ಟಿ.ಆರ್.ಪಿ. ರಾಮ – ಹೀಗೊಂದು ವಿಚಿತ್ರ ಹೆಸರಿನ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾದ ಮೂಲಕ ಕನ್ನಡಿಗರ ಪಾಲಿಗೆ ಕಳೆದು ಹೋಗಿದ್ದ ಮಹಾನ್ ತಾರೆಯ ಪುನರಾಗಮನವಾಗುತ್ತಿದೆ. 1980ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದ ನಟಿ ಮಹಾಲಕ್ಷ್ಮಿ. ಅದೇನಾಯಿತೋ ಏನೋ? ಇಸವಿ 1991ರಲ್ಲಿ ಮಹಾಲಕ್ಷ್ಮಿ ಕರ್ನಾಟಕವನ್ನು ಮಾತ್ರವಲ್ಲ, ಚಿತ್ರರಂಗವನ್ನೂ ತೊರೆದು ದೂರ ಹೋಗಿದ್ದರು.
ಇದಾದ ನಂತರ ಮಹಾಲಕ್ಷ್ಮಿ ಕುರಿತಾಗಿ ಕೇಳಿಬಂದಿದ್ದೆಲ್ಲಾ ಕಂತೆ ಕಂತೆ ಗಾಸಿಪ್ಪುಗಳು, ಊಹಾಪೋಹದ ಮಾತುಗಳಷ್ಟೇ. ಈಕೆ ಬದುಕಿಕಾಗಿ ಪಡಬಾರದ ಪಾಡು ಪಡುತ್ತಿದ್ದಾರೆ ಅನ್ನೋದರಿಂದ ಹಿಡಿದು, ಕ್ರೈಸ್ತ ಸನ್ಯಾಸಿನಿಯಾಗಿ ಧೀಕ್ಷೆ ಪಡೆದಿದ್ದಾರೆ ಎನ್ನುವ ತನಕ ಕಲ್ಪಿತ ಕಥೆಗಳು ಕಿವಿಗೆ ಬೀಳುತ್ತಲೇ ಇದ್ದವು. ಮಹಾಲಕ್ಷ್ಮಿ ಎನ್ನುವ ನಟಿಯನ್ನು ಜನ ಮರೆಯದೇ, ಇನ್ನೂ ಮನಸ್ಸಿನಲ್ಲುಳಿಸಿಕೊಂಡಿರುವುದೇ ಬಹುಶಃ ಅವರ ಬಗೆಗೆ ಹೀಗೆ ಇಲ್ಲದ ರೆಕ್ಕೆ ಪುಕ್ಕಗಳೆಲ್ಲಾ ಹುಟ್ಟಿಕೊಂಡು ಹಾರಾಡಲು ಕಾರಣವಾಯಿತೇನೋ. ಸದ್ಯ ದುಬೈನಲ್ಲಿರುವ ಮಹಾಲಕ್ಷ್ಮಿ ಟಿ.ಆರ್.ಪಿ. ರಾಮ ಚಿತ್ರದಲ್ಲಿ ನಟಿಸಿ ಮರಳಿದ್ದಾರೆ.
ಅದೆಲ್ಲ ಏನೇ ಇರಲಿ, ಮಹಾಲಕ್ಷ್ಮಿ ಈಗ ಮತ್ತೆ ಕನ್ನಡಿಗರಿಗೆ ದಕ್ಕಿದ್ದಾರೆ. ಟಿ.ಆರ್.ಪಿ. ರಾಮ ಚಿತ್ರ ಅದಕ್ಕೆ ವೇದಿಕೆಯಾಗಿದೆ ಅನ್ನೋದಷ್ಟೇ ಖುಷಿ.
ಸದ್ಯ ಟಿ.ಆರ್.ಪಿ. ರಾಮ ಚಿತ್ರ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಜೋಗಿ ಪ್ರೇಮ್ ಮತ್ತು ಸಾಧು ಕೋಕಿಲಾ ಈ ಚಿತ್ರಕ್ಕಾಗಿ ಹಾಡಲಿದ್ದಾರೆ. ಈ ಸಿನಿಮಾದ ಮೂಲಕ ನಿರ್ದೇಶಕನಾಗಿ ಹೆಜ್ಜೆ ಇರಿಸುತ್ತಿರುವ ಯುವಕ ರವಿಪ್ರಸಾದ್.
ರವಿಪ್ರಸಾದ್ ಸಿನಿಮಾ ನಿರ್ದೇಶಕರಾಗಿದ್ದ ಹಿಂದೊಂದು ಕುತೂಹಲ ಮತ್ತು ರೋಚಕ ಎನಿಸಬಹುದಾದ ಕತೆಯಿದೆ. ಒಂದು ಕಾಲಕ್ಕೆ ನೆಲಮಂಗಲದ ಆಸುಪಾಸಿನಲ್ಲಿ ಹಣ್ಣು, ತರಕಾರಿ, ಬಸ್ ಸ್ಟಾಂಡಿನಲ್ಲಿ ಸೌತೆಕಾಯಿ ಜೋಡಿಸಿಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದವರು ರವಿ. ಬದುಕಿಗಾಗಿ ನಾನಾ ಕೆಲಸಗಳನ್ನು ಮಾಡಿಕೊಂಡು ಜೊತೆಗೆ ಓದು ಮುಂದುವರೆಸಿದ್ದ ರವಿ 2004ರಲ್ಲಿ ಚೆನ್ನೈನ ಡ್ಯಾನ್ಸ್ ಇನ್ಸ್ʼಟಿಟ್ಯೂಟ್ʼನಲ್ಲಿ ತರಬೇತಿ ಪಡೆದು ಬಂದಿದ್ದರು. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಗ್ರೂಪ್ ಡ್ಯಾನ್ಸರ್ ಆಗಿ, ರಿಯಾಲಿಟಿ ಶೋ ಸ್ಪರ್ಧಿಯಾಗಿ, ನೃತ್ಯ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ.
2012ರಲ್ಲಿ ಪರಮಾತ್ಮ ಸಿನಿಮಾದಿಂದ ಶುರು ಮಾಡಿ, ಭಜರಂಗಿ, ಆರ್ಯನ್ ತನಕ ಎ. ಹರ್ಷ ನೃತ್ಯ ಸಂಯೋಜಿಸಿರುವ ಆರುನೂರಕ್ಕೂ ಹೆಚ್ಚು ಹಾಡುಗಳಲ್ಲಿ ರವಿ ಪ್ರಸಾದ್ ಡ್ಯಾನ್ಸರ್ ಆಗಿ ಕೆಲಸ ಮಾಡಿದ್ದಾರೆ. ಕಿರುತೆರೆಯಲ್ಲಿ ಮೂಡಿ ಬಂದಿದ್ದ ʻಡಿʼ, ʻಕಿಕ್ʼ ಮುಂತಾದ ಶೋಗಳಲ್ಲಿ ರನ್ನರ್ ಅಪ್ ಆಗಿದ್ದವರು ಇದೇ ರವಿಪ್ರಸಾದ್.
ʻʻಮಹಾಲಕ್ಷ್ಮಿ ಅವರನ್ನು ಪಬ್ಲಿಕ್ ಟಿವಿಯ ಸಂದರ್ಶನವೊಂದರಲ್ಲಿ ನೋಡಿ, ಅವರ ನಂಬರ್ ಪಡೆದು ಸಂಪರ್ಕಿಸಿದ್ದೆ. ಮೇಡಂ ಅಷ್ಟು ಸುಲಭಕ್ಕೆ ಯಾವ ಕಥೆಯನ್ನೂ ಒಪ್ಪುವವರಲ್ಲ. ಮತ್ತೆ ಬಣ್ಣ ಹಚ್ಚಬೇಕು ಅಂತಾ ಒಂದೂವರೆ ವರ್ಷಗಳಿಂದ ಕಾದಿದ್ದರು. ಕಥೆ ಕೇಳಿದ ನಂತರ ತಕ್ಷಣವೇ ಒಪ್ಪಿಕೊಂಡರು. ಎಷ್ಟೇ ದೊಡ್ಡ ದೃಶ್ಯವಾದರೂ ಸರಾಗವಾಗಿ ಒಂದೇ ಟೇಕ್ ನಲ್ಲಿ ನಟಿಸುವ ಅಸದ್ಭುತ ನಟಿ ಅವರು. ಅವರ ಕುರಿತು ಹೇಳವುದು ಸಾಕಷ್ಟಿದೆ.ʼʼ ಎನ್ನುವುದು ರವಿ ಪ್ರಸಾದ್ ಮಾತು.
ಅಶುತೋಷ್ ಪಿಕ್ಚರ್ಸ್ ಮೂಲಕ ಸ್ನೇಹಿತರೇ ಸೇರಿ ನಿರ್ಮಿಸಿರುವ ಟಿ ಆರ್ ಪಿ ರಾಮ ಚಿತ್ರಕ್ಕೆ ಹನುಮಂತ ಹಾಲಿಗೇರಿ, ರವಿಪ್ರಸಾದ್ ಕತೆ, ಅರಿವು, ನಾತಿಚರಾಮಿ, ಗಾರ್ಗ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿರುವ ಗುರುಪ್ರಸಾದ್ ಈ ಚಿತ್ರಕ್ಕೂ ಕ್ಯಾಮೆರಾ ಕೆಲಸ ಮಾಡಿದ್ದಾರೆ. ರಾಜಗುರು ಹೊಸಕೋಟೆ ಸಂಗೀತ ನಿರ್ದೇಶನ, ಸುನಿಲ್ ಕಶ್ಯಪ್ ಸಂಕಲನ, ಪ್ರವೀಣ್ ಸೂಡ ಸಂಭಾಷಣೆ ಮತ್ತು ಸಹ ನಿರ್ದೇಶನ, ಕಲಾಗುಡಿ ಸ್ಟುಡಿಯೋದ ಚೆಂದನೆಯ ಪಬ್ಲಿಸಿಟಿ ವಿನ್ಯಾಸ ಈ ಚಿತ್ರಕ್ಕಿದೆ.
ಹುಲಿರಾಯ ಸೇರಿದಂತೆ ಸಾಕಷ್ಟು ಸಿನಿಮಾಗಳಿಗೆ ಹಿನ್ನೆಲೆ ಗಾಯಕಿಯಾಗಿರುವ, ದಳಪತಿ, ಚಮಕ್ ಮತ್ತು ಮಹಾಪರ್ವ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದ ಪ್ರತಿಭಾವಂತೆ ಸ್ಪರ್ಶ ಆರ್.ಕೆ. ಟಿ ಆರ್ ಪಿ ರಾಮ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕರಿಸುಬ್ಬು, ಪಲ್ಲವಿ ಪರ್ವ ಮುಂತಾದವರೂ ಈ ಚಿತ್ರದಲ್ಲಿದ್ದಾರೆ.
No Comment! Be the first one.