ಚಿತ್ರರಂಗದ ಸೆಳೆತ ಎನ್ನುವುದು ಯಾರನ್ನೂ ಬಿಟ್ಟಿಲ್ಲ, ಆತ ಒಬ್ಬ ಬಿಲ್ಡರ್ ಆಗಿರಬಹುದು, ಎಂಜಿನಿಯರ್ ಆಗಿರಬಹುದು, ಬ್ಯುಸಿನೆಸ್ ಮನ್ ಕೂಡ ಆಗಿರಬಹುದು ಎಲ್ಲರೂ ಇದರ ಆಕರ್ಷಣೆಗೆ ಒಳಗಾದವರೇ. ವೈಬಿಎನ್ ಸ್ವಾಮಿ ಮೂಲತ: ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್. ಕಲೆಯ ಸೆಳೆತದಿಂದ ಕೆಲಸ ಹಾಗೂ ಹವ್ಯಾಸ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡಿ ಬಂದಿದ್ದಾರೆ. ಆ ಸ್ವಾಮಿ ಈಗ ಧೀರನ್ ಆಗಲು ಹೊರಟಿದ್ದಾರೆ. ಅಂದರೆ ಅವರೇ ನಿರ್ದೇಶನ ಮಾಡುವ ಜೊತೆ ನಾಯಕನಾಗಿ ನಟಿಸಿರುವ ಚಿತ್ರದ ಶೀರ್ಷಿಕೆಯೇ ಧೀರನ್. ಈಗಾಗಲೇ ಎರಡು ಹಂತಗಳ ಚಿತ್ರೀಕರಣವನ್ನು ಮುಗಿಸಿಕೊಂಡಿರುವ ಚಿತ್ರತಂಡ ಅಂತಿಮ ಹಂತದ ಚಿತ್ರೀಕರಣವನ್ನು ಸೆಪ್ಟೆಂಬರ್ ಕೊನೆಯಲ್ಲಿ ಆರಂಭಿಸುವ ನಿರೀಕ್ಷೆಯಿದೆ. ಇದಿಷ್ಟು ಚಿತ್ರದ ಕುರಿತಂತೆ ಸಿಕ್ಕ ಪೂರ್ವಮಾಹಿತಿ. ಈಗ ವಿಷಯಕ್ಕೆ ಬಂದರೆ. ಮೊನ್ನೆ ಈ ಚಿತ್ರದ ಶೀರ್ಷಿಕೆಯನ್ನು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಅನಾವರಣಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದರು. ಇದರ ಜೊತೆಗೆ ಇನ್ನೂ ಒಂದಷ್ಟು ವಿಷಯಗಳನ್ನು ಹಂಚಿಕೊಳ್ಳಲು ಧೀರನ್ ತಂಡ ಮಾಧ್ಯಮಗಳ ಮುಂದೆ ಹಾಜರಾಗಿತ್ತು.


ವೈಬಿಎನ್ ಸ್ವಾಮಿ ಈ ಚಿತ್ರದ ನಾಯಕ ಕಂ ನಿರ್ದೇಶಕ ಅಷ್ಟೇ ಅಲ್ಲ, ಈ ಚಿತ್ರದ ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತಿದ್ದಾರೆ. ರಕ್ಷಾಶೆಟ್ಟಿ ಈ ಚಿತ್ರದಲ್ಲಿ ನಾಯಕಿ, ಸರ್ಕಾರಿ ಶಾಲೆ ಖ್ಯಾತಿಯ ಪ್ರಮೋದ್ ಶೆಟ್ಟಿ, ಮಿಮಿಕ್ರಿ ದಯಾನಂದ್ ಕೂಡ ಬಣ್ಣ ಹಚ್ಚಿದ್ದಾರೆ. ತೆರೆಮೇಲೆ ಶಿವಣ್ಣ ಟೈಟಲ್ ಲಾಂಚ್ ಮಾಡಿದ ಹಾಗೂ ಚಿತ್ರದ ಮಾಹಿತಿ ಇರುವ ವಿಡಿಯೋ ತೋರಿಸಿದ ನಂತರ ಮಾತನಾಡಿದ ನಿರ್ದೇಶಕ ಸ್ವಾಮಿ ಪ್ರತಿ ಮನುಷ್ಯನೊಳಗೂ ಮತ್ತೊಬ್ಬ ವ್ಯಕ್ತಿಯಿರುತ್ತಾನೆ. ಆತ ಏನಾದರೂ ಹೊರಬಂದರೆ ಏನಾಗಬಹುದು ಎಂದು ಚಿತ್ರದ ನಾಯಕನ ಮೂಲಕ ಕಥೆ ಹೇಳಲು ಟ್ರೈ ಮಾಡಿದ್ದಾವೆ.

ಬೆಂಗಳೂರಿನಿಂದ ಸಕಲೇಶಪುರದವರೆಗೆ ನಡೆಯುವ ಜರ್ನಿ ಕಥೆಯಿದು. ನಾನು ಈ ಹಿಂದೆ ಶಿವು ಅಡ್ಡ ಮೂಲಕ ಸಿನಿಮಾ ಸಂಬಂಧಿಸಿದ ಕಾರ್ಯಗಳನ್ನು ಕೂಡ ಮಾಡಿದ್ದೇನೆ. ಒಂದು ಸಿನಿಮಾ ಮಾಡಬೇಕೆಂದು ನಿರ್ಧರಿಸಿ ಈ ಕಥೆ ರೆಡಿ ಮಾಡಿಕೊಂಡೆ. ಹೀರೋ ಪಾತ್ರಕ್ಕೆ ಒಂದು ಫ್ರೆಶ್‌ಫೇಸ್ ಬೇಕಾಗಿತ್ತು. ಯಾರೂ ಸಿಗಲಿಲ್ಲ, ಕೊನೆಗೆ ನಾನೇ ಬಣ್ಣ ಹಚ್ಚಬೇಕಾಯಿತು. ಮಾಸ್ತಿ ಅವರನ್ನು ಡೈಲಾಗ್ ಬರೆಯಲು ಕೇಳಿದಾಗ, ತುಂಬಾ ಬ್ಯುಸಿ ಇದ್ದರೂ ಕೂಡ ಬಿಡುವು ಮಾಡಿಕೊಂಡು ಮಾತುಗಳನ್ನು ಬರೆದುಕೊಟ್ಟರು. ನಟ ಪ್ರಮೋದ್ ಶೆಟ್ಟಿ ಅವರ ಪಾತ್ರಕ್ಕೆ ತುಂಬಾ ಡೆಪ್ತ್ ಇದೆ. ಇದುವರೆಗೂ ಕಾಣದಂಥ ಪಾತ್ರದಲ್ಲಿ ಅವರನ್ನು ನೋಡಬಹುದು. ಈಗಾಗಲೇ ಬೆಂಗಳೂರು ಸುತ್ತಮುತ್ತ ಮೂವತ್ತು ದಿನಗಳ ಚಿತ್ರೀಕರಣವನ್ನು ಮುಗಿಸಿದ್ದು, ಮುಂದಿನ ಷೆಡ್ಯೂಲ್ ಪ್ಲಾನ್ ಮಾಡಿಕೊಂಡಿದ್ದೇವೆ ಎಂದು ಹೇಳಿದರು.

ನಂತರ ಪ್ರಮೋದ್ ಶೆಟ್ಟಿ ಮಾತನಾಡಿ ಈಗಾಗಲೇ ಬಹಳ ಸಿನಿಮಾಗಳಲ್ಲಿ ಪೋಲೀಸ್ ಆಗಿದ್ದೇನೆ. ಆದರೆ ಈ ಚಿತ್ರದಲ್ಲಿ ಒಳ್ಳೇ ಪೋಲೀಸ್ ಆಗಿರುವುದೇ ವಿಶೇಷ. ಕೆಟ್ಟ ದಾರಿ ಹಿಡಿಯುತ್ತಿದ್ದ ನಾಲ್ಕು ಜನ ಹುಡುಗರಿಗೆ ಬುದ್ದಿವಾದ ಹೇಳಿ ಅವರನ್ನು ಸರಿದಾರಿಗೆ ತರಲು ಪ್ರಯತ್ನಿಸುವ ಪೋಲಿಸ್ ಆಗಿದ್ದೇನೆ. ಇಲ್ಲಿ ಮಾತಾಡಲು ತುಂಬಾ ಅವಕಾಶ ಇತ್ತು ಎಂದು ಹೇಳಿದರು. ನಂತರ ಮಿಮಿಕ್ರಿ ದಯಾನಂದ್ ಮಾತನಾಡಿ, ನಾನು ಈ ಟೀಮ್ ಜೊತೆ ಆರಂಭದಿಂದಲೂ ಒಂದಷ್ಟು ಸಲಹೆ, ಸಹಕಾರ ನೀಡುತ್ತಿದ್ದೇನೆ. ಚಿತ್ರದಲ್ಲಿ ನನಗೂ ಒಂದು ವಿಶೇಷವಾದ ಪಾತ್ರವಿದೆ. ಹಿಂದೆ ಕಾಡಿನ ಬೆಂಕಿಯಲ್ಲಿ ಅಂಥಾ ಪಾತ್ರ ಮಾಡಿದ್ದೆ. ಚಿಕ್ಕದಾದರೂ ನೆನಪಿನಲ್ಲಿ ಉಳಿಯುವಂಥ ಪಾತ್ರ ಎಂದು ಹೇಳಿದರು. ಡ್ರಗ್ಸ್ ಮಾಫಿಯಾದ ಎಳೆ ಕೂಡ ಈ ಚಿತ್ರದಲ್ಲಿದೆ ಚಿತ್ರದ ಸ್ಕ್ರಿಪ್ಟ್ ಸ್ವಾಮಿ ಅವರೇ ಬರೆದಿದ್ದಾರೆ. ಗಣೇಶ ನಾರಾಯಣ್ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳಿಗೆ ಸಿಂಪಲ್ ಸುನಿ, ಚೇತನ್‌ಕುಮಾರ್ ಸಾಹಿತ್ಯ ರಚಿಸಿದ್ದಾರೆ. ಇನ್ನು ಚಿತ್ರದ ನಾಯಕಿಯಾಗಿ ಮಂಗಳೂರಿನ ರಕ್ಷಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಮರಾಠಿ ಭಾಷೆಯಲ್ಲಿ ಎರಡು ಚಿತ್ರಗಳಲ್ಲಿ ಅಭಿನಯಿಸಿದ್ದು ಕನ್ನಡದಲ್ಲಿ ಇದು ಮೊದಲ ಚಿತ್ರ. ಉಳಿದಂತೆ ನಟಿ ತೇಜಸ್ವಿನಿ ಕೂಡ ಅಭಿನಯಿಸಿದ್ದು, ಅವರದು ಅತಿಥಿ ಪಾತ್ರ.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ನ್ಯೂರಾನ್ ಬಗ್ಗೆ ಏನಂದರು ದರ್ಶನ್?

Previous article

ವೈಲ್ಡ್‌ಲೈಫ್ ಚಾಲೆಂಜ್!

Next article

You may also like

Comments

Leave a reply

Your email address will not be published. Required fields are marked *