ಟ್ರಜರ್ ಹಂಟ್ ಕಥೆಯ, ಸಾಕಷ್ಟು ಥ್ರಿಲ್ಲರ್ ಸಿನಿಮಾಗಳು ಬಂದಿರಬಹುದು. ಆದರೆ ಯೆಲ್ಲೋಗ್ಯಾಂಗ್ ತನ್ನ ಗುಣಮಟ್ಟದ ಕಾರಣಕ್ಕೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ.
ಕೆಲವೊಂದು ಸಿನಿಮಾದ ಕಥೆಯೇ ಹಾಗಿರುತ್ತದೆ. ಹೀಗೀಗೆ ಅಂತಾ ಒಂದೇ ಗುಕ್ಕಿಗೆ ಹೇಳಿಬಿಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಥರಹೇವಾರಿ ಪಾತ್ರಗಳು, ಒಂದಕ್ಕೊಂದು ಸೂತ್ರ-ಸಂಬಂಧವಿಲ್ಲದ ಟ್ರ್ಯಾಕುಗಳೆಲ್ಲಾ ಸೇರಿ ಒಂದು ಆಕಾರ ಪಡೆದಿರುತ್ತದೆ. ಕಲ್ಪಿತ ಚೌಕಟ್ಟಿನ ಒಳಗೆ ಚಿತ್ರ ರೂಪಿಸುವವರಿಂದ ಇಂಥ ಕತೆಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಥೇಟು ಚದುರಂಗದ ನುರಿತ ಆಟಗಾರರಂತೆ ತೀರಾ ಬುದ್ದಿವಂತ ನಿರ್ದೇಶಕರು ಮಾತ್ರ ಕಟ್ಟಿ, ಗೆಲ್ಲಬಲ್ಲ ಸಿನಿಮಾ ಯೆಲ್ಲೋ ಗ್ಯಾಂಗ್ಸ್. ಈ ನಿಟ್ಟಿನಲ್ಲಿ ನಿರ್ದೇಶಕ ರವೀಂದ್ರ ಪರಮೇಶ್ವರಪ್ಪ ಮೊದಲ ಪ್ರಯತ್ನದ್ದೇ ಗೆದ್ದಿದ್ದಾರೆ.
ಮಾದಕ ವಸ್ತು ಸಾಗಿಸುವ ಜಾಲ. ಕೋಟ್ಯಂತರ ರುಪಾಯಿ ಹಣ ಕೊಟ್ಟು ಅದನ್ನು ಖರೀದಿಸುವ ಮತ್ತೊಂದು ತಂಡ. ಸ್ಮಗಲ್ ಮಾಡಿದ ಗೋಲ್ಡನ್ನು ಮಾರುವ ವ್ಯಾಪಾರಿ. ಇದೆಲ್ಲದರಿಂದ ಬಂದ ಬ್ಯಾಗುಗಟ್ಟಲೆ ಹಣ. ಅದನ್ನು ದರೋಡೆ ಮಾಡಲು ಹೊಂಚು ಹಾಕುವ ಗ್ಯಾಂಗು. ನಡುವೆ ನುಸುಳುವ ಕಾರು, ಸದಾ ಸಿಡಿಗುಟ್ಟುವ ಅದರ ಮಾಲೀಕ. ಆ ಕಾರನ್ನು ಕಳವು ಮಾಡಲು ಡೀಲ್ ಪಡೆದ ಮೊಬೈಲ್ ಕಳ್ಳರು. ಇವೆಲ್ಲದಕ್ಕೂ ಕೊಂಡಿಯಂತೆ ಒಬ್ಬ ಆಡೀಟರ್, ದೈವಭಕ್ತ ಡಾನ್, ಅವನ ಆಜ್ಞಾಪಾಲಕ ಪೊಲೀಸ್ ಅಧಿಕಾರಿ, ಅವನಿಗೊಬ್ಬಳು ಲವರ್…. ಅಬ್ಬಬ್ಬಾ ಇಷ್ಟೊಂದು ಪಾತ್ರಗಳನ್ನಿಟ್ಟುಕೊಂಡು ಕಥೆ ಕಟ್ಟುವುದು ಮತ್ತು ಅದು ಎಲ್ಲೂ ಗೊಂದಲವಾಗದಂತೆ ಕಾಪಾಡುತ್ತಲೇ ಕುತೂಹಲ ಮೂಡಿಸುವುದು ನಿಜಕ್ಕೂ ತ್ರಾಸದ ಕೆಲಸ. ಇಷ್ಟಕ್ಕೂ ಇಲ್ಲಿ ಹೀರೋ ಯಾರು? ವಿಲನ್ ಯಾರು ಅಂತನ್ನೋದೇ ಗೊತ್ತಾಗೋದಿಲ್ಲ. ಕಥೆಯೇ ಹೀರೋ, ಎದುರಾಗುವ ಸಂದರ್ಭಗಳೇ ವಿಲನ್ ಅನ್ನಬಹುದು. ಆಹಾರ ಸರಪಳಿಯಲ್ಲಿ ಒಂದು ಪ್ರಾಣಿಯನ್ನು ಮತ್ತೊಂದು ಪ್ರಾಣಿ ಕೊಂದು ತಿನ್ನುವಂತೆಯೇ ಇಲ್ಲಿರುವ ಪಾತ್ರಗಳು ಕೂಡಾ ವರ್ತಿಸುತ್ತವೆ.
ಇಷ್ಟೆಲ್ಲಾ ಪಾತ್ರಗಳನ್ನು ಸೃಷ್ಟಿಸಿದ ಬೇರೆ ಯಾರೇ ಆಗಿದ್ದರೂ ಅನುಭವೀ ನಟರನ್ನು ಹಾಕಿಕೊಂಡು ಸಿನಿಮಾ ಮಾಡಿರುತ್ತಿದ್ದರೋ ಏನೋ? ಆದರೆ ನಿರ್ದೇಶಕ ರವೀಂದ್ರ ಈ ವಿಚಾರದಲ್ಲೂ ಸಾಹಸ ಮಾಡಿದ್ದಾರೆ. ಬಲ ರಾಜ್ ವಾಡಿ, ಸತ್ಯಣ್ಣ ಇಬ್ಬರನ್ನು ಬಿಟ್ಟರೆ ಬಹುತೇಕರಿಲ್ಲಿ ಹೊಸಬರೇ. ಧಾರಾವಾಹಿಗಳಲ್ಲಿ ಹೆಸರು ಮಾಡಿರುವ ದೇವ್ ದೇವಯ್ಯ ತಮಿಳು ನಟ ಬಾಬಿ ಸಿಂಹ ಅವರನ್ನು ನೆನಪಿಸುವ ರೇಂಜಿಗೆ ಸಹಜವಾಗಿ ನಟಿಸಿದ್ದಾರೆ. ಇತ್ತೀಚೆಗೆ ತನ್ನ ನಟನೆಯ ಮೂಲಕವೇ ಹೆಚ್ಚು ಗಮನ ಸೆಳೆಯುತ್ತಿರುವ ಕಲಾವಿದ ನಾಟ್ಯರಂಗ. ಪದೇ ಪದೇ ಅಚ್ಛರಿ ಮೂಡಿಸುತ್ತಿರುವ ನಾಟ್ಯರಂಗ ಇಲ್ಲೂ ಅದನ್ನು ಮುಂದುವರೆಸಿದ್ದಾರೆ. ಇವರ ಜೊತೆಗೆ ಕಾಣಿಸಿಕೊಂಡಿರುವ ವಿಠಲ್ ಕೂಡಾ ಅಷ್ಟೇ ಮಜಾ ಕೊಡುತ್ತಾರೆ. ತೀರಾ ಕಡಿಮೆ ದೃಶ್ಯದಲ್ಲಿ ಬಂದು ನಗಿಸಿ, ನೆನಪು ಉಳಿಸಿ ಹೋಗಿರುವ ಮತ್ತೊಬ್ಬ ಕಲಾವಿದ ನಂದಗೋಪಾಲ್. ಅರ್ಚನಾ ಕೊಟ್ಟಿಗೆ ಪೊಲೀಸ್ ಅಧಿಕಾರಿಯ ಪ್ರೇಯಸಿ ಕಂ ಪತ್ರಕರ್ತೆಯಾಗಿ ಇಷ್ಟವಾಗುತ್ತಾರೆ. ಪ್ರದೀಪ್, ಶ್ರೀಹರ್ಷ, ಅರುಣ್ ಸೇರಿದಂತೆ ಅನೇಕ ಹೊಸಬರು ಇಲ್ಲಿ ಗುರುತರವಾದ ಪಾತ್ರಗಳನ್ನು ನಿಭಾಯಿಸಿದ್ದಾರೆ. ನಿರ್ದೇಶಕ ವಿನ್ಯಾಸಗೊಳಿಸಿದ ಕ್ಲಿಷ್ಟಕರವಾದ ಸ್ಕ್ರಿಪ್ಟ್ ಅನ್ನು ಅಷ್ಟೇ ತನ್ಮಯತೆಯಿಂದ ಚಿತ್ರೀಕರಿಸಿಕೊಟ್ಟಿರುವ ಸುಜ್ಞಾನ್ ಅವರಿಗೆ ಜೈ ಅನ್ನಲೇಬೇಕು. ರೋಹಿತ್ ಹಿನ್ನೆಲೆ ಸಂಗೀತ, ಸುರೇಶ್ ಆರ್ಮುಗಂ ಸಂಕಲನ ಕೂಡಾ ಶ್ರದ್ದೆಯಿಂದ ಮಾಡಿದ್ದಾರೆ.
ಟ್ರಜರ್ ಹಂಟ್ ಕಥೆಯ, ಸಾಕಷ್ಟು ಥ್ರಿಲ್ಲರ್ ಸಿನಿಮಾಗಳು ಬಂದಿರಬಹುದು. ಆದರೆ ಯೆಲ್ಲೋಗ್ಯಾಂಗ್ ತನ್ನ ಗುಣಮಟ್ಟದ ಕಾರಣಕ್ಕೆ ತನ್ನದೇ ಆದ ಪ್ರಾಮುಖ್ಯತೆ ಪಡೆದಿದೆ. ಈ ಸಿನಿಮಾ ಗಳಿಕೆಯಲ್ಲಿ ಎಷ್ಟರ ಮಟ್ಟಿಗೆ ಸಫಲವಾಗುತ್ತದೋ ಕರಾರುವಕ್ಕಾಗಿ ಹೇಳಲಿಕ್ಕಾಗದು. ಆದರೆ ಹಾಲಿವುಡ್ ಮಾದರಿಯ ಸ್ಕ್ರೀನ್ ಪ್ಲೇ ಹೊಂದಿರುವ ಸಿನಿಮಾ ಕನ್ನಡದಲ್ಲೂ ಬಂದಿದೆ ಅನ್ನೋದೇ ಖುಷಿ. ವಿದೇಶೀ ಚಿತ್ರಗಳನ್ನು ಹೊಗಳುವವರ ಜೊತೆಗೆ ಸ್ವದೇಶೀ ಸಿನಿಮಾ ಮೋಹಿಗಳೂ ಮುಲಾಜಿಲ್ಲದೇ ಯೆಲ್ಲೋ ಗ್ಯಾಂಗ್ಸ್ ನೋಡಬಹುದು!
No Comment! Be the first one.