ಸದ್ಯಕ್ಕೆ ಎಲ್ಲರ ಲೆಕ್ಕಾಚಾರಗಳು ಹಳಿ ತಪ್ಪಿ ಹೋಗಿದೆ!
ಕೊರೋನ ಸಂದಿಗ್ಧತೆಗೆ ಕಂಗೆಟ್ಟಂತಿರುವ ಚಿತ್ರರಂಗದ ಭವಿಷ್ಯದ ಬಗೆಗಿನ ಅತಂತ್ರ ಯೋಚನೆಯಲ್ಲಿ ದಿನಗಳು ಕಳೆದುಹೋಗುತ್ತಿದೆ. ಅಲೆಗಳ ಮೇಲೆ ಅಲೆ ಅಪ್ಪಳಿಸುವ ಭೀತಿಯಲ್ಲೇ ಈ ವರ್ಷವೂ ಮುಗಿದು ಹೋಗುವ ಚಿಂತೆ ಕಾಡುತ್ತಿದೆ. ಅಸಲಿಗೆ ಯಾರೆಂದರೆ ಯಾರೂ ಧೈರ್ಯದಿಂದಿಲ್ಲ. ಸಾಲು-ಸಾಲು ಸಿನಿಮಾಗಳು ಬಿಡುಗಡೆಯಾಗದೆ ಡಬ್ಬಾದಲ್ಲೇ ಜಖಂ ಆಗಿದೆ. ಅದೆಷ್ಟೋ ನಿಂತು ಹೋದ ಚಿತ್ರಗಳು ಪುನರ್ ಪ್ರಾರಂಭವಾಗುವ ಸೂಚನೆಯೇ ಕಾಣುತ್ತಿಲ್ಲ. ಅಂತದ್ದರಲ್ಲಿ ಇಲ್ಲೊಂದು ಹೊಸ ಹುಡುಗರ ತಂಡ ದೇವರ ಹೆಸರಲ್ಲಿ ಪ್ರಮಾಣ ಮಾಡಲು ಹೊರಟು ನಿಂತಿದೆ!
ಹೌದು! ಗುರುಪ್ರಸಾದ್ ಚಂದ್ರಶೇಖರ್ ಎಂಬ ಬೀದರ್ ಮೂಲದ ನವ ನಿರ್ದೇಶಕ ತನ್ನ ನಿರ್ದೇಶನದ ಮೊದಲ ಪ್ರಯತ್ನದಲ್ಲೇ, ಹೊಸ ಬಗೆಯ ಪ್ರಯತ್ನಕ್ಕೆ ಕೈ ಇಟ್ಟಿದ್ದಾರೆ. “ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ” ಎಂಬ ಕ್ಯಾಚಿ ಟೈಟಲ್ ಇಟ್ಟು ಹೊಸತನದ ಕಥೆಗೆ, ಸ್ಕ್ರಿಪ್ಟ್ ಪೂಜೆ ಮೂಹೂರ್ತ ಮಾಡಿಕೊಂಡಿದ್ದಾರೆ. ಇತ್ತಿಚೆಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ಕಾಲಭೈರವೇಶ್ವರ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿಸಿಕೊಂಡಿದ್ದಾರೆ. ಈ ಹೊಸ ಹುಡುಗರು ಮಾಡಿಕೊಂಡಿರುವ ಕಥೆ ಕೇಳಿ ಮೆಚ್ಚಿರುವ ಖ್ಯಾತ ಚಿತ್ರ ಸಾಹಿತಿ, ಕವಿರತ್ನ ಡಾ. ವಿ. ನಾಗೇಂದ್ರ ಪ್ರಸಾದ್ ಅವರು ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದು, ಸ್ಕ್ರಿಪ್ಟ್ ತಯಾರಿಗೆ ಚಾಲನೆ ದೊರಕಿಸಿಕೊಟ್ಟರು. ಪತ್ರಕರ್ತ, ನಿರ್ದೇಶಕ ನಾಗರಾಜ್ ಅರೆಹೊಳೆ, ದೇವರ ಹೆಸರಲ್ಲಿ ಪ್ರಮಾಣ ಮಾಡಲು ಮುಂದಾದವರ ಜೊತೆಗಿದ್ದು, ಪ್ರಮಾಣಕ್ಕೆ ಸಾಕ್ಷಿಯಾದರು.
ಅದೇನೇ ಇರಲಿ, ಈ ಮಾಯಾ ನಗರಿಗೆ ಮಾರುಹೋಗದವರೇ ಕಮ್ಮಿ. ಗಾಂಧಿ ನಗರದಲ್ಲಿ ದಿನ ಬೆಳಗಾದರೆ ಹೊಸ ಹುಡುಗರು-ಹುಡುಗಿಯರು ಅವಕಾಶಕ್ಕಾಗಿ ಹಪಹಪಿಸುತ್ತಲೇ ಇರುತ್ತಾರೆ. ಅವರಲ್ಲಿ, ಯಾವುದೋ ಕಲ್ಪನೆಯಲ್ಲಿ, ಯಾವುದೋ ಸ್ಟಾರ್ ನಟರುಗಳನ್ನು ನೋಡಿ, ತಾವೂ ಹಾಗೆಯೇ ಆಗಬೇಕೆಂದುಕೊಂಡು, ಬೆಂಗಳೂರು ಬಸ್ಸು ಹತ್ತುವವರೇ ಹೆಚ್ಚು. ಪರಿಶ್ರಮ ಇಲ್ಲದೆ ಪಟ್ಟಕ್ಕೇರಲು ಬರುವವರು, ಜೋಶು ಇಳಿವವರೆಗು ಗಾಂಧಿನಗರ ಸುತ್ತಾಡಿ, ಇಲ್ಲಿನ ವಾಸ್ತವದ ಅರಿವಾಗಿ, ತಮ್ಮ ಭ್ರಮೆ ಇಳಿದ ಮೇಲೆ, ಮನೆಕಡೆ ಮುಖ ಮಾಡುತ್ತಾರೆ. ಅವಮಾನ ಎಂದುಕೊಂಡವರು, ಇಲ್ಲೇ ಇದ್ದು ಬೇರೆ ಕೆಲಸ ನೋಡಿಕೊಳ್ಳುತ್ತಾರೆ. ಇನ್ನು ಕೆಲವರು ಅಲ್ಲೇ ಕೊಂಚ ಪರಿಶ್ರಮ ಬಿದ್ದು ಏಣಿ ಏರುತ್ತಾರೆ. ಹಾಗೆ ಗೆರೆ ನೆಟ್ಟಗಿದ್ದವರು ಚಿತ್ರರಂಗದಲ್ಲಿ ಅಚ್ಚೊತ್ತುತ್ತಾರೆ. ಇಂದಿನ ಸ್ಟಾರ್ ನಿರ್ದೇಶಕ, ನಟರುಗಳ ಪೈಕಿ ಹೆಚ್ಚಿನವರು ಇದೇ ಹಾದಿ ಸೆವೆಸಿ ಬಂದವರು. ಒಂದಂತೂ ಸತ್ಯ; ಇಲ್ಲಿ ಪ್ರತಿಭೆ ಇದ್ದು, ಅಡ್ಡ ದಾರಿ ಹಿಡಿಯದೆ ಪರಿಶ್ರಮ ಬಿದ್ದವರು, ಅದೃಷ್ಟದ ಜೊತೆ ಸೇರಿ ಅಂದುಕೊಂಡಿದ್ದನ್ನ ಸಾಧಿಸಿಯೇ ಸಾಧಿಸುತ್ತಾರೆ. ಇದೇ ಹಾದಿಯಲ್ಲೇ ಹೊಸ ಸಿನಿಮಾದ ಹುಡುಗರಿದ್ದಂತೆ ಕಾಣಿಸುತ್ತಿದೆ. ಈ ಕೊರೋನ ಸಂಕಷ್ಟದಲ್ಲೂ ಹುಡುಗರು ಕೈಕಟ್ಟಿ ಕೂರದೇ, ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಎನ್ನುತ್ತಾ ನಿರ್ಮಾಪಕರನ್ನೂ ಒಪ್ಪಿಸಿಕೊಂಡಿದ್ದಾರೆ.
ಇವರ ಕಾರ್ಯವೈಖರಿಗೆ ಫಲವೇನು ದೂರವಿದ್ದಂತಿಲ್ಲ; ಪರಿಶ್ರಮಕ್ಕೆ ತಕ್ಕಫಲ ಇದ್ದೇ ಇದೆ. ಆ ನಿಟ್ಟಲ್ಲಿ, ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್ ಮತ್ತು ನಿರ್ಮಾಪಕ ಟಿ. ಸಿ. ರಾಘವೇಂ ದ್ರ ಹೊಂದಾಣಿಕೆಯಲ್ಲಿದ್ದಾರೆ. ಅಳೆದು ತೂಗಿ ಕಾರ್ಯ ಮಾಡುತ್ತಿದ್ದಾರೆ. ಟೈಟಲ್ ಕ್ಯಾಚಿಯಾಗಿಟ್ಟುಕೊಂಡು ಈಗಾಗಲೆ ನೋಡಿದವರಲ್ಲಿ, ಕೇಳಿದವರಲ್ಲಿ ಸಣ್ಣದೊಂದು ನಿರೀಕ್ಷೆ ಹುಟ್ಟಿಸಿದ್ದಾರೆ. ಅದರಂತೆ, ಹೊಸತಂಡ, ಹೊಸ ಹುರುಪು, ಹೊಸ ಆಲೋಚನೆಯೊಂದಿಗೆ, ಈಗಷ್ಟೆ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ತಂಡ, ನಿರೀಕ್ಷೆಗೆ ತಕ್ಕ ರಿಸಲ್ಟು ಕೊಡುತ್ತಾ ಎಂಬುದನ್ನ, ಇನ್ನಷ್ಟು ದಿನ ಕಾದು ನೋಡಬೇಕಿದೆ.
No Comment! Be the first one.