ದರ್ಶನ್ ಮೊದಲಿನಿಂದಲೂ ಮಾಧ್ಯಮದವರ ಜೊತೆಗೆ ಲವ್ ಅಂಡ್ ಹೇಟ್ ಸಂಬಧವನ್ನೇ ಚಾಲ್ತಿಯಲ್ಲಿಟ್ಟುಕೊಂಡಿದ್ದಾರೆ. ಇಲ್ಲಿ ಯಾರೋ ಒಬ್ಬರದ್ದು ಸರಿ, ಇನ್ನೊಬ್ಬರದ್ದು ತಪ್ಪು ಅಂತಾ ಖಡಾಖಂಡಿತವಾಗಿ ಹೇಳಿಬಿಡಲು ಸಾಧ್ಯವಿಲ್ಲ.
ನಿನ್ನೆ ಮೊನ್ನೆಯ ತನಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುಂತರೂ, ನಿಂತರೂ ಮೀಡಿಯಾಗಳಲ್ಲಿ ಸುದ್ದಿಯಾಗುತ್ತಿತ್ತು. ಇಂಡಿಯಾ ಲೆವೆಲ್ಲಿನಲ್ಲಿ ರಜನಿಕಾಂತ್ ರನ್ನು ಸುಮ್ಮನೇ ಪರದೆ ಮೇಲೆ ತೋರಿಸಿದರೂ ಟಿಆರ್ಪಿ ರೈಸ್ ಆಗತ್ತೆ ಅನ್ನೋದು ಸುದ್ದಿ ಸಂಸ್ಥೆಗಳ ನಂಬಿಕೆ. ಅದೇ ರೀತಿ ಕರ್ನಾಟಕದಲ್ಲಿ ದರ್ಶನ್ ಅತ್ಯುತ್ತಮ ಟಿಆರ್ಪಿ ಮೆಟೀರಿಯಲ್ಲು. ಅದು ಸ್ವತಃ ದರ್ಶನ್ʼಗೂ ಗೊತ್ತಿರುವ ವಿಚಾರ. ಹೀಗಾಗಿಯೇ ಜ಼ೀ ಟೀವಿಯ ವೀಕ್ ಎಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ದರ್ಶನ್ ಹಣ ಪಡೆದು ಸಂದರ್ಶನ ಕೊಟ್ಟಿದ್ದರು. ಬರುವ ಲಾಭವನ್ನು ಅದೊಂದು ಮನರಂಜನಾ ಸಂಸ್ಥೆ ತಿಂದರೆ ಹೇಗೆ? ಅದರ ಒಂದು ಪಾಲು ಅಗತ್ಯವಿದ್ದವರಿಗೆ ಸಲ್ಲಲಿ ಅಂತಾ ದರ್ಶನ್ ಪಡೆದ ಹಣವನ್ನು ರೈತರಿಗೆ ಹಂಚಿದ್ದರು.
ಇತ್ತೀಚೆಗೆ ಏನೇನೂ ಅಲ್ಲದ, ಕೆಲಸಕ್ಕೆ ಬಾರದ ವಿಚಾವನ್ನಿಟ್ಟುಕೊಂಡು ನ್ಯೂಸ್ ಚಾನೆಲ್ಲುಗಳು ಎಳೆದಾಡಿದ್ದೂ ಇದೇ ಟಿ ಆರ್ ಪಿಗೆ ಅನ್ನೋದೂ ನಿಜಾನೆ. ಆದರೆ ದರ್ಶನ್ ಆ ಹೊತ್ತಿನಲ್ಲಿ ಸ್ವಲ್ಪ ಸ್ಥಿತಪ್ರಜ್ಞರಾಗಿ ವರ್ತಿಸಬೇಕಿತ್ತು. ಅವರಿವರ ಮಾತು ಕೇಳದೆ ಸಂದರ್ಭವನ್ನು ಕೂಲಾಗಿ ಹ್ಯಾಂಡಲ್ ಮಾಡಬಹುದಿತ್ತು. ಆದರೆ ದಾಸ ಸ್ವಲ್ಪ ಗಲಿಬಿಲಿಗೊಂಡರು. ಅವರಾಡಿದ ಒಂದೊಂದು ಮಾತೂ ಮತ್ತಷ್ಟು ವಿವಾದಕ್ಕೆ ಕಾರಣವಾಯಿತು. ದರ್ಶನ್ ಮಾತಾಡಿದ್ದ ಅದೊಂದು ಆಡಿಯೋ ಬಿಡುಗಡೆಯಾಯಿತು ನೋಡಿ. ʻನಾನು ಕಕ್ಕ ಮಾಡೋದು, ಉಚ್ಚೆ ಹುಯ್ಯೋದನ್ನೆಲ್ಲಾ ತೋರಿಸ್ತಾರೆ. ಶಾಟ, ಸಿಂಗ್ರಿ…ʼ ಅಂತೆಲ್ಲಾ ಯದ್ವಾತದ್ವಾ ಮಾತಾಡಿದ್ದ ಆಡಿಯೋ ರಪಕ್ಕಂತಾ ಮೀಡಿಯಾಗಳ ಬಾಯಿ ಮುಚ್ಚಿಸಿದ್ದು ಸುಳ್ಳಲ್ಲ.
ಒಂದುವೇಳೆ ಈ ಎಲ್ಲಾ ರಂಕಲುಗಳು ಏರ್ಪಡದಿದ್ದರೆ, ನೆನ್ನೆ ಇಡೀ ಕನ್ನಡದ ಅಷ್ಟೂ ವಾಹಿನಿಗಳಲ್ಲಿ ದರ್ಶನ್ ರಾರಾಜಿಸಿರುತ್ತಿದ್ದರು. ಆಗಸ್ಟ್ 16ಕ್ಕೆ ದರ್ಶನ್ ಬಣ್ಣದ ಬದುಕಿಗೆ ಬಂದು 24 ವರ್ಷಗಳಾಗಿವೆ. ಅಭಿಮಾನಿಗಳು ಇದನ್ನು ಹಬ್ಬದಂತೆ ಆಚರಿಸಿದ್ದಾರೆ. ಮೀಡಿಯಾಗಳು ಮಾತ್ರ ಎಲ್ಲೂ ಇದನ್ನು ಸುದ್ದಿ ಅಂತಾ ಕೂಡಾ ಪರಿಗಣಿಸಿದಂತೆ ಕಾಣುತ್ತಿಲ್ಲ. ಕಳೆದ ಒಂದು ತಿಂಗಳಿನಿಂದ ದರ್ಶನ್ ಕುರಿತಾದ ಯಾವ ಸುದ್ದಿಯನ್ನೂ ವಾಹಿನಿಗಳು ಪ್ರಸಾರ ಮಾಡುತ್ತಿಲ್ಲ. ಇದು ಒಂದು ರೀತಿಯಲ್ಲಿ ಅಘೋಷಿತ ನಿಷೇಧ ಹೇರಿದಂತೆ ಕಾಣುತ್ತಿದೆ.
ಹಾಗೆ ನೋಡಿದರೆ, ಇದು ಸಿನಿಮಾ ಹೀರೋಗಳಿಗೂ ಮಾಧ್ಯಮದವರ ನಡುವೆ ನಡೆಯುತ್ತಿರುವ ಮೊದಲ ಮುನಿಸೇನಲ್ಲ. ಡಾ. ರಾಜ್ ಕುಮಾರ್ ಕಾಲದಿಂದ ಹಿಡಿದು ಇವತ್ತಿನ ತನಕ ಅದು ಮುಂದುವರೆಯುತ್ತಲೇ ಬಂದಿದೆ. ನಟ ಯಶ್ ತಮ್ಮ ಎರಡು ಮೂರು ಸಿನಿಮಾಗಳಿಗೆ ಪತ್ರಿಕಾಗೋಷ್ಠಿ, ಪ್ರದರ್ಶನಕ್ಕೂ ಕರೆಯದೇ ಸಿನಿಮಾ ಬಿಡುಗಡೆ ಮಾಡಿಕೊಂಡಿದ್ದರು. ನಿರ್ದೇಶಕ ಎಸ್ ನಾರಾಯಣ್, ದುನಿಯಾ ಸೂರಿಯಂಥವರು ಕೂಡಾ ಮೀಡಿಯಾದವರ ಸಾವಾಸವೇ ಬೇಡ ಅಂತಾ ಹೋಗಿ ಮತ್ತೆ ವಾಪಾಸು ಬಂದು ಹಲ್ಲುಗಿಂಜಿದ ಉದಾಹರಣೆಗಳಿವೆ.
ದರ್ಶನ್ ಮೊದಲಿನಿಂದಲೂ ಮಾಧ್ಯಮದವರ ಜೊತೆಗೆ ಲವ್ ಅಂಡ್ ಹೇಟ್ ಸಂಬಧವನ್ನೇ ಚಾಲ್ತಿಯಲ್ಲಿಟ್ಟುಕೊಂಡಿದ್ದಾರೆ. ಇಲ್ಲಿ ಯಾರೋ ಒಬ್ಬರದ್ದು ಸರಿ, ಇನ್ನೊಬ್ಬರದ್ದು ತಪ್ಪು ಅಂತಾ ಖಡಾಖಂಡಿತವಾಗಿ ಹೇಳಿಬಿಡಲು ಸಾಧ್ಯವಿಲ್ಲ. ಚನ್ನಾಗಿದ್ದಾಗ ವಿಪರೀತ ಉಬ್ಬಿಸಿ ಮೆರೆಸುವ ಮೀಡಿಯಾದವರು ಸ್ಟಾರ್ ಗಳು ತಿರುಗಿಬಿದ್ದಾಗ ಬಹಿಷ್ಕರಿಸುವ ಮಟ್ಟಕ್ಕೆ ಹೋಗುತ್ತಾರೆ. ಇನ್ನು ಬಹುತೇಕ ಸಿನಿಮಾದವರಿಗೆ ಹೊಗಳಿಕೆ ಮಾತ್ರ ಬೇಕು. ಚಿಟಿಕೆ ಗಾತ್ರದ ಟೀಕೆಯನ್ನೂ ಇವರು ಸಹಿಸಿಕೊಳ್ಳಲಾರರು. ತಪ್ಪನ್ನು ಎತ್ತಿ ತೋರಿದವರ ವಿರುದ್ದ ಲಗಾಲಗಾ ಅಂತಾ ಎಗರಾಡಿಬಿಡುತ್ತಾರೆ.
ಇವೆಲ್ಲ ಏನೇ ಆಗಲಿ, ದರ್ಶನ್ ವಿಚಾರದಲ್ಲಿ ಮೀಡಿಯಾ ತೀರಾ ಆ ಮಟ್ಟಕ್ಕೆ ಅತಿರೇಕವಾಗಿ ವರ್ತಿಸಬಾರದಿತ್ತು. ದರ್ಶನ್ ರನ್ನು ರೊಚ್ಚಿಗೆಬ್ಬಿಸಿ ಮಾತಾಡಿಸೋದು, ಮತ್ತೆ ಇನ್ನೊಬ್ಬ, ಮತ್ತೊಬ್ಬನ ಮೂತಿಗೆ ಮೈಕು ಹಿಡಿದು ಪ್ರತಿಕ್ರಿಯೆ ಪಡೆಯೋದು. ನ್ಯೂ ಸೆನ್ಸ್ ಸೃಷ್ಟಿಸಿ ನ್ಯೂಸು ಹುಟ್ಟಿಸೋ ಕೆಲಸ ಮಾಡಿಬಿಟ್ಟಿತು. ಅದೆಲ್ಲ ಈಗ ಮಹಾಮುನಿಸಿಗೆ ಕಾರಣವಾಗಿದೆ!