ಮೂಲ ಸಂಭಾಷಣೆ ಬರಹಾರರೂ ಆಗಿರುವ ಗುರುಪ್ರಸಾದ್ ಅದ್ಭುತ ಮಾತುಗಾರ. ತಮ್ಮ ಕಲರ್ ಫುಲ್ ಮಾತಿನಿಂದಲೇ ಎಂಥವರನ್ನೂ ಮೋಡಿ ಮಾಡಬಲ್ಲವರು. ಇರುವ ಪ್ರತಿಭೆಯನ್ನು ನೇರ್ಪಾಗಿ ಉಪಗೋಗಿಸಿಕೊಂಡಿದ್ದರೆ ಜೀವನಕ್ಕಾದರೂ ದಾರಿಯಾಗುತ್ತಿತ್ತು. ಅದುಬಿಟ್ಟು ಕಂಡವರ ಬದುಕನ್ನು ಹಾಳು ಮಾಡುವ ನೀಚ ಬುದ್ದಿ ಈ ಗಡ್ಡದ ಗುರುವಿಗೆ ಯಾಕೆ ಬಂತೋ ಗೊತ್ತಿಲ್ಲ.
ಗುರುಪ್ರಸಾದ್ ವ್ಯಕ್ತಿತ್ವ ಒಳಗೊಂದು, ಹೊರಗೊಂದು ಅನ್ನೋದನ್ನು cinibuzz ಯಾವತ್ತೋ ಜಾಹೀರು ಮಾಡಿದೆ. ಕಟ್ಟಿಕೊಂಡ ಹೆಂಡತಿ, ಮಗಳನ್ನು ಮನೆಯಿಂದ ಕಳಿಸಿ ಈತ ಆಡಬಾರದ ಆಟ ಆಡುತ್ತಿದ್ದಾನೆ. ತಮ್ಮದೇ ಸಿನಿಮಾದಲ್ಲಿ ಕೆಲಸ ಮಾಡಿದ್ದ ಹುಡುಗಿಯೊಬ್ಬಳ ಜೊತೆ ಚಿನ್ನವೀಡು ಶುರುಮಾಡಿದ್ದಾನೆ ಅನ್ನೋದನ್ನೆಲ್ಲಾ ಮೂರು ವರ್ಷಗಳ ಹಿಂದೆಯೇ ನಾವು ಪ್ರಕಟಿಸಿದ್ದೆವು. ಈ ನಡುವೆ ಗುರುಪ್ರಸಾದ್ ಒಂದಿಷ್ಟು ಸಿನಿಮಾಗಳನ್ನು ಶುರು ಮಾಡಿದರು. ನಟನೆಯನ್ನೂ ಆರಂಭಿಸಿದರು. ಬಹುಶಃ ಹಳ್ಳ ಹಿಡಿದಿದ್ದ ಬದುಕನ್ನು ಸರಿ ಮಾಡಿಕೊಂಡಿರಬಹುದು ಅಂತಲೇ ಹಲವರು ಅಂದುಕೊಂಡಿದ್ದರು. ಆದರೆ ಈಗಿನ ಪರಿಸ್ಥಿತಿ ಬೇರೆಯೇ ಇದೆ.

ಹೆಚ್ಚೂ ಕಮ್ಮಿ ಮಗಳ ವಯಸ್ಸಿನ ಸುಮಿತ್ರಾಳನ್ನು ಗುರುಪ್ರಸಾದ್ ಮದುವೆಯೇ ಆಗಿಬಿಟ್ಟಿದ್ದಾರೆ. ಜೊತೆಗೆ ಈಕೆಗೂ ಒಂದು ಹೆಣ್ಣು ಮಗುವನ್ನು ಪ್ರಾಪ್ತಿ ಮಾಡಿದ್ದಾರೆ. ಹೋಗಲಿ, ಇವರನ್ನಾದರೂ ನೆಟ್ಟಗೆ ಬಾಳಿಸಿದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ತನ್ನ ಅರಾಜಕ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಗುರು ಪ್ರಸಾದ್ಗೆ ಕಾಸು ಕೊಟ್ಟು ತಗಲಾಕಿಕೊಂಡವರ ಮೇಲೆ ತನ್ನ ಎರಡನೇ ಪತ್ನಿಯನ್ನು ಅಸ್ತ್ರವಾಗಿ ಪ್ರಯೋಗಿಸುತ್ತಿದ್ದಾರೆ.
ನಿರ್ದೇಶಕ ಗುರುವಿಗೆ 30 ಲಕ್ಷ ಕಾಸು ಕೊಟ್ಟು ಸಂಕಟ ಅನುಭವಿಸುತ್ತಿರುವ ಶ್ರೀನಿವಾಸ್ ಅವರ ಬಗ್ಗೆ ಮೊನ್ನೆ ತಾನೇ ಹೇಳಿದ್ದೆವಲ್ಲಾ? ಅದೇ ಶ್ರೀನಿವಾಸ್ ಅವರ ಮೇಲೆ ಗುರುಪ್ರಸಾದ್ ತಮ್ಮ ಎರಡನೇ ಪತ್ನಿ ಸುಮಿತ್ರಾ ಅವರಿಂದ ಸುಳ್ಳು ದೂರು ಕೊಡಿಸಲು ಹೋಗಿ ವಿಫಲರಾಗಿದ್ದಾರೆ.
ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸುಮಿತ್ರಾ ದೂರೊಂದನ್ನು ನೀಡಿದ್ದರು. ಗುರುಪ್ರಸಾದ್ ಅವರ ಬಳಿ ಸಿನಿಮಾದಲ್ಲಿ ಅವಕಾಶಕ್ಕಾಗಿ ಹೋದಾಗ ಶ್ರೀನಿವಾಸ್ ಎಂಬುವವರು ನನ್ನ ಬಳಿ ಅನುಚಿತವಾಗಿ ವರ್ತಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂತಿಸಿದ್ದಾರೆʼʼ ಎನ್ನುವುದು ದೂರಿನ ಸಾರಾಂಶವಾಗಿತ್ತು. ಆರ್ ಆರ್. ನಗರ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕೃಷ್ಣ ಅವರು ಕರೆ ಮಾಡಿ ಶ್ರೀನಿವಾಸ್ ಅವರನ್ನು ಕರೆಸಿಕೊಂಡ ಮೇಲಷ್ಟೇ ಅಸಲೀ ವಿಚಾರ ಗೊತ್ತಾಗಿದೆ. ಹಣ ವಾಪಾಸು ಕೇಳಿದ್ದಕ್ಕೆ ಗುರುಪ್ರಸಾದ್ ನಡೆಸಿದ ಸಂಚು ಅನ್ನೋದು. ಹೆಣ್ಣುಮಗಳು ದೂರು ಕೊಟ್ಟಿದ್ದ ಕಾರಣಕ್ಕೆ ಈ ಕಾರಣ ಶ್ರೀನಿವಾಸ್ ಅವರಿಂದ ಮುಚ್ಚಳಿಕೆಯೊಂದನ್ನು ಬರೆಸಿಕೊಂಡ ಪೊಲೀಸರು ಪ್ರಕರಣವನ್ನು ಅಲ್ಲಿಗೇ ಮುಕ್ತಾಯ ಮಾಡಿದ್ದಾರೆ.

ಘನತೆಯಿಂದ ಲೈಫ್ ಲೀಡ್ ಮಾಡಬೇಕಿದ್ದ ಗುರುಪ್ರಸಾದ್ ಯಾಕೆ ಇಷ್ಟು ಕೀಳು ಮಟ್ಟಕ್ಕಿಳಿದರೋ ಗೊತ್ತಿಲ್ಲ. ಇವತ್ತಿಗೂ ಕಾಲ ಮಿಂಚಿಲ್ಲ. ಕುಡಿತ, ಸುಳ್ಳು, ಅಶಿಸ್ತುಗಳಿಂದ ಹೊರಬಂದು, ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸಬೇಕು. ಶ್ರದ್ದೆಯಿಂದ ಕೂತು ಕೆಲಸ ಮಾಡಿ ಮತ್ತೊಂದಿಷ್ಟು ಚಿತ್ರಗಳನ್ನು ಒಪ್ಪಿಕೊಂಡರೆ ಇರುವ ಸಾಲವನ್ನು ತೀರಿಸುವುದು ದೊಡ್ಡ ವಿಚಾರವೇ ಅಲ್ಲ. ಅದು ಬಿಟ್ಟು ಕಾಸು ಕೊಟ್ಟವರನ್ನು ಯಾಮಾರಿಸುವ ಸ್ಕೆಚ್ಚು, ನಂಬಿಬಂದವರನ್ನೇ ದಾಳವಾಗಿಸಿಕೊಳ್ಳುವ ಸ್ಕೀಮುಗಳನ್ನೆಲ್ಲಾ ಬಿಡಬೇಕು. ಇವೆಲ್ಲಾ ಸಾಧ್ಯವಾದರೆ ಮಾತ್ರ ಮಠ ಗುರುಪ್ರಸಾದ್ ಮತ್ತೆ ಹಳೇ ಫಾರ್ಮಿಗೆ ಬರಲು ಸಾಧ್ಯ.
ಏನಂತಾರೆ ಶ್ರೀನಿವಾಸ್?

ಇವರ ಜೊತೆ ಅಸೋಸಿಯೆಟ್ ಆಗ್ಬೇಕಿದ್ರೆ, ಇವರ ಬಳಿ ಹೋಗುವ ಮುಂಚೆಯೇ ನಾಮ ಹಾಕಿಕೊಂಡು ಹೋದರೆ, ಇವರಿಂದ ನಾಮ ಹಾಕಿಸಿಕೊಳ್ಳೋದು ತಪ್ಪುತ್ತೆ. ಈತ ಕೇಳಿದಾಗೆಲ್ಲಾ ನಿಮ್ಮ ಒಡವೆ, ಕಾರು, ಸೈಟ್ ಮಾರಿ ದುಡ್ಡು ಕೊಡ್ತಿರ್ಬೇಕು, ಯಾರಾದ್ರೂ ಸಾಲಗಾರರು ಈತನನ್ನು ಹುಡುಕಿಕೊಂಡು ಬಂದಾಗ Hide out ಗೆ ಜಾಗ ಮಾಡಿಕೊಡಬೇಕು. ನಮ್ಮ ಬಳಿ ಕಿತ್ತುಕೊಳ್ಳೋಕೆ ಏನು ಉಳಿದಿಲ್ಲ ಅಂದಾಗ, ಕೊಟ್ಟಿರೋ ದುಡ್ಡು ವಾಪಸ್ ಕೇಳ್ದಾಗ ಎರಡನೇ ಹೆಂಡತಿಯನ್ನು ಪೊಲೀಸ್ ಸ್ಟೇಷನ್ ಗೆ ಕಳ್ಸಿ ನಿಮ್ಮ ಮೇಲೆ ಸುಳ್ಳು ಕಂಪ್ಲೇಂಟ್ ಕೊಡಿಸ್ತಾರೆ. ಇವರ ಮನೆ ಟಾಯ್ಲೆಟ್ ಕ್ಲೀನ್ ಮಾಡೋಕೆ ರೆಡಿ ಇದ್ರೆ, ಇವರ ಹತ್ರ ಅಸಿಸ್ಟೆಂಟ್, ಅಸೋಸಿಯೇಟ್ ಆಗೋಕೆ ಸಾಧ್ಯ. ಇದು ನನ್ನ 7ವರ್ಷದ ಗುರುಪ್ರಸಾದ್ ಜೊತೆಗಿದ್ದ ಅನುಭವ..

ಒಬ್ಬ ವ್ಯಕ್ತಿಯ ಬದುಕು ಹೇಗೆಲ್ಲಾ ಇರಬೇಕು ಮತ್ತು ಇರಬಾರದು ಅನ್ನೋದಕ್ಕೆ ಜ್ವಲಂತ ಉದಾಹರಣೆಯಾಗಿರುವವರು ನಿರ್ದೇಶಕ ಗುರುಪ್ರಸಾದ್. ತಮ್ಮ ಸಿನಿಮಾಗಳಲ್ಲಿ ಸಮಾಜದ ಸೊಟ್ಟಂಪಟ್ಟ ವಿಚಾರಗಳನ್ನು ಲೇವಡಿ ಮಾಡುತ್ತಾ ಹಾಸ್ಯದ ಮೂಲಕ ತಿವಿಯುತ್ತಿದ್ದವರು ಗುರು. ಈಗ ಇವರ ಬದುಕೇ ಅಡ್ಡಾದಿಡ್ಡಿಯಾಗಿ ಸಾಗುತ್ತಿದೆ. ಯಾವೆಲ್ಲವನ್ನೂ ತಪ್ಪು ಅಂತಾ ಗುರು ಗುರುತು ಮಾಡಿ ಹೇಳುತ್ತಿದ್ದರೋ ಅದೇ ಯಡವಟ್ಟುಗಳನ್ನು ಸ್ವತಃ ಮಾಡಿಕೊಂಡಿದ್ದಾರೆ. ನಂಬಿದವರನ್ನು ಮತ್ತೆ ಮತ್ತೆ ವಂಚಿಸಿದ್ದಾರೆ. ಎಲ್ಲರ ನಂಬಿಕೆ ಕಳೆದುಕೊಂಡಿದ್ದಾರೆ. ಮುಲಾಜಿಲ್ಲದೆ ಮಾಡಬಾರದ್ದನ್ನೆಲ್ಲಾ ಮಾಡಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಎಲ್ಲ ತಿಳಿದಿದ್ದೂ ಆತ್ಮದ್ರೋಹ ಮಾಡಿಕೊಳ್ಳುತ್ತಿದ್ದಾರೆ. ಅದರ ಒಂದು ಅಧ್ಯಾಯವನ್ನಷ್ಟೇ ಇಲ್ಲಿ ನೀಡಿದ್ದೇವೆ….
ನೋ ಡೌಟ್!
ಗುರುಪ್ರಸಾದ್ ಕನ್ನಡ ಚಿತ್ರರಂಗದ ಅದ್ಭುತ ಪ್ರತಿಭಾವಂತ. ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಯೇ ಸಿನಿಮಾ ಮಾಡಬೇಕಿಲ್ಲ. ಗಟ್ಟಿಯಾದ ಕಂಟೆಂಟಿಗೆ ಮಜಬೂತಾದ ಮಾತುಗಳನ್ನು ಪೋಣಿಸಿ ಜನಮೆಚ್ಚುಗೆಯ ಚಿತ್ರವನ್ನು ಕಟ್ಟಿನಿಲ್ಲಿಸಬಹುದು ಅನ್ನೋದನ್ನು ತೋರಿಸಿಕೊಟ್ಟವರು. ದ್ವಂದ್ವಾರ್ಥ ಅಂದರೆ ಬರಿಯ ಪೋಲಿ ಮಾತಲ್ಲ ಅಂತಾ ಹೇಳಿಕೊಟ್ಟವರು. ಶ್ಲೇಷಾರ್ಥದ ಸಂಭಾಷಣೆಗೆ ವಿಶೇಷ ಮಾನ್ಯತೆ ತಂದುಕೊಟ್ಟವರು. ತಮ್ಮನ್ನು ತಾವು ಶಾರದಾ ಸುತ ಅಂತಾ ಕರೆದುಕೊಂಡ ಸರಸ್ವತಮ್ಮನ ವರಪುತ್ರ!
ಚಿತ್ರರಂಗಕ್ಕೆ ಬಂದು ಬೇರೆಲ್ಲರಂತೆ ಕಷ್ಟ ಪಡಬಾರದು; ಇತರರಿಗೆ ಹೊರೆಯಾಗಬಾರದು ಅಂತಾ ಎಷ್ಟು ವ್ಯವಸ್ಥಿತವಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟವರು ಗುರು ಪ್ರಸಾದ್. ಆದರೆ ಎಲ್ಲಿ ಎಡವಿದರೋ ಗೊತ್ತಿಲ್ಲ. ಈಗ ತಮ್ಮ ಬದುಕಿನ ಬಂಡಿಯನ್ನು ಅವ್ಯವಸ್ಥೆಯ ಗಟಾರದಲ್ಲಿ ಪಾರ್ಕಿಂಗ್ ಮಾಡಿದ್ದಾರೆ.

ಸರಿಸುಮಾರು 2015ರಿಂದ ಗುರುಪ್ರಸಾದ್ ಜೊತೆಗೆ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಾ ಬಂದವರು ಶ್ರೀನಿವಾಸ್. ಎರಡನೇ ಸಲ ಸಿನಿಮಾ ಮೂಲಕ ಗುರುಪ್ರಸಾದ್ ಅವರ ಡೈರೆಕ್ಷನ್ ತಂಡ ಸೇರಿದರು. ಇದೇ ಸಿನಿಮಾ ಚಿತ್ರೀಕರಣ ಹಂತರದಲ್ಲಿದ್ದಾಗ ತಮಗೆ ಪರಿಚಯವಿದ್ದ ಮಾರ್ವಾಡಿಯೊಬ್ಬರಿಂದ ಹದಿನೇಳು ಲಕ್ಷ ರೂಪಾಯಿ ಸಾಲ ಕೊಡಿಸಿದ್ದರು. ನಂತರ ತಮ್ಮ ಪತ್ನಿಯ ಒಡವೆಯನ್ನೆಲ್ಲಾ ಮಾರಿ ಹದಿಮೂರು ಲಕ್ಷ ರುಪಾಯಿಗಳನ್ನು ಗುರುಪ್ರಸಾದ್ ಕೈಗೊಪ್ಪಿಸಿದ್ದರು. ʻನಮ್ಮ ಡೈರೆಕ್ಟ್ರು ಕಷ್ಟದಲ್ಲಿದ್ದಾರೆ. ಆರ್ಥಿಕ ಸಂಕಷ್ಟಗಳು ಅವರ ಪ್ರತಿಭೆಯನ್ನು ನುಂಗಿಹಾಕಬಾರದುʼ ಅಂದುಕೊಂಡು ಗುರು ಕಷ್ಟದಲ್ಲಿದ್ದಾಗಲೆಲ್ಲಾ ಕೈ ಹಿಡಿದವರು ಶ್ರೀನಿವಾಸ್. ಆದರೆ ಗುರುಪ್ರಸಾದ್ ಯಾಕೋ ಶಿಷ್ಯನ ನಿಯತ್ತನ್ನು ಉಳಿಸಿಕೊಂಡಂತೆ ಕಾಣುತ್ತಿಲ್ಲ. ಕೊಟ್ಟ ಹಣ ವಾಪಾಸು ಕೇಳಿದರೆ ಈಗ, ಆಗ ಅಂತಾ ಆಟಾಡಿಸಿದ್ದಾರೆ. ಕಡೆಯದಾಗಿ ʻʻಜುಲೈ 27ನೇ ತಾರೀಖು ಬಾ. ಎಲ್ಲವನ್ನೂ ಕೊಡ್ತೀನಿʼʼ ಅಂತಾ ಹೇಳಿ ಜುಲೈ 18ಕ್ಕೇ ಗಾಯಬ್ ಆಗಿದ್ದಾರೆ. ಶ್ರೀನಿವಾಸ್ ಅವರ ನಂಬರ್ನು ಕಂಪ್ಲೀಟ್ ಬ್ಲಾಕ್ ಮಾಡಿದ್ದಾರೆ. ಸಾಲದ್ದಕ್ಕೆ ತಮ್ಮ ಎರಡನೇ ಪತ್ನಿಯಿಂದ ಶ್ರೀನಿವಾಸ್ ಅವರ ಮೇಲೆ ಸುಳ್ಳು ದೂರು ನೀಡಿಸುವ ಸಂಚು ನಡೆಸಿ ವಿಫಲರಾಗಿದ್ದಾರೆ.

ಇತ್ತ ಕಾಸು ಕೊಟ್ಟ ಮಾರ್ವಾಡಿ ಕಡೆಯಿಂದ ಶ್ರೀನಿವಾಸ್ ಅವರಿಗೆ ವಿಪರೀತ ಒತ್ತಡ ಶುರುವಾಗಿದೆ. ಇದ್ದ ಬದ್ದ ಒಡವೆಗಳನ್ನೆಲ್ಲಾ ಕೊಟ್ಟ ಶ್ರೀನಿವಾಸ್ ಅವರ ಪತ್ನಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಕಾಲೇಜು ಓದುತ್ತಿರುವ ಮಗಳಿಗೆ ಲ್ಯಾಪ್ ಟಾಪ್ ಕೊಡಿಸಲು ಐವತ್ತು ಸಾವಿರ ರುಪಾಯಿ ಕೂಡಾ ಇಲ್ಲದೆ ಪರದಾಡುತ್ತಿರುವ ಶ್ರೀನಿವಾಸ್ ಪರಿಸ್ಥಿತಿ ನೋಡಿದರೆ ಯಾರಿಗಾದರೂ ಅಯ್ಯೋ ಅನ್ನಿಸದೇ ಇರುವುದಿಲ್ಲ. ಇನ್ನು ಗುರುಪ್ರಸಾದ್ ಯಾಕೆ ಶಿಷ್ಯನನ್ನು ಈ ಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿಸಿದ್ದಾರೆ?

ಈ ಬಗ್ಗೆ ಖುದ್ದು ಗುರುಪ್ರಸಾದ್ ಅವರನ್ನೇ ಕೇಳಿದರೆ ʻಅವನು ನನ್ನ ಹೆಸರುನ್ನು ಬಳಸಿಕೊಂಡು ದ್ರೋಹ ಮಾಡಿದ್ದಾನೆ. ಇನ್ನು ಎರಡು ದಿನದಲ್ಲಿ ಎಲ್ಲವೂ ಗೊತ್ತಾಗುತ್ತದೆʼ ಎಂಬ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಶ್ರೀನಿವಾಸ್ ತೋರಿಸುತ್ತಿರುವ ಸಾಕ್ಷಿಗಳನ್ನೆಲ್ಲಾ ನೋಡದರೆ ಗುರುಪ್ರಸಾದ್ ವಂಚಿಸಿದ್ದಾರೆ ಅನ್ನುವುದಕ್ಕೆ ಯಾವ ಅನುಮಾನಗಳೂ ಉಳಿಯುವುದಿಲ್ಲ…
ಏನದು ದೂರು? ಯಾರು ಎರಡನೇ ಹೆಂಡ್ತಿ?…..
No Comment! Be the first one.