ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಜೊತೆಯಲಿ, ನವಗ್ರಹ, ಸಾರಥಿಯಂಥಾ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶನ ಮಾಡಿರೋ ದಿನಕರ್ ಈ ಚಿತ್ರದ ಮೂಲಕ ಮತ್ತೊಂದು ಮಹಾ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಸಿನಿಬಜ಼್ ದಿನಕರ್ ಅವರೊಂದಿಗೆ ಈ ಚಿತ್ರದ ಬಗ್ಗೆ ಮಾತಿಗಿಳಿದಾಗ ಮಜವಾದ, ಇಂಟರೆಸ್ಟಿಂಗ್ ಆದ ಹಲವಾರು ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತಾಡಿದ್ದಾರೆ. ಅದರ ಸಂಕ್ಷಿಪ್ತ ವಿವರ ನಿಮಗಾಗಿ…
ನೀವೊಂದು ಸಿನಿಮಾ ಮಾಡಲು ಹೊರಟಾಗ ಭಾರೀ ನಿರೀಕ್ಷೆ ಇರುತ್ತೆ. ಲೈಫ್ ಜೊತೆ ಒಂದ್ ಸೆಲ್ಫಿ ವಿಚಾರದಲ್ಲಿ ಅದು ಹೇಗೆ ಸ್ಪೆಷಲ್?
– ಇದುವರೆಗೂ ನಾನು ಮಾಡಿರೋ ಸಿನಿಮಾಗಳೆಲ್ಲ ಬೇರೆ ಬೇರೆ ಜಾನರಿನವುಗಳೇ. ಪ್ರತೀ ಚಿತ್ರಗಳೂ ನನ್ನ ಪಾಲಿಗೆ ಸ್ಪೆಷಲ್. ಈ ಹಿಂದೆ ಜೊತೆ ಜೊತೆಯಲಿ ಚಿತ್ರ ಲವ್ ಸಬ್ಜೆಕ್ಟ್ ಹೊಂದಿತ್ತು. ನವಗ್ರಹ ಥ್ರಿಲ್ಲರ್ ಆದ್ರೆ, ಸಾರಥಿ ಪಕ್ಕಾ ಆಕ್ಷನ್ ಮೂವಿ. ಲೈಫ್ ಜೊತೆ ಒಂದ್ ಸೆಲ್ಫಿ ಈ ಹಿಂದಿನ ಚಿತ್ರಗಳಿಗಿಂತ ಖಂಡಿತಾ ಸ್ಪೆಷಲ್. ಖಂಡಿತಾ ನೋಡುಗರಿಗೆಲ್ಲ ಆ ಫೀಲ್ ಆಗೇ ಆಗುತ್ತೆ. ಎಮೋಷನ್, ಲವ್, ಫ್ರೆಂಡ್ಶಿಪ್ ಮತ್ತು ಬದುಕಿನ ವಾಸ್ತವತೆಗಳ ಸುತ್ತ ಹರಡಿಕೊಂಡಿರೋ ಚಿತ್ರ.
ಒಂದೇ ಚಿತ್ರದಲ್ಲಿ ಹಲವು ನಾಯಕರನ್ನು ನಿರ್ದೇಶನ ಮಾಡಿದವರು ನೀವು. ಈ ಚಿತ್ರದಲ್ಲಿ ಇಬ್ಬರು ನಾಯಕರೊಂದಿಗಿನ ಅನುಭವ ಹೇಗಿತ್ತು?
– ಈ ಚಿತ್ರದ ನಾಯಕರಲ್ಲೊಬ್ಬರಾಗಿರೋ ಪ್ರೇಂ ಜೊತೆ ನನಗಿದು ಎರಡನೇ ಚಿತ್ರ. ಈ ಹಿಂದೆ ಜೊತೆಯಾಗಿಯೇ ಜೊತೆ ಜೊತೆಯಲಿ ಚಿತ್ರ ಮಾಡಿದ್ವಿ. ಆದರೆ ಆ ಚಿತ್ರಕ್ಕೂ ಈ ಚಿತ್ರಕ್ಕೂ ಇಬ್ಬರಲ್ಲಿಯೂ ಒಂದಷ್ಟು ಬದಲಾವಣೆಗಳಾಗಿವೆ. ಆಗ ನಾವಿಬ್ಬರೂ ಹೆಚ್ಚೂ ಕಮ್ಮಿ ಹೊಸಬರು. ಈಗ ನನಗೊಂದಷ್ಟು ಅನುಭವವಾಗಿದೆ. ಅವರೊಂದಷ್ಟು ಪಳಗಿಕೊಂಡಿದ್ದಾರೆ. ಓರ್ವ ನಟನಾಗಿ ಪ್ರೇಂರಲ್ಲಿನ ಬದಲಾವಣೆ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಇನ್ನು ಪ್ರಜ್ವಲ್ ನಮ್ಮದೇ ಫ್ಯಾಮಿಲಿಯ ಹುಡುಗನಿದ್ದಂತೆ. ಪ್ರಜ್ವಲ್ ಮತ್ತು ಪ್ರಣಾಮ್ ಇಬ್ರೂ ನನಗಾಗಲಿ ದರ್ಶನ್ಗಾಗಲಿ ತಮ್ಮಂದಿರಿದ್ದಂತೆ. ಬಹು ಕಾಲದಿಂದಲೂ ಒಟ್ಟಾಗಿ ಚಿತ್ರ ಮಾಡಬೇಕೆಂಬ ಆಸೆ ಇಬ್ಬರಿಗೂ ಇತ್ತು. ನನಗಂತೂ ಪ್ರಜ್ವಲ್ ಒಳಗೊಬ್ಬ ಯಂಗ್ ದರ್ಶನ್ ಕಾಣಿಸುತ್ತಾರೆ. ಇಬ್ಬರದ್ದೂ ಕೂಡಾ ಸಹಜಾಭಿನಯ. ಈ ಚಿತ್ರದ ವಿಚಾರದಲ್ಲಿ ಹೇಳೋದಾದರೆ ಇವರಿಬ್ಬರ ಜೊತೆಗಿನ ಚಿತ್ರೀಕರಣದ ಅನುಭವ ನಿಜಕ್ಕೂ ಚೆನ್ನಾಗಿತ್ತು.
ಹರಿಪ್ರಿಯಾ ನಿಮ್ಮ ಚಿತ್ರದ ನಾಯಕಿ. ಈ ಪಾತ್ರಕ್ಕೇ ಅವರನ್ನೇ ಆಯ್ಕೆ ಮಾಡಲು ಕಾರಣ?
– ಈ ಹಿಂದೆ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದ ಉಗ್ರಂ ಚಿತ್ರವನ್ನ ನಮ್ಮದೇ ತೂಗುದೀಪ ಸಂಸ್ಥೆಯಿಂದ ಡಿಸ್ಟ್ರಿಬ್ಯೂಟ್ ಮಾಡಿದ್ದೆ. ನಂತರ ನೀರ್ ದೋಸೆ ಚಿತ್ರದಲ್ಲಿನ ಅವರ ನ್ಯಾಚುರಲ್ ಆದ ಅಭಿನಯ ನೋಡಿ ಅವರ ಜೊತೆಗೊಂದು ಚಿತ್ರ ಮಾಡಲೇ ಬೇಕೆಂದು ಅನ್ನಿಸಿತ್ತು. ಆ ಮೇಲೆ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದ ಕಥೆಯ ಹಂತದಲ್ಲಿ ಈ ಪಾತ್ರಕ್ಕೆ ಅವರೇ ಪರ್ಫೆಕ್ಟ್ ಅನ್ನಿಸಿತ್ತು. ಅವರಿಲ್ಲಿ ಸ್ನೇಹಿತರಿಂದ ರ್ಯಾಶ್ ಅಂತ ಕರೆಸಿಕೊಳ್ಳೋ ರಶ್ಮಿ ಎಂಬ ಪಾತ್ರ ನಿರ್ವಹಿಸಿದ್ದಾರೆ. ಪ್ರಜ್ವಲ್, ಪ್ರೇಂ, ಹರಿಪ್ರಿಯಾ ಸೇರಿದಂತೆ ಎಲ್ಲರೂ ಆ ಪಾತ್ರಗಳಿಗೆ ಬೇರ್ಯಾರನ್ನೂ ಕಲ್ಪಿಸಿಕೊಳ್ಳಲೂ ಸಾಧ್ಯವಾಗದಂತೆ ನಟಿಸಿದ್ದಾರೆ. ಸುಧಾರಾಣಿಯವರ ಜೊತೆ ಕೆಲಸ ಮಾಡಲು ಸಿಕ್ಕ ಅವಕಾಶವಂತೂ ನನ್ನ ಪಾಲಿನ ಸೌಭಾಗ್ಯ. ಆ ಪಾತ್ರಕ್ಕೆ ನಾವೇನು ಬಯಸಿದ್ದೆವೋ ಅದನ್ನೇ ಮೀರಿಸುವಂಥಾ ಎಕ್ಸಲೆಂಟ್ ನಟನೆ ಅವರಿಂದ ಸಿಕ್ಕಿದೆ. ಬಹುಶಃ ಇವರೆಲ್ಲರೂ ನನಗಿಂತ ಡೀಪ್ ಆಗಿ ಕಥೆಯನ್ನ ಫೀಲ್ ಮಾಡಿದ್ದಾರನ್ನಿಸುತ್ತೆ!
ನಿಮ್ಮ ಮಡದಿ ಮಾನಸಾ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ಕಥೆಯ ಬಗೆಗಿನ ಕಥೆ ಹೇಳಿ…
– ಮಾನಸಾ ಈ ಕಥೆಯ ಲೈನ್ ಹೇಳಿದಾಗ ಮಾಡಬಹುದನ್ನಿಸಿತ್ತು. ಆಕೆ ಅದನ್ನು ಹೇಳಿದ್ದು ಒಂದೂವರೆ ವರ್ಷಗಳ ಹಿಂದೆ. ಆದ್ರೆ ಆಗ ವರ್ಕ್ ಮಾಡೋಣ, ಆಮೇಲೆ ಡಿಸೈಡ್ ಮಾಡೋಣ ಅಂದಿದ್ದೆ. ಅದಾದ ನಂತರ ಐದಾರು ತಿಂಗಳಲ್ಲಿ ಕಥೆಯ ಒನ್ ಲೈನ್ ರೆಡಿಯಾಗಿತ್ತು. ಅದನ್ನು ನೋಡಿದಾಗ ನಿಜಕ್ಕೂ ಈ ಕಥೆ ಒಂದೊಳ್ಳೆ ಸಿನಿಮಾ ಆಗುತ್ತೆ ಅನ್ನೋ ಕಾನ್ಫಿಡೆನ್ಸ್ ಬಂದಿತ್ತು. ನಾನು ಮಾಡಿದ್ದ ಈ ಹಿಂದಿನ ಮೂರು ಸಿನಿಮಾಗಳಿಗೆ ಹೋಲಿಸಿದರೆ ಈ ಕಥೆ ನನಗೆ ಹೊಸತು. ನನಗೆ ಒಂದೇ ಕೆಲಸ ಹೆಚ್ಚು ಕಾಲ ಮಾಡೋದಂದರೆ ಬೋರಾಗುತ್ತೆ. ನನ್ನ ವ್ಯಕ್ತಿತ್ವವೇ ಅಂಥಾದ್ದು. ಇನ್ನೊಂದು ಲವ್ ಸ್ಟೋರಿ ಅಥವಾ ಆಕ್ಷನ್ ಚಿತ್ರ ಮಾಡಬೇಕನ್ನಿಸೋದಿಲ್ಲ. ಹೊಸದೇನಾದರೂ ಹುಡುಕ್ತೀನಿ. ಅದು ಸಿಕ್ಕಾಗಲಷ್ಟೇ ಮನಸು ಒಪ್ಪಿಕೊಳ್ಳುತ್ತೆ. ಮಾನಸ ಹೇಳಿದ ಈ ಕಥೆಯಲ್ಲಿ ಅಂಥಾ ಹೊಸತನ ಸಿಕ್ಕಿದ್ದರಿಂದಲೇ ಮುಂದುವರೆದೆ. ಕಥೆಯ ಲೈನ್ ರೆಡಿಯಾದ ನಂತರ ಸ್ಕ್ರೀನ್ಪ್ಲೇಗೆ ಮತ್ತೆ ಆರೇಳು ತಿಂಗಳು ಹಿಡಿಯಿತು. ಮಾನಸಾ ಕೂಡಾ ಪಾತ್ರಗಳನ್ನು ರೂಪಿಸಿ, ಕಥೆಯನ್ನು ಒಗ್ಗಿಸಿಕೊಳ್ಳುವಲ್ಲಿ ಜೊತೆಯಾದಳು. ಇಬ್ಬರೂ ಸೇರಿಯೇ ಸ್ಕ್ರೀನ್ ಪ್ಲೇ ಮುಗಿಸಿ ನಿರ್ಮಾಪಕರನ್ನು ಭೇಟಿಯಾದಾಗ ಅವರದನ್ನು ಒಪ್ಪಿಕೊಳ್ಳಲು ತೆಗೆದುಕೊಂಡಿದ್ದು ಕೇವಲ ಎರಡೇ ನಿಮಿಷ!
ಮಾನಸ ಅವರೊಂದಿಗೆ ದಶಕಗಳಷ್ಟು ಕಾಲದಿಂದ ಸಂಸಾರ ನಡೆಸಿದ್ದೀರಿ. ಆದರೆ ಒಂದು ಚಿತ್ರದಲ್ಲಿ ಮೊದಲ ಸಲ ಒಟ್ಟಾಗಿ ಕೆಲಸ ಮಾಡಿದ ಅನುಭವ ಹೇಗನ್ನಿಸಿತು?
– ಮಾನಸಾ ಕಥೆ ಬರೆದಿದ್ದಲ್ಲದೇ ಈ ಚಿತ್ರದುದ್ದಕ್ಕೂ ನನ್ನ ಸಹಾಯಕ್ಕೆ ನಿಂತಿದ್ದಳು. ಚಿತ್ರೀಕರಣ ಮುಗಿಯುವಷ್ಟರಲ್ಲಿ ಮದುವೆಯಾಗಿ ಈ ಹತ್ತು ವರ್ಷಗಳಲ್ಲಿ ಯಾವತ್ತೂ ಮಾಡಿರದಷ್ಟು ಜಗಳಗಳೂ ನಮ್ಮ ನಡುವೆ ನಡೆದವು. ಆಕೆ ತನ್ನ ಕಥೆಯ ಬಗ್ಗೆ ವಿಪರೀತ ಪೊಸೆಸಿವ್. ಸ್ಕ್ರೀನ್ ಪ್ಲೇ ಹಂತದಲ್ಲಿ ಚರ್ಚಿಸುವಾಗ ಇದ್ದಂತೆಯೇ ಪಾತ್ರಗಳು ಬರಬೇಕೆಂಬುದು ಮಾನಸಾ ಬಯಕೆ. ಅದೊಂಚೂರು ಏರುಪೇರಾದರೂ ಜಗಳ ಗ್ಯಾರೆಂಟಿ. ಈ ಜಗಳದಿಂದಲೇ ಕೆಲಸ ಮತ್ತಷ್ಟು ಪಕ್ವವಾಗಿದ್ದೂ ನಿಜ. ಕಡೆಗೆ ಎಡಿಟಿಂಗ್ ಎಲ್ಲ ಮುಗಿಸಿ ಆದಮೇಲೆ ಮಾನಸಾಳನ್ನು ಕರೆದು ತೋರಿಸಿದೆ. ಆಕೆ ಹೊಸಾದೇನು ಮಾಡಿದ್ದೀರಿ, ಎಲ್ಲ ನಾವಂದುಕೊಂಡಂತೆಯೇ ಇದೆಯಲ್ಲಾ ಅಂದಾಗ ಎಲ್ಲ ಅಂದುಕೊಂಡಂತೆಯೇ ನಡೆದಿದೆ ಅಂತ ಸಮಾಧಾನವಾಯ್ತು. ರೀರೆಕಾರ್ಡಿಂಗ್ ಆದ ಮೇಲಂತೂ ಮಾನಸ ಮತ್ತಷ್ಟು ಖುಷಿ ಪಟ್ಟಳು. ಆದರೆ ಚಿತ್ರೀಕರಣ ನಡೆದ ಅರವತ್ತು ದಿನಗಳಲ್ಲಿ ಆರುನೂರು ಸಲ ಜಗಳವಾಡಿದ್ದೇವೆ!
ದರ್ಶನ್ ಅವರು ಚಿತ್ರ ನೋಡಿದ್ದಾರಾ?
– ಇಲ್ಲ ನೋಡಿಲ್ಲ. ಆದರೆ ಸದ್ಯದಲ್ಲೇ ತೋರಿಸೋ ಯೋಜನೆ ಹಾಕಿಕೊಂಡಿದ್ದೇವೆ.
ಈಗ ಕೇಳ್ತಿರೋದು ಅಭಿಮಾನಿಗಳೆಲ್ಲರ ಪ್ರಶ್ನೆಯೂ ಹೌದು, ನೀವು ವರ್ಷಕ್ಕೊಂದು ಸಿನಿಮಾ ಮಾಡೋದು ಯಾವಾಗ?
– ಖಂಡಿತಾ ನನಗೂ ಆಸೆಯಿದೆ ವರ್ಷಕ್ಕೊಂದು ಸಿನಿಮಾ ಮಾಡಬೇಕಂತ. ನಂಗೆ ಅಂಥಾ ಕಥೆ ಸಿಗಬೇಕು. ಕೂತಲ್ಲಿ ಕೂರಲು ಬಿಡದೆ ಎದೆಗೊದ್ದು ಸಿನಿಮಾ ಮಾಡುವಂಥಾ ಕಥೆ ಸಿಗಬೇಕು. ಆವಾಗ ಖಂಡಿತಾ ವರ್ಷಕ್ಕೊಂದು ಸಿನಿಮಾ ಮಾಡ್ತೀನೇನೋ… ನನ್ನ ಪಾಲಿಗೆ ಚಿತ್ರಗಳ ಸಂಖ್ಯೆ ಮುಖ್ಯವಲ್ಲ, ಕ್ವಾಲಿಟಿ ಮುಖ್ಯ ಎಂಬ ಮನಸ್ಥಿತಿ ನನ್ನದು. ಮುಂದೆ ಕೆಲ ಬದಲಾವಣೆ ಮಾಡಿಕೊಂಡು ವರ್ಷಕ್ಕಲ್ಲದಿದ್ದರೂ ಎರಡು ವರ್ಷಕ್ಕೊಂದಾದರೂ ಸಿನಿಮಾ ಮಾಡಲೇಬೇಕು. ಮೊನ್ನೆ ಫಿಲಂ ಚೇಂಬರ್ ಎಲೆಕ್ಷನ್ನಿನಲ್ಲಿ ಸಿಕ್ಕವರೂ ಒಂದು ವರ್ಷಕ್ಕೊಂದಾದ್ರೂ ಸಿನಿಮಾ ಮಾಡೋಕೇನು ದಾಡಿ ಅಂತ ಕ್ಲಾಸು ತಗೊಂಡಿದ್ರು. ಆದ್ರೆ ಏನ್ಮಾಡ್ಲಿ, ಸಿನಿಮಾ ವಿಚಾರದಲ್ಲಿ ನಾನೊಂಥರ ಪೊಸೆಸಿವ್ ಆಸಾಮಿ. ಸಿನಿಮಾ ಅಂದಾಕ್ಷಣ ಪೊಸೆಸಿವ್ ಆಗ್ತೀನಿ. ಹಿಂಗಂದ್ರೆ ಹಿಂಗೇ ಇರಬೇಕು, ಒಂಚೂರೂ ಆಚೀಚೆ ಆದರೂ ನಾ ಸಹಿಸೋದಿಲ್ಲ. ಚಿತ್ರಕ್ಕೆ ಚೂರು ತೊಂದರೆಯಾದರೂ ನನ್ನ ಸುತ್ತ ಕೆಲಸ ಮಾಡೋರೇ ಶತ್ರುಗಳಂತೆ ಕಾಣಿಸೋಕೆ ಶುರುವಾಗುತ್ತೆ. ಆವಾಗ ಬೈತೀನಿ, ಗಲಾಟೆ ಮಾಡ್ಕೋತೀನಿ. ನನ್ನ ಅಸಿಸ್ಟೆಂಟ್ ಡೈರೆಕ್ಟರ್ಗಳ ಪಾಡು ನೋಡಿದ್ರಂತೂ ಅಯ್ಯೋ ಪಾಪ ಅನ್ನೋ ಹಾಗಿರುತ್ತೆ. ಇದೆಲ್ಲದರಿಂದಾಗಿ ಒಂದಷ್ಟು ಟೈಮು ತಗೊಂಡು ಸಿನಿಮಾ ಮಾಡ್ತೀನಿ. ಮುಂದಿನ ಚಿತ್ರದಿಂದ ಕೋಪಾನೆಲ್ಲ ಕಮ್ಮಿ ಮಾಡಿಕೊಂಡು ಎರಡು ವರ್ಷಕ್ಕೆ ಒಂದಾದ್ರೂ ಸಿನಿಮಾ ಮಾಡಬೇಕಂದುಕೊಂಡಿದ್ದೇನೆ.
ಲೈಫ್ ಜೊತೆ ಒಂದ್ ಸೆಲ್ಫಿ ಫೈನಲಿ ಯಾವುದನ್ನು ಹೇಳುತ್ತೆ?
– ಇದು ತುಂಬಾ ಸಿಂಪಲ್ ಕಾನ್ಸೆಪ್ಟ್. ಲೈಫ್ ಅಂದ್ಮೇಲೆ ಎಲ್ಲರಿಗೂ ಒಂದಲ್ಲಾ ಒಂದು ಸಮಸ್ಯೆ ಬಂದೇ ಬರುತ್ತೆ. ಆದ್ರೆ ನಾವೆಲ್ಲ ಅದನ್ನ ಪರಿಹಾರ ಮಾಡೋದರ ಬಗ್ಗೆಯೇ ತಲೆ ಕೆಡಿಸಿಕೊಳ್ತೀವಿ. ವಾಸ್ತವವಾಗಿ ನಮ್ಮ ಕಲ್ಪನೆಯೇ ದೊಡ್ಡದಿರುತ್ತೆ. ಸಮಸ್ಯೆ ಸಣ್ಣದೇ ಆಗಿರುತ್ತೆ. ಈ ಸಮಸ್ಯೆಗಳಿಗೆ ಜೀವನವೇ ಒಂದು ಪರಿಹಾರವನ್ನೂ ಕೊಟ್ಟಿರುತ್ತೆ. ಇಲ್ಲಿನ ಮೂರೂ ಪಾತ್ರಗಳಿಗೂ ಒಂದೊಂದು ಕೊರಗು, ಸಮಸ್ಯೆ ಕಾಡುತ್ತಿರುತ್ತೆ. ಆದರೆ ಜರ್ನಿಯ ಸಂದರ್ಭದಲ್ಲಿ ಜೀವನವೇ ಅದೊಂದು ಸಮಸ್ಯೆಯಲ್ಲ ಎಂಬುದನ್ನು ಸಾರುತ್ತೆ. ಆ ಕ್ಷಣದ ಶುಭ್ರವಾದ ಜೀವನದೊಂದಿಗಿನ ಸುಂದರ ಸೆಲ್ಫಿಯಂತೆ ಈ ಚಿತ್ರ ಮೂಡಿ ಬಂದಿದೆ.
No Comment! Be the first one.