- ವಿ.ಆರ್.ಸಿ.
ಕೆಳಜಾತಿಯ ಹುಡುಗ ತನ್ನ ಮಗಳನ್ನು ಪ್ರೀತಿಸುತ್ತಿರುವ ವಿಷಯ ತಿಳಿದ ತಂದೆ ಆ ಹುಡುಗನ ಮರ್ಮಾಂಗವನ್ನು ಕತ್ತರಿಸಿಬಿಡುತ್ತಾನೆ. ಈ ವಿಷಯ ತಿಳಿಯದ ಹುಡುಗಿ ಮತ್ತೆ ಮತ್ತೆ ಅವನೇ ಬೇಕು ಎಂದು ಹಟ ಹಿಡಿಯುತ್ತಾಳೆ! ತನ್ನ ಜಾತಿ, ಕುಟುಂಬದ ಗೌರವವನ್ನು ಉಳಿಸಿಕೊಳ್ಳಲು ಸದಾ ಉಗ್ರನಾಗಿರುವ ತಂದೆ ತನ್ನ ಮಗಳ ಮುಂದೆ ಮರ್ಮಾಂಗದ ವಿಷಯ ಬಿಚ್ಚಿಡುತ್ತಾನೆ.
‘ಮರ್ಮಾಂಗ ಇದ್ದವನನ್ನು ಮಾತ್ರವೇ ನಿನ್ನ ಮಗಳು ಪ್ರೀತಿಸುತ್ತಾಳೆ ಎಂದು ಹೇಗೆ ಯೋಚಿಸಿದೆ ಅಪ್ಪ, ಆ ವಿಷಯ ಬಿಟ್ಟು ಪ್ರೀತಿಯಲ್ಲಿ ಬೇರೇನೂ ಉಳಿದಿಲ್ಲವೆ? ಕೇವಲ ಮರ್ಮಾಂಗಕ್ಕಾಗಿ ನಾನು ಇನ್ನೊಬ್ಬನನ್ನು ಮದುವೆಯಾದರೆ ನಿನ್ನ ಜಾತಿಯ ಗೌರವ ಹೆಚ್ಚಾಗುತ್ತದೆಯೆ? ಇವತ್ತಿಗೂ ಅವನ ಪಕ್ಕ ಕುಳಿತರೆ, ರೋಮಾಂಚನಗೊಳ್ಳುತ್ತೇನೆ, ಬೆವರುತ್ತೇನೆ. ಗಂಡಸುತನ ಅನ್ನೋದು ಮರ್ಮಾಂಗದಲ್ಲಿ ಉಳಿದಿಲ್ಲ’ ಎಂದು ಹೇಳಿ ಹೊರಟುಬಿಡುತ್ತಾಳೆ…
‘ಉಪ್ಪೆನ’ (ದೊಡ್ಡ ಅಲೆ) ಸಿನಿಮಾ ಕೆಲವು ಅನಗತ್ಯ ನಾಟಕೀಯ ಸನ್ನಿವೇಶಗಳನ್ನು ಮೀರಿ, ದೀರ್ಘ ನಿಟ್ಟುಸಿರಿನೊಂದಿಗೆ ಮುಗಿಯುತ್ತದೆ. ನೋಡುಗರನ್ನು ನಿಶ್ಯಬ್ದರನ್ನಾಗಿಸುತ್ತದೆ. ಬೆಂಗಳೂರಿನಲ್ಲಿ ಭರತನಾಟ್ಯದ ಕಲಾವಿದೆಯಾದ ಕೃತಿ ಶೆಟ್ಟಿ ನಿರ್ದೇಶಕ ಜಯತೀರ್ಥ ಅವರ ಕಣ್ಣಿಗೆ ಬಿದ್ದು ನಾಟಕಗಳಲ್ಲಿ ಅಭಿನಯಿಸುತ್ತಲೇ, ಪ್ರಖ್ಯಾತ ತಮಿಳು ಅಳಗರ್ಸಾಮಿಯಿನ್ ಕುದುರೈ ಸಿನಿಮಾದಲ್ಲಿ ಪಾತ್ರವೊಂದನ್ನು ಮಾಡುತ್ತಾರೆ. ಜಯತೀರ್ಥ ಅವರೇ ಗುರುತಿಸಿದ್ದಾರೆಂದರೆ ಆಕೆಗೆ ವಿಶೇಷವಾದ ಪ್ರತಿಭೆ ಇದ್ದೇ ಇರುತ್ತದೆ ಎಂಬುದನ್ನು ನಿರೂಪಿಸಿದ್ದಾರೆ. ಸೌಂದರ್ಯದ ಖನಿಯಂತಿರುವ ಈಕೆಯ ಗೆಶ್ಚರ್ಗಳ ಸಣ್ಣ ಸಣ್ಣ ವಿಡಿಯೋ ತುಣುಕುಗಳು ಫೇಸ್ಬುಕ್, ವಾಟ್ಸಾಪ್ ಸ್ಟೇಟಸ್ಗಳಲ್ಲಿ ಹರಿದಾಡುತ್ತಿವೆ. ಈ ಕೃತಿ ನನಗೆ ಪರಿಚಯ ಆಗಿದ್ದೇ ಈಥರದ ಯಾವುದೋ ಒಂದು ವಿಡಿಯೋದಿಂದ…
ತಂದೆಯ ಪಾತ್ರದಲ್ಲಿರುವ ಸೇತುಪತಿ ನಟನೆಯ ಬಗ್ಗೆ ಹೇಳೋದು ಏನೂ ಉಳಿದಿಲ್ಲ. ಸಾಧ್ಯವಾದರೆ ನೋಡಿ… ವಿಶಾಖಪಟ್ಟಣ ಸಮುದ್ರ ತೀರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ…