ಸಲ್ಮಾನ್ ಖಾನ್ ಅಭಿನಯದ ದಬಾಂಗ್ 3 ಕನ್ನಡದಲ್ಲೂ ರಿಲೀಸಾಗಿದೆ. ಕನ್ನಡದವರೇ ಆದ ಪ್ರಭುದೇವ ನಿರ್ದೇಶನದ ಚಿತ್ರವಿದು. ಕಿಚ್ಚ ಸುದೀಪ ವಿಲನ್ ಆಗಿ ಅವತಾರವೆತ್ತಿದ್ದಾರೆ ಅನ್ನೋ ಕಾರಣಕ್ಕೆ ಹೆಚ್ಚು ಕುತೂಹಲ ಸೃಷ್ಟಿಸಿದ್ದ ಸಿನಿಮಾ ದಬಾಂಗ್ 3!

ಮದುವೆಯಾಗುವ ಹುಡುಗಿಯನ್ನು ಅವಳಿಷ್ಟದಂತೆ ಮೆಡಿಕಲ್ ಓದಿಸಲು ಮುಂದಾಗುವ ಚುಲ್ ಬುಲ್. ಆದರೆ ಮಹಾದುಷ್ಟನಂತಾ ಬಾಲಿ ಸಿಂಗ್ ಆಕೆಯ ಮೇಲೆ ಕಣ್ಣಿಡುತ್ತಾನೆ. ತಾನು ಬಯಸಿದವಳು ಬೇರೆಯವನ ಸ್ವತ್ತು ಅಂತಾ ಗೊತ್ತಾಗಿದ್ದೇ ಆ ಹುಡುಗಿಯ ಸಮೇತ ಅವಳ ಅಪ್ಪ ಅಮ್ಮನನ್ನೂ ಕೊಲ್ಲುತ್ತಾನೆ. ಇದೆಲ್ಲವೂ ಕಣ್ಣೆದುರೇ ನಡೆದರೂ ಚುಲ್ ಬುಲ್ ಏನೇನೂ ಮಾಡಲಾರದೇ ಕೈಚೆಲ್ಲಬೇಕಾಗುತ್ತದೆ. ಮಾಡದ ತಪ್ಪಿಗಾಗಿ ಜೈಲುಪಾಲಾಗಬೇಕಾಗುತ್ತದೆ. ಇಂಥಾ ಚುಲ್ ಬುಲ್ ಹೇಗೆ ಪೊಲೀಸ್ ಅಧಿಕಾರಿಯಾಗುತ್ತಾನೆ? ಎದುರಾಳಿ ಬಾಲಿ ಸಿಂಗ್ ರೂಪಿಸುವ ಸಂಚುಗಳನ್ನು ಹೇಗೆ ಎದುರಿಸುತ್ತಾನೆ? ಅನ್ನೋದೆಲ್ಲಾ ಸಿನಿಮಾದಲ್ಲಿ ಉಳಿದಿರುವ ಕುತೂಹಲಗಳು.


ಈ ಹಿಂದಿನ ಡಬ್ಬಿಂಗ್ ಚಿತ್ರಗಳಿಗೆ ಹೋಲಿಸಿದರೆ ಇದು ಶ್ರದ್ಧೆ ವಹಿಸಿ ರೂಪಿಸಿರುವ ಸಿನಿಮಾ. ಡಬ್ಬಿಂಗ್ ವಿರೋಧಿಸುವ ಮಂದಿ ಅಭಿಪ್ರಾಯ ಪಟ್ಟಂತೆ ನಮ್ಮ ಕನ್ನಡದ ಬ್ಯುಸೀ ಕಲಾವಿದರಾದ ರವಿಶಂಕರ್ ಗೌಡ, ಈ ಟಿವಿ ಶ್ರೀಧರ್, ಉಗ್ರಂ ಮಂಜು, ಜಿಜಿ, ಬಿ.ಎಂ.ಗಿರಿರಾಜ್ ಮುಂತಾದವರು ಇಲ್ಲಿ ಬೇರೆ ಯಾರೋ ನಟಿಸಿದ ಪಾತ್ರಗಳಿಗೆ ಬರೀ ಡಬ್ಬಿಂಗ್ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ. ಇದು ದೌರ್ಭಾಗ್ಯವೋ? ಅದೃಷ್ಟವೋ ನೋಡಿದವರೇ ತೀರ್ಮಾನಿಸಬೇಕು. ಸುದೀಪ್ ಮಾತ್ರ ತಮ್ಮ ಪಾತ್ರಕ್ಕೆ ತಾವೇ ಕಂಠದಾನ ಮಾಡಿದ್ದಾರೆ.

ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಎಂದಿನಂತೆ ಮನೋಜ್ಞವಾಗಿ ಅಭಿನಯಿಸಿದ್ದಾರೆ. ಹಿಂದಿ ಭಾಷೆ ಅರ್ಥವಾಗದವರು ಕನ್ನಡದಲ್ಲೇ ನೋಡಿ ಈ ಸಿನಿಮಾವನ್ನು ಎಂಜಾಯ್ ಮಾಡಬಹುದೇ ವಿನಃ ಸೆಟೆದುಕೊಂಡ ದೇಹದ ಸಲ್ಮಾನನ್ನು ನಮ್ಮ ಹೀರೋ ಅಂತಾ ಒಪ್ಪಿಕೊಳ್ಳಲು ಸಾಧ್ಯವೇ ಆಗೋದಿಲ್ಲ. ಕನ್ನಡಿಗರ ಮನಸ್ಸಿಗೆ ಸಲ್ಮಾನ್ ನಟನೆಯ ದೃಶ್ಯಗಳು ಸುದೀರ್ಘ ಜಾಹೀರಾತು ನೋಡಿದ ಅನುಭವ ನೀಡುತ್ತದೆ.

ಸುದೀಪ್ ಈ ಸಿನಿಮಾದ ವಿಲನ್ ಆಗಿದ್ದರೂ ಕನ್ನಡಿಗರ ಕಣ್ಣಿಗೆ ಅವರೇ ಹೀರೋ ಥರಾ ಕಾಣೋದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಸುದೀಪ್ ನಟನೆಯ ಮುಂದೆ ಸಲ್ಲು ಕೂಡಾ ಸಪ್ಪೆ ಸಪ್ಪೆ ಅನ್ನಿಸುತ್ತಾನೆ.
“ಒಬ್ಬ ಒಳ್ಳೆ ವ್ಯಕ್ತಿಯಲ್ಲಿ ಗೆಲ್ಲಕ್ಕೆ ಬೇಕಿರುವ ನೀಚತನ ಇರೋದೇ ಇಲ್ಲ‌. ಅದಕ್ಕೇ ಒಳ್ಳೇವ್ರು ಗೆಲ್ಲೋದೇ ಇಲ್ಲ..” ಅನ್ನುವಾಗಿ‌ನ ಕಿಚ್ಚನ ಅಭಿನಯ ನಿಜಕ್ಕೂ ಅದ್ಭುತ. ಅವರು ಕಣ್ಣಲ್ಲೇ ಕಿಚ್ಚು ಹೊತ್ತಿಸುವ ರೀತಿಯೇ ಭಯ ಹುಟ್ಟಿಸುತ್ತದೆ. ಜಗತ್ತಿನ ಯಾವ ಅದ್ಭುತ ನಟ ಬಂದು ನಿಂತರೂ ಕಿಚ್ಚನ ಮುಂದೆ ಡಲ್ಲು ಅನ್ನೋದನ್ನು ಖುದ್ದು ಸಲ್ಲು ನಿರೂಪಿಸಿದ್ದಾನೆ!
ಸಾಜಿದ್ ವಾಜಿದ್ ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಶಕ್ತಿಯಿದೆ. ಕನ್ನಡೀಕರಿಸಿರುವ ಅನೂಪ್ ಬಂಡಾರಿ ಮತ್ತು ಗುರುದತ್ ಗಾಣಿಗರ ಕೆಲಸ ಮೆಚ್ಚಬೇಕು. ನಿರ್ದೇಶಕರಾಗಿ ಪ್ರಭುದೇವ ಕಸುಬುದಾರಿಕೆ ತೋರಿದ್ದಾರೆ. ಸೋನಾಕ್ಷಿ ಸಿನ್ಹಾ ಮಾದಕವಾಗಿ ಕಂಡರೆ ಮತ್ತೊಬ್ಬ ಹುಡುಗಿ ಸಾಯಿ ಮಂಜ್ರೇಕರ್ ಮೋಹಕವಾಗಿ ಕಾಣುತ್ತಾಳೆ. ತೀರಾ ವಿಶೇಷವಿಲ್ಲದಿದ್ದರೂ ಒಮ್ಮೆ ನೋಡಬಹುದಾದ ಸಿನಿಮಾ ದಬಾಂಗ್ 3!

CG ARUN

ನಮಗಾಗಿ ಜಂಟಿ ಖಾತೆ ತೆರೆಯುತ್ತಾರಾ ರಾಧಿಕಾ?

Previous article

ಪ್ರೇಕ್ಷಕರ ಪಾಲಿಗೆ ಸುವರ್ಣಾವಕಾಶ!

Next article

You may also like

Comments

Leave a reply

Your email address will not be published. Required fields are marked *