ಒಂದಷ್ಟು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿ ಗುರುತಿಸಿಕೊಂಡಿದ್ದ ಧರ್ಮ ಎಂಬಾತನನ್ನು ಪ್ರೇಕ್ಷಕರು ನೆನಪಿಟ್ಟುಕೊಂಡಿರ ಬಹುದು. ನಟನೆಯ ಕಾರಣಕ್ಕಲ್ಲದಿದ್ದರೂ ವಿವಾದಗಳು, ಅಫೇರುಗಳ ಮೂಲಕವಾದರೂ ಈತ ಆಗಾಗ ಸುದ್ದಿಯಲ್ಲಿರುತ್ತಾ ಬಂದಿದ್ದ. ನಟನಾಗಲು ಬೇಕಾದ ಎಲ್ಲ ಲಕ್ಷಣಗಳಿದ್ದರೂ ತನ್ನ ತೆವಲುಗಳ ಕಾರಣದಿಂದಲೇ ಜೀವನವನ್ನು ಎಕ್ಕಾ ಎಬ್ಬಿಸಿಕೊಂಡಿರೋ ಧರ್ಮ ಈಗ ಮತ್ತೆ ಚಾಲ್ತಿಗೆ ಬಂದಿದ್ದಾನೆ. ಆತನ ಮೇಲೆ ಮಹಿಳೆಯೊಬ್ಬಳ ಮೇಲೇ ಲೈಂಗಿಕ ದೌರ್ಜನ್ಯ ನಡೆಸಿ ಬ್ಲ್ಯಾಕ್ಮೇಲ್ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.
ಧರ್ಮ ಇತ್ತೀಚೆಗೆ ಯಾವ ಚಿತ್ರಗಳಲ್ಲಿಯೂ ನಟಿಸಿದಂತಿಲ್ಲ. ಸೆಟ್ಟಿಗೆ ಬಂದರೆ ಅದೆಲ್ಲಿ ಸಹ ನಟಿಯರನ್ನು ಬಿಡದೆ ತಡವಿಕೊಂಡು ತಂದಿಡುತ್ತಾನೋ ಎಂಬ ಭಯದಿಂದ ಈತನನ್ನು ಎಲ್ಲರೂ ದೂರವಿಟ್ಟಿರೋದರಿಂದ ಧರ್ಮ ಚಿತ್ರರಂಗದಿಂದಲೇ ದೂರವಿರುವಂಥಾ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಇಂಥವನು ಮಹಿಳೆಯೊಬ್ಬಳಿಗೆ ನಟಿಸೋ ಅವಕಾಶ ನೀಡೋದಾಗಿ ಕರೆಸಿಕೊಂಡು ಮತ್ತು ಬರೋ ಔಷಧಿ ಕೊಟ್ಟು ದೌರ್ಜನ್ಯ ನಡೆಸಿರೋ ಬಗ್ಗೆ ತಿಂಗಳ ಹಿಂದೆಯೇ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿತ್ತು. ಆದರೆ ಇದುವರೆಗೂ ಧರ್ಮನನ್ನು ಬಂಧಿಸಿಲ್ಲ. ಈ ಬಗ್ಗೆ ಸಂತ್ರಸ್ತ ಮಹಿಳೆಯ ಕಡೆಯಿಂದಲೂ ಸಂಶಯಾಸ್ಪದ ಮಾಹಿತಿಗಳೇ ಸಿಕ್ಕುತ್ತಿರೋದರಿಂದ ಇಡೀ ಪ್ರಕರಣ ಗೋಜಲಾಗಿ ಬಿಟ್ಟಿದೆ.
ಗೀತಾ (ಹೆಸರು ಬದಲಿಸಿದೆ) ಎಂಬ ಮಹಿಳೆಯೊಬ್ಬಾಕೆ ಧರ್ಮನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಇದೇ ಜೂನ್ ಆರನೇ ತಾರೀಕಿನಂದು. ಈಕೆ ಧರ್ಮನ ಮೇಲೆ ಮಾಡಿದ್ದ ಆರೋಪವೇನೂ ಸಣ್ಣ ಮಟ್ಟದ್ದಲ್ಲ. ಈ ಘಟನೆ ನಡೆದೇ ಒಂದಷ್ಟು ತಿಂಗಳು ಕಳೆದಿವೆ. ಈ ಮಹಿಳೆ ಧರ್ಮನಿಗೆ ಪರಿಚಿತಳಂತೆ. ಅದೊಂದು ದಿನ ಧರ್ಮ ಒಂದು ಚಿತ್ರದ ಶೂಟಿಂಗ್ ಇದೆ ಅಂತ ಮಹಿಳೆಗೆ ಫೋನಾಯಿಸಿ ಹೇಳಿದವನೇ ಡ್ರೈವರ್ ನವೀನನ ಮೂಲಕ ಮಹಿಳೆಯನ್ನು ರಾಜರಾಜೇಶ್ವರಿ ನಗರಕ್ಕೆ ಕರೆಸಿಕೊಂಡಿದ್ದ. ಆದರೆ ಈ ಮಹಿಳೆ ಬಂದಿಳಿಯುತ್ತಲೇ ಶೂಟಿಂಗ್ ಕ್ಯಾನ್ಸಲ್ ಆಗಿದೆ ಅಂತ ಕಥೆ ಕಟ್ಟಿದ ಧರ್ಮ ಆಕೆಯನ್ನು ಮನೆಗೆ ಕರೆದೊಯ್ದು ಕೂಲ್ ಡ್ರಿಂಕ್ಸಿಗೆ ಮತ್ತು ಬರಿಸೋ ಔಷಧಿ ಬೆರೆಸಿ ಕೊಟ್ಟಿದ್ದ. ನಂತರ ಪಜ್ಞಾಹೀನ ಮಹಿಳೆಯ ಜೊತೆ ಅಶ್ಲೀಲ ವೀಡಿಯೋ ಮಾಡಿಕೊಂಡು ಅದನ್ನು ತೋರಿಸಿ ಬೆದರಿಸಿದ್ದ. ಮನೆ ಮರ್ಯಾದೆ ಹೋಗುತ್ತದೆಂದು ಹೇಗೋ ಹೊಂದಿಸಿ ಹದಿನಾರು ಲಕ್ಷ ಧರ್ಮನಿಗೆ ಕೊಟ್ಟರೂ ಆತ ಮತ್ತೆ ಮತ್ತೆ ಕಾಟ ಕೊಟ್ಟಿದ್ದರಿಂದ ಕಂಗಾಲಾಗ ಆಕೆ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆಂಬುದು ಈಗಿರೋ ಮಾಹಿತಿ.
ಆದರೆ, ಇದರ ಹಿಂದೆ ಅದೇನೇ ಕಿಸುರಿದ್ದರೂ ಕೇಸು ದಾಖಲಾಗಿ ತಿಂಗಳಾದರೂ ಯಾಕೆ ಪೊಲೀಸರು ಧರ್ಮನನ್ನು ಬಂಧಿಸಿಲ್ಲ ಎಂಬ ಪ್ರಶ್ನೆ ಯಾರನ್ನಾದರೂ ಕಾಡುತ್ತದೆ. ಒಂದು ಮೂಲದ ಪ್ರಕಾರ ಈ ವಿಚಾರವಾಗಿ ಸಂತ್ರಸ್ತ ಮಹಿಳೆಯ ಸಾಂಸಾರಿಕ ಜೀವನವೇ ಹಡಾಲೇಳುವ ಹಂತ ತಲುಪಿದೆ. ಈ ಮಹಿಳೆಗೆ ನಿಜವಾಗಿಯೂ ಅನ್ಯಾಯವಾಗಿದೆಯಾ? ತನ್ನ ಚಪಲದಿಂದ ಧರ್ಮನೇ ಖೆಡ್ಡಾಕ್ಕೆ ಬಿದ್ದಿದ್ದಾನಾ ಎಂಬೆಲ್ಲ ಪ್ರಶ್ನೆಗಳಿಗೆ ನಿಸ್ಪಕ್ಷಪಾತ ತನಿಖೆಯಿಂದಷ್ಟೇ ಉತ್ತರ ಸಿಗಬೇಕಿದೆ. ಆದರೆ ಈ ಧರ್ಮ ಇಷ್ಟು ವರ್ಷಗಳಲ್ಲಿ ಮಾಡಿಕೊಂಡಿರುವ ರಂಕಲುಗಳು, ಆತನ ಸೈಕೋ ಸ್ಥಿತಿಯ ವ್ಯಕ್ತಿತ್ವಗಳೆಲ್ಲವೂ ಈ ಪ್ರಕರಣದಲ್ಲೂ ಕೂಡಾ ಆತನದ್ದೇ ತಪ್ಪಿರುತ್ತದೆ ಎಂಬ ನಂಬಿಕೆ ಹುಟ್ಟಿಸುವಂತಿವೆ!
ಬೆಂಗಳೂರಿನ ಚಾಮರಾಜಪೇಟೆಯಲ್ಲೇ ಹುಟ್ಟಿ ಬೆಳೆದಿದ್ದ ಧರ್ಮ ಚಿತ್ರರಂಗದಲ್ಲಿ ಬೆಳೆಯುವ ಅಗಾಧ ಅವಕಾಶಗಳಿದ್ದವು. ಈತ ಮೊದಲ ಸಲ ನಟನಾಗಿ ಕಾಣಿಸಿಕೊಂಡಾಗಲೇ ಪ್ರೇಕ್ಷಕರು ಖುಷಿಗೊಂಡಿದ್ದದ್ದು ನಿಜ. ವ್ಯಕ್ತಿಗತವಾಗಿ ಎಲ್ಲರೊಂದಿಗೂ ಒಳ್ಳೆ ಬಾಂಧವ್ಯವನ್ನೇ ಹೊಂದಿದ್ದ ಧರ್ಮ ಒಳಗೊಳಗೇ ವಂಚಕನಾಗಿದ್ದ. ಸಿಕ್ಕ ಸಿಕ್ಕ ಹುಡುಗೀರನ್ನು ತಡವಿಕೊಳ್ಳುವುದು ಇವನ ಪ್ರಧಾನ ವೀಕ್ನೆಸ್ಸು. ಹೀಗಿದ್ದ ಧರ್ಮ ದುರ್ಗಾ ಶೆಟ್ಟಿ ಎಂಬ ನಟಿಯೊಂದಿಗಿನ ಅಫೇರಿನ ಮೂಲಕ ಭಾರೀ ಸದ್ದು ಮಾಡಿದ್ದ.
ರೆಬೆಲ್ ಸ್ಟಾರ್ ಅಂಬರೀಶ್ ದೂರದ ಸಂಬಂಧಿಯೂ ಆಗಿರುವ ಧರ್ಮ ದುರ್ಗಾ ಶೆಟ್ಟಿ ಎಂಬ ಐಟಂ ಸಾಂಗಿನ ಹುಡುಗಿಯನ್ನು ಕೊಂಚ ಸೀರಿಯಸ್ ಆಗಿಯೇ ಹಚ್ಚಿಕೊಂಡಿದ್ದ. ಸೆಕ್ಸ್ ಬಾಂಬ್ ಅಂತಲೇ ಕರೆಸಿಕೊಂಡಿದ್ದ ದುರ್ಗೆ ಧರ್ಮನ ಬುಡಕ್ಕೆ ಬಾಂಬಿಟ್ಟೇ ಎದ್ದು ಹೋಗಿದ್ದಳು. ಪ್ರವೀಣ್ ನಾಯಕ್ ನಿರ್ದೇಶನದ `ಮೀಸೆ ಚಿಗುರಿದಾಗ’ ಚಿತ್ರದಿಂದ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಈಕೆ ನಂತರ ಪೋಸ್ಟರ್ ಡಿಸೈನರ್ ಮಸ್ತಾನ್ ನಿರ್ದೇಶಿಸಿದ್ದ ನಟ ಮೋಹನ್ ಹೀರೋ ಆಗಿ ಕಾಣಿಸಿಕೊಂಡಿದ್ದ `ಶುಕ್ಲಾಂಬರದರಂ’ ಅನ್ನೋ ಚಿತ್ರದಲ್ಲಿ ನಟಿಸಿದ್ದಳು. ಸಾಯಿ ಕುಮಾರ್ ಜೊತೆಗೆ `ಶ್ರೀರಾಮ್ಪುರ ಪೊಲೀಸ್ ಸ್ಟೇಷನ್’ ಸೇರಿಂದತೆ ಒಂದಷ್ಟು ಚಿತ್ರಗಳಲ್ಲಿ ಕಾಣಿಸಿಕೊಂಡಳು. `ಮೊನಾಲಿಸಾ’ ಚಿತ್ರದ ಹಾಡೊಂದರಲ್ಲಿ ಕೂಡಾ ಈಕೆ ದಿಗ್ದರ್ಶನವಿತ್ತು. ನಟನೆಯ ಗಂಧಗಾಳಿ ಗೊತ್ತಿಲ್ಲದ ಈಕೆ ಬರೀ ದೇಹಪ್ರದರ್ಶನಕ್ಕೆ ಮೀಸಲಾಗಿದ್ದವಳು. ಈ ಕಾರಣಕ್ಕೇ ದುರ್ಗಾಶೆಟ್ಟಿಗೆ ಬರೀ ಐಟಂ ಸಾಂಗುಗಳ ಅವಕಾಶ ಬಿಟ್ಟು ಬೇರೆ ಛಾನ್ಸು ಸಿಕ್ಕಿರಲಿಲ್ಲ.
ಈ ಮಧ್ಯೆ ದುರ್ಗಿ ನಟ ಧರ್ಮನ ತೆಕ್ಕೆಗೆ ಬಿದ್ದಿದ್ದಳು. ಧರ್ಮ ಮತ್ತು ದುರ್ಗಾಳ ಪ್ರಣಯ ಪ್ರಸಂಗ ಗುಟ್ಟಾಗೇನೂ ಉಳಿದಿರಲಿಲ್ಲ. ಎಲ್ಲೆಂದರಲ್ಲಿ, ಹೇಗೆಂದರೆ ಹಾಗೆ ಕಾಣಿಸಿಕೊಳ್ಳುತ್ತಿದ್ದ ಇಬ್ಬರ ವಿಚಾರ ಪತ್ರಿಕೆಗಳಿಗೆ ಭರ್ಜರಿ ಆಹಾರವೂ ಆಗಿತ್ತು. ಈ ನಡುವೆ ಇಬ್ಬರೂ ಎಂಗೇಜ್ ಮೆಂಟು ಮಾಡಿಕೊಂಡು ಮದುವೆಯಾಗ್ತೀವಿ ಎಂದೂ ಘೋಷಿಸಿದ್ದರು. ಆದರೆ ದುರ್ಗಾಶೆಟ್ಟಿ ಮತ್ತು ಧರ್ಮನ ಮಧ್ಯೆ ಅದೇನು ಬಿರುಕಾಯಿತೋ ಗೊತ್ತಿಲ್ಲ ಆಕೆ ದಿಢೀರಂತಾ ಕಾಂಗ್ರೆಸ್ನ ಹಿರಿಯ ನಾಯಕಿ ಮನೋರಮಾ ಮಧ್ವರಾಜ್ ಪುತ್ರ ಪ್ರಸಾದ್ರಾಜ್ನನ್ನು ಮದುವೆಯಾಗಿಬಿಟ್ಟಳು. ಈ ಹಂತದಲ್ಲಿ ಧರ್ಮನಿಗೆ ಅನ್ಯಾಯವಾಗಿದೆ ಅಂತಲೂ ಒಂದಷ್ಟು ಜನ ಅಂದುಕೊಂಡಿದ್ದರು. ಆದರೆ ಪಕ್ಕಾ ಫ್ರಾಡ್ ಮನಸ್ಥಿತಿಯ ಧರ್ಮ ಯಾರಿಗೂ, ಯಾವುದಕ್ಕೂ ನಿಯತ್ತಾಗಿರುವ ಆಸಾಮಿ ಅಲ್ಲವೇ ಅಲ್ಲ.
ಈ ಧರ್ಮ ಕನ್ನಡದ ಸದ್ಯದ ಟಾಪ್ ಸ್ಟಾರ್ ತಂಗಿಯೊಂದಿಗೆ ಮದುವೆಯಾಗ್ತೀನಿ ಅಂತಾ ಹೇಳಿ ಕೈಯೆತ್ತಿದ್ದ ಕಿರಾತಕನೂ ಹೌದು. ತಂಗಿಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಸ್ಟಾರ್ ಆಗಿನ್ನೂ ಅವಕಾಶಗಳಿಗಾಗಿ ಅಲೆದಾಡುತ್ತಿದ್ದರಲ್ಲಾ? ಆ ಘಳಿಗೆಯಲ್ಲಿಯೇ ಸ್ಟಾರ್ ಕುಟುಂಬಕ್ಕೆ ಅನ್ಯಾಯ ಮಾಡಿದ ಅನ್ನೋ ಮಾತಿದೆ. ಆ ನಂತರ ಈ ಧರ್ಮನ ಮೇಲಿನ ಛಾಲೆಂಜಿಗೇ ತನ್ನ ತಂಗಿಗೆ ಒಳ್ಳೇ ಗಂಡು ನೋಡಿ ಅದ್ಧೂರಿಯಾಗಿ ಮದುವೆ ಮಾಡಿದ್ದಂತೆ.
ಇದಾದ ನಂತರ ಮತ್ತೊಂದು ಮದುವೆಗೆ ಮುಂದಾದ ಧರ್ಮನ ಮದುವೆ ದಿನ ಭಯಾನಕ ಗಲಾಟೆ ನಡೆದು ಆ ಮದುವೆಯೂ ಮುರಿದುಬಿದ್ದಿತ್ತು.
ಹೀಗೆ ಯಾವುದಕ್ಕೂ ನಿಯತ್ತಾಗಿರದ ಧರ್ಮನ ಈ ಕೇಸು ಮಾತ್ರ ಕಗ್ಗಂಟಾಗಿದೆ. ಆತ ನಿಜಕ್ಕೂ ಹಣಕ್ಕಾಗಿಯೇ ಇಂಥಾ ದರಿದ್ರ ಕೆಲಸ ಮಾಡಿದನಾ ಅಥವಾ ಈ ಮಹಿಳೆಯ ಕಡೆಯಿಂದಲೂ ಏನಾದರೂ ತಪ್ಪುಗಳಿವೆಯಾ ಎಂಬುದರಿಂದ ಮೊದಲ್ಗೊಂಡು ಎಲ್ಲವೂ ಗೋಜಲಾಗಿದೆ. ಅನ್ಯಾಯವಾಗಿದೆ ಅಂತ ದೂರು ಕೊಟ್ಟ ಮಹಿಳೆ ಬನ್ನೇರುಘಟ್ಟದಲ್ಲಿ ಟ್ರಿಪ್ಪು ಮುಗಿಸಿ ಸುಸ್ತಾಗಿ ಮಲಗಿರೋ ಮಾಹಿತಿ ಇದೆ. ಮಾಧ್ಯಮದ ಮಂದಿ ಕಾಂಟ್ಯಾಕ್ಟು ಮಾಡಿದರೆ ಫೋನೆತ್ತಿಕೊಂಡು ಭದ್ರಕಾಳಿಯಂತೆ ಅಬ್ಬರಿಸುವವಳು ಸಂತ್ರಸ್ತೆಯ ತಂಗಿ. ಪೊಲೀಸರು ಹೇಳಿದ್ದಕ್ಕೆ ಮಾಧ್ಯಮದವರು ಮಸಾಲೆ ಬೆರೆಸಿ ಬರೆದಿದ್ದಾರೆ ಎಂಬರ್ಥದಲ್ಲಿ ಮಾತಾಡೋ ಈಕೆ ಮಾತೆತ್ತಿದರೆ `ಡೈರೆಕ್ಟಾಗಿ ಎಸಿಪಿನ ಕಾಂಟ್ಯಾಕ್ಟ್ ಮಾಡಿ ಅವ್ರೇನಂತಾರೋ ಅದುನ್ನೇ ಬರ್ಕಳಿ. ನಮ್ ತಲೆ ತಿನ್ಮಬೇಡಿ’ ಅನ್ನುತ್ತಾಳೆ.
ಈ ಬಗ್ಗೆ ಎಸಿಪಿ ರಮೇಶ್ ಅವರನ್ನು ಸಂಪರ್ಕಿಸಿದರೆ ಅವರದ್ದು ನೊಂದ ಮಹಿಳೆಯ ಪರವಾದ ನಿಲುವು. `ಪೊಲೀಸರೇನಾದರೂ ಮುಚ್ಚಿಡುತ್ತಾರೆಂದರೆ, ಅದನ್ನು ಬಗೆದು ಜನರಿಗೆ ತಲುಪಿಸೋದು ಪತ್ರಿಕಾ ಧರ್ಮ. ಆದರೆ ಇದು ಫ್ಯಾಮಿಲಿ ವಿಚಾರ. ಆಕೆಗೆ ಮದುವೆಯಾಗಿದೆ, ಮಕ್ಕಳಿವೆ. ಈ ವಿಚಾರವನ್ನ ಕೆದಕಿ ಹೆಸರಿನ ಸಮೇತ ವರದಿ ಮಾಡಿದ್ರೆ ಅವರ ಪಾಡೇನಾಗಬೇಕು? ನಾವು ತನಿಖೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ’ ಅಂತ ಸಂತ್ರಸ್ಥೆಯ ಮೇಲೆ ಅನುಕಂಪದಿಂದಲೇ ಎಸಿಪಿ ಮಾತಾಡುತ್ತಾರೆ. ಆದರೆ ಸಂತ್ರಸ್ತೆಯ ತಂಗ್ಯವ್ವ ಭದ್ರಕಾಳಿಯ ವರ್ತನೆ ಗೊಂದಲ ಹುಟ್ಟಿಸುತ್ತಿದೆ.
ಭನ್ನೇರುಘಟ್ಟ ಟ್ರಿಪ್ಪು ಮುಗಿಸಿ ಸುಸ್ತಾಗಿ ಮಲಗಿರೋ ತನ್ನಕ್ಕನನ್ನು ಯಾರೂ ಡಿಸ್ಟರ್ಬ್ ಮಾಡಬಾರದೆಂಬ ನಿಲುವು ತಳೆದಿರೋ ಈಕೆ `ನಾವು ಯಾರ ಮೇಲೂ ಕಂಪ್ಲೇಂಟು ಕೊಟ್ಟಿಲ್ಲ. ಮಾಧ್ಯಮದವರು ತೋಚಿದ ರೀತಿಯಲ್ಲಿ ಸುದ್ದಿ ಮಾಡ್ತಿದ್ದಾರೆ. ಈ ಬಗ್ಗೆ ಕೇಳಿದರೆ ಪೊಲೀಸರು ಹೇಳಿದ್ದನ್ನೇ ಬರೆದಿದ್ದೀವೆ, ತೋರಿಸಿದ್ದೇವೆ ಅನ್ನುತ್ತಾರೆ. ನೀವೂ ಅವ್ರನ್ನೇ ಕಾಂಟ್ಯಾಕ್ಟ್ ಮಾಡಿ, ಅವರು ಹೇಳಿದ್ದನ್ನೇ ಬರೆಯಿರಿ’ ಎಂಬಂರ್ಥದಲ್ಲಿ ಪೆಡಸು ಮಾತಾಡುತ್ತಾಳೆ. ಅದೇನು ಸತ್ಯವಿದೆಯೋ ಒದರವ್ವಾ ಅಂದರೆ ಮಿಣ್ಣಗೆ ಕಳ್ಳ ಬೀಳುತ್ತಾಳೆ. ಈಕೆಗೆ ಅವನ್ಯಾರೋ ಹಲಾಲು ಟೋಪಿ ಧರ್ಮನಿಗೂ ಮಾಧ್ಯಮಗಳಿಗೂ ವ್ಯತ್ಯಾಸವೇ ಗೊತ್ತಿದ್ದಂತಿಲ್ಲ. ಸಂತ್ರಸ್ಥೆಯ ಕಡೆಯಿಂದ ನಡೆಯುತ್ತಿರೋ ಇಂಥಾ ಕೊಸರಾಟಗಳನ್ನು ಗಮನಿಸಿದರೆ ಇದರ ಹಿಂದೆ ಮತ್ತೇನೋ ಷಡ್ಯಂತ್ರವಿದೆ ಎಂಬ ಗುಮಾನಿ ಬಲವಾಗಿಯೇ ಕಾಡುತ್ತದೆ.
ಇನ್ನುಳಿದಂತೆ ಧರ್ಮ ಸ್ವಿಚಾಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಅಸಲಿ ಸತ್ಯವನ್ನು ಕಾಲವೇ ಜಾಹೀರು ಮಾಡಬೇಕಿದೆ!
(ಈ ವರದಿ ಯಾವುದೇ ವ್ಯಕ್ತಿಯ ಮಾನಹಾನಿ ಮಾಡುವ ಉದ್ದೇಶ ಹೊಂದಿಲ್ಲ)
No Comment! Be the first one.