ಈ ಪೊಲೀಸ್ ಬ್ರೂಟಾಲಿಟಿಯ ವಿಡಿಯೋಗಳನ್ನು ನೀವು ಸೂಕ್ಷ್ಮವಾಗಿ ಗಮನಿಸುತ್ತಿದ್ದರೆ ಒಂದಷ್ಟು ವಿಷಯಗಳು ಗಮನಕ್ಕೆ ಬರುತ್ತವೆ. ಇವುಗಳಲ್ಲಿ 80 ಪ್ರತಿಶತ ವಿಡಿಯೋಗಳು ನ್ಯೂಸ್ ಟಿವಿ ಕೆಮೆರಾ ಶೂಟ್ ಮಾಡಿದ ವಿಡಿಯೋಗಳಲ್ಲ. ಪೊಲೀಸ್ ಸಿಬ್ಬಂದಿಯೇ ಶೂಟ್ ಮಾಡಿ ಹರಿಯಬಿಡುತ್ತಿರುವ ವಿಡಿಯೋಗಳಿವು.
- ಟಿ ಕೆ ದಯಾನಂದ
ಇವುಗಳಲ್ಲಿ ಸಿಂಗಂಗಳ ಥರ ಕಾನ್ಸ್’ಟೇಬಲ್, ದಫೇದಾರ್, ಪ್ರೊಬೆಶನರಿ ಪೊಲೀಸರು ಜನರಿಗೆ ಥಳಿಸಿ ವೀರಾವೇಶ ಮೆರೆದರು ಎನ್ನುವ ಸುದ್ದಿಗಳು ಇಲ್ಲ, ಎಲ್ಲವೂ ಡಬಲ್ ಸ್ಟಾರ್ ಮೇಲ್ಪಟ್ಟ ಪೊಲೀಸರ ಆಟಾಟೋಪಗಳು. ಇದು ಅಕ್ರಮ, ಆ ಬಗೆಯ ಯಾವ ಅಧಿಕಾರ ಇವರಿಗಿಲ್ಲವೆಂದು ತಿಳಿದೂ, ಈ ವಿಡಿಯೋ ಆಧರಿಸಿ ಯಾರಾದರೂ ಕೇಸ್ ಜಡಿದರೆ ತಮ್ಮ ಯೂನಿಫಾರ್ಮ್ ಚಿತ್ರಾನ್ನವಾಗುತ್ತದೆಂಬ ಭಯವೂ ಇಲ್ಲದೆ ಇವರೇಕೆ ಹೀಗೆ ವಿಡಿಯೋ ಶೂಟ್ ಮಾಡಿಸಿಕೊಳ್ಳುವ ಹಪಾಹಪಿಗೆ ಬಿದ್ದಿದ್ದಾರೆ?
ಹೀಗೆ ಸಿಕ್ಕ ಸಿಕ್ಕವರ ಮೇಲೆ ತೋಳಗಳಂತೆ ಮುಗಿಬಿದ್ದು ಚಚ್ಚಿ ಕೆಡವಿದ್ದೇವೆಂದು ಮೇಲಧಿಕಾರಿಗಳಿಗೆ ದಾಖಲೆ ತೋರಿಸಲು ವಿಡಿಯೋ ಶೂಟ್ ಮಾಡುತ್ತಿದ್ದಾರ? ಖಂಡಿತ ಇಲ್ಲ, ವಿಡಿಯೋ ಶೂಟ್ ಮಾಡುವ ಜುಜುಬಿ ಅಧಿಕಾರವೂ ತಮಗಿಲ್ಲವೆಂದು ಇವರಿಗೆ ಚೆನ್ನಾಗಿ ಗೊತ್ತು. ಮತ್ತೇಕೆ ಈ ಆಕ್ಷನ್ ಹೀರೋ ಆಗುವ ಹುಕಿಯ ವಿಡಿಯೋ ಸ್ಟಂಟ್’ಗಳು.. ಅದು ಸಿಂಗಂ ಸಿಂಡ್ರೋಮ್.. ಇದೇ ನ್ಯೂಸ್ ಚಾನೆಲ್’ಗಳು ಚಾಲ್ತಿಗೆ ತಂದ ಪೆಕ್ಯುಲಿಯರ್ ಸಿಂಡ್ರೋಂ ಇದು.
ನೆನಪಿಸಿಕೊಳ್ಳಿ.. ಹೀಗೆ ಜನರನ್ನು ಬಡಿಯುವ ಪೊಲೀಸರನ್ನು ಮೊದಲು ಮಾಧ್ಯಮಗಳು ತರಾಟೆಗೆ ತೆಗೆದುಕೊಳ್ಳುತ್ತಿದ್ದವು. ಯಾವಾಗ ಮೊಬೈಲ್ ಕೆಮೆರಾಗಳು ಸಸ್ತ ಆದವೋ ಪ್ರದರ್ಶನಪ್ರಿಯತೆ ಎಂಬುದು ರೋಗದ ಥರ ಎಲ್ಲರನ್ನು ಆಕ್ರಮಿಸುತ್ತ ಬಂತೋ.. ಆಗಲೇ ಪೊಲೀಸರ ಪ್ರಚಾರದ ಹಸಿವು ಬಾಯ್ತೆರೆಯಿತು. ‘ಸಿಂಗಂ ಪಂಗಂ’ ವಿಶೇಷಣಗಳನ್ನಿಟ್ಟು ಟಿವಿಗಳು ಯಾವಾಗ ಇವರನ್ನು ಅಟ್ಟ ಹತ್ತಿಸಿದರೋ.. ಕ್ಯಾಶುವಲ್ ರೌಡಿ ಪರೇಡ್ ಒಂದಕ್ಕೆ ಟಿವಿ ವರದಿಗಾರರನ್ನು ಆಹ್ವಾನಿಸಿ ಆಗಿನ ಬೆಂಗಳೂರು ಕಮಿಷನರ್ ಅಲೋಕ್ ಕುಮಾರ್ ಕೆಮೆರಾಗಳೆದುರು ಮೊದಲಸಲ ವೀರಾವೇಶ ಮೆರೆದರೋ.. ಅಲ್ಲಿಂದ ಈ “ಸಿಂಗಂ ಸಿಂಡ್ರೋಂ” ಶುರುವಾಯ್ತು.
ಸಿನಿಮ ಕಥೆಯೊಂದಕ್ಕೆ ಬೇಕಿದ್ದ ಈ ಪಬ್ಲಿಸಿಟಿ ಹುಚ್ಚಿನ ರೌಡಿಪರೇಡ್’ಗಳ ಹಿನ್ನೆಲೆಯನ್ನು ಪರಿಚಿತ ಇನ್’ಸೈಡರ್ ಪೊಲೀಸ್ ಅಧಿಕಾರಿಗಳಿಂದ ಕೇಳಿ ಗಾಬರಿಯಾಗಿ ಹೋಗಿದ್ದೆ. ಎಲೆಕ್ಷನ್ ಸಮಯದಲ್ಲಿ ಮಾತ್ರ ನಡೆಸಬೇಕಿರುವ ರೌಡಿಪರೇಡ್ ಸಿಕ್ಕ ಸಿಕ್ಕಾಗೆಲ್ಲ, ಹೊಸ ಪೊಲೀಸ್ ಅಧಿಕಾರಿ ಡ್ಯೂಟಿಚಾರ್ಜ್ ತೆಗೆದುಕೊಂಡಾಗ ಟಿವಿ ಮೀಡಿಯಾಗಳಿಗೆ ಇನ್ವಿಟೇಶನ್ ಕಾರ್ಡ್ ಕೊಟ್ಟು.. ನಾನೂ ಒಬ್ಬ ‘ಸಿಂಗಂ’ ಎಂದು ರೌಡಿಗಳಿಗೆ ಗದರಿ ಬೈದು ವಿಡಿಯೋ ಶೂಟ್ ಮಾಡಿಸಿ ಡಂಗುರ ಹೊಡೆದುಕೊಳ್ಳುವ ಚಾಳಿ ಈಗ ತಾಲ್ಲೋಕ್ ಹೋಬಳಿ, ರೂರಲ್ ಮಟ್ಟದ ಪೊಲೀಸ್ ಸ್ಟೇಷನ್ನುಗಳಿಗೂ ಹಬ್ಬಿದೆ. ತೋಳಂ, ಹೆಬ್ಬಾವಂಗಳು ಇಲ್ಲವೇ ಇಲ್ಲ, ಈಗ ರೋಡಿಗೊಬ್ಬರು ಸಿಂಗಂಗಳು ಎರಚಾಡುತ್ತಿದ್ದಾರೆ.
ಇದಕ್ಕೆ ಸಣ್ಣ ನಗರ ಪಟ್ಟಣಗಳ ಟಿವಿ, ಪತ್ರಿಕಾ ವರದಿಗಾರರು ‘ಸಿಂಗಂ ಎಂಟ್ರಿ, ಸಿಂಗಂ ಆರ್ಭಟ, ಖಡಕ್ ಸಿಂಗಂ, ಪುಡುಕ್ ಸಿಂಗಂ, ಆಹಾ ಸಿಂಗಂ, ಓಹೋ ಸಿಂಗಂ ಎಂದು ಪ್ರಚಾರವನ್ನೂ ಕೊಟ್ಟು ಬಿಡುತ್ತಾರೆ. ಪೊಲೀಸರಿಗೆ ಇದರಿಂದ ಅದೇನು ಅಕ್ರಮ ರೂಟುಗಳು ಓಪನ್ ಆಗುತ್ತವೋ ಗೊತ್ತಿಲ್ಲ, ಅವರ “ಸಿಂಗಂ ಸಿಂಡ್ರೋಂ” ಖಾಯಿಲೆಯ ಆತ್ಮಕ್ಕೆ ಶಾಂತಿ ಲಭಿಸುತ್ತದೆ. ಈ ಸಿಂಗಂ ರೋಗ ಪೊಲೀಸರಿಂದ ತಹಶೀಲ್ದಾರ್, ಡಿಸಿ, ಮುನಿಸಿಪಾಲಿಟಿ ಕಮಿಷನರುಗಳಿಗು ಹರಡಿಬಿಟ್ಟಿದೆ. ಲಾಠಿ ಹಿಡಿದು ಫೀಲ್ಡಿಗಿಳಿದ ಸಿಂಗಂ.. ಅಂತ ನ್ಯೂಸ್ ಓದಿದ್ರೋ.. ಇದು ಅದೇ ಸಿಂಗಂ ಸಾಂಕ್ರಾಮಿಕ ರೋಗ.
ಹೀಗೆ ಜನರನ್ನು ಬಡಿಯುವ ವಿಡಿಯೋಗಳನ್ನು ಶೂಟ್ ಮಾಡಿಸುವರೂ ಇವರೇ, ಇಂಥ ಕಡೆ ಹೊಡೀತಿವಿ ಕೆಮೆರ ತಗಂಡು ಬಂದುಬಿಡಿ ಅಂತ ಮೀಡಿಯಾದವರಿಗೆ ಪ್ರೈವೇಟಾಗಿ ಇನ್ವಿಟೇಶನ್ ಕಾರ್ಡ್ ಕೊಡೋರೂ ಇವರೇ.. ಸಿಂಗಂಗಳಾಗುವರೂ ಇವರೇ.. ಅರ್ರೆ.. ಈ ಸಿಂಗಂ ಸಿಂಡ್ರೋಂ ತೀಟೆಗೆ ಸುಖಾಸುಮ್ಮನೆ ಜನರೇಕೆ ಬಡಿಸ್ಕೋಬೇಕು ಮಾರ್ರೆ.. ಮೀಡಿಯಗಳ ರೋಚಕ ಫುಟೇಜ್, ಪೊಲೀಸರ ಪ್ರದರ್ಶನ ಪ್ರಿಯತೆಯ ಹಸಿವಿಗೆ ಜನ ಬಡಿಸಿಕೊಳ್ಳಬೇಕಾಗಿ ಬಂದಿರುವುದು ನಮ್ಮ ಕರ್ಮ.
ಇನ್ನೊಮ್ಮೆ ಈ ಸಿಂಗಂ ಪಂಗಂ ವಿಡಿಯೋಗಳನ್ನು ನೋಡಬೇಕಾಗಿ ಬಂದಾಗ ಶೂಟ್ ಮಾಡುತ್ತಿರುವ ಪೊಲೀಸ್ ಪೇದೆಯ ಮಾತುಗಳ ಕಡೆಗೆ ಗಮನಕೊಡಿ, ಆತ ಸಿನಿಮ ಡೈರೆಕ್ಟರ್ ಥರ, “ಅಲ್ ಹೊಡೀರಿ ಸಾ, ಇಲ್ ಹೊಡೀರಿ ಸಾ ” ಎಂದು ಸೀನ್ ನರೇಟ್ ಮಾಡ್ತಿರ್ರಾನೆ. ಶೂಟ್ ಮಾಡಿದ್ದನ್ನು ಲೋಕಲ್ ಸ್ಟಿಂಜರ್ಸ್, ಟಿವಿ ಪತ್ರಕರ್ತರ ವಾಟ್ಸಾಪ್ ಗ್ರೂಪಿಗೆ ಇವರೇ ಫಾರ್ವಡ್ ಮಾಡಿರುತ್ತಾರೆ. ಮಾರನೇ ದಿನ ಸಿಂಗಂ ಸ್ಟೋರಿ ಊರು ತುಂಬ ಹರಡುತ್ತದೆ. ಒಂದು ಕಾಪಿ ಅವರದ್ದೇ ಹುಡುಗರು ನಡೆಸುವ ಪೇಯ್ಡ್ ಫ್ಯಾನ್ ಪೇಜಸ್, ಪೇಯ್ಡ್ ಯೂಟ್ಯೂಬ್ ಚಾನೆಲ್ಲಿಗೆ ತಲುಪಿ ವೈರಲ್ ಆಗುತ್ತದೆ.
No Comment! Be the first one.