ಬಂಡೀಪುರದ ದಟ್ಟ ಕಾಡಿಗೆ ಬೆಂಕಿ ಬಿದ್ದು ನೂರಾರು ಎಕರೆಗಳಷ್ಟು ದಟ್ಟ ಕಾಡು ಸುಟ್ಟು ಕರಕಲಾಗಿವೆ. ಮನುಷ್ಯ ಜಗತ್ತಿನ ಸ್ವಾರ್ಥದ ಫಲವೆಂಬಂತೆ ಹಸಿರಿನೊಂದಿಗೆ ಅದೆಷ್ಟೋ ಅಮೂಲ್ಯ ಜೀವ ಸಂಕುಲವೂ ನಾಮಾವಶೇಷಗೊಂಡಿದೆ. ಹೆಚ್ಚೇನಲ್ಲ, ತಿಂಗಳ ಹಿಂದೆಯೇ ಇದೇ ಕಾಡಿನಲ್ಲಿ ಸಫಾರಿ ನಡೆಸಿ, ಫೋಟೋಗ್ರಫಿಯ ಮೂಲಕ ಖುಷಿಗೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಘಟನೆಯಿಂದಾಗಿ ಆಘಾತಗೊಂಡಿದ್ದಾರೆ. ತಮ್ಮ ಪಾಡಿಗೆ ತಾವು ಸ್ವಚ್ಚಂದವಾಗಿ ಕಾಡೊಳಗೆ ಓಡಾಡಿಕೊಂಡಿದ್ದ ಪ್ರಾಣಿಗಳಿಗೆ ಬಂದೊದಗಿದ ದುರವಸ್ಥೆ ಕಂಡು ಮಮ್ಮಲ ಮರುಗಿದ್ದಾರೆ.
ಇದೀಗ ಅವರ ಮುಂದೆ ಒಂದು ಕಾಲದಲ್ಲಿ ಅವರೇ ತೆಗೆದಿದ್ದ ಬಂಡೀಪುರ ಕಾಡಿನ ಜೀವಂತಿಕೆಯ ಭಾವಚಿತ್ರಗಳಿವೆ. ಕಣ್ಣೆದುರಿಗೆ ಅದೇ ಕಾಡು ಹೊತ್ತಿ ಉರಿದು ಭಸ್ಮವಾದ ಭೀಕರ ವಾಸ್ತವ. ಆರಂಭದಿಂದಲೂ ಕಾಡಿನ ಬಗ್ಗೆ, ಅದರೊಳಗಿನ ಪ್ರಾಣಿಗಳ ಬಗ್ಗೆ ಅತೀವ ಕಾಳಜಿ ಹೊಂದಿರುವ ದರ್ಶನ್ ಇದರಿಂದಾಗಿ ಕಂಗಾಲಾಗಿದ್ದಾರೆ. ಇದೇ ದುಃಖದಲ್ಲಿ ವಾಸ್ತವದ ಮೇಲೆ ಬೆಳಕು ಚೆಲ್ಲುವ ಒಂದಷ್ಟು ವಿಚಾರಗಳನ್ನೂ ಹಂಚಿಕೊಂಡಿದ್ದಾರೆ.
ಈಗ ಸಾವಿರಾರು ಎಕರೆ ಕಾಡು ನಾಶವಾಗಿದೆ. ಅದನ್ನು ಮತ್ತೆ ಚಿಗುರಿಸಲು ಎಷ್ಟು ವರ್ಷ ಬೇಕಾಗುತ್ತದೆ ಅಂತ ಆಕ್ರೋಶ, ಅಸಹಾಯಕತೆ ಬೆರೆತ ಸ್ಥಿತಿಯಲ್ಲಿ ಹೇಳಿಕೊಂಡಿರೋ ದರ್ಶನ್, ಈಗಾಗಲೇ ಅಲ್ಲಿ ಅದೆಷ್ಟೋ ಪ್ರಾಣಿ ಪಕ್ಷಿಗಳು ಸತ್ತು ಹೋಗಿವೆ. ಬದುಕಿರುವವರು ದಿಕ್ಕೆಟ್ಟು ಓಡಟಿ ಹೋಗಿವೆ. ಇನ್ನೊಂದಷ್ಟು ದಿನಗಳಲ್ಲಿ ಅವೆಲ್ಲವೂ ಅನಿವಾರ್ಯವಾಗಿ ಕಬಿನಿ ಹಿನ್ನೀರಿನತ್ತ ಬರುತ್ತವೆ. ಅಲ್ಲಿ ಅವುಗಳ ನಡುವೆಯೇ ಮಾರಾಮಾರಿ ನಡೆದು ಮತ್ತೊಂದಷ್ಟು ಪ್ರಾಣಿಗಳು ಸಾಯುತ್ತವೆ. ಅದರಾಚೆಗೂ ಬದುಕುಳಿದವುಗಳಿಗೆ ಊರತ್ತ ಹೋಗಿ ಸಿಕ್ಕಿದ್ದನ್ನು ತಿಂದು ಸೈರಿಸಿಕೊಳ್ಳದೆ ಬೇರೆ ದಾರಿಯಿಲ್ಲ. ಇನ್ನೊಂದಷ್ಟು ದಿನಗಳಲ್ಲಿಯೇ ಕಾಡಿನ ಪ್ರಾಣಿಗಳು ಊರಿಗೆ ನುಗ್ಗಿದ ಸುದ್ದಿ ಬರುತ್ತದೆ. ಅವುಗಳ ಬದುಕಿಗೆ ಬೆಂಕಿಯಿಟ್ಟರೆ ಊರಿಗೆ ನುಗ್ಗದೆ ಇನ್ನೆಲ್ಲಿಗೆ ಹೋಗಬೇಕು ಹೇಳಿ… ಅಂತ ದರ್ಶನ್ ನಿಟ್ಟುಸಿರಾಗಿದ್ದಾರೆ.
ಹಾಗಾದರೆ ಹೀಗೆ ಕಾಡುಗಳಿಗೆ ಹೇಗೆ ಬೆಂಕಿ ಹೊತ್ತಿಸಲಾಗುತ್ತದೆ ಅನ್ನೋ ಪ್ರಶ್ನೆ ಬಹುತೇಕರನ್ನು ಕಾಡುತ್ತದೆ. ಅದು ಖುದ್ದು ದರ್ಶನ್ ಅವರನ್ನೂ ಕಾಡಿತ್ತಂತೆ. ಈ ಬಗ್ಗೆ ಹುಡುಕಾಡಿದಾಗ ಅವರಿಗೆದುರಾದದ್ದು ಆನೆ ಲದ್ದಿಯ ರಹಸ್ಯ. ಒಣಗಿದ ಆನೆ ಲದ್ದಿಗೆ ಬೆಂಕಿಯಿಟ್ಟರೆ ಅದು ಎರಡ್ಮೂರು ದಿನಗಳ ವರೆಗೂ ಆರೋದಿಲ್ಲವಂತೆ. ಕಾಡಿಗೆ ಬೆಂಕಿ ಹಚ್ಚುವ ಹೀನ ಬುದ್ಧಿಯ ಮಂದಿ ಲಾಗಾಯ್ತಿನಿಂದಲೂ ಅದನ್ನೇ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಬಂಡೀಪುರ ಕಾಡಿಗೆ ಬೆಂಕಿ ಬಿದ್ದಿದ್ದರ ಹಿಂದೆಯೂ ಆನೆ ಲದ್ದಿ ರಹಸ್ಯ ಅಡಗಿರ ಬಹುದಾ ಎಂಬ ಗುಮಾನಿ ದರ್ಶನ್ ಅವರನ್ನೂ ಕಾಡುತ್ತಿದೆ.
ಬಂಡೀಪುರ ಕಾಡಿಗೆ ಬೆಂಕಿ ಬಿದ್ದ ಸುದ್ದಿ ಕೇಳಿದಾಕ್ಷಣ ಸ್ವಯಂಸೇವಕರು ಅತ್ತ ತೆರಳಿ ಬೆಂಕಿ ಆರಿಸುವಂತೆ ದರ್ಶನ್ ಮನವಿ ಮಾಡಿದ್ದರು. ಆದರೆ ಇಂಥಾ ಎಲ್ಲ ಆಶಯಗಳನ್ನು ಮೀರಿಕೊಂಡು ಬಂಡೀಪುರ ಕಾಡು ಬೆಂಕಿಗಾಹುತಿಯಾಗಿದೆ. ಕಾಡಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಲೋಸ್ಕರ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವವರು ದರ್ಶನ್. ಒಂದು ರೂಪಾಯಿಯನ್ನೂ ಪಡೆಯದೆ ಈ ರಾಯಭಾರ ಹೊತ್ತಿದ್ದ ಅವರು ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದರು. ಆದರೆ ಈಗ ಕಾಡೇ ಸುಟ್ಟು ಹೋಗಿದೆ. ದರ್ಶನ್ ಅವರಿಗೆ ಬೇಸರವಾಗದೆ ಇನ್ನೇನಾದೀತು?
No Comment! Be the first one.