ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಶಂಕರ್ ನಾಗ್ ನಮ್ಮನ್ನು ಕಾಯಿಸಲಿಲ್ಲ. ರವಿಚಂದ್ರನ್, ಶಿವಣ್ಣ, ಜಗ್ಗೇಶ್, ದರ್ಶನ್, ಪುನೀತ್, ಯಶ್, ವಿಜಯ್, ಸತೀಶ್’ಗಾಗಿ ಕಾದಿದ್ದು ನೆನಪಿಲ್ಲ. ಅಮಿತಾಬ್, ರಜನಿಕಾಂತ್, ಕಮಲ್ ಹಾಸನ್ ರಂಥಾ ನಟರೂ ನಮ್ಮ ಟೈಂ ವೇಸ್ಟ್ ಮಾಡಿಸಿಲ್ಲ. ಒಬ್ಬ ಸಲ್ಮಾನ್ ಖಾನ್ ನಮ್ಮ ಸಮಯವನ್ನು ನುಂಗಿದ. ಅದಕ್ಕೆ ಸುದೀಪ್ ಸಾಕ್ಷಿಯಾಗಿದ್ದಾರೆ…
– ಇದು ಹಿರಿಯ ಪತ್ರಕರ್ತರೊಬ್ಬ ಬೇಸರದ ನುಡಿ..
ಸಿನಿಮಾ ಪತ್ರಿಕಾಗೋಷ್ಟಿಗಳು ಒಂದಿಷ್ಟು ತಡವಾಗುವುದು, ನಟನಟಿಯರು ಲೇಟಾಗಿ ಬಂದು ‘ಟ್ರಾಫಿಕ್ ಜಾಮ್ ಅಂತಾ ಸಬೂಬು ಹೇಳೋದು ಮಾಮೂಲು. ತೀರಾ ಪತ್ರಕರ್ತರ ತಾಳ್ಮೆ ಪರೀಕ್ಷಿಸಿ, ಬರೋಬ್ಬರಿ ಮೂರು ಗಂಟೆಗಳ ಕಾಲ ನಿರುದ್ಯೋಗಿಗಳಂತೆ ಕೂರಿಸಿದ ಕೀರ್ತಿ ಕಿಚ್ಚ ಸುದೀಪ್ ಮತ್ತು ದಬಾಂಗ್ ತಂಡಕ್ಕೆ ‘ಸಲ್ಲುತ್ತದೆ!
ಮಧ್ಯಾಹ್ನ ೨ ಗಂಟೆಗೆ ಪತ್ರಿಕಾಗೋಷ್ಟಿ ಅಂತಾ ದಿನಕ್ಕೆ ಮೊದಲೇ ಹೇಳಿ ಇದ್ದಕ್ಕಿದ್ದಂತೆ ಅದನ್ನು ನಾಲ್ಕು ಗಂಟೆಗೆ ಶಿಫ್ಟ್ ಮಾಡಿದರು. ‘ಇರಲಿ ಬಿಡಿ, ದೊಡ್ಡ ಸಿನಿಮಾ ಯಾವ್ಯಾವುದೋ ರಾಜ್ಯಗಳಿಂದ ಬರುವವರಿರುತ್ತಾರೆ ಅಂದುಕೊಂಡು ನಾಲ್ಕು ಗಂಟೆಗೆ ಹೋಗಿ ಯುಬಿ ಸಿಟಿಯಲ್ಲಿ ಕುಂತವರದ್ದು ಅಕ್ಷರಶಃ ನಾಯಿಪಾಡು. ನಾಲ್ಕು ದಾಟಿ ಐದಾದರೂ, ಗಡಿಯಾರದ ಮುಳ್ಳು ಐದರಿಂದ ಎಗರಿ ಆರಕ್ಕೆ ಜಂಪ್ ಮಾಡಿದರೂ ಸುದೀಪು, ಸಲ್ಮಾನ್ ಖಾನು ಯಾರ ಸುಳಿವೇ ಇರಲಿಲ್ಲ. ಕಡೆಗೆ ಏಳು ಗಂಟೆಯ ಹೊತ್ತಿಗೆ ಸುದೀಪ್ ಎಂಟ್ರಿ ಕೊಟ್ಟರು. ನಂತರ ಸಲ್ಮಾನ್, ಪ್ರಭುದೇವ ಮತ್ತಿತರರು ಆಗಮಿಸಿದರು. ಅದು ಮುದ್ರಣ ಮಾದ್ಯಮಕ್ಕೆಂದು ಏರ್ಪಡಿಸಿದ್ದ ಪತ್ರಿಕಾಗೋಷ್ಟಿ. ಆದರೆ ಅಲ್ಲಿ ಪತ್ರಕರ್ತರಿಗಿಂತಾ ಹೆಚ್ಚಾಗಿ ಸುದೀಪ್ ಅವರ ಅಭಿಮಾನಿಗಳು, ಆಪ್ತರು ಮತ್ತು ಸಲ್ಮಾನ್ ಖಾನನನ್ನು ಹತ್ತಿರದಿಂದ ನೋಡಬೇಕು ಅಂತಾ ಬಯಸೋ ಡಿಂಗೋಗಳೇ ತುಂಬಿಹೋಗಿದ್ದರು. ಕಾದು ಕಾದು ಸಾಕಾಗಿ ಹಿರಿಯ ಪತ್ರಕರ್ತರೆಲ್ಲಾ ಎದ್ದು ನಡೆದರು. ಅವನ್ಯಾರೋ ಬಿಗ್ ಬಾಸಲ್ಲಿ ಸ್ಪರ್ಧಿಸಿದ್ದ ರೇಡಿಯೋ ಆರ್.ಜೆ. ಪೃಥ್ವಿ ಅಂತೆ. ನೈಟಿ ಥರದ ಡ್ರೆಸ್ಸು ಹಾಕ್ಕೊಂಡು ಬಂದು ಪತ್ರಕರ್ತರ ಮೇಲೇ ಕಿರಿಕ್ಕು ತೆಗೆದಿದ್ದ!
ಜೆ.ಡಬ್ಲ್ಯೂ. ಮ್ಯಾರಿಯೇಟ್ನಂಥಾ ಜಾಗದಲ್ಲಿ ಪ್ರೆಸ್ ಮೀಟ್ ಅರೇಂಜ್ ಮಾಡಿಸಿ, ಅಲ್ಲಿ ಪತ್ರಕರ್ತರು ಕೂರಲು ನೆಟ್ಟಗೆ ಖುರ್ಚಿ ಕೂಡಾ ಇಲ್ಲದೇ ಪರದಾಡುವಂತಾಯಿತು. ತಿಕ್ಕಲು ತಿಕ್ಕಲಾಗಿ ವರ್ತಿಸುತ್ತಿದ್ದವರಿಗೆಲ್ಲಾ ಮೀಡಿಯಾ ಪಾಸು ಕೊಟ್ಟು ಒಳಬಿಟ್ಟಿದ್ದರು. ಇದೆಲ್ಲದರ ಪ್ರತಿಫಲವಾಗಿ ತಾರೆಯರು ಬರುತ್ತಿದ್ದಂತೇ ಆ ಸಮಾರಂಭ ಸಂತೆಯ ಥರ ದೊಂಬಿಯಾಗಿ ಹೋಯ್ತು. ಒಬ್ಬರ ಮೇಲೊಬ್ಬರು ಬಿದ್ದು ‘ಐ ಲವ್ ಯೂ ಸಲ್ಲು ಅಂತಾ ಚೀರಿಕೊಂಡರು. ಇದನ್ನೆಲ್ಲಾ ಕಂಡು ಕಿಚ್ಚನಿಗೂ ಸಹಿಸದಂತಾಯಿತು. ಸ್ವತಃ ನಿಂತು ವಾಲಂಟಿಯರ್ ಥರಾ ‘ಕೂತ್ಕೊಳಿ ಕೂತ್ಕೊಳಿ.. ಅಂತಾ ಸಂಭಾಳಿಸಿದರೂ ಪ್ರಯೋಜನಕ್ಕೆ ಬರಲಿಲ್ಲ. ಇನ್ನು ವರದಿಗಾರರನ್ನು ಅವಮಾನಿಸುವಂತೆ ನಿರೂಪಕಿ ಅನುಶ್ರೀ ಸ್ವತಃ ತಾನೇ ಪ್ರಶ್ನೆ ಕೇಳುತ್ತಿದ್ದಳು. ಜೊತೆಗೆ ನೀವು ಇಂತಿಷ್ಟೇ ಪ್ರಶ್ನೆ ಕೇಳಬೇಕು, ಹೀಗೇ ಕೇಳಬೇಕೆಂದೆಲ್ಲಾ ತಾಕೀತು ಮಾಡುತ್ತಿದ್ದಳು. ಈ ಕರ್ಮಕಾಂಡವನ್ನೆಲ್ಲಾ ಕಂಡು “ಥತ್… ಯಾಕಾದರೂ ಇಂಥಾ ಜಾಗಕ್ಕೆ ಬಂದೆವೋ? ಇದೊಂದು ಪ್ರೆಸ್ಮೀಟಾ ಅಂಥಾ ಮುಖ ಕಿವುಚಿಕೊಂಡು ಎದ್ದುಬರುವಂತಾಯಿತು.
ಕಿಚ್ಚ ಸುದೀಪ್ ಅವರನ್ನು ‘ದೀಪಣ್ಣಾ’ ಅಂತಾ ಆರಾಧಿಸುವ ಅವರ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಕಟೌಟು ಕಟ್ಟುವವರು, ಹಾಲಿನ ಅಭಿಷೇಕ ಮಾಡುವವರು, ‘ಕಿಚ್ಚ ಅಂತಾ ಹಚ್ಚೆ ಹಾಕಿಸಿಕೊಂಡವರಿದ್ದಾರೆ. ಆದರೆ ತಮ್ಮ ‘ದಬಾಂಗ್ ಸಿನಿಮಾ ಸಮಾರಂಭದಲ್ಲಿ ಅವರಿಗೆ ಎಂಟ್ರಿಯೇ ಇರಲಿಲ್ಲ. ಅಲ್ಲಿಗೆ ಕರೆಸಿಕೊಂಡಿದ್ದದ್ದು ಮುಖಕ್ಕೆ ಒಂದಿಂಚು ಮೇಕಪ್ಪು ಮಾಡಿಕೊಂಡು, ಮೈತುಂಬಾ ಸೆಂಟು ಸುರಿದುಕೊಂಡುಬಂದಿದ್ದ ಹೈ ಫೈ ಮಂದಿಯನ್ನು ಮಾತ್ರ!
ಈ ಪತ್ರಿಕಾಗೋಷ್ಟಿಯೆನ್ನೋದು ಅದ್ವಾನವಾಗುತ್ತದೆ ಅನ್ನೋದು ಕಿಚ್ಚ ಸುದೀಪ್ ಅವರಿಗೆ ಮೊದಲೇ ಗೊತ್ತಿತ್ತೋ ಏನೋ? ಅದಕ್ಕೆಂದೇ ವಾರಕ್ಕೆ ಮುಂಚೆಯೇ ಆಯ್ದ ಪತ್ರಕರ್ತರನ್ನು ಕರೆಸಿಕೊಂಡು ಖಾಸಗೀ ಸಭೆ ಮಾಡಿದ್ದರು. ಪತ್ರಿಕೋದ್ಯಮದ ಬೇರೆ ವಿಭಾಗಗಳಿಗೆ ಹೋಲಿಸಿದರೆ, ಕನ್ನಡ ಸಿನಿಮಾ ಪತ್ರಕರ್ತರ ವಲಯ ತುಂಬಾ ಚಿಕ್ಕದು. ಟೀವಿ ಚಾನೆಲ್ಲುಗಳ ವರದಿಗಾರರನ್ನು ಹೊರತುಪಡಿಸಿ ಎಣಿಸಿದರೆ ಹದಿನೈದು ಜನರಿಲ್ಲ. ಸಾಮಾನ್ಯಕ್ಕೆ ಪ್ರಚಾರಕರ್ತರ ಮೂಲಕ ಪ್ರೆಸ್ಮೀಟುಗಳನ್ನು ಅರೇಂಜ್ ಮಾಡಿ, ತಮ್ಮ ಸಿನಿಮಾ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡೋದು ವಾಡಿಕೆ. ಆದರೆ ಸುದೀಪ್ ಮಾತ್ರ ಇರುವವರ ನಡುವೆಯೇ ಡಿವೈಡ್ ಅಂಡ್ ರೂಲ್ ನೀತಿ ಅನುಸರಿಸುತ್ತಿದ್ದಾರೆ. ನಿರ್ಮಾಪಕ ಜಾಕ್ ಮಂಜು ಮುಖಾಂತರ ಕೆಲವರನ್ನು ಮಾತ್ರ ಕರೆಸಿಕೊಂಡು ಮಾಹಿತಿ ನೀಡಿ ಬರೆಸಿಕೊಳ್ಳುತ್ತಾರೆ ಅನ್ನೋ ಆರೋಪವಿದೆ. ಇದುವರೆಗೂ ಕನ್ನಡದ ಯಾವ ಹೀರೋಗಳೂ ಹೀಗೆ ಮಾಡಿಲ್ಲ. ಹಿಂದೊಮ್ಮೆ ಕೂಡಾ ಇದನ್ನೇ ಮಾಡಿ ಟೀಕೆಗೆ ಗುರಿಯಾಗಿದ್ದರು. ಮತ್ತೆ ಅದನ್ನೇ ಮಾಡಿದ್ದಾರೆ.
ಸುದೀಪ್ ಅವರೇ, ನೀವು ಅದ್ಭುತ ಕಲಾವಿದ. ಕನ್ನಡಿಗನಾಗಿ, ನಿಮ್ಮ ನಟನೆಯ ಮೂಲಕ ಜಗತ್ತಿನಾದ್ಯಂತ ದೊಡ್ಡ ಹೆಸರು ಮಾಡಿದ್ದೀರಿ. ಆದರೆ ಇಂಥಾ ಸಣ್ಣ ಕೆಲಸಗಳು ನಿಮ್ಮ ಘನತೆಗೆ ಭೂಷಣವಲ್ಲ!
No Comment! Be the first one.