ಮಗನಿಗೆ ಕೈತುಂಬಾ ಸಂಬಳ ಬರುವ ಕಂಪನಿಯ ಕೆಲಸ ಸಿಕ್ಕಮೇಲೆ ಹೆತ್ತವರ ಗುರಿ ಒಂದೇ. ಮದುವೆ ಮಾಡಿ ಲೈಫ್ ಸೆಟಲ್ ಮಾಡಿಸೋದು. ಹಾಗೆಯೇ ಇಲ್ಲಿ ಹೀರೋ ಡಾರ್ಲಿಂಗ್ ಕೃಷ್ಣನಿಗೆ ಮದುವೆ ಮಾಡಲು ಹುಡುಗಿಯನ್ನು ಫಿಕ್ಸ್ ಮಾಡಿರುತ್ತಾರೆ. ಅಷ್ಟರಲ್ಲೇ ಆ ಕಡೆ ಇನ್ನೊಬ್ಬಳು ತಗ್ಲಾಕೋತಾಳೆ. ಪಾನಮತ್ತಳಾದವಳನ್ನು ಕರೆದುಕೊಂಡು ಹೋಗಿ ಲಾಡ್ಜಿನಲ್ಲಿ ಮಲಗಿಸಿದ್ದೇ ಅವಾಂತರಕ್ಕೆ ಕಾರಣವಾಗುತ್ತದೆ. ನಮ್ಮಿಬ್ಬರಲ್ಲೂ ಏನೇನೋ ಆಗಿರಬಹುದು. ಅದು ಕನ್ಫರ್ಮ್ ಆಗಲು ನಲವತ್ತೈದು ದಿನಗಳ ಕಾಲ ನೀನು ನನ್ನೊಟ್ಟಿಗಿರಬೇಕು ಅನ್ನೋದು ಹುಡುಗಿಯ ಷರತ್ತು. ಆ ಕಡೆ ಮನೆಯಲ್ಲಿ ಮದುವೆಗೆ ಸಿದ್ದತೆ ನಡೆದು, ತನಗಾಗಿ ಒಬ್ಬಳು ಕಾದಿರುವಾಗಲೇ ಇವಳು ಬೆನ್ನತ್ತಿದ ಬೇತಾಳದಂತೆ ಕಾಡಿದರೆ, ಹುಡುಗನ ಪರಿಸ್ಥಿತಿ ಏನಾಗಬೇಡ?
ಇಬ್ಬರು ಹೆಣ್ಮಕ್ಕಳ ನಡೆವೆ ಸಿಲುಗಿ ವಿಲಗುಟ್ಟುವ ಹುಡುಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಹೀಗೆ ಇಬ್ಬರ ನಡುವೆ ರಂಗಿನಾಟ ಆಡುವುದು ಕೃಷ್ಣ ಅವರಿಗೆ ಹೊದಲ್ಲವಾಗಿರೋದು ಕೂಡಾ ಅದಕ್ಕೆ ಕಾರಣವಾಗಿರವಬಹುದು. ಇಡೀ ಸಿನಿಮಾವನ್ನು ನಿಶ್ವಿಕಾ ನಾಯ್ಡು ಆವರಿಸಿಕೊಂಡಿದ್ದಾರೆ. ಸಹಜವಾದ ಗ್ಲಾಮರ್ ಮತ್ತು ಚಿತ್ರದಲ್ಲಿ ತೊಟ್ಟಿರುವ ಬಟ್ಟೆ ನಿಶ್ವಿಕಾಳ ಆಕರ್ಷಣೆಯನ್ನು ಹೆಚ್ಚಿಸಿದೆ. ರಾಮಾ ರಾಮಾ ರಾಮಾ ಹಾಡನ್ನು ದೊಡ್ಡ ಪರದೆಯಲ್ಲಿ ನೋಡೋದೇ ಮಜಾ. ರಂಗಾಯಣ ರಘು ಕಡೆಯಲ್ಲಿ ಕಾಡುವಂತೆ, ಕಣ್ಣುಗಳ ತೇವವಾಗುವಂತೆ ನಟಿಸಿದ್ದಾರೆ. ಮಕ್ಕಳ ಬದುಕು ಸುಂದರವಾಗಬೇಕು ಅಂತಾ ಕನಸು ಕಂಡ ತಂದೆ, ಅದೇ ಮಕ್ಕಳು ಹಾದಿ ತಪ್ಪಿದಾಗ ಪಡುವ ವೇದನೆಗಳನ್ನು ಪರದೆ ಮೇಲೆ ರಘು ಹೊರಹಾಕಿದ್ದಾರೆ. ಮೇಘಾ ಶೆಟ್ಟಿ ಧಾರಾವಾಹಿ ನಟನೆಯಿಂದ ಹೊರಬಂದು ಸಿನಿಮಾಗೆ ಏನು ಬೇಕೋ ಅದನ್ನು ನೀಡಿದ್ದಾರೆ. ಎಣ್ಣೆ ಏಟಲ್ಲಿ ʻನನ್ನ ಸಂತೋಷಾನೆಲ್ಲಾ ಹಾಳುಮಾಡಿದ್ಯಲ್ಲೋ ಸಂತೋಸಾʼ ಅಂತಾ ತಿವಿಯುವ ದೃಶ್ಯದಲ್ಲಿ ಮೇಘ ಅಭಿನಯಿಸಿರುವ ರೀತಿ ಮಜವಾಗಿದೆ. ಕಡೆಯಲ್ಲಿ ಬಂದರೂ ಮೆರುಗು ನೀಡುವ ರೋಲಿನಲ್ಲಿ ಅಜೇಯ್ ರಾವ್ ಕಾಣಿಸಿಕೊಂಡಿದ್ದಾರೆ. ತಬಲಾ ನಾಣಿ, ಚಿತ್ಕಲಾ ಬಿರಾದಾರ್ ಮತ್ತು ಅರುಣಾ ಬಾಲರಾಜ್ ಕೂಡಾ ತಮ್ಮ ಪಾತ್ರಗಳಿಗೆ ಪವರ್ ನೀಡಿದ್ದಾರೆ. ನಿರ್ದೇಶಕ ಶಿವತೇಜಸ್ ಅವರಿಗೆ ರೊಮ್ಯಾಂಟಿಕ್ ಸಬ್ಜೆಕ್ಟಿನ ಜೊತೆ ಫನ್ ಸೇರಿಸಿ ನೋಡುಗರನ್ನು ರಂಜಿಸುವ ಕಲೆ ಸಿದ್ದಿಸಿದೆ ಅನ್ನೋದನ್ನು ಅವರ ಈ ಹಿಂದಿನ ಸಿನಿಮಾಗಳು ಋಜುವಾತು ಮಾಡಿವೆ. ದಿಲ್ ಪಸಂದ್ ಕೂಡಾ ಅದಕ್ಕೆ ಹೊರತಾಗಿಲ್ಲ.
ಡುಮ್ಮ ಗಿರಿ ಮತ್ತು ಹರೀಶ್ ಪ್ರೀತಮ್ ಕಾಂಬಿನೇಷನ್ನಿನಲ್ಲಿ ತಮಾಷೆ ದೃಶ್ಯಗಳು ಸಖತ್ ವರ್ಕೌಟ್ ಆಗಿದೆ. ಸಾಧು ಕೋಕಿಲಾ ಕೂಡಾ ಹೆಚ್ಚು ನಗಿಸುತ್ತಾರೆ. ಆರಂಭದಿಂದ ಕೊನೆಯ ತನಕ ಜನ ನಗುನಗುತ್ತಲೇ ನೋಡಬಹುದಾದ ಚಿತ್ರ ದಿಲ್ ಪಸಂದ್. ಶೇಖರ್ ಚಂದ್ರು ಛಾಯಾಗ್ರಹಣ ಎಂದಿನಂತೆ ಕನ್ನಡಿಯಂತಿದೆ. ಅರ್ಜುನ ಜನ್ಯಾ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತದಲ್ಲೂ ಮನಸೂರೆ ಮಾಡುತ್ತಾರೆ.
ಮೊದಲ ಭಾಗದಲ್ಲಿ ಇನ್ನೊಂದಿಷ್ಟು ಕಂಟೆಂಟ್ ಸೇರಿಸಿದ್ದರೆ ಚನ್ನಾಗಿರುತ್ತಿತ್ತು ಅನ್ನೋದು ಬಿಟ್ಟರೆ ಮಿಕ್ಕಂತೆ ಸಿನಿಮಾ ಪರಿಪೂರ್ಣವಾಗಿ ಮನರಂಜಿಸುತ್ತದೆ. ಎಲ್ಲವೂ ಸರಿಯಿದ್ದಾಗ, ಸೂಚನೆಯೇ ನೀಡದೆ ಎದುರಾಗುವ ಪಾತ್ರಗಳು ಬದುಕಿನ ದಿಕ್ಕನ್ನೇ ಬದಲಿಸುತ್ತವೆ. ಸ್ವಲ್ಪ ಮೈ ಮರೆತರೂ ಸಮಸ್ಯೆಗಳು, ಆರೋಪಗಳು ಬಂದು ನಮ್ಮನ್ನು ಸುತ್ತಿಕೊಳ್ಳುತ್ತವೆ ಎನ್ನುವ ಗಂಭೀರ ವಿಚಾರಕ್ಕೆ ಒಂದಿಷ್ಟು ಹಾಸ್ಯವನ್ನು ಬೆರೆಸಿ ರುಚಿಕಟ್ಟಾದ ದಿಪ್ ಪಸಂದ್ ನೀಡಿದ್ದಾರೆ. ನಿಮಗೂ ಇಷ್ಟವಾಗಬಹುದು ಒಮ್ಮೆ ನೋಡಿ ಟೇಸ್ಟ್ ಮಾಡಿ!
No Comment! Be the first one.