ಕಾಲು ಸೋತ ಕಲಾವಿದರನ್ನು ಕಸಕ್ಕಿಂತಲೂ ಕಡೆಯಾಗಿ ಕಾಣೋ ದುರ್ಬುದ್ಧಿ ಬಣ್ಣದ ಜಗತ್ತಿನ ಹಳೇ ಚಾಳಿ. ಇತ್ತ ಕಲಾವಿದರ ನೆರವಿಗೆಂದೇ ಸ್ಥಾಪನೆಯಾಗಿರೋ ಕಲಾವಿದರ ಸಂಘ ಅದೇನು ಕೆಲಸ ಮಾಡುತ್ತಿದೆಯೋ ಗೊತ್ತಿಲ್ಲ. ಬೆಂಗಳೂರಿನ ವಿಜಯ ನಗರದ ದಿಕ್ಕಿನಲ್ಲಿರುವ ಶೀಟು ಮನೆಯೊಂದರಲ್ಲಿ ಕಲೆಯನ್ನೇ ನೆಚ್ಚಿದ್ದ ಜೀವವೊಂದು ನರಳುತ್ತಿದೆ. ಸಾಕ್ಷಾತ್ತು ವಿಷ್ಣುವರ್ಧನ್ ಅವರೊಂದಿಗೇ ತೆರೆ ಹಂಚಿಕೊಂಡು, ಎಂಭತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಈ ಕಲಾವಿದನ ಪುಟ್ಟ ಮನೆಯತ್ತ ಚಿತ್ರರಂಗದ ನೆರಳೂ ಸುಳಿದಿಲ್ಲ!
ಅವರು ನಟರಾಜ್. ಈ ಫೋಟೋ ನೋಡಿದರೇನೇ ಅವರು ನಿರ್ವಹಿಸಿರೋ ಒಂದಷ್ಟು ಪಾತ್ರಗಳಾದರೂ ನೆನಪಾದಾವು. ಇಂಥಾ ಕಲಾವಿದ ಈವತ್ತಿಗೆ ಗೂಡಿನಂಥಾ ಮನೆಯೊಂದರಲ್ಲಿ ಅಕ್ಷರಶಃ ಹಾಸಿಗೆ ಹಿಡಿದು ಮಲಗಿದ್ದಾರೆ. ಅವರಿಗೆ ಈಗ್ಗೆ ಐದು ತಿಂಗಳ ಹಿಂದೆ ಸ್ಟ್ರೋಕ್ ಆಗಿತ್ತು. ಸಾಲ ಸೋಲ ಮಾಡಿ ಹೇಗೋ ಜೀವಾಪಾಯದಿಂದ ಬಚಾವಾಗಿ ಮನೆಗೆ ಮರಳಿದ್ದರೂ ಅವರಿಗೀಗ ಯಾವ ಆಸರೆಯೂ ಇಲ್ಲ. ಸರಿಸುಮಾರು ಆರೇಳು ತಿಂಗಳಿಂದ ಅವರು ಕೆಲಸ ಮಾಡಿಲ್ಲ. ಅತ್ತ ಡಿಗ್ರಿ ಓದುತ್ತಿರೋ ಮಗಳ ಖರ್ಚುವೆಚ್ಚ ನೋಡಿಕೊಳ್ಳಲೂ ಆಗುತ್ತಿಲ್ಲ… ದಿನನಿತ್ಯ ಕಾಯಿಲೆ ಬಿದ್ದಿದ್ದಾರೆಂದು ಗೊತ್ತಿದ್ದರೂ ಮನೆಮುಂದೆ ನಿಂತು ಕಿರಿಕ್ಕು ಮಾಡೋ ನಿರ್ದಯಿ ಸಾಲಗಾರರ ಬಾಧೆಯೂ ಸೇರಿಕೊಂಡು ನಟರಾಜ್ ಕಂಗಾಲಾಗಿದ್ದಾರೆ.
ನಟರಾಜ್ ಮಧುಗಿರಿ ಮೂಲದವರು. ಸಾಹಸ ಸಿಂಹ ವಿಷ್ಣುವರ್ಧನ್ ನಟಿಸಿದ್ದ ಬಂಗಾರದ ಜಿಂಕೆ ಚಿತ್ರೀಕರಣ ನೋಡೋ ಮೂಲಕವೇ ಕಲಾವಿದನಾಗೋ ಕನಸು ಕಂಡವರು. ನಂತರ ೧೯೮೫ರಲ್ಲಿ ವಿಷ್ಣು ನಾಯಕರಾಗಿದ್ದ ನನ್ನ ಪ್ರತಿಜ್ಞೆ ಎಂಬ ಸಿನಿಮಾ ಮೂಲಕ ಬಣ್ಣ ಹಚ್ಚಿದ್ದ ನಟರಾಜ್ ಆ ಬಳಿಕ ಐದಾರು ವರ್ಷ ಬಹಳಷ್ಟು ಕಷ್ಟಪಟ್ಟಿದ್ದರು. ಬಳಿಕ ಇದನ್ನೇ ನಂಬಿಕೊಂಡರೆ ಆಗೋದಿಲ್ಲ ಅಂದುಕೊಂಡು ಡೇವಿಡ್ ಎಂಬವರ ಜೊತೆ ಸೇರಿ ಮದ್ರಾಸಿಗೆ ಹೋಗಿ ಅಲ್ಲಿಯೂ ನಾನಾ ಕೆಲಸ ಮಾಡುತ್ತಾ ಬದುಕಲೋಸ್ಕರ ಕಷ್ಟ ಪಟ್ಟಿದ್ದರು. ಮತ್ತೆ ವಾಪಾಸಾಗಿ ಬೆಂಗಳೂರಿನಲ್ಲಿಯೇ ಖಾಸಗಿ ಸಂಸ್ಥೆಯೊಂದರಲ್ಲಿ ಆಫೀಸ್ ಬಾಯ್ ಆಗಿಯೂ ಕೆಲಸಕ್ಕೆ ಸೇರಿಕೊಂಡಿದ್ದರು. ಮದುವೆಯಾದ ನಂತರದಲ್ಲಿ ವಿಷ್ಣು ಅಭಿನಯದ ಏಕದಂತ ಚಿತ್ರವೂ ಸೇರಿದಂತೆ ಒಂದಷ್ಟು ಅವಕಾಶಗಳು ಬರಲಾರಂಭಿಸಿದ್ದವು. ಶಿವಣ್ಣನ ಸಂತ ಚಿತ್ರದಲ್ಲಿ ಮುಖ್ಯ ವಿಲನ್ ಆಗಿಯೂ ನಟರಾಜ್ ಅಬ್ಬರಿಸಿದ್ದರು. ಆ ನಂತರ ಅವರ ನಟನಾ ಲಿಸ್ಟಿಗೆ ಎಂಭತ್ತಕ್ಕೂ ಹೆಚ್ಚು ಸಿನಿಮಾಗಳು ಸೇರಿಕೊಂಡಿದ್ದವು.
ಆದರೆ ಅದ್ಯಾವ ಅವಕಾಶ ಬಂದರೂ ಕೂಡಾ ಇಂತಿಷ್ಟೇ ಸಂಭಾವನೆ ಬೇಕು ಅಂತ ನಟರಾಜ್ ಪಟ್ಟು ಹಿಡಿದವರಲ್ಲ. ಕೊಟ್ಟಷ್ಟನ್ನು ಇಸಿದುಕೊಂಡು ಸ್ವಾಭಿಮಾನದಿಂದ ಬದುಕುತ್ತಾ, ಖಾಸಗಿ ಟ್ರಾವೆಲ್ಸ್ ಸಂಸ್ಥೆಯ ಕೆಲಸವನ್ನೂ ಮುಂದುವರೆಸಿಕೊಂಡು ಬದುಕುತ್ತಿದ್ದ ನಟರಾಜ್ಗೆ ನಿಧಾನಕ್ಕೆ ಅನಾರೋಗ್ಯ ಉಲ್ಭಣಿಸಲಾರಂಭಿಸಿತ್ತು. ಈಗ್ಗೆ ಐದು ತಿಂಗಳ ಹಿಂದೆ ಸ್ಟ್ರೋಕ್ ಕೂಡಾ ಆಗಿತ್ತು. ಅದರ ತೀವ್ರತೆ ಎಷ್ಟಿತ್ತೆಂದರೆ ನಟರಾಜ್ ಹದಿನೈದು ದಿನ ಕೋಮಾದಲ್ಲಿದ್ದರು. ಹೇಗೋ ಪವಾಡ ಸದೃಶವಾಗಿ ಬದುಕುಳಿದ ಅವರು ತಿಂಗಳುಗಟ್ಟಲೆ ಆಸ್ಪತ್ರೆಯಲ್ಲಿಯೇ ಕಳೆದಿದ್ದಾರೆ. ಅವರ ಪತ್ನಿ ಇದ್ದ ಚೂರು ಪಾರು ಒಡವೆ ಮಾರಿ ಹೇಗೋ ಸಂಭಾಳಿಸಿದ್ದಾರೆ. ಆಸ್ಪತ್ರೆಡ ಬಿಲ್ಲು ಎಂಟು ಲಕ್ಷವಾಗಿತ್ತು. ಅದನ್ನೂ ನಟರಾಜ್ ಸಾಲಸೋಲ ಮಾಡಿ ಕಟ್ಟಿದ್ದಾರೆ.
ಡಾ ಸತೀಶ್ ಎಂಬವರರು ನಟರಾಜ್ ಅವರಿಗೀಗ ಚಿಕಿತ್ಸೆ ಕೊಡುತ್ತಿದ್ದಾರೆ. ಸದ್ಯ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿರೋ ನಟರಾಜ್ ಪಾಲಿಗೆ ಯಾವ ಆಸರೆಯೂ ಇಲ್ಲ. ಮಡದಿ ಗೃಹಿಣಿ. ಮಗಳೀಗ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಏನೆಂದರೆ ಏನನ್ನೂ ಸಂಭಾಳಿಸಲಾಗದ ಸ್ಥಿತಿ ನಟರಾಜ್ ಅವರದ್ದು. ಅವರ ಪಾಲಿಗೆ ಆಸರೆ ಅಂತಿರೋದು ಕಡಿಮೆ ಮೊತ್ತಕ್ಕೆ ಭೋಗ್ಯಕ್ಕಿರೋ ಸಣ್ಣ ಮನೆ ಮಾತ್ರ. ಈವರೆಗೂ ಅವರು ಕೆಲಸ ಮಾಡುತ್ತಿದ್ದ ಟ್ರಾವೆಲ್ಸ್ ಹುಡುಗರೆಲ್ಲ ಎಂಭತ್ತು ಸಾವಿರದಷ್ಟನ್ನು ಕಲೆಕ್ಷನ್ ಮಾಡಿ ಕೊಟ್ಟಿದ್ದಾರೆ. ನಟರಾಜ್ ಪಾಲಿಗೆ ಸಿಕ್ಕ ಸಹಾಯ ಅದೊಂದೇ. ಆದರೆ ಚಿತ್ರರಂಗದ ಯಾರೊಬ್ಬರೂ ಈ ಕ್ಷಣದ ವರೆಗೂ ಅವರನ್ನು ನೋಡಿಕೊಂಡು ಹೋಗುವ, ಫೋನು ಮಾಡಿ ಮಾತಾಡಿಸುವ ಸೌಜನ್ಯವನ್ನೂ ತೋರಿಸಿಲ್ಲ.
ನಟರಾಜ್ ಸ್ವಾಭಿಮಾನಿ. ಯಾರೆದುರಿಗೂ ಕೈ ಚಾಚಿದವರಲ್ಲ. ಆದರೀಗ ಅವರು ಅನಾರೋಗ್ಯದ ಆಘಾತದಿಂದ ಕಂಗಾಲಾಗಿದ್ದಾರೆ. ಚಿತ್ರರಂಗದ ಮಂದಿ ಇನ್ನಾದರೂ ಅವರ ನೆರವಿಗೆ ಧಾವಿಸಬೇಕಿದೆ. ಅವರ ಆಸ್ಪತ್ರೆ ಖರ್ಚು ಮತ್ತು ಅಕೌಂಟ್ ನಂಬರನ್ನೂ ಇಲ್ಲಿ ದಾಖಲಿಸಿದ್ದೇವೆ. ಎಲ್ಲರೂ ಕೈಲಾದಷ್ಟು ನೆರವಾಗಲು ಪ್ರಯತ್ನಿಸಿ. ನೀವು ಕೊಡೋ ಪ್ರತೀ ರೂಪಾಯಿಯೂ ಈ ಹಿರಿಯ ಕಲಾವಿದನನ್ನು ಮಾನಸಿಕವಾಗಿ ಗಟ್ಟಿಯಾಗಿಸುತ್ತೆ.
Nataraj R
A/C no. 20057179163
IFSC: SBINO009047
#
No Comment! Be the first one.