ಸಿನಿಮಾ ಅನ್ನೋದು ಮಗುವಿದ್ದಂತೆ. ಅದರ ಹುಟ್ಟು, ಬೆಳವಣಿಗೆ, ಬಿಡುಗಡೆ ಎಲ್ಲವೂ ಹೆಚ್ಚುಕಮ್ಮಿ ಅದೇ ಪ್ರೋಸೆಸ್ಸು. ಕಥೆಯ ರೂಪದಲ್ಲಿ ಗರ್ಭಕಟ್ಟಿ, ಹಂತ ಹಂತವಾಗಿ ವಿಕಸನಗೊಂಡು, ಹೊರಬಂದಿರುತ್ತದೆ. ಈ ಹಂತದಲ್ಲಿ ಹಲವು ಪ್ರತಿಭಾವಂತರು ತಮ್ಮತಮ್ಮ ಕೆಲಸ ಮಾಡಿರುತ್ತಾರೆ. ಚಿತ್ರೀಕರಣಗೊಂಡ ಸಿನಿಮಾದ ಸರಕೆಲ್ಲವೂ ಅಂತಿಮವಾಗಿ ಬಂದು ತಲುಪುವುದು ಎಡಿಟರ್ ಟೇಬಲ್ಲಿಗೆ.
ನಿರ್ದೇಶಕರ ಕಲ್ಪನೆ, ಛಾಯಾಗ್ರಾಹಕರ ಕ್ರಿಯಾಶೀಲತೆಯೆಲ್ಲಾ ಸೇರಿ ರೂಪುಗೊಂಡ ರಾಶಿರಾಶಿ ಫೋಟೇಜು ಕಲಸಿಕೊಂಡು ಬಿದ್ದಿರುತ್ತದೆ. ಅದನ್ನೆಲ್ಲಾ ಒಪ್ಪವಾಗಿ ಜೋಡಿಸಿ, ಬೇಕಾದ್ದಷ್ಟನ್ನು ಮಾತ್ರ ಉಳಿಸಿಕೊಂಡು, ನಿರ್ದಿಷ್ಟ ಅವಧಿಗೆ ಕೂರಿಸುವುದಿದೆಯಲ್ಲಾ? ನಿಜಕ್ಕೂ ತ್ರಾಸದ ಕೆಲಸವದು. ಒಂದು ಸಿನಿಮಾ ಎಡಿಟಿಂಗ್ ಟೇಬಲ್ಲಿನಿಂದ ಅಂತಿಮ ರೂಪ ಪಡೆದು ಹೊರಬರುವಷ್ಟರಲ್ಲಿ ಒಬ್ಬ ಸಂಕಲನಕಾರ ಏನಿಲ್ಲವೆಂದರೂ ನೂರಕ್ಕೂ ಅಧಿಕ ಸಲ ಆ ಚಿತ್ರವನ್ನು ನೋಡಿರಲೇಬೇಕು. ಎಷ್ಟೇ ಅತ್ಯುತ್ತಮ ಕಂಟೆಂಟ್ ಆಗಿದ್ದರೂ ನೋಡಿದ್ದನ್ನೇ ಪದೇ ಪದೇ ನೋಡುವುದು ಹಿಂಸೆಯ ಕೆಲಸ. ಆದರೂ, ಎಲ್ಲೂ ಬೇಸರಿಸಿಕೊಳ್ಳದೆ, ಸಹನೆ ಕಳೆದುಕೊಳ್ಳದೆ, ತಾಳ್ಮೆ, ಕ್ರಿಯಾಶೀಲತೆ ಎಲ್ಲವನ್ನೂ ಬೆರೆಸಿ ಚಿತ್ರವೊಂದಕ್ಕೆ ಫೈನಲ್ ಟಚ್ ಕೊಡುವ ಪ್ರಮುಖ ವ್ಯಕ್ತಿ ಸಂಕಲನಕಾರ!
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನ ಸಂಕಲನಕಾರರಿದ್ದಾರೆ. ಇಲ್ಲಿಂದ ಹೋಗಿ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿದ್ದವರಿದ್ದಾರೆ. ಮೊದಲೆಲ್ಲಾ ನೆಗೇಟೀವ್ ರೀಲುಗಳನ್ನು ಕತ್ತರಿಸಿ ಜೋಡಿಸಬೇಕಿತ್ತು. ಈಗೇನಿದ್ದರು ಡಿಜಿಟಲ್ ಫಾರ್ಮ್ಯಾಟು. ಕನ್ನಡದಲ್ಲಿ ಸದ್ಯ ಎಲ್ಲೆಡೆ ಕೇಳಿಬರುತ್ತಿರುವ ಸಂಲನಕಾರರ ಹೆಸರಿನಲ್ಲಿ ಯುಡಿವಿ ವೆಂಕಿ ಪ್ರಮುಖರು.
ವೆಂಕಿ ಮೂಲತಃ ತುಮಕೂರಿನ ಕೊತ್ತೀಹಳ್ಳಿ ಗ್ರಾಮದಿಂದ ಬಂದವರು. ಸಿದ್ಧಾರ್ಥ ಕಾಲೇಜಿನಲ್ಲಿ ಸೆಕೆಂಡ್ ಪಿಯುಸಿ ಮುಗಿಸಿ ನೇರವಾಗಿ ಬೆಂಗಳೂರಿಗೆ ಬಂದಿಳಿದ ವೆಂಕಿ ಖಾಸಗಿ ಕಂಪೆನಿಯೊಂದರಲ್ಲಿ ಜೆರಾಕ್ಸ್ ಮಾಡುವ ಕೆಲಸಕ್ಕೆ ಸೇರಿದ್ದರು. ನಂತರ ಮಾರ್ಡನ್ ಬ್ರೆಡ್ ಸಪ್ಲೈ ಮಾಡುವ ಕಾಯಕವನ್ನೂ ನಿರ್ವಹಿಸಿದರು. ತೀರಾ ಚಿಕ್ಕಂದಿನಿಂದಲೇ ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ವಹಿಸಿಕೊಂಡಿದ್ದವರು ವೆಂಕಿ. ಹತ್ತನೇ ಕ್ಲಾಸಿನಲ್ಲಿದ್ದಾಗಲೇ 3ಡಿ ಚಿತ್ರಕಲೆ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಹುಮಾನ ಪಡೆದಿದ್ದರು.
ವಿಷ್ಣುವರ್ಧನ್ ಮತ್ತು ದರ್ಶನ್ ಅವರನ್ನು ಅಪಾರವಾಗಿ ಇಷ್ಟಪಡುತ್ತಿದ್ದ ವೆಂಕಿ ಪೇಪರಿನಲ್ಲಿ ಬಂದ ಅವರ ಫೋಟೋಗಳನ್ನು ನೋಡಿ ದೊಡ್ಡದಾಗಿ ಬರೆದಿಡುತ್ತಿದ್ದರು. ಜಾಹೀರಾತಿನಲ್ಲಿ ಬಂದ ಕನ್ನಡ ಚಿತ್ರಗಳ ಅಕ್ಷರ ವಿನ್ಯಾಸಗಳನ್ನು ಬೇರೆ ಬಗೆಯಲ್ಲಿ ಬರೆದಿಡುತ್ತಿದ್ದರು. ಹೀಗೆ ಚಿತ್ರ ಕಲೆಯಲ್ಲಿ ಆಸಕ್ತಿಯಿರಿಸಿಕೊಂಡಿದ್ದ ಹುಡುಗನ ಕ್ರಿಯಾಶೀಲತೆ ಜೆರಾಕ್ಸ್ ಮಷಿನ್ನಿನ ಮುಂದೆ, ಬನ್ನು, ಬ್ರೆಡ್ಡು ವಾಸನೆಯ ನಡುವೆ ಕಳೆದುಹೋಗುತ್ತಿತ್ತೇನೋ? ಆದರೆ ಹಾಗೆ ಆಗಲು ಇವರ ಭಾವ ಬಿಡಲಿಲ್ಲ.
ಕನ್ನಡ ಚಿತ್ರರಂಗದ ಸದ್ಯದ ಸ್ಟಾರ್ ಎಡಿಟರ್ ಕೆ.ಎಂ. ಪ್ರಕಾಶ್. ಇವರ ಅಣ್ಣನಿಗೆ ವೆಂಕಿಯ ಸೋದರಿಯನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಹೀಗಾಗಿ ವೆಂಕಟೇಶ್ ರನ್ನು ಕರೆತಂದು ಪ್ರಕಾಶ್ ಬಳಿ ಅಸಿಸ್ಟೆಂಟ್ ಕೆಲಸಕ್ಕೆ ಸೇರಿಸಿದ್ದರು. ಅಲ್ಲಿ ಸತತ ಒಂದೂವರೆ ವರ್ಷ ಪ್ರಕಾಶ್ ಅವರ ಹಿಂದೆ ಕೂತು ಅವರು ಮಾಡುವ ಕೆಲಸವನ್ನು ನೋಡಿದ್ದಾಯಿತು. ಬೆಳಿಗ್ಗೆಯಿಂದ ರಾತ್ರಿ ತನಕ ಪ್ರಕಾಶ್ ಬಿಡುವಿರದಂತೆ ಕೆಲಸ ಮಾಡುತ್ತಿದ್ದರು. ಅವರು ಎದ್ದುಹೋದ ನಂತರ ರಾತ್ರಿಯಿಡೀ ಕಂಪ್ಯೂಟರ್ ಹಿಡಿದು ನೋಡಿ ಕಲಿತ ವಿಧ್ಯೆಯನ್ನು ಪ್ರಯೋಗಿಸಲು ಶುರು ಮಾಡಿದ್ದರು.
ಒಂದಷ್ಟು ಫೋಟೇಜುಗಳನ್ನು ಸೇರಿಸಿ ಕುತೂಹಲ ಹುಟ್ಟುವಂತೆ ಜೋಡಿಸುವುದನ್ನೆಲ್ಲಾ ಮಾಡುತ್ತಿದ್ದರು. ಕೆ.ಎಂ. ಶಂಕರ್ ಅವರ ಬಳಿ ನಾಗರ ಹೊಂದಿಸುವುದನ್ನೂ ಮಾಡುತ್ತಿದ್ದರು. ಆ ಹೊತ್ತಿಗೇ ವೆಂಕಿಯ ಒಳಗೊಬ್ಬ ಕ್ರಿಯಾಶೀಲ ಕೆಲಸಗಾರ ಇದ್ದಾನೆನ್ನುವುದು ಪ್ರಕಾಶ್ ಅವರಿಗೆ ಗೊತ್ತಾಗಿತ್ತು. ಹಲವು ಸಿನಿಮಾಗಳ ಟ್ರೇಲರುಗಳನ್ನು ಕಟ್ ಮಾಡುವ ಕೆಲಸ ನೀಡಿದರು. ತಾವು ಕೆಲಸ ಮಾಡುತ್ತಿದ್ದ ಸಿನಿಮಾಗಳ ಜೊತೆಗೆ ಬೇರೆ ಚಿತ್ರಗಳ ಟ್ರೇಲರ್ ಕೆಲಸ ಕೂಡಾ ಬರಲು ಶುರುವಾಯಿತು. ಸಾರಥಿ, ಮೈಲಾರಿ, ಬೃಂದಾವನ, ವಿರಾಟ್, ಅಂಬರೀಶ, ರಾಜಾಹುಲಿ, ಬಹದ್ದೂರ್, ರನ್ನ ಸಿನಿಮಾಗಳಿಗೆ ಸಹಾಯಕರಾಗಿ ಕೆಲಸ ಮಾಡುತ್ತಲೇ ಸಾಕಷ್ಟು ಚಿತ್ರಗಳ ಟ್ರೇಲರನ್ನು ವೆಂಕಿ ರೂಪಿಸಿದರು.
ರಾಮ್ ನಾರಾಯಣ್ ನಿರ್ದೇಶನದ, ರಾಮು ಕೊರಿಯೋಗ್ರಫಿ ಮಾಡಿದ್ದ ಪೈಪೋಟಿ ಚಿತ್ರದ ಹಾಡೊಂದರಲ್ಲಿ ಯಾವ ವಾದ್ಯಗಳನ್ನು ಬಳಸದೇ ಬಾಯಲ್ಲಿ ಸ್ವರ ಹೊಮ್ಮಿಸಲಾಗಿತ್ತು. ಅದನ್ನು ಸಂಕಲನ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ವೆಂಕಿ ನಂತರ ಪೂರ್ತಿ ಸಿನಿಮಾವನ್ನು ಎಡಿಟ್ ಮಾಡಿದರು. ಹಾಗೆ ಸ್ವತಂತ್ರ ಸಂಕಲನಕಾರರಾಗಿ ಕೆಲಸ ಆರಂಭಿಸಿದ ವೆಂಕಿ ಟೈಸನ್, ರಾಜ ಮಾರ್ತಾಂಡ ತನಕ ತಮ್ಮ ಎಲ್ಲ ಸಿನಿಮಾಗಳನ್ನು ಇವರ ಕೈಗೆ ಒಪ್ಪಿಸುತ್ತಿದ್ದಾರೆ.
ಈ ನಡುವೆ ನವನೀತ್ ಅವರ ಕರ್ವ, ಕ್ರ್ಯಾಕ್, ದಶರಥ, ಬಕಾಸುರ, ಕೆಮಿಸ್ಟ್ರಿ ಆಫ್ ಕರಿಯಪ್ಪ, ಸಂಯುಕ್ತ-೨, ಸ್ಟ್ರೈಕರ್, 5ಜಿ, ಮತ್ತು ಬಿಡುಗಡೆಯಾಗಬೇಕಿರುವ ರಾಜಮಾರ್ತಾಂಡ, ಅಬ್ಬರ, ಶಂಭೋ ಶಿವಶಂಕರ, ಹಾಫ್ ಮುಂತಾದ ಚಿತ್ರಗಳಿಗೂ ವೆಂಕಿ ಕತ್ತರಿ ಪ್ರಯೋಗ ಮಾಡಿದ್ದಾರೆ. ವರ್ಷಕ್ಕೆ ಮುಂಚೆ ಬಂದ ಪ್ರಜ್ವಲ್ ದೇವರಾಜ್ ಅಭಿನಯದ ಜಂಟಲ್ ಮನ್. ನಿಜಕ್ಕೂ ಇದು ಪ್ರಜ್ಜು ಕೆರಿಯರಿನ ಪ್ರಮುಖ ಸಿನಿಮಾ. ಜಡೇಶ್ ನಿರ್ದೇಶನದ ಜಂಟಲ್ ಮನ್ ಚಿತ್ರದಲ್ಲಿ ಸಂಕಲನ ಪ್ರಧಾನ ಪಾತ್ರ ನಿರ್ವಹಿಸಿತ್ತು. ಅದನ್ನು ಯಶಸ್ವಿಗೊಳಿಸಿದ್ದು ಕೂಡಾ ಇದೇ ವೆಂಕಿ…
ಲಿರಿಕಲ್ ವಿಡಿಯೋ ಹರಿಕಾರ…
ಕನ್ನಡದ ಮಟ್ಟಿಗೆ ಲಿರಿಕಲ್ ವಿಡಿಯೋ ಎನ್ನುವ ಕಾನ್ಸೆಪ್ಟು ಆರಂಭಿಸಿದ್ದು ಇದೇ ವೆಂಕಿ. ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಮತ್ತು ರನ್ನ ಚಿತ್ರಗಳ ಲಿರಿಕಲ್ ವಿಡಿಯೋ ಕೆಲಸವನ್ನು ಏಕಕಾಲದಲ್ಲಿ ಮಾಡಿಮುಗಿಸಿದ್ದರು. ನಂತರ ಲಿರಿಕಲ್ ವಿಡಿಯೋ ಅನ್ನೋದು ಒಂದು ಟ್ರೆಂಡ್ ಆಗಿ ಮಾರ್ಪಟ್ಟು ಇದುವರೆಗೂ ಮುಂದುವರೆದಿದೆ. ಟೈಸನ್ ಚಿತ್ರದ ಲಿರಿಕಲ್ ವಿಡಿಯೋ ನೋಡಿದ ಮೀಡಿಯಾ ಹೌಸ್ ನ ಶೈಲಜಾ ನಾಗ್ ವೆಂಕಿಯನ್ನು ಕರೆದು ಕೆಲಸ ಕೊಟ್ಟರು. ಈತನಕ ಡಿ ಬೀಟ್ಸ್ ನ ಹಲವಾರು ಹಾಡುಗಳಿಗೆ ವೆಂಕಿ ಲಿರಿಕಲ್ ವಿಡಿಯೋ ವಿನ್ಯಾಸ ಮಾಡಿದ್ದಾರೆ.
ಏನಿದು ಯುಡಿವಿ?
ರಾಜಧಾನಿ ಚಿತ್ರದ ಸಂದರ್ಭದಲ್ಲಿ ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರ ಜೊತೆ ಕೆಲಸ ಮಾಡುವಾಗ ಒಮ್ಮೆ ಅವರು ನಿನ್ನ ಹೆಸರೇನು ಅಂತಾ ಕೇಳಿದ್ದರು. ʻಬರೀ ವೆಂಕಟೇಶ್ ಕೆ.ಜೆ. ಅಂದರೆ ಸಿನಿಮಾದಲ್ಲಿ ಯಾರೆಂದರೆ ಯಾರೂ ಗುರುತಿಸಿಕೊಳ್ಳುವುದಿಲ್ಲ. ಬೇರೆ ಏನಾದರೂ ಜೊತೆ ಸೇರಿಸಿಕೋʼ ಅಂದಿದ್ದರು. ಉಮೇಶ್, ದೇವರಾಜ್, ವೆಂಕಟೇಶ್ ಮೂವರು ಹಳೇ ಸ್ನೇಹಿತರು. ಒಂದೇ ರೀತಿಯ ಬಟ್ಟೆ ಹಾಕುವುದು, ಒಟ್ಟಿಗೇ ಓಡಾಡುವುದು ಇತ್ತು. ಅದಕ್ಕೆ ಸ್ನೇಹದ ಸಂಕೇತವಾಗಿ ಯು.ಡಿ.ವಿ. ಅಂಥಾ ಸೇರಿಸಿಕೊಂಡರು ವೆಂಕಟೇಶ್.
ಸಾಮಾನ್ಯಕ್ಕೆ ಸಂಕಲನಕಾರರು ವಿಎಫ್ಎಕ್ಸ್ ಮುಂತಾದ ಕೆಲಸಗಳನ್ನು ಮಾಡುವುದಿಲ್ಲ. ಸಣ್ಣದೊಂದು ಎಫೆಕ್ಟ್ ಸೇರಿಸಲು ಮತ್ತೊಬ್ಬರ ಬಳಿ ಕಳಿಸುವುದುಂಟು. ಆದರೆ, ವೆಂಕಿಗೆ ಕೆಲಸ ಒಪ್ಪಿಸಿದರೆ, ಅಂತಾ ಯಾವ ಕಿರಿಕಿರಿ ಇರೋದಿಲ್ಲ. ಎಡಿಟಿಂಗ್ ಜೊತೆ ಫೋಟೋಶಾಪ್, ಆಫ್ಟರ್ ಎಫೆಕ್ಟ್ ಗಳಲ್ಲಿ ಕೂಡಾ ಇವರು ಎಕ್ಸ್ ಪರ್ಟ್…!
ಗಡಿಯಾರದ ಕಡೆ ಗಮನ ಕೊಡದೆ, ಕೂತರೆ ದಿನಗಟ್ಟಲೆ ಕೆಲಸ ಮಾಡುವ ಹಾರ್ಡ್ ವರ್ಕರ್ ಇವರು. ಪತ್ನಿ ಪ್ರೇಮಾಂಜಲಿ ಮತ್ತು ಮಗ ಪುನರ್ವ್ ಜೊತೆಗೆ ಬದುಕು ಕಟ್ಟಿಕೊಂಡಿರುವ ಯುಡಿವಿ ವೆಂಕಟೇಶ್ ನಿಜಕ್ಕೂ ಅಪರೂಪದ ತಂತ್ರಜ್ಞ. ಇವತ್ತು ಅವರ ಹುಟ್ಟುಹಬ್ಬದ ಕಾರಣ ಅವರ ಲೈಫ್ ಜರ್ನಿಯನ್ನು ನಿಮಗೆ ತಿಳಿಸಲಾಯಿತು.
ಹ್ಯಾಪಿ ಬರ್ತ್ ಡೇ ವೆಂಕಿ…