೨೦೧೯ರ ಹಿಟ್ ಸಿನಿಮಾಗಳಲ್ಲಿ ಬಹುಮುಖ್ಯವಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಎಂ ಸಿರಿ ಮಂಜುನಾಥ್ ನಿರ್ಮಾಣದ ಕರಿಯಪ್ಪನನ್ನು ನಿರ್ದೇಶನ ಮಾಡಿದ್ದವರು ಕುಮಾರ್.
ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ನೋಡುಗರನ್ನು ಸೆಳೆಯುವುದರೊಂದಿಗೆ ಉತ್ತಮ ವ್ಯಾಪಾರ ಕೂಡಾ ಕುದುರಿಸಿಕೊಂಡಿತ್ತು. ಇದೇ ಸಿನಿಮಾದ ಮುಂದುವರೆದ ಭಾಗವಾಗಿ ಕ್ರಿಟಿಕಲ್ ಕೀರ್ತನೆಗಳು ತಯಾರಾಗಿದೆ. ಬಹುತೇಕ ಚಿತ್ರೀಕರಣ ಕೂಡಾ ಮುಕ್ತಾಯವಾಗಿದ್ದು, ಒಂದೆರಡು ದಿನಗಳ ಶೂಟಿಂಗ್ ನಂತರ ಚಿತ್ರತಂಡ ಕುಂಬಳಕಾಯಿ ಒಡೆಯಲಿದೆ.
ಇಡೀ ದೇಶವನ್ನು ಸಂಕಟದ ಇಕ್ಕಳಕ್ಕೆ ಸಿಲುಕಿಸಿರುವ ಸಮಸ್ಯೆಯೊಂದರ ಸುತ್ತ ಈ ಚಿತ್ರದ ಕಥೆಯನ್ನು ರೂಪಿಸಲಾಗಿದೆ. ಈ ಮಾಫಿಯಾದ ಸಂಪರ್ಕಕ್ಕೆ ತಗುಲಿಕೊಂಡ ನೂರಾರು ಮಂದಿ ಪ್ರತಿವರ್ಷ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ಸಾಮಾಜಿಕ ಪಿಡುಗಿನ ಕಾಡುವ ಕತೆಯೊಂದಿಗೆ ಭರಪೂರ ಮನರಂಜನೆಯನ್ನು ಬೆರೆಸಿ ಕ್ರಿಟಿಕಲ್ ಕೀರ್ತನೆಗಳು ತಯಾರಾಗುತ್ತಿದೆ.
ಕುಂದಾಪುರ, ಬೆಂಗಳೂರು, ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಡೆಯುವ ಪ್ರಕರಣವೊಂದು ಕೋರ್ಟ್ ಮೆಟ್ಟಿಲೇರುತ್ತದೆ. ಅದರ ಸುತ್ತ ಕತೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಗಂಭೀರವಾದ ವಿಚಾರವಿದ್ದರೂ ಪ್ರತಿ ಕ್ಷಣ ನಗುತ್ತಲೇ ನೋಡುವಂತೆ ಕ್ರಿಟಿಕಲ್ ಕೀರ್ತನೆಗಳು ಸೃಷ್ಟಿಯಾಗಿದೆಯಂತೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿದ್ದ ಚಂದನ್ ಆಚಾರ್ಯ ಹೊರತುಪಡಿಸಿದರೆ ಬಹುತೇಕ ಅಲ್ಲಿದ್ದ ಕಲಾವಿದರೇ ಇಲ್ಲೂ ಇದ್ದಾರೆ. ತಬಲಾ ನಾಣಿ, ಅಪೂರ್ವ, ರಾಜೇಶ್ ನಟರಂಗ, ತರಂಗ ವಿಶ್ವ, ಅರುಣಾ ಬಾಲರಾಜ್, ಗುರುರಾಜ ಹೊಸಕೋಟೆ ಸೇರಿದಂತೆ ಸಾಕಷ್ಟು ಕಲಾವಿದರು ಕ್ರಿಟಿಕಲ್ ಕೀರ್ತನೆಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸ್ವತಃ ನಿರ್ದೇಶಕ ಕುಮಾರ್ ತಮ್ಮ ಸ್ನೇಹಿತರೊಡಗೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಇನ್ನುಳಿದಂತೆ ಚಿತ್ರದ ಮಾಹಿತಿಗಳು ಇಷ್ಟರಲ್ಲೇ ಹೊರಬೀಳಲಿದೆ…!