‘ಡಾರ್ಲಿಂಗ್’ ಕೃಷ್ಣ ಅಭಿನಯದ ಚಿತ್ರಗಳಲ್ಲಿ ಇಬ್ಬರು ಹೀರೋಯಿನ್ ಗಳಿದ್ದರೆ, ಚಿತ್ರ ಹಿಟ್ ಆಗುತ್ತದಾ? ಇಂಥದ್ದೊಂದು ಕುತೂಹಲ ಗಾಂಧಿನಗರದ ಮಂದಿಯಲ್ಲಿದೆ. ಅದಕ್ಕೆ ಕಾರಣ, ಕೃಷ್ಣ ಅವರ ಹಿಂದಿನ ಯಾವ್ಯಾವ ಚಿತ್ರಗಳಲ್ಲಿ ಅವರಿಗೆ ಇಬ್ಬಿಬ್ಬರು ನಾಯಕಿಯರಿದ್ದರೋ ಅವೆಲ್ಲವೂ ಹಿಟ್ ಆಗಿವೆ. ‘ಲವ್ ಮಾಕ್ಟೇಲ್’ನಲ್ಲಿ ಇಬ್ಬರು ನಾಯಕಿಯರಿದ್ದರು. ಅದು ಹಿಟ್ ಆಯಿತು. ಕೆಲವು ತಿಂಗಳುಗಳ ಹಿಂದೆ ‘ಲಕ್ಕಿ ಮ್ಯಾನ್’ ಚಿತ್ರ ಬಿಡುಗಡೆಯಾಯಿತು. ಅದು ಸಹ ಯಶಸ್ವಿಯಾಯಿತು. ಈಗ ‘ದಿಲ್ ಪಸಂದ್’ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದರಲ್ಲೂ ಇಬ್ಬರು ನಾಯಕಿಯರು. ಹಾಗಾಗಿ, ಈ ಚಿತ್ರ ಸಹ ಕೃಷ್ಣ ಅವರ ಯಶಸ್ಸಿನ ನಾಗಾಲೋಟವನ್ನು ಮುಂದುವರೆಸುತ್ತದಾ? ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇಬ್ಬರು ನಾಯಕಿಯರು ಇದ್ದಾರೆ ಎಂಬ ಕಾರಣಕ್ಕೆ ಚಿತ್ರ ಗೆಲ್ಲುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ, ಈ ಚಿತ್ರ ಗೆಲ್ಲಿಸುವುದಕ್ಕೆ ಕಥೆಯೇ ಸಾಕು ಎನ್ನುತ್ತಾರೆ ಕೃಷ್ಣ. ಅವರಿಗೆ ಈ ಕಥೆ ಬಹಳ ಇಷ್ಟವಾಗಿರುವುದಷ್ಟೇ ಅಲ್ಲ, ಅದೇ ಈ ಚಿತ್ರದ ಟ್ರಂಪ್ಕಾರ್ಡ್ ಎಂಬುದು ಅವರ ನಂಬಿಕೆ.
ಈ ಕುರಿತು ಮಾತನಾಡುವ ಅವರು, ‘’ದಿಲ್ ಪಸಂದ್’ ಚಿತ್ರದ ಕಥೆ ಕೇಳಿದಾಗ, ಮುಖದಲ್ಲಿ ನಗು ಇತ್ತು. ಪ್ರತೀ ಸೀನ್ ಎಂಜಾಯ್ ಮಾಡುತ್ತಿದ್ದೆ. ಬರೀ ಕಥೆ ಕೇಳಿದಾಗಲಷ್ಟೇ ಅಲ್ಲ, ಶೂಟಿಂಗ್ ಸಮಯದಲ್ಲೂ ಎಂಜಾಯ್ ಮಾಡಿದೆ. ಡಬ್ಬಿಂಗ್ನಲ್ಲಿ ಚಿತ್ರ ನೋಡಿದಾಗಲೂ ಖುಷಿಯಾಯಿತು. ನಿರ್ದೇಶಕ ಶಿವತೇಜಸ್ ಹೇಳಿದ್ದನ್ನೇ ಮಾಡಿದ್ದಾರೆ. ನನಗಂತೂ ಈ ಚಿತ್ರ ಬಹಳ ಖುಷಿ ಕೊಟ್ಟಿದೆ. ಜನಕ್ಕೂ ಇಷ್ಟ ಆಗುತ್ತದೆ ಎಂಬ ನಂಬಿಕೆ ನನಗಿದೆ. ಜನ ಏನು ನಿರೀಕ್ಷೆ ಮಾಡಿಕೊಂಡು ಬಂದಿರುತ್ತಾರೋ, ಅದಕ್ಕಿಂತ ಜಾಸ್ತಿಯೇ ಇಲ್ಲಿ ಮನರಂಜನೆ ಇರಲಿದೆ. ಇದೊಂದು ಕಾಮಿಡಿ ಚಿತ್ರ ಅಂತಂದುಕೊಂಡರೆ ತಪ್ಪು. ಅದರ ಜೊತೆಗೆ ಎಮೋಷನ್ ಸಹ ಬಹಳ ಇದೆ. ರಂಗಾಯಣ ರಘು ನಾನು ಇದರಲ್ಲಿ ತಂದೆ-ಮಗನಾಗಿ ಕಾಣಿಸಿಕೊಂಡಿದ್ದೇವೆ. ಇಬ್ಬರ ಬಾಂಧವ್ಯದ ಕುರಿತು ಬಹಳ ಚೆನ್ನಾಗಿ ತೋರಿಸಿದ್ದಾರೆ. ಶಿವತೇಜಸ್ ಅವರ ಚಿತ್ರಜೀವನದಲ್ಲೇ ಇದೊಂದು ಅದ್ಭುತವಾದ ಚಿತ್ರವಾಗಲಿದೆ ಎಂಬ ನಂಬಿಕೆ ನನಗೆ ಇದೆ’ ಎನ್ನುತ್ತಾರೆ ಕೃಷ್ಣ.
ಇನ್ನು, ಅವರ ಚಿತ್ರಗಳಲ್ಲಿ ಇಬ್ಬರು ಹೀರೋಯಿನ್ಗಳ ಬಗ್ಗೆ ಮಾತನಾಡುವ ಅವರು, ‘ನನ್ನದು ಎರಡೂ ಪಾತ್ರಗಳ ನಡುವೆ ಒದ್ದಾಡುವ ಪಾತ್ರ. ಇಬ್ಬರು ನಾಯಕಿಯರ ಜತೆಗೆ ನಟಿಸಿದ್ದು ನನಗೆ ಕಷ್ಟ ಎಂದನಿಸಲಿಲ್ಲ. ಏಕೆಂದರೆ, ಇದಕ್ಕೂ ಮುನ್ನ ಕೆಲವು ಚಿತ್ರಗಳಲ್ಲಿ ನನಗೆ ಇಬ್ಬಿಬ್ಬರು ಹೀರೋಯಿನ್ಗಳು ಇದ್ದಾರೆ. ಹಾಗಾಗಿ ಕಾಮನ್ ಆಗಿದೆ. ನಿಜ ಹೇಳಬೇಕೆಂದರೆ, ಲವ್ಸ್ಟೋರಿಗಳಲ್ಲಿ ಇಬ್ಬರು ನಾಯಕಿಯರು ಇದ್ದಾಗಲೇ ಕಾನ್ಫ್ಲಿಕ್ಟ್ ಆಗೋದು. ಕಥ ಇನ್ನಷ್ಟು ಆಸಕ್ತಿಕರವಾಗೋದು. ಇನ್ನೊಂದು ಪಾತ್ರ ಬಂದಾಗಲೇ ಮಜ ಸಿಗೋದು. ಅದೇ ಕಾರಣಕ್ಕೆ ನನ್ನ ಚಿತ್ರಗಳಲ್ಲಿ ಇಬ್ಬಿಬ್ಬರು ನಾಯಕಿಯರು ಇರುತ್ತಾರೇನೋ? ಇನ್ನೊಂದು ಪಾತ್ರ ಬಂದಾಗಲೇ ಮಜ ಸಿಗೋದು. ಈ ಚಿತ್ರ ತುಂಬಾ ನಗಿಸುತ್ತದೆ. ಡಬ್ಬಿಂಗ್ ಸಮಯದಲ್ಲಿ ನೋಡಿ ಎಂಜಾಯ್ ಮಾಡಿದ್ದೀನಿ’ ಎನ್ನುತ್ತಾರೆ ಕೃಷ್ಣ.
ʻದಿಲ್ ಪಸಂದ್’ ಚಿತ್ರದಲ್ಲಿ ಕೃಷ್ಣಗೆ ನಾಯಕಿಯರಾಗಿ ನಿಶ್ವಿಕಾ ನಾಯ್ಡು ಮತ್ತು ಮೇಘಾ ಶೆಟ್ಟಿ ಇದ್ದು, ಮಿಕ್ಕಂತೆ ಸುಧಾ ಬೆಳವಾಡಿ, ರಂಗಾಯಣ ರಘು, ಗಿರಿ ಮುಂತಾದವರು ನಟಿಸಿದ್ದಾರೆ. ಅಜಯ್ ರಾವ್ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿ ಎಂಟರ್ಪ್ರೈಸಸ್ ಸಂಸ್ಥೆಯಡಿ ಸುಮಂತ್ ಕ್ರಾಂತಿ ನಿರ್ಮಿಸಿರುವ ಈ ಚಿತ್ರವನ್ನು ಶಿವತೇಜಸ್ ನಿರ್ದೇಶನ ಮಾಡಿದ್ದಾರೆ.
No Comment! Be the first one.