ಹೊಂಬಣ್ಣ ಎನ್ನುವ ಚೆಂದದ ಸಿನಿಮಾ ಕೊಟ್ಟಿದ್ದವರು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ. ನೋಡಿದವರೆಲ್ಲಾ ಹೊಗಳಿದರೂ ಚಿತ್ರ ಕಾಸು ಮಾಡುವುದರಲ್ಲಿ ಸೋತಿತ್ತು. ಇವತ್ತಿನ ಟ್ರೆಂಡ್ಗೆ ಶೀರ್ಷಿಕೆ ಹೊಂದಿಕೆಯಾಗಲಿಲ್ಲವೋ? ಅಥವಾ ರಿಲೀಸಾದ ಟೈಮು ಸರಿಯಿರಲಿಲ್ಲವೋ ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದ ರಕ್ಷಿತ್ ಈಗ ಸೈಲೆಂಟಾಗಿ ಎರಡನೇ ಚಿತ್ರವನ್ನು ಮಾಡಿ ಮುಗಿಸಿದ್ದಾರೆ. ಆದರೆ ಈ ಬಾರಿ ಎಂಥವರನ್ನೂ ಸೆಳೆಯಬಲ್ಲ ಟೈಟಲ್ಲನ್ನು ತಮ್ಮ ಸಿನಿಮಾಗೆ ಇಟ್ಟಿದ್ದಾರೆ. ಅದು ಎಂಥಾ ಕಥೆ ಮಾರಾಯ!
ಮಲೆನಾಡಿನ ಜನ ತಮಗರಿವಿಲ್ಲದೆಯೇ ದಿನಕ್ಕೆ ಎಷ್ಟು ಸಲ ಎಂಥಾ ಕಥೇ ಮಾರಾಯ? ಎಂಥಾ ಸಾವು ಮಾರಾಯ? ಅಂತೆಲ್ಲಾ ಅಂದುಕೊಂಡಿರುತ್ತಾರೋ. ಈ ಸಹಜ ಸಾಲನ್ನೇ ತಮ್ಮ ಸಿನಿಮಾಗೆ ರಕ್ಷಿತ್ ಶೀರ್ಷಿಕೆಯಾಗಿಸಿದ್ದಾರೆ.
ಒಂದು ಮಹಾ ನದಿ. ಅದರ ನೀರನ್ನು ಮತ್ತೊಂದು ಮಹಾನಗರಕ್ಕೆ ಹರಿಸಿ, ಕುಡಿಯುವ ನೀರಾಗಿ ಬಳಸಲು ಸರ್ಕಾರ ತೀರ್ಮಾನಿಸುತ್ತದೆ. ಆ ಕಾರಣಕ್ಕೆ ಸರ್ವೇ ಇಂಜಿನಿಯರೊಬ್ಬ ಆ ನದೀಪಾತ್ರದ ಸ್ಥಳಕ್ಕೆ ತೆರಳುತ್ತಾನೆ. ಆತನ ಮುಂದೆ ಒಂದು ಕುಟುಂಬ ಮತ್ತು ಆ ಪರಿಸರದ ವಸ್ತುಸ್ಥಿತಿಯ ಅನಾವರಣವಾಗುತ್ತದೆ. ನಂತರ ಏನಾಗುತ್ತದೆ ಅನ್ನೋದನ್ನು ರಕ್ಷಿತ್ ಎಳೆಎಳೆಯಾಗಿ ‘ಎಂಥಾ ಕಥೆ ಮಾರಾಯ’ದಲ್ಲಿ ತೆರೆದಿಡಲಿದ್ದಾರೆ.
ಶರಾವತಿ ಜಲವಿದ್ಯುತ್ ಯೋಜನೆಯ ನಂತರ ಆ ನದಿ ನೀರನ್ನು ಬೆಂಗಳೂರಿನ ಕಡೆಗೆ ಜಾರಿಸುವ ಪ್ರಸ್ತಾಪಿತ ಯೋಜನೆಯ ಸುತ್ತ ‘ಎಂಥಾ ಕಥೆ ಮಾರಾಯ’ ಸಿನಿಮಾವನ್ನು ಹೆಣೆಯಲಾಗಿದೆ. ಇದು ಬರೀ ಶರಾವತಿ ಜನರ ಕತೆ ಮಾತ್ರವಲ್ಲ, ನದಿ, ನೀರು, ನೀರಾವರಿ ಯೋಜನೆಗಳು ಮತ್ತು ಆ ನದಿಯನ್ನು ಅವಲಂಭಿಸಿರುವ ಯಾವುದೇ ಪ್ರದೇಶದ ಜನರ ಕತೆಯಾಗಿದೆ. ಈ ಗಂಭೀರ ವಿಚಾರವನ್ನು ಕೌಟುಂಬಿಕ ಕತೆಯ ಜೊತೆಗೆ ಹಾಸ್ಯವನ್ನು ಬೆರೆಸಿ ಹೇಳಿದ್ದಾರೆ.
ಸದ್ಯ ಅನನ್ಯಾ ಭಟ್ ಹಾಡಿರುವ ‘ಸೂರ್ಯ ಚಂದ್ರ ಮುಗಿಲೊಳಗೆ ಹೋಗಿ ಇಲ್ಲಾಂದ್ರೆ ನಿಮಗೂನು ಸಾವಾಯ್ತದೆ… ತಂಗಾಳಿ ಮಡಿಲಲ್ಲಿ ಬಿರುಗಾಳಿ ಬಿತ್ತಿರಲು ಜೋಗುಳದ ನಾದಕ್ಕೂ ಸಾವಾಯ್ತದೆ… ಎಂಥಾ ಸಾವೋ ಮಾರಾಯ…’ ಎಂಬ ಸಾಲುಗಳನ್ನು ಹೊಂದಿರುವ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಮಾಡಲಾಗಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನದ ಈ ಹಾಡನ್ನು ಸ್ವತಃ ರಕ್ಷಿತ್ ತೀರ್ಥಹಳ್ಳಿ ಬರೆದಿದ್ದಾರೆ. ಸಂಚಲನ ಮೂವೀಸ್’ನ ರಾಮಕೃಷ್ಣ ನಿಗಡೆ ಈ ಚಿತ್ರವನ್ನು ನಿರ್ಮಿಸಿದ್ದಾರೆ. ವೇದಾಂತ್ ಸುಬ್ರಮಣ್ಯ, ಸುಧೀರ್ ಎಸ್.ಜೆ., ಶ್ರೀಪ್ರಿಯಾ, ಕೇಶವ ಗುತ್ತಲಿಕೆ ಮುಂತಾದವರ ತಾರಾಗಣ ಈ ಚಿತ್ರದಲ್ಲಿದೆ.