ದುನಿಯಾ ಚಿತ್ರದಲ್ಲಿ ಸಹಜವಾದ ಫೈಟ್ ಸೀನುಗಳ ಮೂಲಕವೇ ಸಾಹಸ ನಿರ್ದೇಶಕರಾಗಿ ಹೆಸರುವಾಸಿಯಾದವರು ಡಿಫರೆಂಟ್ ಡ್ಯಾನಿ. ಆ ಚಿತ್ರದ ಮಹಾ ಗೆಲುವಿನ ಭಾಗವಾಗಿದ್ದರೂ ಅದೇ ಚಿತ್ರದ ಸಂಭ್ರಮದಲ್ಲಿ ಅವಮಾನಿತರಾಗಿ ನಿಂತವರು, ಅದನ್ನೇ ಕೆಂಡದಂತೆ ಎದೆಯಲ್ಲಿಟ್ಟುಕೊಂಡು ಮತ್ತಷ್ಟು ಖ್ಯಾತಿ ಗಳಿಸಿಕೊಂಡವರು ಡ್ಯಾನಿ. ಕನ್ನಡ ಮಾತ್ರವಲ್ಲದೆ ತೆಲುಗು ಸೇರಿದಂತೆ ನಾನಾ ಭಾಷೆಗಳಲ್ಲಿ ಬ್ಯುಸಿಯಾಗಿರೋ ಅವರ ಬದುಕೂ ಒಂದು ಸಾಹಸವೇ!
ದಶಕಗಳಷ್ಟು ಹಿಂದೆ ಅಂದರೆ ಸರಿಸುಮಾರು ಇಪ್ಪತ್ತೇಳು ವರ್ಷಗಳ ಹಿಂದೆ ಅಚಾನಕ್ಕಾಗಿ ಆ ಹುಡುಗ ಪ್ರೀಮಿಯರ್ ಸ್ಟುಡಿಯೋದತ್ತ ಸುಳಿಯುತ್ತಾನೆ. ಅಲ್ಲಿ ಕುಮಾರ್ ಬಂಗಾರಪ್ಪ ಅಭಿನಯದ ಅಂಗೈಯಲ್ಲಿ ಅಪ್ಸರೆ ಎಂಬ ಚಿತ್ರದ ಚಿತ್ರೀಕರಣ ನಡೆಯುತ್ತಿರುತ್ತದೆ. ವಯೋ ಸಹಜ ಕುತೂಹಲದಿಂದ ಆ ಹುಡುಗ ಸ್ಟುಡಿಯೋದೊಳಗೆ ಎಂಟ್ರಿ ಕೊಡುವ ಹೊತ್ತಿಗೆಲ್ಲ ಅಲ್ಲಿ ಸಾಹಸ ದೃಷ್ಯಾವಳಿಗಳ ಚಿತ್ರೀಕರಣ ನಡೆಯುತ್ತಿರುತ್ತೆ. ಹಿಂದೆ ಫೈಟರುಗಳು ಹತ್ತನ್ನೆರಡಡಿ ಎತ್ತರದಿಂದ ಕೆಳ ಜಿಗಿಯೋ ಸನ್ನಿವೇಷವದು. ಅದನ್ನು ಕಂಡ ಈ ಹುಡುಗ ತಾನೇ ಆ ಸಾಹಸ ಸನ್ನಿವೇಷವನ್ನು ಮಾಡಲು ಮುಂದಾಗುತ್ತಾನೆ. ಆತನ ಉತ್ಸಾಹ ಕಂಡ ಫೈಟ್ಮಾಸ್ಟರ್ ಅವಕಾಶ ಕೊಟ್ಟೇಟಿಗೆ ಹುಡುಗ ಪಳಗಿದ ಫೈಟರ್ನಂತೆ ಪುಟಿದೆದ್ದಿದ್ದೇ ಅದೇ ಚಿತ್ರದಲ್ಲಿ ಫೈಟರ್ ಆಗೋ ಅವಕಾಶವನ್ನೂ ಗಿಟ್ಟಿಸಿಕೊಳ್ಳುತ್ತಾನೆ.
ಇದೆಲ್ಲ ನಡೆಯುವ ಹೊತ್ತಿಗೆ ಆತನಿಗೆ ಕೇವಲ ಹದಿನೈದು ವರ್ಷ ವಯಸ್ಸು. ಆತ ಡಿಫರೆಂಟ್ ಡ್ಯಾನಿ!
ಹೀಗೆ ಅನಿರೀಕ್ಷಿತವಾಗಿ ತನ್ನ ಆಂತರ್ಯದ ಕನಸನ್ನು ನನಸಾಗಿಸಿಕೊಂಡ ಡ್ಯಾನಿ ಮೈಸೂರಲ್ಲಿ ನಲವತೈದು ಅಡಿ ಎತ್ತರದಿಂದ ಲೀಲಾಜಾಲವಾಗಿ ಜಿಗಿದಿದ್ದರು. ಅದನ್ನು ಕಂಡ ಕುಮಾರ್ ಬಂಗಾರಪ್ಪ ಇವರಿಗೆ ಫೈಟರ್ ಕಾರ್ಡನ್ನು ಕೊಡಿಸಿದ್ದೇ ಡ್ಯಾನಿ ಬಹು ಬೇಡಿಕೆಯ ಫೈಟರ್ ಆಗಿ ಬದಲಾಗಿದ್ದರು. ಇದೆಲ್ಲ ಆದ ನಂತರ ಡ್ಯಾನಿ ಶಾಸ್ತ್ರೋಕ್ತವಾಗಿ ಫೈಟರ್ ಆಗಿ ಕಾರ್ಯ ನಿರ್ವಹಿಸಿದ್ದ ಮೊದಲ ಚಿತ್ರ ವಿನೋದ್ ಪ್ರಭಾಕರ್ ಅಭಿನಯದ ಕ್ಯಾಪ್ಟನ್ ಚಿತ್ರದಲ್ಲಿ. ಆ ನಂತರ ಅಖಂಡ ಮುನ್ನೂರೈವತ್ತು ಚಿತ್ರಗಳಲ್ಲಿ ಡ್ಯಾನಿ ಫೈಟರ್ ಆಗಿ ಕಾರ್ಯನಿರ್ವಹಿಸಿದ್ದರು. ಅದು ನಿಜಕ್ಕೂ ಕ್ಷಣವೂ ಸಾವಿಗೆದುರಾಗುವಂಥಾ ಕೆಲಸ!
ಫೈಟರ್ಗಳೆಂದರೆ ಅಂಥಾ ಸಾಹಸ ಮಾಡಿಯೂ ಅದರ ಕ್ರೆಡಿಟ್ಟನ್ನೆಲ್ಲ ಹೀರೋಗಳಿಗೆ, ನಟ ನಟಿಯರಿಗೆ ಬಿಟ್ಟುಕೊಟ್ಟು ಜೀವವನ್ನೇ ಒತ್ತೆಯಿಟ್ಟು ಉಸಿರಾಡೋ ವೃತ್ತಿ. ಅದರ ಸಂಕಟ ಹೆಚ್ಚಿನ ಸಂದರ್ಭಗಳಲ್ಲಿ ಪ್ರೇಕ್ಷಕರಿಗೂ ಗೊತ್ತಾಗುವುದಿಲ್ಲ. ಡ್ಯಾನಿ ಅದೆಷ್ಟೋ ಸಾರಿ ಸತ್ತೇ ಹೋಗುವಂಥಾ ಅಪಾಯಗಳನ್ನು ಮೈ ಮೇಲೆಳೆದುಕೊಂಡಿದ್ದಾರೆ. ವಿಷ್ಣುವರ್ಧನ್ ಅವರಿಗೆ ಡ್ಯೂಪ್ ಆಗಿ ಮೇಕೆದಾಟುವಿನಲ್ಲಿ ೧೭೫ ಅಡಿಯಿಂದ ದುಮುಕಿದ್ದ ಡ್ಯಾನಿ ಬದುಕುಳಿದಿದ್ದೇ ಹೆಚ್ಚು. ಲಾಕಪ್ ಡೆತ್, ಯುದ್ಧ ಮುಂತಾದ ಚಿತ್ರಗಳ ಚಿತ್ರೀಕರಣದ ಸಂದರ್ಭದಲ್ಲಯೂ ಅವರು ಸಾವಿಗೆ ಮುಖಾಮುಖಿಯಾಗಿದ್ದರು. ಹಾಯ್ ಬೆಂಗಳೂರ್ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಂತೂ ಟ್ರಾಫಿಕ್ ಪೊಲೀಸ್ ಜೀಪು ಡ್ಯಾನಿಗೆ ಹಿಂಬದಿಯಿಂದ ಬಂದು ಹೊಡೆದಿತ್ತು. ಆ ರಭಸಕ್ಕೆ ಬೆನ್ನಿನ ಭಾಗ ಓರೆಯಾಗಿ ಹೋಗಿತ್ತು. ಆಪರೇಷನ್ ಮಾಡಿಸಿದರೆ ಮತ್ತೆಂದೂ ಫೈಟರ್ ಆಗಲು ಸಾಧ್ಯವಿಲ್ಲ ಎಂದರಿತ ಡ್ಯಾನಿ ಆ ನೋವು ನುಂಗಿಕೊಂಡೇ ವೃತ್ತಿಯಲ್ಲಿ ಮುಂದುವರೆದಿದ್ದರು. ಅದು ಶಾಶ್ವತ ಊನವಾಗಿ ಈವತ್ತಿಗೂ ಡ್ಯಾನಿ ಜೊತೆಗಿದೆ!
ಹಾಗೆ ಮುನ್ನೂರಕ್ಕೂ ಹೆಚ್ಚು ಚಿತ್ರಗಳಿಗೆ ಫೈಟರ್ ಆಗಿ ಕೆಲಸ ಮಾಡಿದ್ದ ಡ್ಯಾನಿ ಸ್ವತಂತ್ರ ಸಾಹಸ ನಿರ್ದೇಶಕರಾಗಿದ್ದು ಎಕ್ಸ್ಕ್ಯೂಸ್ಮಿ ಚಿತ್ರದ ಮೂಲಕ. ಅದರಲ್ಲಿ ಡಿಫರೆಂಟಾದ ಸಾಹಸ ಪಟ್ಟುಗಳ ಮೂಲಕ ಅವರು ಗಮನ ಸೆಳೆದಿದ್ದರು. ಸಹಜವಾದ ಫೈಟ್ ಸೀನುಗಳು ಪ್ರೇಕ್ಷಕರ ಮೆಚ್ಚುಗೆಗೂ ಪಾತ್ರವಾಗಿದ್ದವು. ಮೊದಲ ಚಿತ್ರದಲ್ಲಿಯೇ ಡ್ಯಾನಿಯ ವಿಭಿನ್ನ ಕಸುಬುದಾರಿಕೆ ಕಂಡ ಮಾಧ್ಯಮಗಳೂ ಡ್ಯಾನಿ ಡಿಫರೆಂಟು ಅಂತ ಹಾಡಿ ಹೊಗಳಿದ್ದವು. ಆ ಮೂಲಕ ಅವರು ಡಿಫರೆಂಟ್ ಡ್ಯಾನಿ ಎಂದೇ ಪ್ರಖ್ಯಾತರಾಗಿದ್ದರು.
ಹೆಸರಲ್ಲಿಯೇ ಡಿಫರೆಂಟ್ ಎಂಬ ವಿಶೇಷಣ ಸೇರಿದ್ದರಿಂದ ಪ್ರತೀ ಚಿತ್ರದಲ್ಲಿಯೂ ಅದಕ್ಕೆ ತಕ್ಕುದಾಗಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆಯೂ ಡ್ಯಾನಿಯೆದುರು ಸೃಷ್ಟಿಯಾಗಿತ್ತು. ಅದುವೇ ಅವರನ್ನು ವರ್ಷಾಂತರಗಳ ನಂತರವೂ ಹಳತಾಗದಂತೆ ಪೊರೆಯುತ್ತಾ ಬಂದಿದೆ. ಇಂಥಾ ಡ್ಯಾನಿಗೆ ದೊಡ್ಡ ಹೆಸರು ತಂದು ಕೊಟ್ಟ ಚಿತ್ರ ದುನಿಯಾ. ಅದರ ಭಾರೀ ಗೆಲುವಿನಲ್ಲಿ ಅವರ ಪಾಲೂ ಇತ್ತು. ಆದರೆ ಈ ಚಿತ್ರದ ಮೊದಲ ಶೋನ ನಂತರ ಚಿತ್ರ ತಂಡದ ಕೆಲ ಮಂದಿ ಬದಲಾಗಿ ಬಿಟ್ಟಿದ್ದರು. ತಾವೇ ಟಿಕೆಟು ಖರೀದಿಸಿ ಆ ಚಿತ್ರವನ್ನು ಮೊದಲ ಶೋನಲ್ಲಿ ನೋಡಿದ್ದ ಡ್ಯಾನಿಗೆ ಆ ಚಿತ್ರದ ಗೆಲುವಿನ ಸಂಭ್ರಮದಲ್ಲಿಯೂ ಅವಮಾನವಾಗಿತ್ತು. ಪ್ಯಾಲೇಸ್ ಗ್ರೌಂಡಿನಲ್ಲಿ ನಡೆದಿದ್ದ ಆ ಸಮಾರಂಭಕ್ಕೆ ಕಡೇ ಘಳಿಗೆಯಲ್ಲಿ ನಿರ್ಮಾಪಕ ಸಿದ್ದರಾಜು ಕರೆ ಮಾಡಿ ಆಹ್ವಾನಿಸಿದ್ದರಂತೆ. ಆದರೆ ಹೆಬ್ಬಾಗಿಲಲ್ಲಿಯೇ ಡ್ಯಾನಿಯನ್ನು ತಡೆದು ನಿಲ್ಲಿಸಲಾಗಿತ್ತು. ಕಡೆಗೆ ಸಾರ್ವಜನಿಕರೇ ಅವರ ಗುರುತು ಹಿಡಿದು ಪೊಲೀಸರಿಗೆ ಹೇಳಿ ಒಳ ಬಿಟ್ಟಿದ್ದರು. ಆದರೆ ಅಲ್ಲಿಗೆ ಹೋದರೂ ದೊಡ್ಡ ಹೀರೋಗಳೆಲ್ಲ ಬಂದು ಹೋದ ಮೇಲೆ ಡ್ಯಾನಿಯನ್ನು ಕಾಟಾಚಾರಕ್ಕೆ ವೇದಿಕೆಗೆ ಕರೆದು ಶೀಲ್ಡು ಕೊಟ್ಟು ಕಳಿಸಲಾಗಿತ್ತು.
ಆದರೆ ಆ ಹೊತ್ತಿಗೆಲ್ಲ ಡ್ಯಾನಿ ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಬೇಡಿಕೆ ಹೊಂದಿದ್ದರು. ಯಾಪಾಟಿ ಬೆಳೆದರೆಂದರೆ ಯಾವುದೇ ಚಿತ್ರಕ್ಕಾದರೂ ಅವರನ್ನು ನಾಲಕ್ಕು ತಿಂಗಳ ಮುಂಚೆಯೇ ಬುಕ್ ಮಾಡೋ ವಾತಾವರಣ ಸೃಷ್ಟಿಯಾಗಿತ್ತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೇ ಮೊದಲು ಡ್ಯಾನಿಯ ಡೇಟು ಫಿಕ್ಸ್ ಮಾಡುವಂತೆ ಚಿತ್ರತಂಡಕ್ಕೆ ಸಲಹೆ ನೀಡುವ ಮಟ್ಟಕ್ಕೆ ಅವರು ಬೆಳೆದು ನಿಂತಿದ್ದರು. ಹಾಗೆ ಡ್ಯಾನಿ ಫೈಟ್ ಮಾಸ್ಟರ್ ಆಗಿ ಇದುವರೆಗೂ ೬೦೫ ಚಿತ್ರಗಳನ್ನು ಮಾಡಿದ್ದಾರೆ. ತೆಲುಗಿನಲ್ಲಿ ವರ್ಮಾ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ, ಡಾಲಿ ಧನಂಜಯ್ ಅಭಿನಯದ ಭೈರವ ಗೀತಾ ಅವರ 602ನೇ ಚಿತ್ರವಂತೆ!
ಈ ನಡುವೆ ಡಿ ಅಂತೊಂದು ಚಿತ್ರವನ್ನು ನಿರ್ದೇಶನ ಮಾಡಿ ನಾಯಕನಾಗಲೂ ಡ್ಯಾನಿ ಮುಂದಾಗಿದ್ದರು. ಆದರದು ಮುಂದುವರೆಯಲಿಲ್ಲ. ಇದೀಗ ಆ ಚಿತ್ರಕ್ಕೆ ಬೇರೆ ಹೀರೋನನ್ನು ಹಾಕಿಕೊಂಡು ನಿರ್ದೇಶನ ಮಾಡೋ ಕನಸು ಹೊಂದಿದ್ದಾರೆ. ಇಂಥಾ ಡ್ಯಾನಿ ಮೂಲತಃ ಕೊಳ್ಳೇಗಾಲದವರು. ಆದರೆ ಬೆಳೆದಿದ್ದೆಲ್ಲವೂ ಮೈಸೂರಿನಲ್ಲಿ ಬನ್ನೂರು, ಮುಳ್ಳೂರು ಸೇರಿದಂತೆ ಒಂದಷ್ಟು ಊರುಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದ ಡ್ಯಾನಿಗೆ ಓದೆಂದರೆ ಅಷ್ಟಕ್ಕಷ್ಟೇ. ಅವರ ತಂದೆ ಸಿಐಡಿ ಅಧಿಕಾರಿಯಾಗಿದ್ದವರು. ಅಮ್ಮ ಗೃಹಿಣಿ. ತಂದೆ ಆಗಾಗ ಕೆಲ ಸಾಹಸಮಯ ವ್ಯಾಯಾಮ ಮಾಡಿಸುತ್ತಿದ್ದರಲ್ಲಾ? ಅದುವೇ ಡ್ಯಾನಿಯನ್ನು ಸಾಹಸ ನಿರ್ದೇಶಕನಾಗೋ ಕನಸಿನತ್ತ ಕೈ ಹಿಡಿದು ಮುನ್ನಡೆಸಿತ್ತು. ಆ ಬಳಿಕೆ ಚಿಕ್ಕ ವಯಸ್ಸಿಗೇ ಫೈಟರ್ ಆಗಿ ಪ್ರತೀ ಕ್ಷಣವೂ ಸಾವಿನೊಂದಿಗೆ ಸರಸವಾಡುತ್ತಾ ಬಂದಿದ್ದ ಡ್ಯಾನಿ ವಿಷ್ಣುವರ್ಧನ್, ಶಶಿಕುಮಾರ್, ದೇವರಾಜ್, ಮಾಲಾಶ್ರೀ, ಚರಣ್ ರಾಜ್ ಸೇರಿದಂತೆ ಅನೇಕ ನಟ ನಟಿಯರಿಗೆ ಡ್ಯೂಪ್ ನೀಡಿದ್ದಾರೆ. ಈ ಕ್ಷಣಕ್ಕೂ ಅವರು ಕನ್ನಡ, ತೆಲುಗು, ಮಲೆಯಾಳಂ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕರ್ನಾಟಕ ಚಲನಚಿತ್ರ ಸಾಹಸ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಕೂಡಾ ಕಾರ್ಯ ನಿರ್ವಹಿಸುತ್ತಿರುವ ಡಿಫರೆಂಟ್ ಡ್ಯಾನಿ ಅವರಿಗೆ ಒಳಿತಾಗಲಿ…
– ಅರುಣ್ ಕುಮಾರ್.ಜಿ
No Comment! Be the first one.