ದರ್ಶನ್ ಅವರ ಆಪ್ತ ಸಹಾಯಕ ಶ್ರೀನಿವಾಸ್ ಹೊರಬಂದಿರುವ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಸವಿವರವಾದ ವರದಿಯನ್ನು ಸಿನಿಬಜ಼್ ಪ್ರಕಟಿಸಿತ್ತು. ಅದರ ಬೆನ್ನಿಗೇ ಈಗ ಸ್ವತಃ ಶ್ರೀನಿವಾಸ್ ತಮ್ಮ ಫೇಸ್ ಬುಕ್ ವಾಲ್ ಮೂಲಕ ಸಂದೇಶವೊಂದನ್ನು ರವಾನಿಸಿದ್ಧಾರೆ. ಅದೇನು  ಅಂತಾ ನೀವೇ ಓದಿ…

ದರ್ಶನ್ ತೂಗುದೀಪ ಅಭಿಮಾನಿಗಳು ಮತ್ತು ಎಲ್ಲಾ ಮೀಡಿಯಾ ಸಂಸ್ಥೆಗಳಿಗೂ ನನ್ನ ನಮಸ್ಕಾರಗಳು. ನನಗೂ ಮತ್ತು ದರ್ಶನ್ ತೂಗುದೀಪ ರವರಿಗೂ ಕೆಲಸದ ವಿಷಯವಾಗಿ ಮನಸ್ತಾಪ ಬಂದಿರುವುದು ನಿಜ. ಆದ ಕಾರಣ ನಾನು ದಿನಾಂಕ ೧೮-೦೯-೨೦೧೯ ರಿಂದ ಅವರ ಬಳಿ ಕೆಲಸ ಬಿಟ್ಟಿರುತ್ತೇನೆ. ನನ್ನ ಮೇಲೆ ಯಾರೂ ಸಹ ಇಲ್ಲಸಲ್ಲದ ಆರೋಪ ಹೊರಿಸಬೇಡಿ. ನನಗೂ ಕುಟುಂಬ ಇದೆ. ನಾನು ಬೆಂಗಳೂರು ಬಿಟ್ಟು ಎಲ್ಲಿಗೂ ಹೋಗಿಲ್ಲ. ಇಲ್ಲಿಯೇ ಕೆಲಸ ಮಾಡಿಕೊಂಡು ಇದ್ದೇನೆ.

ನಮ್ಮ ವರದಿಯ ಆಶಯವೂ ಇದೇ ಆಗಿತ್ತು.

ಖ್ಯಾತ ಸಂಸ್ಥೆ ವ್ಯಕ್ತಿಗಳೊಂದಿಗೆ ಕೆಲಸ ಮಾಡಿ ಹೊರಬಂದಾಗ ಇಂಥವೆಲ್ಲಾ ಗಾಳಿಸುದ್ದಿ ಹಬ್ಬೋದು ಸಹಜ. ಹೀಗಾಗಿ ತಮ್ಮ ಬಳಿ ಕೆಲಸ ಮಾಡಿದವರು ಹೊರಹೋದಾಗ, ಅವರು ಸಭ್ಯರಾದ ಪಕ್ಷದಲ್ಲಿ ಸ್ವತಃ ಸೆಲೆಬ್ರಿಟಿಗಳು ‘ಇವರು ಇಷ್ಟು ವರ್ಷ ನಮ್ಮೊಂದಿಗೆ ಕಾರ್ಯ ನಿರ್ವಹಿಸಿದ್ದರು. ಈಗ ಹೊರಟಿದ್ದಾರೆ. ಅವರಿಗೆ ಒಳಿತಾಗಲಿ ಅಂತ ಸ್ಪಷ್ಟನೆ ನೀಡಿದರೆ ಇಂಥ ಗೊಂದಲಗಳಾಗುವುದಿಲ್ಲ.

ಇನ್ನು ಕೆಲವು ನೌಕರರು ಕೆಲಸ ಬಿಟ್ಟು ಹೋದ ಮೇಲೆ ತಮ್ಮನ್ನು ಪೋಷಿಸಿದವರ ಜೊತೆಗಿನ ಹಿಂದಿನ ಎಲ್ಲ ಬಾಂಧವ್ಯವನ್ನು ಮರೆತು ಅನ್ನಬಾರದ್ದನ್ನು ಅಂದು, ಕೆಟ್ಟಾ ಕೊಳಕು ಮಾತಾಡಿಬಿಡುತ್ತಾರೆ. ಜೊತೆಯಲ್ಲಿದ್ದಾಗ ಯಾವುದನ್ನೂ ತೋರಿಸಿಕೊಳ್ಳದೆ, ಚೆಂದಚೆಂದದ ಮಾತಾಡಿ, ಕಾಲ್ತೆಗೆಯುತ್ತಿದ್ದಂತೇ ವರಸೆ ಬದಲಿಸಿಬಿಡುತ್ತಾರೆ. ನಿಜ, ಯಾರೂ ಯಾರಿಗೂ ಬಿಟ್ಟಿ ಚಾಕರಿ ಮಾಡಿರುವುದಿಲ್ಲ, ಹಾಗೆ ಉಚಿತ ಕೆಲಸ ಮಾಡಿಸಿಕೊಳ್ಳಲೂ ಸಾಧ್ಯವಿಲ್ಲ. ಇದ್ದಷ್ಟು ದಿನ ಕಸುಬು ಮಾಡಿ ಕಡೇ ಗಳಿಗೆಯಲ್ಲಿ ಯಾಕೆ ಮುಖ ಕೆಡಿಸಿಕೊಳ್ಳಬೇಕು ಅಲ್ಲವಾ? ಇನ್ನಾದರೂ ಜನ ಅರ್ಥಮಾಡಿಕೊಳ್ಳಬೇಕು.

ಎಲ್ಲರೂ ಎಲ್ಲವನ್ನೂ ಅರ್ಥ ಮಾಡಿಕೊಂಡುಬಿಟ್ಟರೆ ಜಗತ್ತಿನಲ್ಲಿ ಜಗಳ, ಕಲಹಕ್ಕೆ ಕಾರಣವೇ ಇರುವುದಿಲ್ಲ!

* * * * * * * * * *

cinibuzz ಪ್ರಕಟಿಸಿದ್ದ ಮೊದಲ ವರದಿ ಹೀಗಿತ್ತು…

ದರ್ಶನ್ ಎನ್ನುವ ಸ್ಟಾರ್ ನಟನ ದೇಖಾರೇಖಿ ನೋಡಿಕೊಳ್ಳುತ್ತಿದ್ದ, ಅವರ ಮನೆ, ತೋಟ, ಸಿನಿಮಾ ಸೇರಿದಂತೆ ಸಕಲ ವ್ಯವಹಾರಗಳನ್ನೂ ಗಮನಿಸಿಕೊಳ್ಳುತ್ತಿದ್ದ ವ್ಯಕ್ತಿ ಈಗ ಏಕಾಏಕಿ ಅವರ ಕ್ಯಾಪಿನಿಂದ ಹೊರಬಿದ್ದಿದ್ದಾರೆ. ಇದು ದರ್ಶನ್ ಅವರ ಆಪ್ತರಿಗಷ್ಟೇ ಅಲ್ಲದೆ ಅಭಿಮಾನಿಗಳ ಪಾಲಿಗೂ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ.

ಪಿ. ಶ್ರೀನಿವಾಸ್ ಯಾನೆ ಪಿಸ್ತಾ ಸೀನ ಎಂದು ಕರೆಸಿಕೊಳ್ಳುತ್ತಿದ್ದ ವ್ಯಕ್ತಿಯ ಕುರಿತು ಖುದ್ದು ದರ್ಶನ್ ಅವರ ಅಫಿಷಿಯಲ್ ಪೇಜಿನಲ್ಲಿ “ನಮ್ಮ ಡಿ ಬಾಸ್ ಬಳಿ ಕೆಲಸ ನಿರ್ವಹಿಸುತ್ತಿದ್ದ ಶ್ರೀನಿವಾಸ್ (ಸೀನ)ರವರನ್ನು ತೂಗುದೀಪ ಪರಿವಾರ ಹಾಗೂ ಅಭಿಮಾನಿ ಸಂಘದ ವ್ಯಾವಹಾರಿಕ ಚಟುವಟಿಕೆಗಳಿಂದ ದೂರ ಸರಿಸಲಾಗಿದೆ. ಅವರ ಜೊತೆ ಡಿ ಬಾಸ್ ಅವರ ಹೆಸರಿನಲ್ಲಿ ಯಾವುದೇ ವ್ಯವಹಾರ ಮಾಡದಿರಿ ಅಂತೊಂದು ಪೋಸ್ಟ್ ಹಾಕಲಾಗಿದೆ.

ದರ್ಶನ್ ಮತ್ತು ಸೀನಣ್ಣನ ನಡುವೆ ಎಲ್ಲವೂ ಸರಿಯಿಲ್ಲ. ಏನೋ ಮನಸ್ತಾಪವಾಗಿದೆ ಅನ್ನೋದು ಕಳೆದ ಎರಡು ತಿಂಗಳಿನಿಂದಲೇ ಸುತ್ತಲಿನ ಪರಿಸರಕ್ಕೆ ಗೊತ್ತಾಗಿಹೋಗಿತ್ತು. ಹೋದಲ್ಲಿ ಬಂದಲ್ಲಿ ದರ್ಶನ್ ಜೊತೆಗಿರುತ್ತಿದ್ದ, ಅವರ ಮನೆ ಬಳಿ ಹೋದ ಅಭಿಮಾನಿಗಳನ್ನೂ ಸಂಭಾಳಿಸುತ್ತಿದ್ದ, ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕಣ್ಮರೆಯಾದಾಗ ಯಾರಿಗಾದರೂ ಅನುಮಾನ ಬರುವುದು ಸಹಜವೇ. ದರ್ಶನ್ ಯಾರಿಗಾದರೂ ಹತ್ತು ರುಪಾಯಿ ಕೊಡಬೇಕಿದ್ದರೂ ಅದನ್ನು ಶ್ರೀನಿವಾಸ್ ಮೂಲಕವೇ ಕೊಡಿಸುತ್ತಿದ್ದರು. ನಾಲ್ಕಾರು ವರ್ಷಗಳಿಂದೀಚೆಗಷ್ಟೇ, ಇತ್ತೀಚಿಗಷ್ಟೇ ದರ್ಶನ್ ಅವರ ಸುತ್ತಲಿನವರನ್ನು ಯಾಮಾರಿಸಿ ಗಾಯಬ್ ಆದನಲ್ಲಾ ಮಲ್ಲಿ? ಆತ ದರ್ಶನ್ ಅವರ ಡೇಟುಗಳನ್ನು ಮಾತ್ರ ನಿಭಾಯಿಸುತ್ತಿದ್ದ. ಉಳಿದಂತೆ ಯೂನಿಟ್ಟು, ದರ್ಶನ್ ಫಾರ್ಮ್ ಹೌಸ್ ನಕೆಲಸಗಾರರು, ಡ್ರೈವರುಗಳು, ಸಹಾಯಕರು ಸೇರಿದಂತೆ ಎಲ್ಲರನ್ನು ಮೇಂಟೇನು ಮಾಡುವ ಜವಾಬ್ದಾರಿಯಿದ್ದದ್ದು ಸೀನಣ್ಣನ ಮೇಲೇ.

ಅಣ್ಣಯ್ಯನ ತಮ್ಮ!
ಸಿನಿಮಾರಂಗದಲ್ಲಿ ಅದಾಗಲೇ ಮೂವತ್ತು ವರ್ಷಕ್ಕೂ ಹೆಚ್ಚು ಕಾಲ ಸರ್ವೀಸು ಮಾಡಿರುವ ಶ್ರೀನಿವಾಸ್ ಮೊದಲಿಗೆ ಯೂನಿಟ್ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಣ್ಣಯ್ಯ ಎನ್ನುವ ನಿರ್ದೇಶಕರೊಬ್ಬರಿದ್ದಾರೆ. ಈ ಹಿಂದೆ ನಾರಿಯ ಸೀರೆ ಕದ್ದ ಮತ್ತು ಆಕ್ಟೋಪಸ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಈತ ಸಿನಿಮಾ ನಿರ್ದೇಶನ ವಿಭಾಗದಲ್ಲಿ ಕೆಲಸಕ್ಕೆ ಸೇರುವ ಮುಂಚೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಬಳಿ ಸಹಾಯಕನಾಗಿದ್ದಾತ. ನಂತರ ಮಧು ಬಂಗಾರಪ್ಪ ಸಂರ್ಪಕ್ಕೆ ಬಂದು, ಆಕಾಶ್ ಆಡಿಯೋದಲ್ಲಿ ಕೆಲಸ ಮಾಡಿ ನಿರ್ದೇಶಕನೂ ಆದ ವ್ಯಕ್ತಿ. ಈ ಅಣ್ಣಯ್ಯನ ಖಾಸಾ ಸಹೋದರ ಈ ಪಿಸ್ತಾ ಸೀನ.

ಒಂದು ಕಾಲಕ್ಕೆ ದರ್ಶನ್ ಲೈಟ್ ಬಾಯ್ ಆಗಿ ಕೆಲಸ ನಿರ್ವಹಿಸುವ ಸಂದರ್ಭ ಒದಗಿಬಂದಿತ್ತಲ್ಲಾ? ಆ ಟೈಮಲ್ಲಿ ದರ್ಶನ್ ಕಸುಬು ಮಾಡಿದ್ದು ಇದೇ ಸೀನನ ಕೈಕೆಳಗೆ. ಯಾವಾಗ ಮೆಜೆಸ್ಟಿಕ್ ಸಿನಿಮಾ ಬಂದು, ಅದು ಹಿಟ್ ಆಗಿ ದರ್ಶನ್ ಅನ್ನೋ ನಟ ಸೂಪರ್ ಸ್ಟಾರ್ ಆಗುವ ಮಟ್ಟಕ್ಕೆ ಬೆಳೆದರೋ ಆಗ ಸೀನನ್ನು ಕರೆದು ತನ್ನೊಟ್ಟಿಗೇ ಇರಿಸಿಕೊಂಡಿದ್ದರು.

ನವಗ್ರಹ ಸಿನಿಮಾ ನಿರ್ಮಾಣ ಹಂತದಲ್ಲಿದ್ದಾಗ ದರ್ಶನ್ ಅಣಜಿ ನಾಗರಾಜ್ ಜೊತೆ ನಮನ ಯೂನಿಟ್’ಗೆ ಒಂದು ರೀತಿಯಲ್ಲಿ ಪಾಲುದಾರರಾಗಿದ್ದರು. ತಮ್ಮದೇ ಬ್ಯಾನರಿನ ಸಿನಿಮಾಗೆ ಯೂನಿಟ್ಟು ಕಳಿಸು ಅಂದಾಗಲೂ ಅಣಜಿ ಅಸಹಕಾರ ತೋರಿದ್ದರಂತೆ. ಆ ಕೂಡಲೇ ಹೊಸದೊಂದು ಯೂನಿಟ್ ಶುರುಮಾಡಿ ‘ತೂಗುದೀಪ ಯೂನಿಟ್’ ಎಂದು ಹೆಸರಿಟ್ಟರು. ಸಾರಥಿ ಸಿನಿಮಾದಿಂದ ಈ ಯೂನಿಟ್ಟು ಕಾರ್ಯಾರಂಭ ಮಾಡಿತ್ತು. ಆ ಯೂನಿಟ್ಟಿಗೆ ಮುಖ್ಯಸ್ಥರನ್ನಾಗಿಸಿದ್ದು ಇದೇ ಶ್ರೀನಿವಾಸ್’ರನ್ನು. ಆರ್ ಆರ್ ನಗರ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ, ಪತ್ರಕರ್ತೆ ಗೌರಿ ಲಂಕೇಶ್ ಮನೆ ಎದುರುಗಡೆಯೇ ಒಂದು ಮನೆ ಬಾಡಿಗೆಗೆ ಪಡೆದು ಅಲ್ಲಿ ‘ತೂಗುದೀಪ ಯೂನಿಟ್ ಮತ್ತು ಡಿಸ್ಟ್ರಿಬ್ಯೂಟರ‍್ಸ್ ಸಂಸ್ಥೆಯನ್ನು ಆರಂಭಿಸಿದ್ದರು. ದರ್ಶನ್ ಅವರ ಡೇಟ್ಸ್ ನೋಡಿಕೊಳ್ಳುವ ಮತ್ತು ವಿತರಣೆಯ ಕೆಲಸವನ್ನು ಮಲ್ಲಿಗೆ ವಹಿಸಿದ್ದರು. ಮಿಕ್ಕಂತೆ ಎಲ್ಲ ಜವಾಬ್ದಾರಿಗಳೂ ಶ್ರೀನಿವಾಸ್ ನಿಭಾಯಿಸುತ್ತಿದ್ದರು.

ಯಾವಾಗ ಮಲ್ಲು ದೋಖಾ ಪ್ರಕರಣವಾಯಿತೋ ಆಗ ತೂಗುದೀಪ ಸಂಸ್ಥೆಯಲ್ಲಿ ಎಲ್ಲವೂ ಅಲುಗಾಡಲು ಶುರುವಾಯಿತು. ಮಲ್ಲು ಮುಂದಾಳತ್ವದಲ್ಲಿ ತೂಗುದೀಪ ಡಿಸ್ಟ್ರಿಬ್ಯೂಟರ‍್ಸ್ ಬಿಡುಗಡೆ ಮಾಡಿದ್ದ ಪ್ರೇಮಬರಹ ರಿಲೀಸಾಗಿದ್ದೇ ಕೊನೆ. ಮಲ್ಲಿ ಅವ್ಯವಹಾರ ಮಾಡಿದ್ದಾನೆ ಅಂತಾ ಹಿಡಿದುಕೊಟ್ಟಿದ್ದೇ ಅರ್ಜುನ್ ಸರ್ಜಾ. ಇದರಿಂದ ಕಡಿಮೆಯೆಂದರೂ ಒಂದೂವರೆ ಕೋಟಿ ಹಣ ದರ್ಶನ್ ಅವರಿಗೆ ನಷ್ಟವಾಯಿತು. ಅಲ್ಲಿಗೆ ವಿತರಣೆ ನಿಲ್ಲಿಸಿ ಡಿಸ್ಟ್ರಿಬ್ಯೂಷನ್ ಕಛೇರಿಯನ್ನು ಕ್ಲೋಸ್ ಮಾಡಿದರು. ಇದ್ದ ಯೂನಿಟ್ಟನ್ನೂ ಮಾರಿ, ಇನ್ನು ಆ ಕೆಲಸಗಳೆಲ್ಲಾ ಬೇಡ ಅಂತಾ ಸ್ವತಃ ಚಾಲೆಂಜಿಂಗ್ ಸ್ಟಾರ್ ತೀರ್ಮಾನಿಸಿದರು.

ತೀರಾ ನಂಬಿದವರೇ ಹೀಗೆಲ್ಲಾ ಮಾಡಿದ ಮೇಲೆ ಯಾರನ್ನು ನಂಬುವುದು ಯಾರನ್ನು ಬಿಡುವುದು ಅನ್ನೋ ಗೊಂದಲ ದರ್ಶನ್ ಅವರದ್ದಾಗಿತ್ತು. ಮಲ್ಲಿ ವಿಚಾರ ಘಟಿಸಿದಮೇಲೆ ಏನಾಯಿತೋ ಏನೋ ಇದ್ದಕ್ಕಿದ್ದಂತೆ ಸೀನ ರಾಜರಾಜೇಶ್ವರಿನಗರದಲ್ಲೇ ಒಂದು ಮಿಲಿಟ್ರಿ ಹೊಟೇಲು ಶುರು ಮಾಡಿಕೊಂಡರು. ಡ್ರೈವರ್ ಲಕ್ಷ್ಮಣ  ದಾಸನ ಪರ್ಸನಲ್ ವಿಚಾರಗಳನ್ನು ನೋಡಿಕೊಳ್ಳಲು ಶುರು ಮಾಡಿದ.

ಈ ನಡುವೆ ಸೀನಣ್ಣ ದರ್ಶನ್ ಕ್ಯಾಂಪಿನಿಂದ ದಿಢೀರನೆ ಮರೆಯಾದರು. ಈಗ ನೋಡಿದರೆ ಅಫಿಷಿಯಲ್ಲಾಗಿ ಅನೌನ್ಸ್‌ಮೆಂಟು ಕೂಡಾ ಕೊಟ್ಟಿದ್ದಾರೆ. ‘ವ್ಯವಹಾರದಲ್ಲಿ ಏನೋ ವ್ಯತ್ಯಾಸ ಕಂಡುಬಂದಿತ್ತಂತೆ, ‘ಇತ್ತೀಚೆಗೆ ಮೊದಲಿನಷ್ಟು ಮುತುವರ್ಜಿ ತೋರುತ್ತಿರಲಿಲ್ಲವಂತೆ – ಹೀಗೆ ಸೀನಣ್ಣ ಹೊರಬಂದಿರೋದರ ಹಿಂದೆ ಲಾಟು ಲಾಟು ಅಂತೆ ಕಂತೆಗಳೇ ಸುತ್ತಿಕೊಂಡಿವೆ. ನಿಜಕ್ಕೂ ಏನಾಗಿದೆ ಅನ್ನೋದು ಸ್ವತಃ ದರ್ಶನ್ ಮತ್ತು ಶ್ರೀನಿವಾಸ್ ಇಬ್ಬರಿಗೆ ಬಿಟ್ಟರೆ ಬೇರೆಯಾರಿಗೂ ಗೊತ್ತಿಲ್ಲ.

ದರ್ಶನ್ ಮನೆಯಲ್ಲಿರಲಿ ಬಿಡಲಿ, ಹತ್ತಾರು ಜನ ಕಷ್ಟ ಹೇಳಿಕೊಂಡು ಕ್ಯೂ ನಿಲ್ಲುತ್ತಿದ್ದರು. ಅವರನ್ನೆಲ್ಲಾ ಸಂಭಾಳಿಸಿ, ಇದ್ದದ್ದನ್ನು ಕೊಟ್ಟು ಕಳಿಸುತ್ತಿದ್ದ ಮನುಷ್ಯ. ದರ್ಶನ್ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷರೂ ಆಗಿರುವ ಈ ವ್ಯಕ್ತಿಯನ್ನು ಕಂಡರೆ ದಚ್ಚು ಅಭಿಮಾನಿಗಳಿಗೂ ತುಂಬು ಪ್ರೀತಿ. ಯಾರನ್ನೂ ಮನನೋಯಿಸುವಂತೆ ಮಾತಾಡದೆ, ಎಲ್ಲರೊಂದಿಗೂ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿದ್ದ ಸೀನಣ್ಣ ಅಂದರೆ ಅಭಿಮಾನಿಗಳ ಪಾಲಿಗೆ ‘ಸ್ನೇಹಜೀವಿ. ಇಂಥವರನ್ನು ಸ್ವತಃ ಬಾಸ್ ಹೊರಗೆ ಕಳಿಸಿದ್ದು ಯಾಕೆ? ಇವರಿಬ್ಬರ ನಡುವೆ ಯಾರಾದರೂ ಫಿಟಿಂಗ್ ಇಟ್ಟರಾ? ಅನ್ನೋದು ಫ್ಯಾನುಗಳ ತಲೆಯಲ್ಲಿ ಸದ್ಯ ತಿರುಗುತ್ತಿರುವ ಪ್ರಶ್ನೆಯಾಗಿದೆ.

‘ಸೀನಣ್ಣ ಮೋಸ ಮಾಡಿದನಂತೆ’ ಅಂತಾ ಎಲ್ಲೋ ಕೆಲವರು ಮಾತಾಡುತ್ತಿರಬಹುದು. ಆದರೆ ಶ್ರೀನಿವಾಸ್ ಅವರನ್ನು ಹತ್ತಿರದಿಂದ ಬಲ್ಲವರ ಪ್ರಕಾರ. ಆತ ಯಾವ ಕಾರಣಕ್ಕೂ ದುಡ್ಡು ಪೀಕುವ ಬುದ್ದಿಯನ್ನು ಹೊಂದಿರಲಿಲ್ಲ. ಖತರ್ನಾಕ್ ವ್ಯಕ್ತಿಯೊಬ್ಬ ಶ್ರೀನಿವಾಸನಗರದಲ್ಲಿ ಮನೆ ಕೊಡಿಸುತ್ತೇನೆ ಅಂತಾ ಯಾಮಾರಿಸಿ ಸೀನನಿಗೇ ಹದಿನಾರು ಲಕ್ಷ ರುಪಾಯಿ ಉಂಡೆ ನಾಮ ತೀಡಿದ್ದನಂತೆ. ಈ ವಿಚಾರವಾಗಿ ಕಳೆದ ವರ್ಷ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡಾ ದಾಖಲಾಗಿತ್ತು.

ಶ್ರೀನಿವಾಸ್’ಗೆ ಎದೆಯೆತ್ತರಕ್ಕೆ ಬೆಳೆದ ಇಬ್ಬರು ಮಕ್ಕಳಿದ್ದಾರೆ. ‘ಮಗಳ ಮದುವೆಗೆ ಇಪ್ಪತ್ತೈದು ಲಕ್ಷ ರುಪಾಯಿ ಕೊಡ್ತೀನಿ. ಅದ್ದೂರಿಯಾಗಿ ಮಾಡು’ ಅಂಥಾ ಖುದ್ದು ಯಜಮಾನರು ಹೇಳಿದ್ದರು ಅನ್ನೋ ಸುದ್ದಿ ಕೂಡಾ ಇದೆ. ಇವೆಲ್ಲದರ ನಡುವೆ ಈಗ ಇಂಥದ್ದೊಂದು ಬಿರುಕು ಏರ್ಪಟ್ಟಿದೆ.. ಇಷ್ಟಕ್ಕೇ ಸೀನ ಮತ್ತು ದಾಸನ ನಡುವೆ ಸಂಬಂಧ ಮುರಿದುಹೋಯ್ತು ಅಂತಲೂ ಹೇಳಲಿಕ್ಕಾಗುವುದಿಲ್ಲ. ಯಾವತ್ತಾದರೊಮ್ಮೆ ಅದು ಮತ್ತೆ ಬೆಸೆದುಕೊಳ್ಳಬಹುದು. ಯಾಕೆಂದರೆ ಇವರಿಬ್ಬರಲ್ಲಿ ಒಡೆಯ ಮತ್ತು ಸಹಾಯಕ ಎನ್ನುವುದನ್ನು ಮೀರಿ ಸಹೋದರ ಬಾಂಧವ್ಯವಿದೆ. ಎಲ್ಲವೂ ಸರಿಹೋಗಲಿ ಅಂತಷ್ಟೇ ಈಗ ಆಶಿಸಲು ಸಾಧ್ಯ…

ಸೂಚನೆ : ಯಾರ ಭಾವನೆಗೂ ಘಾಸಿಯಾಗುವ ಕಮೆಂಟ್ ಹಾಕಬಾರದು. ಅವಾಚ್ಯ ಪದಗಳನ್ನು ಬಳಸಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು.

CG ARUN

ಕಪಟನಾಟಕ ಪಾತ್ರಧಾರಿಯ ಸೂತ್ರಧಾರ ಕ್ರಿಷ್ ಸಂದರ್ಶನ

Previous article

ಗ್ಲಿಸರಿನ್ ಇಲ್ಲದೆಯೇ ಅತ್ತುಬಿಟ್ಟಳಂತೆ ಶ್ರೀಲೀಲಾ!

Next article

You may also like

Comments

Leave a reply

Your email address will not be published. Required fields are marked *