ಹಿಂದಿ ಚಿತ್ರರಂಗ ಕಂಡ ಅತ್ಯಂತ ಸುಂದರಿ ನಟಿ ಮಧುಬಾಲಾ. ಅಭಿನಯಕ್ಕಿಂತ ತಮ್ಮ ಸೌಂದರ್ಯದಿಂದಲೇ ಅವರು ಚಿತ್ರರಸಿಕರನ್ನು ಆಕರ್ಷಿಸಿದ್ದರು. ಉತ್ತಮ ಟೈಮಿಂಗ್ ಹೊಂದಿದ್ದ ಆಕೆ ಕಾಮಿಡಿ ಸನ್ನಿವೇಶಗಳಲ್ಲಿ ಹೆಚ್ಚು ಪರಿಣಾಮಕಾರಿ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿತ್ತು. ಮಧುಬಾಲಾ ಹುಟ್ಟಿದ್ದು ೧೯೩೩, ಫೆಬ್ರವರಿ ೧೪ರಂದು. ಅವರ ಬಾಲ್ಯದ ಹೆಸರು ಮುಮ್ತಾಜ್ ಅತಾವುಲ್ಲಾ ಖಾನ್. ಮಧುಬಾಲಾ, ಅವರ ಬೆಳ್ಳಿತೆರೆ ಹೆಸರು.
ಫಠಾಣ್ ತಂದೆಯ ೧೧ ಮಕ್ಕಳಲ್ಲಿ ಮಧುಬಾಲಾ ಐದನೆಯವರು. ೧೯೪೨ರಲ್ಲಿ ‘ಬರ್ಸಾತ್’ ಚಿತ್ರದೊಂದಿಗೆ ಮಧುಬಾಲಾ ಬೆಳ್ಳಿತೆರೆಗೆ ಪರಿಚಯವಾದರು. ೧೬ರ ಹರೆಯದಲ್ಲಿ ಅವರು ನಟಿಸಿದ ‘ಮಹಲ್’ ಸಿನಿಮಾ ಸೂಪರ್ಹಿಟ್ ಎನಿಸಿಕೊಂಡಿತು. ಚಿತ್ರದಲ್ಲಿನ ‘ಆಯೇಗಾ ಆನೇವಾಲಾ’ ಗೀತೆ ‘ಮಧುಬಾಲಾ’ ಎನ್ನುವ ಸ್ಟಾರ್ ಉದಯಕ್ಕೆ ನಾಂದಿಯಾಗಿದ್ದು ಹೌದು.
ಸಿನಿಮಾಗಳ ಯಶಸ್ಸಿನಿಂದ ಮಧುಬಾಲಾ ವೈಯಕ್ತಿಕ ಬದುಕು ಕಮರಿದ್ದು ವಿಪರ್ಯಾಸ. ಆರಂಭದಲ್ಲಿ ಮಧುಬಾಲಾ ನಟ ಪ್ರೇಮ್ನಾಥ್ ಅವರನ್ನು ಪ್ರೀತಿಸಿದ್ದರು. ಈ ಸಂಬಂಧ ಹೆಚ್ಚು ದಿನ ಬಾಳಲಿಲ್ಲ. ನಂತರ ಆಕೆಯ ಜೀವನಕ್ಕೆ ನಟ ದಿಲೀಪ್ಕುಮಾರ್ ಬಂದರು. ಇಬ್ಬರು ಮೊದಲ ಬಾರಿ ಸಂಧಿಸಿದ್ದು ‘ಜ್ವರ್ ಭಟಾ’ (೧೯೪೪) ಚಿತ್ರೀಕರಣ ವೇಳೆ. ಆಗ ಮಧುಬಾಲಾ ೧೮ರ ಹರೆಯದವರಾದರೆ, ದಿಲೀಪ್ಗೆ ೨೯ ವರ್ಷ. ಮತ್ತೊಮ್ಮೆ ‘ತರಾನಾ’ (೧೯೫೧) ಚಿತ್ರದಲ್ಲಿ ಇಬ್ಬರೂ ಒಟ್ಟಿಗೇ ನಟಿಸಿದರು.
ದಿಲೀಪ್ ಕುಮಾರ್ ಅವರೆಡೆಗೆ ಮಧುಬಾಲಾಗೆ ಅತಿಯಾದ ಪ್ರೀತಿಯಿತ್ತು. ‘ಮೊಘಲ್ ಎ ಅಜಾಮ್’ ಚಿತ್ರೀಕರಣದ ವೇಳೆ ತಮ್ಮ ಪ್ರೀತಿಯನ್ನು ದಿಲೀಪ್ ಅವರಲ್ಲಿ ನಿವೇದಿಸಿಕೊಂಡಿದ್ದರು. ಆದರೆ ಮಧುಬಾಲಾ, ದಿಲೀಪ್ರನ್ನು ವಿವಾಹವಾಗುವುದು ಆಕೆಯ ಕುಟುಂಬದವರಿಗೆ ಇಷ್ಟವಿರಲಿಲ್ಲ. ಇದರಿಂದ ಇಬ್ಬರೂ ಬೇರ್ಪಡುವಂತಾಯಿತು. ಈ ಅವಧಿಯಲ್ಲಿ ಇಬ್ಬರೂ ನಟಿಸುತ್ತಿದ್ದ ಚಿತ್ರದ ಶೂಟಿಂಗ್ ಕೂಡ ಸ್ಥಗಿತಗೊಂಡಿತು.
ದಿಲೀಪ್ ಜೊತೆಗಿನ ಪ್ರೀತಿ ಮುರಿದುಬಿದ್ದ ನಂತರ ಮಧುಬಾಲಾ ಏಕಾಂಗಿಯಾದರು. ಇದೇ ಸಮಯದಲ್ಲಿ ಹಿಂದಿ ಚಿತ್ರರಂಗದ ಮೂವರು ಪ್ರಮುಖರು ಮಧುಬಾಲಾರನ್ನು ವಿವಾಹವಾಗುವ ಪ್ರಸ್ತಾಪ ಮಾಡಿದ್ದು ಸೋಜಿಗ. ನಟರಾದ ಕಿಶೋರ್ ಕುಮಾರ್, ಪ್ರದೀಪ್ ಕುಮಾರ್ ಮತ್ತು ಭರತ್ ಭೂಷಣ್ರಿಗೆ ಮಧುಬಾಲಾ ಅವರೆಡೆ ಮನಸ್ಸಿತ್ತು. ‘ಚಲ್ತೀ ಕಾ ನಾಮ್ ಗಾಡಿ’, ‘ಝುಮ್ರೂ’ ಚಿತ್ರೀಕರಣದ ವೇಳೆ ಮಧುಬಾಲಾ ನಟ ಕಿಶೋರ್ ಕುಮಾರ್ರನ್ನು ಭೇಟಿಯಾಗಿದ್ದರು. ವಿವಾಹಿತ ಕಿಶೋರ್ ಅವರನ್ನೇ ವರಿಸಲು ಆಕೆ ಸನ್ನದ್ಧರಾದರು. ೧೯೬೦ರಲ್ಲಿ ಕಿಶೋರ್ ಕುಮಾರ್ – ಮಧುಬಾಲಾ ವಿವಾಹ ನೆರವೇರಿತು.
ಮದುವೆ ನಂತರ ಮಧುಬಾಲಾ ಸಿನಿಮಾ ಜೀವನ ಒಮ್ಮೆಗೇ ಕಳೆಗುಂದಿತು. ಮೆಹಬೂಬ್ ಖಾನ್ರ ‘ಅಮರ್’ ಸೇರಿದಂತೆ ಅವರ ಎಲ್ಲಾ ಚಿತ್ರಗಳೂ ಬಾಕ್ಸ್ ಆಫೀಸ್ನಲ್ಲಿ ವಿಫಲವಾದವು. ವಿವಾದಗಳಿಂದಾಗಿ ಬಿ.ಆರ್.ಚೋಪ್ರಾರ ‘ನಯಾ ದೌರ್’ ಚಿತ್ರದ ಅವಕಾಶದಿಂದಲೂ ಆಕೆ ವಂಚಿತರಾದರು. ಇದೇ ವೇಳೆ ಮಧುಬಾಲಾರ ಆರೋಗ್ಯವೂ ಕೈಕೊಟ್ಟಿತು. ಆಕೆಯ ಹೃದಯದಲ್ಲಿ ರಂಧ್ರವಿದೆ ಎಂದು ವೈದ್ಯರು ಹೇಳಿದಾಗ, ಕುಟುಂಬದ ಎಲ್ಲರೂ ಧೃತಿಗೆಟ್ಟರು.
ಮಧುಬಾಲಾ ತಮಗೆ ಎದುರಾದ ಸಂಕಷ್ಟಗಳಿಂದ ಎದೆಗುಂದಲಿಲ್ಲ. ಆತ್ಮಸ್ಥೈರ್ಯದಿಂದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡರು. ಮಧುಬಾಲಾಗೆ ಅದೃಷ್ಟದ ದಿನಗಳು ಮರಳಿದವು. ಅವರು ನಟಿಸಿದ್ದ ‘ಫಗುನ್’, ‘ಹೌರಾ ಬ್ರಿಡ್ಜ್’, ‘ಚಲ್ತೀ ಕಾ ನಾಮ್ ಗಾಡಿ’, ‘ಕಾಲಾ ಪಾನಿ’, ‘ಬರ್ಸಾತ್ ಕಿ ರಾತ್’ ಯಶಸ್ಸು ಕಂಡವು. ದಿಲೀಪ್ ಜೊತೆಗೆ ಆಕೆ ನಟಿಸಿದ್ದ ‘ಮೊಘಲ್ ಎ ಅಜಾಮ್’ ಅವರ ಶ್ರೇಷ್ಠ ಚಿತ್ರವಾಗಿ ಹೊರಹೊಮ್ಮಿತು. ಕ್ರಿಯಾಶೀಲ, ಸುಂದರ ನಟಿಯ ಪ್ರತಿಭೆಗೆ ಸಾಕ್ಷಿಯಾದ ಪ್ರಯೋಗವಿದು. ಈ ವೇಳೆಗಾಗಲೇ ಅವರ ಆರೋಗ್ಯ ಹದಗೆಡತೊಡಗಿತ್ತು.
೧೯೫೦ರ ಅವಧಿಯಲ್ಲೇ ಮಧುಬಾಲಾರ ಹೃದಯದ ಸಮಸ್ಯೆ ಪತ್ತೆಯಾಗಿತ್ತು. ದುರಂತವೆಂದರೆ ಆಗ ಇದಕ್ಕೆ ಸೂಕ್ತ ಚಿಕಿತ್ಸೆಯೇ ಲಭ್ಯವಿರಲಿಲ್ಲ. ಆದ ಕಾರಣ ವರ್ಷಗಳ ಕಾಲ ಮಧುಬಾಲಾ ತಮ್ಮ ಆರೋಗ್ಯ ಸಮಸ್ಯೆಯನ್ನು ಗೋಪ್ಯವಾಗಿಟ್ಟಿದ್ದರು. ಚಿತ್ರೀಕರಣದ ವೇಳೆ ಅವರು ಬಳಲುತ್ತಿದ್ದುದರಿಂದ ವದಂತಿಗಳು ಹರಡುತ್ತಿದ್ದವು.
ಕೊನೆಗೊಮ್ಮೆ ಮಧುಬಾಲಾ ಹೃದಯ ಚಿಕಿತ್ಸೆಗೆಂದು ಲಂಡನ್ಗೆ ತೆರಳಿದರು. ಅಲ್ಲಿ ಕೂಡ ಆಕೆಗೆ ಚಿಕಿತ್ಸೆ ನಡೆಸಲು ವೈದ್ಯರು ಹಿಂದೇಟು ಹಾಕಿದರು. ಆಪರೇಷನ್ ವೇಳೆ ಆಕೆ ಸಾವನ್ನಪ್ಪುವ ಸಾಧ್ಯತೆಯಿದೆ ಎನ್ನುವುದು ಅವರ ದಿಗಿಲಾಗಿತ್ತು. ಒಂದೊಮ್ಮೆ ಆಪರೇಷನ್ ಯಶಸ್ವಿಯಾದರೂ ಮಧುಬಾಲಾ ವರ್ಷಕ್ಕಿಂತ ಹೆಚ್ಚು ಕಾಲ ಬದುಕಲಾರರು ಎಂದು ವೈದ್ಯರು ಹೇಳಿದ್ದರು. ಸತತ ಒಂಬತ್ತು ವರ್ಷಗಳ ನರಳಿಕೆಯ ನಂತರ ೧೯೬೯ರಲ್ಲಿ ಮಧುಬಾಲಾ ನಿಧನರಾದರು. ಅಲ್ಲಿಗೆ ‘ಸೌಂದರ್ಯ ದೇವತೆ’ ಎಂದು ಹಿಂದಿ ಚಿತ್ರರಂಗದಿಂದ ಕರೆಸಿಕೊಂಡ ನಟಿಯ ಯುಗ ಕೊನೆಗೊಂಡಿತು.
#
No Comment! Be the first one.