ಇಡೀ ದೇಶ ಆಚರಿಸುತ್ತಿರುವ 21 ದಿನಗಳ ಲಾಕ್ ಡೌನ್ ಅವಧಿ ಇನ್ನು ಒಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಕೊರೊನಾವೈರಸ್ ಹರಡುವಿಕೆಯನ್ನು ತಡೆಗಟ್ಟಲು ಪ್ರಪಂಚದ ಬಹುತೇಕ ದೇಶಗಳು ಇಂತಹ ಲಾಕ್ ಡೌನ್ ಗಳನ್ನು ನಾನಾ ಬಗೆಗಳಲ್ಲಿ ಜಾರಿಗೊಳಿಸಿ ಜನರ ನಡುವೆ ದೈಹಿಕ ಅಂತರ ಕಾಪಾಡುವ ಯತ್ನದಲ್ಲಿವೆ.‌ ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಈ ಲಾಕ್ ಡೌನ್ ಮುಗಿದ ಕೂಡಲೇ ಕೊರೊನಾ ವೈರಾಣು ನಾಶವಾಗುತ್ತದೆಯಾ? ಲಾಕ್ ಡೌನ್ ಮತ್ತೆ ವಿಸ್ತರಣೆ ಆಗುತ್ತದೆಯಾ? ಮುಂದೆ ಏನು ಕತೆ ಎಂಬಿತ್ಯಾದಿ ಪ್ರಶ್ನೆಗಳು ಈಗಾಗಲೇ ಅನೇಕರ ಮನಸಿನಲ್ಲಿ ಕಾಡುತ್ತಿವೆ. ಕೆಲವಾರು ಗೆಳೆಯರು ಈಗಾಗಲೇ ಈ ಕುರಿತು ತಮ್ಮ ಅಭಿಪ್ರಾಯ/ಅನಿಸಿಕೆಗಳನ್ನು ತಿಳಿಸಿದ್ದಾರೆ.‌

ಮೊದಲನೆಯದಾಗಿ ನಾವು ಅರ್ಥ ಮಾಡಿಕೊಳ್ಳಬೇಕಾದ ಒಂದು ಅಂಶವೇನೆಂದರೆ ವ್ಯಕ್ತಿಗಳ ನಡುವೆ ದೈಹಿಕ ಅಂತರ ಕಾಪಾಡಲು  ಲಾಕ್ ಡೌನ್ ನಂತಹ ಕ್ರಮ ಕೊರೊನಾದಿಂದ ಹರಡುವ ಸೋಂಕನ್ನು ತಡೆಯಲು ಇರುವ ಕ್ರಮಗಳಲ್ಲಿ ಒಂದು ಕ್ರಮ. ಕೇವಲ ದೈಹಿಕ ಅಂತರದ ಮೂಲಕ ಕೊರೊನೊ ವಿರುದ್ಧ ಗೆಲುವು ಸಾಧ್ಯವಾಗದು. ಆದರೆ ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ, ವ್ಯಕ್ತಿಗಳಿಂದ ಸಮುದಾಯಗಳಿಗೆ ಹರಡುವುದನ್ನು ನಿಧಾನಗೊಳಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಲಾಕ್ ಡೌನ್ ಸಹಕಾರಿಯಾಗಿದೆ. ಕೊರೊನಾ ವೈರಾಣು ಹರಡುವ ಕೋವಿಡ್ -19 ಖಾಯಿಲೆಯ ವಿರುದ್ಧ ಪ್ರಾಯೋಗಿಕವಾಗಿ ನಿರೂಪಿತವಾದ ಲಸಿಕೆ ತಯಾರಾಗಲು ಕನಿಷ್ಟ ಒಂದು ವರ್ಷ ಬೇಕಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಹೀಗಿರುವಾಗ ನಮಗೆ ಬೇರಾವ ಶಾರ್ಟ್ ಕಟ್ ಇಲ್ಲ.‌

ಈ ಕಾಯಿಲೆ ಚೀನಾದಿಂದಲೇ ಶುರುವಾಗಿದ್ದಾದರೂ ಇಂದು ಅಲ್ಲಿ ಇದರ ಹರಡುವಿಕೆಯನ್ನು ತಡೆಗಟ್ಟಲು ಬಹುಮಟ್ಟಿಗೆ ಸಾಧ್ಯವಾಗಿದೆ. ಹಾಗೆ ನೋಡಿದರೆ ಚೀನಾ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಿದ್ದು ವೈರಾಣು ಮೊದಲು ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದ ವುಹಾನ್ ನಗರವಿರುವ ಹುಬೇ ಪ್ರಾಂತ್ಯದಲ್ಲಿ ಮಾತ್ರ. ಇಲ್ಲಿ ಬಹಳ ಕಟ್ಟುನಿಟ್ಟಾಗಿ ದೈಹಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಅಲ್ಲಿನ ಸರ್ಕಾರ ಆಕ್ರಮಣಕಾರಿಯಾದ ಕ್ರಮಗಳನ್ನು ಕೈಗೊಂಡಿತು. ಆದರೆ ಕೇವಲ ಲಾಕ್ ಡೌನ್ ಒಂದನ್ನೇ ನಂಬಿಕೊಂಡಿದ್ದರೆ ರೋಗವನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಜಾರಿಗೊಳಿಸುವ ಜೊತೆಗೆ ಚೀನಾ ಪರಿಣಾಮಕಾರಿಯಾಗಿ ಮಾಡಿದ ಮತ್ತೊಂದು ಕೆಲಸ ಕೊರೊನಾ ಸೋಂಕಿತ ವ್ಯಕ್ತಿಗಳು ಸಂಪರ್ಕಿಸಿದ ಪ್ರತಿಯೊಬ್ಬ ವ್ಯಕ್ತಿಯ ಜಾಡು ಹಿಡಿದು, ಗುರುತಿಸಿ ಕಟ್ಟುನಿಟ್ಟಾಗಿ ಕ್ವಾರಂಟೈನ್ ನಲ್ಲಿ ಇರಿಸಿದ್ದು. (Contact tracing) ಇದರ ಜೊತೆಯಲ್ಲಿ ಭಾರತದಲ್ಲಿ ನಡೆಸಲಾಗುತ್ತಿರುವಂತೆ ಕೇವಲ ಕೆಮ್ಮು-ಜ್ವರ-ಉಸಿರಾಟದ ತೊಂದರೆ‌ ಮೂರೂ ಇರುವ ವ್ಯಕ್ತಿಗಳನ್ನು ಮಾತ್ರ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸದೇ ದೇಶದ ಪ್ರತಿ ಏರಿಯಾದ ಪ್ರತಿ ನಾಗರಿಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕೇವಲ ಜ್ವರ, ಕೇವಲ ಕೆಮ್ಮು, ಕೇವಲ ಉಸಿರಾಟದ ತೊಂದರೆ ಇರುವವರನ್ನೂ ತಪಾಸಣೆಗೆ ಒಳಪಡಿಸಲಾಗಿದೆ. ಇದಕ್ಕೆ ಪೂರಕವಾಗಿ ಅಲ್ಲಿನ ಸರ್ಕಾರ ಒಂದೇ ವಾರದಲ್ಲಿ 1000 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಜೊತೆಗೆ ಸಾವಿರಾರು ವೈದ್ಯಕೀಯ ಸಿಬ್ಬಂದಿಗೆ ತರಬೇತಿ ನೀಡಿ ಸಮರೋಪಾದಿಯಲ್ಲಿ ಕೆಲಸಕ್ಕೆ ಇಳಿಸಿದ್ದು. ಕೊರೊನಾ ಪೀಡಿತರಲ್ಲಿ ಸಾವಿನ ಅನುಪಾತ ಬಹಳ ಕಡಿಮೆ ಇರುವ ಜರ್ಮನಿ ಸಹ ವಾರಕ್ಕೆ ಲಕ್ಷಗಟ್ಟಲೆ ಜನರನ್ನು ಕೊರೊನಾ ಪರೀಕ್ಷೆ ನಡೆಸುವ ಸುಸಜ್ಜಿತ ವ್ಯವಸ್ಥೆಯನ್ನು ಮಾಡಿಕೊಂಡಿದೆ.‌ ಆದರೆ ಭಾರತದಲ್ಲಿ ಲಾಕ್ ಡೌನ್ ಮೂಲಕ ದೈಹಿಕ ಅಂತರವನ್ನು ಕಾಪಾಡುವ ಕೆಲಸ ನಡೆಯುತ್ತಿದೆಯಾದರೂ ಉಳಿದ ತಯಾರಿಗಳು ಸಮರ್ಪಕವಾಗಿ ಇಲ್ಲದಿರುವುದು ನಾವು ಈ ಹೋರಾಟದಲ್ಲಿ ಗೆಲ್ಲಲು ಇರುವ ಕಷ್ಟವನ್ನು ತಿಳಿಸುತ್ತವೆ.

ಮುಖ್ಯವಾಗಿ ಕೊವಿಡ್ ಸೋಂಕಿತರ ಪ್ರಾಥಮಿಕ ಸಂಪರ್ಕಗಳನ್ನು ಪತ್ತೆಹಚ್ಚಲು ಪ್ರಯತ್ನಗಳಾಗಿವೆ. ಆದರೆ ಕೊವಿಡ್ ಸೋಂಕಿತರು ಮೂರ್ನಾಲ್ಕು ದಿನಗಳಲ್ಲಿ ಸಂಪರ್ಕಿಸಿರುವ ಜನರು ಮತ್ತೆಷ್ಟು ಜನರನ್ನು ಸಂಪರ್ಕಿಸಿರಬಹುದು ಎಂದು ಜಾಡುಹಿಡಿಯುವ ಕೆಲಸ ಎಷ್ಟರ ಮಟ್ಟಿಗೆ ಆಗಿದೆ, ಅಂತವರಲ್ಲಿ ಎಷ್ಟು ಜನರನ್ನು ಪ್ರತ್ಯೇಕಿಸಿ ಇಡಲಾಗಿದೆ ಎಂಬ ಅಂಕಿಅಂಶಗಳು ಲಭ್ಯವಾಗಿಲ್ಲ. ಅಂತಿಮವಾಗಿ ಈ ಕೆಲಸ ಎಷ್ಟು ಪರಿಣಾಮಕಾರಿ ರೀತಿಯಲ್ಲಿ ಆಗಿದೆ ಎಂಬುದರ ಮೇಲೆ ನಮ್ಮ ಮೊದಲ ಹಂತದ ಯಶಸ್ಸು  ನಿಂತಿರುತ್ತದೆ. ಆದರೆ ನಾವೆಂತಹ ಅನಿಶ್ಚಿತತೆಯಲ್ಲಿದ್ದೇವೆ ಎಂದರೆ ದೇಶದಲ್ಲಿ ಕಟ್ಟಕಡೆಯ ಕೊರೊನಾ ವೈರಸ್ ಸೋಂಕಿತನನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವವರೆಗೂ ಈ ಯುದ್ಧದಲ್ಲಿ ಗೆದ್ದೆವು ಎಂದು ಬೀಗಲಾಗದು. ದೇಶವ್ಯಾಪಿ ಲಾಕ್ ಡೌನ್ ಒಂದು ಹಂತದಲ್ಲಿ ಸ್ಥಗಿತಗೊಳಿಸಿದರೂ ಸೋಂಕಿತರ ಪ್ರಮಾಣ ನೋಡಿ ರಾಜ್ಯವಾರು, ಜಿಲ್ಲಾವಾರು ಕೆಲವೊಮ್ಮೆ ತಾಲ್ಲೂಕುವಾರು ಲಾಕ್ ಡೌನ್ ಗಳನ್ನು ಮುಂದುವರೆಸಿ ಗಡಿಗಳಲ್ಲಿ ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕಾಗುತ್ತದೆ. ಇದೊಂದು ಅನಿರ್ದಿಷ್ಟ ಕಾಲದ ಹರಸಾಹಸವೇ ಆಗಲಿದೆ. ಆದರೆ ವಿಧಿಯಿಲ್ಲ.

ಇನ್ನು ನಾವೊಂದು ವಿಶೇಷ ಪರಿಸ್ಥಿತಿಗೂ ಸಂಸಿದ್ಧತೆ ಮಾಡಿಕೊಳ್ಳುವುದು ಬಹಳ ಮುಖ್ಯ. ಅದೇನೆಂದರೆ ದುರದೃಷ್ಟವಶಾತ್ ಮುಂದಿನ ಒಂದೆರಡು ವಾರಗಳಲ್ಲಿ ಈ ಸೋಂಕು ಮೂರನೇ ಅಪಾಯಕಾರಿ ಹಂತವಾದ ಸಾಮುದಾಯಿಕ ಹರಡುವಿಕೆಯ (community transmission) ಹಂತ ತಲುಪಿದರೆ ಅದರಿಂದ ಸಂಭವಿಸಬಹುದಾದ ಜೀವಹಾನಿ ಮತ್ತು ಮುಂದಿನ ಅಪಾಯವನ್ನು ತಡೆಯಲು ನಮ್ಮ ತಯಾರಿ ಏನಿದೆ? ಈ ವಿಷಯದಲ್ಲಿ ನಮ್ಮ ತಯಾರಿ ಅತ್ಯಂತ ಅಲ್ಪವಾದದ್ದು. ಈ ಹಂತದಲ್ಲಿ ಮುಖ್ಯವಾಗುವ ಸಂಗತಿಗಳೆಂದರೆ,

  1. ಸೂಕ್ತ ತರಬೇತಿ ಇರುವ ಸಾಕಷ್ಟು ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ
  2. ಅಗತ್ಯ ಪ್ರಮಾಣದ ಕೊವಿಡ್ -19 ಸೋಂಕು ಪರೀಕ್ಷೆಯ ಸಲಕರಣೆಗಳು.
  3. ಸೂಕ್ತ ಮೂಲಸೌಕರ್ಯ ಇರುವ ಆಸ್ಪತ್ರೆ ಕಟ್ಟಡಗಳು

ಈ ಮೂರೂ ವಿಷಯಗಳಲ್ಲಿ ಭಾರತ ಎಂತಹ ಹೀನಾಯ ಸ್ಥಿತಿಯಲ್ಲಿದೆ ಎಂಬುದು ಅರ್ಥವಾಗಬೇಕೆಂದರೆ 2017ರಲ್ಲಿ ದೇಶದ ಆರೋಗ್ಯ ಕ್ಷೇತ್ರದ ಸಮೀಕ್ಷೆ ನಡೆಸಿ ಸಲ್ಲಿಸಲಾದ CAG ವರದಿಯ ಅಂಶಗಳನ್ನು ಗಮನಿಸಬಹುದು. ದೇಶದ ಒಟ್ಟು ವೈದ್ಯ ಸಮೂಹದಲ್ಲಿ ಶೇಕಡಾ 81 ರಷ್ಟು ವೈದ್ಯರು ಇರುವುದು ಖಾಸಗಿ ಆಸ್ಪತ್ರೆಗಳಲ್ಲಿ, ದೇಶದ ಒಟ್ಟು ಆಸ್ಪತ್ರೆಗಳ ಪೈಕಿ ಶೇಕಡಾ 50 ಕ್ಕಿಂತ ಹೆಚ್ಚು ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಯ ಕೊರತೆ ಗಂಭೀರವಾಗಿದೆ. ತೀರಾ ಅವಶ್ಯಕವಾದ ಮಾತ್ರೆ, ಔಷಧಿಗಳಿಂದ ಹಿಡಿದು ಎಕ್ಸ್ ರೇ, ಇಸಿಜಿ ಮಾಡಲು ಸೂಕ್ತ ಮೂಲಸೌಕರ್ಯಗಳ ಕೊರತೆಯವರೆಗೆ ಸಮಸ್ಯೆ ಅಗಾಧವಾಗಿದೆ. ಒಂದು ಮಾನದಂಡದ ಪ್ರಕಾರ ಪ್ರತಿ 5000 ಜನರಿಗೆ ಒಂದು ಉಪ ಆರೋಗ್ಯ ಕೇಂದ್ರ, ಪ್ರತಿ 30,000 ಜನರಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ, ಪ್ರತಿ 1,20,000 ಜನರಿಗೆ ಒಂದು ಕಮ್ಯುನಿಟಿ ಆರೋಗ್ಯ ಕೇಂದ್ರ ಇರಬೇಕು. ಆದರೆ ದೇಶದ ಸಾವಿರಾರು ಹಳ್ಳಿಗಳಲ್ಲಿ ಜನರು ಇಂದಿಗೂ ಮೈಲಿಗಟ್ಟಲೆ ನಡೆದುಕೊಂಡು ಆಸ್ಪತ್ರೆಗಳಿಗೆ ಹೋಗಬೇಕಾದ ಸ್ಥಿತಿ ಇದೆ. ಇಡೀ ದೇಶದಲ್ಲಿ ಇರುವ ರೋಗ ಪರೀಕ್ಷೆ ಪ್ರಯೋಗಾಲಯಗಳ ಸಂಖ್ಯೆ ಕೇಲವ 135 ರಷ್ಟಿದೆ. ಲಕ್ಷಾಂತರ ಜನರಿಗೆ ಸೋಂಕು ತಗುಲಿದರೆ ಇಷ್ಟು ಕಡಿಮೆ ಸಂಖ್ಯೆಯ ಪ್ರಯೋಗಾಲಯಗಳನ್ನಿಟ್ಟುಕೊಂಡು ರೋಗ ಪರೀಕ್ಷೆ ಎಷ್ಟು ವಿಳಬವಾಗಬಹುದು ಯೋಚಿಸಿ. ಇನ್ನು ಕೊವಿಡ್ -19 ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳಿಗೆ ಅದರಲ್ಲೂ ವಿಶೇಷವಾಗಿ staff nurse ಗಳಿಗೆ PPE ಯಂತಹ ಎಕ್ವಿಪ್ ಮೆಂಟ್ ಬಳಸುವ ತರಬೇತಿಯೇ ಸರಿಯಾಗಿ ಆಗಿಲ್ಲ. ಇಂದು ಸಿಬ್ಬಂದಿಗಳು  ಪ್ರಾಯೋಗಿಕ ತರಬೇತಿ ಮತ್ತು ನೈತಿಕ ಸ್ಥೈರ್ಯ ಎರಡೂ ಇಲ್ಲದ ಸ್ಥಿತಿಯಲ್ಲಿ ಮಾನಸಿಕ ಕ್ಷೋಭೆಗೆ ಒಳಗಾಗುವ ಸ್ಥಿತಿ ಏರ್ಪಟ್ಟಿದೆ.

ಒಟ್ಟಾರೆಯಾಗಿ ಇಡೀ ಆರೋಗ್ಯ ಕ್ಷೇತ್ರ ಇಷ್ಟು ದುರ್ಬಲವಾಗಿರುವ ಇಂತಹ  ಸನ್ನಿವೇಶದಲ್ಲಿ ಕೊವಿಡ್-19 ರಂತಹ ಸಾಂಕ್ರಾಮಿಕ ರೋಗದ  ವಿರುದ್ಧ ಹೋರಾಟ ಅತ್ಯಂತ ಕಷ್ಟವಾಗುತ್ತದೆ. ಮುಂದಿನ ಹಂತ ಹೋಗಲಿ ಈಗಲೇ ತಳಮಟ್ಟದಲ್ಲಿ ಸೋಂಕಿತ ಜನರ ತಪಾಸಣೆ ನಡೆಸುವ ಆಶಾ ಕಾರ್ಯಕರ್ತೆಯರ, ನರ್ಸುಗಳ ಜೀವಕ್ಕೆ ಎಷ್ಟರ ಮಟ್ಟಿಗೆ ರಕ್ಷಣೆ ನೀಡಲು ನಮಗೆ ಸಾಧ್ಯವಾಗಿದೆ? ಈ ವಿಷಯದಲ್ಲಿ ನಮ್ಮ ಸರ್ಕಾರ ಯಾವ ಬಗೆಯಲ್ಲಿ ಸಿದ್ಧತೆ ನಡೆಸಿದೆ? ಇಂದು ಅತ್ಯಂತ ಮುಂದುವರಿದ ದೇಶಗಳಲ್ಲೆ ಲಾಕ್ ಡೌನ್- ದೈಹಿಕ ಅಂತರಗಳ ಹೊರತಾಗಿಯೂ ಕೊರೊನಾ ಸೋಂಕು ಮೂರನೇ ಹಂತ ತಲುಪಿದೆ. ಹೀಗಿರುವಾಗ ಭಾರತದಲ್ಲಿ ತಲುಪುವುದಿಲ್ಲ ಎಂದು ಆಶಿಸುವುದು ಕೇವಲ ಭ್ರಮೆಯಾಗಿಬಿಡಬಹುದು. ಎಂತಹ ಕೆಟ್ಟ ಪರಿಸ್ಥಿತಿಗೂ ಈಗಲೇ ಸಿದ್ಧತೆ ಮಾಡಿಕೊಳ್ಳಲೇಬೇಕಿದೆ. ಈ ನಿಟ್ಟಿನಲ್ಲಿ ಅನೇಕ ಕಡೆ ಸರ್ಕಾರದ ಅಧಿಕಾರಿಗಳು,ವೈದ್ಯರು, ಪೊಲೀಸರು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವುದೂ ನಿಜ. ಆದರೆ ಇಷ್ಟು ಸಾಲುವುದಿಲ್ಲ. ಮುಂದಿನ ಹಂತವನ್ನು ಎದುರಿಸಲು ಸರ್ಕಾರಕ್ಕೆ ನಿಜವಾಗಿಯೂ ಬದ್ಧತೆ ಇದ್ದರೆ ನೀತಿ ನಿರೂಪಣೆ ಮಟ್ಟದಲ್ಲಿ ಕೆಲ ತುರ್ತು ಕ್ರಮಗಳನ್ನು ಕೈಗೊಳ್ಳಲೇಬೇಕಿದೆ.

1) ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಏರ್ಪಟ್ಟಿರುವ ಹಿನ್ನೆಲೆಯಲ್ಲಿ , ಸಿಬ್ಬಂದಿ, ತರಬೇತಿ ಮತ್ತು ಕಟ್ಟಡಗಳ ಕೊರತೆ ಗಂಭೀರವಾಗಿ ತಲೆದೋರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದ ರಾಷ್ಟ್ರೀಕರಣ ಒಂದು ಸಹಕಾರಿ ನಡೆಯಾಗಬಲ್ಲದು. ಸರ್ಕಾರ ತಕ್ಷಣವೇ ಈ ಕುರಿತು ನಿರ್ಧಾರ ಕೈಗೊಳ್ಳಬೇಕು. ಇದಾಗದಿದ್ದರೆ ಲಕ್ಷಾಂತರ ಸಂಖ್ಯೆಯಲ್ಲಿ ನರ್ಸುಗಳನ್ನು, ತಾಂತ್ರಿಕ ತರಬೇತಿ ಹೊಂದಿರುವ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಕೆಲಸಕ್ಕೆ ತಕ್ಷಣ ಚಾಲನೆ ನೀಡಬೇಕು.‌ ಮಾನ್ಯ ಪ್ರಧಾನಿಗಳು ಈ ಕೆಲಸ ಮಾಡುವರೇ?

2) ಮೇಕ್ ಇನ್ ಇಂಡಿಯಾದಂತಹ ಯೋಜನೆ ಇದ್ದರೂ ಸಹ ದೇಶಕ್ಕೆ ಬೇಕಾದ ವೆಂಟಿಲೇಟರುಗಳಿಗೂ ನಾವು ಚೀನಾದಂತಹ ದೇಶವನ್ನು ಅವಲಂಬಿಸಬೇಕಾಗಿರುವುದು ವಿಪರ್ಯಾಸ. ಮೊನ್ನೆಯಷ್ಟೇ ಕೇಂದ್ರ ಸರ್ಕಾರ 10,000 ವೆಂಟಿಲೇಟರುಗಳನ್ನು ಚೀನಾದಿಂದ ತರಿಸಿಕೊಳ್ಳಲು ಕ್ರಮ ಕೈಗೊಂಡಿರುವುದಾಗಿ ವರದಿಯಾಗಿದೆ. ಇಂತಹ ಅವಲಂಬನೆಯನ್ನು ತಪ್ಪಿಸಿ ವೈದ್ಯಕೀಯ ಉಪಕರಣ, ಔಷಧಗಳು, ಮಾಸ್ಕ್ ಗಳು ಇತ್ಯಾದಿಗಳನ್ನು ದೇಶೀಯವಾಗಿ ಉತ್ಪಾದಿಸಲು ದೇಶದೊಳಗಿನ ಫಾರ್ಮಾಸ್ಯುಟೆಕಲ್ ಕ್ಷೇತ್ರಕ್ಕೆ ಉತ್ತೇಜನ ನೀಡಬೇಕು. ಇವುಗಳ ಉತ್ಪಾದನೆಯನ್ನು ವಿಕೇಂದ್ರೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು. ಸಣ್ಣ ಸಣ್ಣ ಘಟಕಗಳಲ್ಲಿ ಸುರಕ್ಷಿತ ರೀತಿಯಲ್ಲಿ ಉತ್ಪಾದನಾ ಕೆಲಸ ನಡೆಯುವಂತೆ ಮಾಡಬೇಕು

  1. ದೇಶದ ಆರೋಗ್ಯ ಕ್ಷೇತ್ರಕ್ಕೆ ಕನಿಷ್ಟ ಪಕ್ಷ ಜಿಡಿಪಿಯ ಶೇಕಡಾ 2.5ರಷ್ಟಾದರೂ ಹಣ ನೀಡಬೇಕು ಎಂದು ಈ ಹಿಂದೆಯೇ ಆರೋಗ್ಯ ಸಚಿವಾಲಯವು 15 ನೇ ಹಣಕಾಸು ಆಯೋಗಕ್ಕೆ ಶಿಫಾರಸು ಸಲ್ಲಿಸಿದ್ದರೂ ಅದು ಇದುವರೆಗೂ ಜಾರಿಗೊಂಡಿಲ್ಲ. ಭಾರತ ಆರೋಗ್ಯಕ್ಕೆ ನೀಡುತ್ತಿರುವುದು ಜಿಡಿಪಿಯ ಕೇವಲ ಶೇ 1% ಮಾತ್ರ. ನೆರೆಯ ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳಗಳು ನಮಗಿಂತ ಹೆಚ್ಚು ಪಾಲನ್ನು ಆರೋಗ್ಯಕ್ಕೆ ನೀಡುತ್ತಾ ಬಂದಿವೆ. ಕನಿಷ್ಟ ಈಗಲಾದರೂ ನಾವು ಇದನ್ನು ಸರಿಪಡಿಸಿಕೊಳ್ಳಬೇಕು. ಆರೋಗ್ಯ ಕ್ಷೇತ್ರವನ್ನು ಬಲಪಡಿಸಿಕೊಳ್ಳದೇ ದೇಶದ ನಾಗರಿಕರನ್ನು ಆರೋಗ್ಯವಾಗಿಡಲು
  2. ಮುಂಜಾಗ್ರತೆಯ ಕೊರತೆಯಿಂದ ಬೀದಿಯ ಮೇಲಿರುವ ಲಕ್ಷಾಂತರ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆ ತಲುಪಿಸಬೇಕು. ಅಲೆಮಾರಿ ಸಮುದಾಯಗಳಿಗೆ ಕನಿಷ್ಟ ಒಂದು ವರ್ಷ ಕಾಲವಾದರೂ ಎಲ್ಲಾ ಬಗೆಯ ಮೂಲಸೌಕರ್ಯ ಒದಗಿಸಿ ಆಹಾರ ಸಾಮಗ್ರಿಗಳನ್ನುಒದಗಿಸಬೇಕು. ಸೂಕ್ತ ಆರೋಗ್ಯ ತಪಾಸಣೆ ನಡೆಸಬೇಕು.‌ ಈ ಸಮುದಾಯಗಳ ಜನರು ಹಸಿವು ತಾಳದೆ ಅನಿವಾರ್ಯವಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ಹೊರಟರೆ ತಮ್ಮನ್ನು ಸೇರಿಸಿಕೊಂಡೇ ಅಪಾಯ ತಂದುಕೊಳ್ಳುತ್ತಾರೆ.
  3. ಕೊವಿಡ್ -19 ರಂತಹ ವಿಶ್ವವ್ಯಾಪಿ ಸೋಂಕುರೋಗ ಅಥವಾ ಪ್ಯಾಂಡೆಮಿಕ್ ವನ್ನು ಸಮರ್ಥವಾಗಿ ಎದುರಿಸಬೇಕೆಂದರೆ ಪ್ರತಿಯೊಂದು ದೇಶದ ಒಳಗಿನ ಜನರ ನಡುವೆ ಅಭೂತಪೂರ್ವ ಸಾಮಾಜಿಕ ಸಹಕಾರ ಮತ್ತು ಭಾವನಾತ್ಮಕ ಒಗ್ಗಟ್ಟು ಪೂರ್ವ ಶರತ್ತಾಗಿರುತ್ತವೆ. ಇವುಗಳ ಬದಲು ಸಾಮಾಜಿಕ ದ್ವೇಷ-ವೈಷಮ್ಯ ಮತ್ತು ಭಾವನಾತ್ಮಕ ಅಂತರ ಹೆಚ್ಚಿದಷ್ಟೂ ರೋಗದ ವಿರುದ್ಧದ ಹೋರಾಟಕ್ಕ ಹಿನ್ನಡೆಯಾಗುತ್ತದೆ. ಇಂತಹ ಸಮಯದಲ್ಲಿ ಜನರ ನಡುವೆ ಕೋಮು ದ್ವೇಷ ಬೆಳೆದರೆ ಅದು ಕೊರೊನಾ ವೈರಾಣುವಿನ ಸೋಂಕನ್ನು ಹಲವಾರು ಪಟ್ಟು ಹೆಚ್ಚಿಸುವ ಸಾಧ್ಯತೆ ಹೊಂದಿರುತ್ತದೆ ಎಂಬ ಎಚ್ಚರ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಇಂತಹ ಸಮಯದಲ್ಲಿ ಕೋಮು ವಿಷಬೀಜ ಬಿತ್ತುವ ವ್ಯಕ್ತಿ, ಮಾಧ್ಯಮ, ಸಾಮಾಜಿಕ ಮಾಧ್ಯಮ, ರಾಜಕಾರಣಿ, ಧಾರ್ಮಿಕ ವ್ಯಕ್ತಿ ಯಾರೇ ಇರಲಿ ಅಂತವರ ವಿರುದ್ಧ ಕಠಿಣ ಕ್ರಮ ಜರುಗಿಸುವ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಬೇಕು.

ಈ ಎಲ್ಲಾ ಕ್ರಮಗಳ ಜೊತೆಯಲ್ಲಿ ಜನಸಾಮಾನ್ಯರಲ್ಲಿ ವೈಜ್ಞಾನಿಕ ಅರಿವು ಸೇರಿಕೊಂಡರೆ ಮಾತ್ರ ಅವು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ದೇಶಕ್ಕಾಗುವ ನಷ್ಟವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.

– ಹರ್ಷಕುಮಾರ್ ಕುಗ್ವೆ

ಉಸಿರಿನ ಸದ್ದು ನಿಲ್ಲಿಸಿದ ಬುಲೆಟ್ !

Previous article

ಎಂಥಾ ಕಥೆಯ ಎಂಥಾ ಹಾಡು ಮಾರಾಯ!

Next article

You may also like

Comments

Leave a reply

Your email address will not be published. Required fields are marked *