೋದತ್ತ ಪಾತ್ರಗಳೆಂದರೆ ನಿರ್ದೇಶಕರಿಗೆ ನೆನಪಾಗುತ್ತಿದ್ದ ನಾಯಕನಟ ಉದಯ ಕುಮಾರ್. ಪಾತ್ರದ ರೂಪುರೇಷೆ ಅರಿತುಕೊಳ್ಳುತ್ತಿದ್ದ ನಟ ಅದನ್ನು ತಮ್ಮದೇ ಆದ ಛಾಯೆಯಲ್ಲಿ ನಿರ್ವಹಿಸುತ್ತಿದ್ದರು. ತಮ್ಮನ್ನು ತಾವು ಯಾವುದೇ ಆಕಾರ, ಅಚ್ಚುಕಟ್ಟುತನಕ್ಕೆ ಒಳಪಡಿಸಿಕೊಳ್ಳದ ಅವರಿಗೆ ಪಾತ್ರವಷ್ಟೇ ಕಣ್ಣು ಮುಂದಿರುತ್ತಿದ್ದುದು. ಇದರಿಂದ ಕನ್ನಡ ಚಿತ್ರರಂಗಕ್ಕೆ ಉತ್ತಮ ನಾಯಕ ನಟನಷ್ಟೇ ಅಲ್ಲ ಖಳ, ಪೋಷಕ ಪಾತಧಾರಿಯೂ ಸಿಕ್ಕಂತಾಯಿತು” ಎಂದು ಕನ್ನಡದ ಹಿರಿಯ ಚಿತ್ರ ನಿರ್ದೇಶಕರು ಅಭಿಪ್ರಾಯಪಡುತ್ತಾರೆ.
ಆನೇಕಲ್ನ ಸಂಪ್ರದಾಯಸ್ಥ ಕುಟುಂಬದ ಉದಯಕುಮಾರ್ ನಟರಾಗಿz ಆಕಸ್ಮಿಕ. ಹರೆಯದಲ್ಲಿ ಗುಬ್ಬಿ ವೀರಣ್ಣನವರ ಕಂಪನಿ ನಾಟಕಗಳಲ್ಲಿ ನಟಿಸುತ್ತಿದ್ದ ಅವರನ್ನು ಮೊದಲು ಗುರುತಿಸಿದ್ದು ಚಿತ್ರಸಾಹಿತಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳು. “ಸುರದ್ರೂಪಿಯಾದ ನಿನಗೆ ಒಳ್ಳೆಯ ಕಂಠ, ಗಾತ್ರವಿದೆ. ಚೆನ್ನಾಗಿ ಹಾಡ್ತೀಯ. ಸಿನಿಮಾದಲ್ಲಿ ಪಾತ್ರ ಮಾಡು” ಎಂದು ಉದಯ ಕುಮಾರ್ರಲ್ಲಿ ಸಿನಿಮಾ ಕನಸು ಬಿತ್ತಿದ್ದರು ಪ್ರಭಾಕರ ಶಾಸ್ತ್ರಿ. ಹೀಗೆ, ‘ಭಾಗ್ಯೋದಯ’ (೧೯೫೬) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಉದಯಕುಮಾರ್ ಪ್ರಮುಖ ನಾಯಕನಟರ ಸಾಲಿಗೆ ಸೇರ್ಪಡೆಗೊಂಡರು. ನಂತರದ ದಿನಗಳಲ್ಲಿ ತೆರೆಕಂಡ ‘ವರದಕ್ಷಿಣೆ’, ‘ಪಂಚರತ್ನ’ ಚಿತ್ರಗಳು ಅವರಿಗೆ ಹೆಸರು ತಂದುಕೊಟ್ಟವು.
ಉದಯಕುಮಾರ್ ಸಿನಿಮಾ ಬದುಕಿನ ಮತ್ತೊಂದು ಮಹತ್ವದ ಮೈಲುಗಲ್ಲು ‘ಮಹಿಷಾಸುರ ಮರ್ಧಿನಿ’. ಡಾ.ರಾಜಕುಮಾರ್ ಜೊತೆಗಿನ ಚಿತ್ರ ಅವರಲ್ಲಿನ ಕಲಾವಿದನಿಗೆ ದೊಡ್ಡ ವೇದಿಕೆಯಾಯ್ತು. ಮುಂದೆ ಡಾ.ರಾಜ್ ಮತ್ತು ಉದಯಕುಮಾರ್ ಜೋಡಿಯ ಚಿತ್ರಗಳು ಪ್ರೇಕ್ಷಕರಲ್ಲಿಸಂಚಲನ ಉಂಟುಮಾಡಿದವು. ತಂದೆ, ಮಗ, ಸ್ನೇಹಿತ, ಅಳಿಯ, ಶತ್ರು, ಸಹೋದರ… ಹೀಗೆ ಒಟ್ಟು ಮೂವತ್ತಾರು ಚಿತ್ರಗಳಲ್ಲಿ ಡಾ.ರಾಜ್ ಜೊತೆ ಉದಯ ಕುಮಾರ್ ನಟಿಸಿದರು. ಕಾಲಘಟ್ಟವೊಂದರ ಸಾಮಾನಾಂತರ ನಾಯಕನಟರು ಅತಿ ಹೆಚ್ಚು ಬಾರಿ ಒಟ್ಟಾಗಿ ನಟಿಸಿದ ಈ ದಾಖಲೆ ಭಾರತೀಯ ಚಿತ್ರರಂಗದ ಸಂದರ್ಭದಲ್ಲೇ ಅಪರೂಪದ್ದು!
ಅಂದಿನ ಮತ್ತೊಬ್ಬ ಪ್ರಮುಖ ನಾಯಕನಟ ಕಲ್ಯಾಣಕುಮಾರ್ ಜತೆ ಉದಯಕುಮಾರ್ ನಟಿಸಿದ ಮೊದಲ ಚಿತ್ರ ‘ಬೆಟ್ಟದ ಕಳ್ಳ’. ಆಗ ವರ್ಷವೊಂದಕ್ಕೆ ತಯಾರಾಗುತ್ತಿದ್ದ ಇಪ್ಪತ್ತರಿಂದ ಮೂವತ್ತು ಚಿತ್ರಗಳ ಪೈಕಿ ಮೂರ್ನಾಲ್ಕು ಚಿತ್ರಗಳಲ್ಲಿ ಉದಯಕುಮಾರ್ ಅಭಿನಯಿಸುತ್ತಿದ್ದರು. ಅರವತ್ತರ ದಶಕದ ಆರಂಭದಲ್ಲಿ ತಮಿಳು ಚಿತ್ರರಂಗದತ್ತ ಹೊರಳಿದ ಅವರಿಗೆ ಅಲ್ಲಿಯೂ ಒಳ್ಳೆಯ ಚಿತ್ರಗಳು ಒದಗಿಬಂದವು. ಅಭಿಮಾನಿಗಳ ಅಪೇಕ್ಷೆಯ ಮೇರೆಗೆ ಮತ್ತೆ ಕನ್ನಡಕ್ಕೆ ಮರಳಿದ ನಟ ಭಿನ್ನ ಪಾತ್ರಗಳ ಆನ್ವೇಷಣೆಯಲ್ಲಿದ್ದರು. ಈ ಅವಧಿಯಲ್ಲಿ ತಯಾರಾದ ಐತಿಹಾಸಿಕ, ಪೌರಾಣಿಕ ಚಿತ್ರಗಳು ಅವರಲ್ಲಿನ ಕಲಾವಿದನಿಗೆ ಮೆರುಗು ಕೊಟ್ಟವು. ಉದಯಕುಮಾರ್ ತಮ್ಮ ವಿಶಿಷ್ಟ ನಿಲುವು, ಕಂಚಿನ ಕಂಠದೊಂದಿಗೆ ಈ ಪಾತ್ರಗಳಿಗೆ ಜೀವ ತುಂಬಿದರು.
ಎಪ್ಪತ್ತರ ದಶಕದ ಮಧ್ಯದಲ್ಲಿ ಅವರು ಮತ್ತೆ ರಂಗಭೂಮಿಯತ್ತ ಹೊರಳಿದರು. ಆಗ ಅವರ ನೇತೃತ್ವದಲ್ಲಿ ತಯಾರಾದ ‘ಉದಯ ಕಲಾನಿಕೇತನ’. ಈ ವೇದಿಕೆಯಡಿ ಕನ್ನಡ ಚಿತ್ರರಂಗದ ಕಲಾವಿದರು ಒಟ್ಟಗೂಡಿ ನಾಟಕಗಳನ್ನು ಪ್ರದರ್ಶಿಸಿದರು. ಮತ್ತೊಂದೆಡೆ ಈ ಸಂಸ್ಥೆ ಮೂಲಕ ಯುವ ಪ್ರತಿಭಾವಂತ ಕಲಾವಿದರನ್ನು ಬೆಳಕಿಗೆ ತರುವ ಇಂಗಿತವೂ ಉದಯಕುಮಾರ್ ಅವರದಾಗಿತ್ತು. ಸಿನಿಮಾ ಮತ್ತು ನಾಟಕಗಳ ಅಭಿನಯದ ಜತೆಗೆ ತಮಗೆ ಆಸಕ್ತಿಯಿದ್ದ ಸಂಗೀತದಲ್ಲಿಯೂ ಅವರು ಕೆಲಸ ಮಾಡಿದರು. ಈ ಅವಧಿಯಲ್ಲಿ ಅವರಿಂದ ಹಲವಾರು ಸಂಗೀತ ಕೃತಿಗಳು ರಚನೆಯಾದವು.
ಮೂರು ದಶಕಗಳ ಉದಯಕುಮಾರ್ ಕ್ರಿಯಾಶೀಲ ಜೀವನದಲ್ಲಿ ಶ್ರೇಷ್ಟ ಸಿನಿಮಾಗಳು ತಯಾರಾದವು. ವೀರಕೇಸರಿ, ಕಠಾರಿವೀರ, ಚಂದವಳ್ಳಿಯ ತೋಟ, ಭಲೇ ಬಸವ, ಭಲೇ ಭಾಸ್ಕರ, ರಾಮಾಂಜನೇಯ ಯುದ್ಧ, ಹೇಮಾವತಿ.. ಸೇರಿದಂತೆ ಕನ್ನಡ ಚಿತ್ರರಂಗವನ್ನು ಬೆಳಗಿಸಿದ ಹಲವು ಪ್ರಯೋಗಗಳಲ್ಲಿ ಉದಯಕುಮಾರ್ ಛಾಪು ಇದೆ. ಕನ್ನಡ ಚಿತ್ರರಂಗ ಅರವತ್ತರ ದಶಕದಲ್ಲಿ ತನ್ನದೇ ಆದ ನೆಲೆ ಕಂಡುಕೊಳ್ಳುವ ಪ್ರಯತ್ನದಲ್ಲಿತ್ತು. ಆಗ ನಿರ್ಮಾಣವಾಗಬಹುದಾಗಿದ್ದ ನಿರ್ವಾತವನ್ನು ಸರಿದೂಗಿಸುವ ಹಾದಿಯಲ್ಲಿ ಉದಯ ಕುಮಾರ್ ಅವರದ್ದು ಮಹತ್ವದ ಕೊಡುಗೆ. ಕುಮಾರತ್ರಯರಲ್ಲೊಬ್ಬರಾಗಿ ಬೆಳಗಿದ ಅವರು ಸದಾ ಕಾಲಕ್ಕೂ ಕನ್ನಡಿಗರ ಮನಸ್ಸಿನಲ್ಲುಳಿಯುವ ಹೀರೋ.
—————————–
ಉದಯಕುಮಾರ್
* ಸೂರ್ಯನಾರಾಯಣ ಮೂರ್ತಿ ಅವರನ್ನು ‘ಉದಯ ಕುಮಾರ್’ ಎಂದು ಕರೆದದ್ದು ಚಿತ್ರಸಾಹಿತಿ ಹುಣಸೂರು ಕೃಷ್ಣಮೂರ್ತಿ. ಉದಯ ಕುಮಾರ್ ಅಭಿನಯದ ಚೊಚ್ಚಲ ಸಿನಿಮಾ “ಭಾಗ್ಯೋದಯ’ ನಿರ್ಮಿಸಿದ ‘ಉದಯ ಪ್ರೊಡPನ್’ ಇದಕ್ಕೆ ಸೂರ್ತಿ ಎನ್ನುವುದು ವಿಶೇಷ.
* ಅಭಿನಯಿಸಿದ ಒಟ್ಟು ಚಿತ್ರಗಳು ೧೯೪. ಈ ಪಟ್ಟಿಯಲ್ಲಿ ೧೫ ತೆಲುಗು, ೮ ತಮಿಳು ಮತ್ತು ೧ ಹಿಂದಿ ಚಿತ್ರ ಸೇರಿದೆ.
* ಅರವತ್ತರ ದಶಕದಲ್ಲಿ ತೆರೆಕಂಡ ಎಂಟು ತಮಿಳು ಚಿತ್ರಗಳ ಹೀರೋ. ತಮಿಳಿನ ಪ್ರತಿಷ್ಠಿತ ದೇವರ್ ಚಿತ್ರನಿರ್ಮಾಣ ಸಂಸ್ಥೆಯಡಿ ೩ ವರ್ಷ ಕಾಂಟ್ರಾಕ್ಟ್ನಲ್ಲಿದ್ದರು.
* ಡಾ.ರಾಜಕುಮಾರ್ ಅವರೊಂದಿಗೆ ೩೬ ಚಿತ್ರಗಳು ಮತ್ತು ಕಲ್ಯಾಣ್ ಕುಮಾರ್ ಜತೆ ೧೨ ಚಿತ್ರಗಳಲ್ಲಿ ನಟಿಸಿದ್ದಾರೆ. ಕುಮಾರತ್ರಯರು ಒಟ್ಟಾಗಿ ನಟಿಸಿದ ಏಕೈಕ ಸಿನಿಮಾ ‘ಭೂದಾನ’
* ಸಾಹಿತ್ಯ, ನಾಟಕ, ಸಂಗೀತ ಪ್ರಕಾರಗಳಲ್ಲೂ ಅವರಿಗೆ ಅಪಾರ ಪರಿಣತಿಯಿತ್ತು. ಹತ್ತಾರು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ.
* ‘ಮಹಾಸುದಿನ’, ‘ಚಾಮುಂಡೇಶ್ವರಿ ಮಹಿಮೆ’, ‘ರೇಣುಕಾದೇವಿ ಮಹಾತ್ಮೆ’ ಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ಬರೆದಿದ್ದ ಉದಯಕುಮಾರ್ ‘ದೀನಬಂಧು’ ಚಿತ್ರದೊಂದಿಗೆ ನಿರ್ದೇಶಕರಾಗಬೇಕಿತ್ತು. ಆರ್ಥಿಕ ಮುಗ್ಗಟ್ಟಿನಿಂದಾಗಿ ಚಿತ್ರ ಪೂರ್ಣವಾಗಲಿಲ್ಲ.
* ಇಹಲೋಕ ತ್ಯಜಿಸಿದಾಗ ಉದಯಕುಮಾರ್ ಅವರಿಗೆ ೫೨ ವರ್ಷವಷ್ಟೆ. ಕೆ.ಎಸ್.ಎಲ್.ಸ್ವಾಮಿ ನಿರ್ದೇಶನದ ‘ಪಿತಾಮಹ’ ಅವರು ಅಭಿನಯಿಸಿದ ಕೊನೆಯ ಸಿನಿಮಾ.
————————
ಫೋಟೋಗಳು : ಭವಾನಿ ಲಕ್ಷ್ಮೀನಾರಾಯಣ
———-
ಫೋಟೋ ಕ್ಯಾಪ್ಶನ್
ಮದರಾಸಿನ ಗೋಲ್ಡನ್ ಸ್ಟುಡಿಯೋದಲ್ಲಿ ‘ವಾತ್ಸಲ್ಯ’ ಚಿತ್ರೀಕರಣ ಸಂದರ್ಭದಲ್ಲಿ ಡಾ.ರಾಜ್, ನಿರ್ದೇಶಕ ವೈ.ಆರ್.ಸ್ವಾಮಿ ಅವರೊಂದಿಗೆ ಉದಯಕುಮಾರ್.
———————————-
No Comment! Be the first one.